1 Samuel 2 (IRVK)
1 ಹನ್ನಳು ದೇವರ ಬಳಿ ಹೀಗೆ ವಿಜ್ಞಾಪಿಸಿದಳು,“ನನ್ನ ಹೃದಯವು ಯೆಹೋವನಲ್ಲಿ ಉಲ್ಲಾಸಿಸುತ್ತದೆ; ನನ್ನ ಕೊಂಬು ಯೆಹೋವನಿಂದ ಎತ್ತಲ್ಪಟ್ಟಿದೆ. ಶತ್ರುಗಳ ಮುಂದೆ ನನ್ನ ಬಾಯಿ ಧೈರ್ಯವಾಗಿ ಮಾತನಾಡುತ್ತದೆ,ಯಾಕೆಂದರೆ ನಾನು ನಿನ್ನ ರಕ್ಷಣೆಯಲ್ಲಿ ಆನಂದಿಸುತ್ತೇನೆ. 2 “ಯೆಹೋವನಂಥ ಪರಿಶುದ್ಧನು ಇಲ್ಲವೇ ಇಲ್ಲ;ನಿನ್ನ ಹೊರತು ದೇವರು ಯಾರೂ ಇಲ್ಲನಮ್ಮ ದೇವರಂತಹ ಸಮಾನವಾದ ಆಶ್ರಯವಿಲ್ಲ. 3 “ಇನ್ನು ಮುಂದೆ ಗರ್ವದಿಂದ ಮಾತನಾಡಬೇಡಿರಿ;ಸೊಕ್ಕಿನ ಮಾತು ನಿಮ್ಮ ಬಾಯಿಂದ ಹೊರಡದಿರಲಿ.ದೇವರಾದ ಯೆಹೋವನು ಸರ್ವಜ್ಞನು;ಆತನು ಮನುಷ್ಯರ ಕ್ರಿಯೆಗಳನ್ನು ತೂಗಿನೋಡುವನು. 4 “ಶೂರರ ಬಿಲ್ಲುಗಳು ಮುರಿಯಲ್ಪಟ್ಟಿವೆ,ಎಡವಿದವರು ಶೌರ್ಯವೆಂಬ ನಡುಕಟ್ಟನ್ನು ಬಿಗಿದುಕೊಂಡಿದ್ದಾರೆ. 5 ಹೊಟ್ಟೆತುಂಬಾ ಊಟಮಾಡುತ್ತಿದ್ದವರು ಅನ್ನಕ್ಕೋಸ್ಕರ ಕೂಲಿಮಾಡುತ್ತಾರೆ;ಹಸಿದವರು ಉಂಡು ಸುಖದಿಂದಿರುತ್ತಾರೆ.ಬಂಜೆಯು ಏಳು ಮಂದಿ ಮಕ್ಕಳನ್ನು ಹೆರುವಳು;ಮಕ್ಕಳುಳ್ಳವಳು ದಿಕ್ಕಿಲ್ಲದೆ ಹೋಗುವಳು. 6 “ಯೆಹೋವನೇ ಸಾಯಿಸುವವನೂ ಬದುಕಿಸುವವನೂ;ಪಾತಾಳದಲ್ಲಿ ದೊಬ್ಬುವವನೂ ಮೇಲಕ್ಕೆ ಬರಮಾಡುವವನೂ ಆತನೇ. 7 ಬಡತನ, ಸಿರಿತನಗಳನ್ನು ಕೊಡುವವನೂ ಯೆಹೋವನೇ,ತಗ್ಗಿಸುವವನೂ, ಹೆಚ್ಚಿಸುವವನೂ ಆತನೇ. 8 ಆತನು ದೀನರನ್ನು ಧೂಳಿನಿಂದ ಎತ್ತಿ; ದರಿದ್ರರನ್ನು ತಿಪ್ಪೆಯಿಂದ ಎಬ್ಬಿಸಿ ಅಧಿಪತಿಗಳೊಂದಿಗೆ ಕುಳ್ಳಿರಿಸಿಅವನಿಗೆ ಮಹಿಮಾಸನವನ್ನು ಬಾಧ್ಯತೆಯಾಗಿ ಅನುಗ್ರಹಿಸುವವನಾಗಿದ್ದಾನೆ.ಭೂಮಿಯ ಆಧಾರಸ್ತಂಭಗಳು ಯೆಹೋವನವೇ;ಆತನೇ ಅವುಗಳ ಮೇಲೆ ಭೂಮಂಡಲವನ್ನು ಸ್ಥಾಪಿಸಿದ್ದಾನೆ. 