Job 23 (BOKCV2)
1 ಯೋಬನು ಉತ್ತರಕೊಟ್ಟು ಹೇಳಿದ್ದೇನೆಂದರೆ: 2 “ಇಂದಿಗೂ ನನ್ನ ದೂರು ಕಹಿಯಾಗಿದೆ;ನಾನು ನಿಟ್ಟುಸಿರಿಟ್ಟರೂ ದೇವರ ಹಸ್ತವು ಭಾರವಾಗಿದೆ. 3 ದೇವರನ್ನು ಎಲ್ಲಿ ಕಂಡುಕೊಳ್ಳಬೇಕೆಂದು ನನಗೆ ತಿಳಿದಿದ್ದರೆ, ಎಷ್ಟೋ ಒಳ್ಳೆಯದು!ಸಾಧ್ಯವಾದರೆ ನಾನು ದೇವರು ವಾಸಿಸುವ ಸ್ಥಳದ ತನಕ ಹೋಗುತ್ತಿದ್ದೆ. 4 ನನ್ನ ನ್ಯಾಯವನ್ನು ದೇವರ ಮುಂದೆ ವಿವರಿಸುತ್ತಿದ್ದೆ;ನನ್ನ ಬಾಯನ್ನು ಪ್ರತಿವಾದಗಳಿಂದ ತುಂಬಿಸುತ್ತಿದ್ದೆ. 5 ದೇವರು ನನಗೆ ಉತ್ತರವಾಗಿ ಕೊಡುವ ಮಾತುಗಳನ್ನು ಕಂಡುಹಿಡಿದು,ದೇವರು ನನಗೆ ಹೇಳುವುದನ್ನು ಪರಿಗಣಿಸುತ್ತಿದ್ದೆ. 6 ದೇವರು ನನ್ನನ್ನು ಕಠಿಣವಾಗಿ ವಿರೋಧಿಸುತ್ತಾರೋ?ಇಲ್ಲ, ಖಂಡಿತವಾಗಿ ಅವರು ನನ್ನ ವಿರುದ್ಧ ಆರೋಪಗಳನ್ನು ಹೊರಿಸುವುದಿಲ್ಲ. 7 ದೇವರ ಸನ್ನಿಧಿಯಲ್ಲಿ ಯಥಾರ್ಥವಂತನು ತಾನು ನಿರಪರಾಧಿ ಎಂದು ದೃಢಪಡಿಸಲು ಸಾಧ್ಯ;ಅಲ್ಲಿ ನನಗೆ ನನ್ನ ನ್ಯಾಯಾಧಿಪತಿಯಿಂದ ಶಾಶ್ವತವಾಗಿ ಬಿಡುಗಡೆಯಾಗುವುದು. 8 “ಒಂದು ವೇಳೆ ನಾನು ಪೂರ್ವದೆಡೆಗೆ ಹೋದರೂ ದೇವರು ನನಗೆ ಕಾಣಿಸುವುದಿಲ್ಲ;ಪಶ್ಚಿಮದೆಡೆಗೆ ಹೋದರೂ ದೇವರು ಕಾಣಿಸುವುದಿಲ್ಲ. 9 ಉತ್ತರದಲ್ಲಿ ಹುಡುಕಿದರೂ ದೇವರನ್ನು ನೋಡಲಾರೆನು;ದಕ್ಷಿಣದೆಡೆಗೆ ತಿರುಗಿಕೊಂಡರೂ ದೇವರು ಕಾಣಿಸುವುದಿಲ್ಲ. 10 ಆದರೆ ದೇವರು ನಾನು ಹೋಗುವ ಮಾರ್ಗವನ್ನು ತಿಳಿದಿದ್ದಾರೆ;ದೇವರು ನನ್ನನ್ನು ಪರೀಕ್ಷಿಸಿದಾಗ, ನಾನು ಚೊಕ್ಕ ಬಂಗಾರವಾಗಿ ಹೊರಗೆ ಬರುವೆನು. 11 ನನ್ನ ಪಾದಗಳು ದೇವರ ಹೆಜ್ಜೆಯ ಜಾಡಿನಲ್ಲಿ ನಿಕಟವಾಗಿ ಅನುಸರಿಸಿವೆ;ದೇವರ ಮಾರ್ಗವನ್ನು ಬಿಟ್ಟು ನಾನು ತೊಲಗದಂತೆ ನೋಡಿಕೊಂಡೆನು. 12 ದೇವರ ತುಟಿಗಳ ಆಜ್ಞೆಯಿಂದ ನಾನು ಹಿಂಜರಿಯಲಿಲ್ಲ;ನನ್ನ ದೈನಂದಿನ ಆಹಾರಕ್ಕಿಂತ ದೇವರ ಬಾಯಿಯ ಮಾತುಗಳನ್ನುನನ್ನೆದೆಯಲ್ಲಿ ನಿಧಿಯನ್ನಾಗಿ ಬಚ್ಚಿಟ್ಟುಕೊಂಡಿದ್ದೇನೆ. 13 “ಆದರೆ ದೇವರು ಬದಲಾಗದವರು; ದೇವರನ್ನು ಬದಲಾಯಿಸುವವರು ಯಾರು?ದೇವರು ತಾವು ಬಯಸಿದ್ದನ್ನು ಮಾಡುತ್ತಾರೆ. 14 ನನಗೆ ನೇಮಿಸಿದ್ದನ್ನು ದೇವರು ಈಡೇರಿಸುತ್ತಾರೆ.ಇಂಥ ಅನೇಕ ಯೋಜನೆಗಳು ದೇವರಲ್ಲಿವೆ. 15 ಆದ್ದರಿಂದ ನಾನು ದೇವರ ಮುಂದೆ ಗಾಬರಿಗೊಳ್ಳುತ್ತೇನೆ;ಇದನ್ನೆಲ್ಲಾ ಗ್ರಹಿಸಿಕೊಳ್ಳುವಾಗ ನಾನು ದೇವರಿಗೆ ಭಯಪಡುತ್ತೇನೆ. 16 ದೇವರು ನನ್ನ ಹೃದಯವನ್ನು ಹೆದರಿಸಿದ್ದಾರೆ;ಸರ್ವಶಕ್ತರು ನನ್ನನ್ನು ಗಾಬರಿಪಡಿಸಿದ್ದಾರೆ. 17 ಆದರೂ ನಾನು ಅಂಧಕಾರದಿಂದ ಮೌನವಾಗಲಿಲ್ಲ;ನನ್ನ ಮುಖವನ್ನು ಕವಿದಿರುವ ಕಾರ್ಗತ್ತಲಿನ ನಿಮಿತ್ತ ನಾನು ಮಾತಾಡದೆ ಇರುವುದಿಲ್ಲ.