Job 26 (BOKCV2)
1 ಅದಕ್ಕೆ ಯೋಬನು ಹೀಗೆ ಉತ್ತರಕೊಟ್ಟನು: 2 “ಶಕ್ತಿ ಇಲ್ಲದವನಿಗೆ ನೀನು ಹೇಗೆ ಸಹಾಯ ಮಾಡಿದೆ?ತ್ರಾಣವಿಲ್ಲದ ಕೈಯನ್ನು ಹೇಗೆ ರಕ್ಷಿಸಿದೆ? 3 ಜ್ಞಾನವಿಲ್ಲದವನಿಗೆ ಏನು ಬುದ್ಧಿವಾದ ಹೇಳಿರುವೆ?ನೀನು ಯಾವ ವಿವೇಕದ ಮಾತುಗಳನ್ನು ಬಹಳವಾಗಿ ಪ್ರದರ್ಶಿಸಿದೆ. 4 ಈ ಮಾತುಗಳನ್ನು ಹೇಳಲು ನಿನಗೆ ಯಾರು ಸಹಾಯ ಮಾಡಿದರು?ಯಾರ ಆತ್ಮವು ನಿನ್ನ ಬಾಯಿಂದ ಮಾತಾಡಿದ್ದು? 5 “ಸಾಗರದ ಕೆಳಗಿನ ಲೋಕದಲ್ಲಿ ವಾಸಿಸುವಸತ್ತವರ ಆತ್ಮಗಳು ಆಳವಾದ ಯಾತನೆಯಲ್ಲಿವೆ. 6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ;ನಾಶಲೋಕವು ದೇವರಿಗೆ ಮರೆಯಾಗಿಲ್ಲ. 7 ದೇವರು ಉತ್ತರ ದಿಕ್ಕಿನ ಆಕಾಶವನ್ನು ಶೂನ್ಯದ ಮೇಲೆ ವಿಸ್ತರಿಸುತ್ತಾರೆ;ದೇವರು ಭೂಮಿಯನ್ನು ಏನೂ ಇಲ್ಲದರ ಮೇಲೆ ತೂಗು ಹಾಕಿದ್ದಾರೆ. 8 ತಮ್ಮ ಮೇಘಗಳಲ್ಲಿ ನೀರನ್ನು ತುಂಬಿ ಕಟ್ಟುತ್ತಾರೆ;ಆದರೂ ಮೋಡವು ಅದರ ಭಾರದಿಂದ ಒಡೆದುಹೋಗುವುದಿಲ್ಲ. 9 ದೇವರು ತಮ್ಮ ಪೂರ್ಣಚಂದ್ರ ಸಿಂಹಾಸನವನ್ನು ಮರೆಮಾಡುತ್ತಾರೆ.ಅದರ ಮುಂದೆ ಮೋಡವನ್ನು ಕವಿಸುತ್ತಾರೆ. 10 ಬೆಳಕು ಮತ್ತು ಕತ್ತಲುಗಳ ಸಂಧಿಸುವ ಸ್ಥಾನದಲ್ಲಿ,ಸಮುದ್ರದ ಮೇಲೆ ಸುತ್ತಲೂ ವೃತ್ತ ಮೇರೆಯನ್ನು ಹಾಕಿದ್ದಾರೆ. 11 ಆಕಾಶಮಂಡಲದ ಸ್ತಂಭಗಳು ಕಂಪಿಸುತ್ತವೆ;ದೇವರ ಗದರಿಕೆಗೆ ಅವು ಬೆರಗಾಗಿ ಕದಲುತ್ತವೆ. 12 ದೇವರು ತಮ್ಮ ಶಕ್ತಿಯಿಂದ ಸಮುದ್ರವನ್ನು ಕಲಕಿದ್ದಾರೆ;ದೇವರು ತಮ್ಮ ಜ್ಞಾನದಿಂದ ಘಟಸರ್ಪನಾದ ರಹಾಬನನ್ನು ಹೊಡೆದುಹಾಕುತ್ತಾರೆ. 13 ದೇವರ ಶ್ವಾಸದಿಂದ ಆಕಾಶಮಂಡಲವು ಶುಭ್ರವಾಗಿದೆ;ದೇವರು ಹಸ್ತವು ಹರಿದೋಡುವ ಸರ್ಪವನ್ನು ಇರಿಯುತ್ತದೆ. 14 ಇಗೋ, ಇವು ದೇವರ ಕಾರ್ಯಗಳಲ್ಲಿ ಕೆಲವು ಮಾತ್ರ;ದೇವರನ್ನು ಕುರಿತು ಪಿಸುಧ್ವನಿ ಮಾತ್ರ ಕೇಳಿದ್ದೇವೆ;ಹಾಗಾದರೆ, ದೇವರ ಪರಾಕ್ರಮದ ಗುಡುಗನ್ನು ಯಾರು ಗ್ರಹಿಸಿಕೊಳ್ಳುವರು?”