9 “ಆತನು ತನ್ನ ನಂಬಿಗಸ್ತ ಭಕ್ತರ ಹೆಜ್ಜೆಗಳನ್ನು ಕಾಯುವನು;ಆದರೆ ದುಷ್ಟರನ್ನು ಅಂಧಕಾರದ ಮೌನದಲ್ಲಿ ಮುಳುಗಿಸುವನು,ಭುಜಬಲದಿಂದಲೇ ಯಾವನೂ ಜಯಹೊಂದಲಾರನು. 10 “ಯೆಹೋವನನ್ನು ವಿರೋಧಿಸುವವರು ಮುರಿಯಲ್ಪಡುತ್ತಾರೆ;ಆತನು ಆಕಾಶದಿಂದ ಅವರ ಮೇಲೆ ಗರ್ಜಿಸುತ್ತಾನೆ.ಯೆಹೋವನು ಭೂಮಿಯ ಕಟ್ಟಕಡೆಯಲ್ಲಿರುವವರಿಗೂ ನ್ಯಾಯತೀರಿಸುವನು.ತಾನು ನೇಮಿಸಿದ ಅರಸನಿಗೆ ಬಲವನ್ನು ಅನುಗ್ರಹಿಸುವನು;ತನ್ನ ಅಭಿಷಿಕ್ತನ ಕೊಂಬನ್ನು ಉನ್ನತಮಾಡುವನು.” 11 ಅನಂತರ ಎಲ್ಕಾನನು ರಾಮದಲ್ಲಿದ್ದ ತನ್ನ ಮನೆಗೆ ಹೋದನು; ಹುಡುಗನು ಯಾಜಕನಾದ ಏಲಿಯ ಕೈಕೆಳಗಿದ್ದುಕೊಂಡು ಯೆಹೋವನ ಸೇವೆ ಮಾಡುತ್ತಿದ್ದನು. 12 ಏಲಿಯ ಮಕ್ಕಳು ಬಹುದುಷ್ಟರಾಗಿದ್ದರು; ಅವರು ಯೆಹೋವನನ್ನು ಲಕ್ಷಿಸುತ್ತಿರಲಿಲ್ಲ. 13 ಯಜ್ಞವನ್ನರ್ಪಿಸುವುದಕ್ಕೆ ಬಂದ ಜನರಲ್ಲಿ ಈ ಯಾಜಕರು ನಡಿಸಿದ್ದೇನಂದರೆ, ಯಜ್ಞಮಾಂಸವು ಬೇಯುತ್ತಿರುವಾಗಲೇ ಯಾಜಕನ ಆಳು ಕೈಯಲ್ಲಿ ತ್ರಿಶೂಲವನ್ನು ಹಿಡಿದುಕೊಂಡು ಬರುತ್ತಿದ್ದನು. 14 ಆ ಮಾಂಸ ಬೇಯುತ್ತಿರುವ ಕೊಪ್ಪರಿಗೆಯಲ್ಲಾಗಲಿ, ಭಾಂಡಲ್ಲಾಗಲಿ (ದೊಡ್ಡ ಹಂಡೆ), ತಪ್ಪಲೆಯಲ್ಲಾಗಲಿ, ಗಡಿಗೆಯಲ್ಲಾಗಲಿ ಚುಚ್ಚಿ ಅದಕ್ಕೆ ಸಿಕ್ಕಿದ್ದೆಲ್ಲವನ್ನೂ ಯಾಜಕನಿಗೆಂದು ತೆಗೆದುಕೊಳ್ಳುತ್ತಿದ್ದನು. ಶೀಲೋವಿಗೆ ಬರುತ್ತಿದ ಇಸ್ರಾಯೇಲ್ಯರೆಲ್ಲರಿಗೂ ಹೀಗೆಯೇ ಮಾಡುತ್ತಿದ್ದರು. 15 ಇದಲ್ಲದೆ ಯಾಜಕನ ಆಳು ಕೊಬ್ಬನ್ನು ಹೋಮಮಾಡುವುದಕ್ಕಿಂತ ಮುಂಚೆಯೇ ಬಂದು ಯಜ್ಞವನ್ನರ್ಪಿಸುವವನಿಗೆ, “ಯಾಜಕನಿಗೋಸ್ಕರ ಸುಡತಕ್ಕ ಮಾಂಸವನ್ನು ಕೊಡು; ನೀನು ಬೇಯಿಸಿದ ಮಾಂಸವನ್ನು ಅವನು ತೆಗೆದುಕೊಳ್ಳುವುದಿಲ್ಲ; ಅವನಿಗೆ ಹಸಿಮಾಂಸವೇ ಬೇಕು” ಅನ್ನುವನು. 