Psalms 85 (IRVK)
undefined ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಕೀರ್ತನೆ. 1 ಯೆಹೋವನೇ, ನಿನ್ನ ದೇಶವನ್ನು ಕಟಾಕ್ಷಿಸಿದ್ದಿ;ಯಾಕೋಬ್ಯರನ್ನು ಸೆರೆಯಿಂದ ಬಿಡಿಸಿ ಬರಮಾಡಿದ್ದಿ. 2 ನಿನ್ನ ಪ್ರಜೆಯ ದ್ರೋಹವನ್ನು ಕ್ಷಮಿಸಿದ್ದಿ;ಅವರ ಎಲ್ಲಾ ಪಾಪಗಳನ್ನು ಅಳಿಸಿಬಿಟ್ಟಿದ್ದಿ. ಸೆಲಾ 3 ನಿನ್ನ ರೌದ್ರವನ್ನೆಲ್ಲಾ ತೊರೆದಿದ್ದಿ;ನಿನ್ನ ಉಗ್ರಕೋಪವನ್ನು ಬಿಟ್ಟಿದ್ದಿ. 4 ನಮ್ಮನ್ನು ರಕ್ಷಿಸುವ ದೇವರೇ, ನಮಗೆ ಅಭಿಮುಖನಾಗು;ನಮ್ಮ ವಿಷಯದಲ್ಲಿ ಬೇಸರವನ್ನು ಬಿಡು. 5 ಸದಾಕಾಲವೂ ನಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುವೆಯಾ?ತಲತಲಾಂತರಗಳಿಗೂ ಕೋಪವನ್ನು ಬೆಳೆಸುವಿಯೋ? 6 ನಿನ್ನ ಪ್ರಜೆಯಾದ ನಾವು ನಿನ್ನಲ್ಲಿ ಆನಂದಿಸುವಂತೆ,ನೀನು ನಮ್ಮನ್ನು ಪುನಃ ಉಜ್ಜೀವಿಸುವುದಿಲ್ಲವೋ? 7 ಯೆಹೋವನೇ, ನಿನ್ನ ಕೃಪೆಯನ್ನು ನಮಗೆ ತೋರಿಸು;ನಿನ್ನ ರಕ್ಷಣೆಯನ್ನು ನಮಗೆ ಅನುಗ್ರಹಿಸು. 8 ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ.ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ.ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ. 9 ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ.ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು. 10 ಆತನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಕೂಡಿರುವವು;ನೀತಿಯು, ಸಮಾಧಾನವು ಮುದ್ದಿಟ್ಟುಕೊಳ್ಳುವವು. 11 ಸತ್ಯತೆಯು ಭೂಮಿಯಿಂದ ಹುಟ್ಟುವುದು;ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು. 12 ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು;ನಮ್ಮ ದೇಶವು ತನ್ನ ಬೆಳೆ ಕೊಡುವುದು. 13 ನೀತಿಯು ಆತನ ಮುಂದೆ ಹೋಗುತ್ತಾ,ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿ ಮಾಡುವುದು.