16 ಅರ್ಪಿಸುವವನು, ಮೊದಲು ಕೊಬ್ಬನ್ನು ಹೋಮಮಾಡಲಿ, ಅನಂತರ ನಿನಗೆ ಬೇಕಾದದ್ದನ್ನು ತೆಗೆದುಕೋ ಎಂದು ಹೇಳಿದರೆ ಅವನು, “ಈಗಲೇ ಕೊಡಬೇಕು; ಇಲ್ಲವಾದರೆ ಬಲಾತ್ಕಾರದಿಂದ ತೆಗೆದುಕೊಳ್ಳುವೆನು” ಎನ್ನುವನು. 17 ಹೀಗೆ ಆ ಯೌವನಸ್ಥರು ಯೆಹೋವನ ನೈವೇದ್ಯವನ್ನು ತುಚ್ಛೀಕರಿಸಿದ್ದರಿಂದ ಅವರ ಪಾಪವು ಯೆಹೋವನ ದೃಷ್ಟಿಯಲ್ಲಿ ಆಧಿಕವಾಯಿತು. 18 ಆದರೆ ಬಾಲಕನಾದ ಸಮುವೇಲನು ಏಫೋದೆಂಬ ನಾರು ಮಡಿಯಂಗಿಯನ್ನು ತೊಟ್ಟುಕೊಂಡು ಯೆಹೋವನ ಸೇವೆ ಮಾಡುತ್ತಿದ್ದನು. 19 ಅವನ ತಾಯಿಯು ಪ್ರತಿವರ್ಷವೂ ತನ್ನ ಗಂಡನ ಜೊತೆಯಲ್ಲಿ ಯಜ್ಞವನ್ನರ್ಪಿಸುವುದಕ್ಕೆ ಬರುವಾಗ ಒಂದು ಚಿಕ್ಕ ಅಂಗಿಯನ್ನು ಹೊಲಿದು ಅವನಿಗೆ ತಂದುಕೊಡುತ್ತಿದ್ದಳು. 20 ಏಲಿಯು ಎಲ್ಕಾನನಿಗೆ, “ನೀನು ಯೆಹೋವನಿಗೆ ಒಪ್ಪಿಸಿಬಿಟ್ಟ ಮಗನಿಗೆ ಬದಲಾಗಿ ಆತನು ಈ ಸ್ತ್ರೀಯಿಂದ ನಿನಗೆ ಬೇರೆ ಮಕ್ಕಳನ್ನು ಕೊಡಲಿ” ಎಂದು ಹೇಳಿ ಅವನನ್ನೂ ಅವನ ಹೆಂಡತಿಯನ್ನೂ ಆಶೀರ್ವದಿಸುತ್ತಿದ್ದನು. ಅನಂತರ ಅವರು ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. 21 ಯೆಹೋವನು ಕಟಾಕ್ಷಿಸಿದ್ದರಿಂದ ಹನ್ನಳಿಗೆ ಮೂರು ಮಂದಿ ಗಂಡುಮಕ್ಕಳೂ, ಇಬ್ಬರು ಹೆಣ್ಣುಮಕ್ಕಳಾದರು. ಬಾಲಕನಾಗಿದ್ದ ಸಮುವೇಲನು ಯೆಹೋವನ ಸನ್ನಿಧಿಯಲ್ಲೇ ಬೆಳೆದು ದೊಡ್ಡವನಾದನು. 22 ಬಹುವೃದ್ಧನಾದ ಏಲಿಯು ತನ್ನ ಮಕ್ಕಳು ಎಲ್ಲಾ ಇಸ್ರಾಯೇಲರಲ್ಲಿ ನಡೆಸುತ್ತಿರುವುದನ್ನೂ, ಅವರು ದೇವದರ್ಶನ ಗುಡಾರದ ಬಾಗಿಲಿನಲ್ಲಿ ಸೇವೆ ಮಾಡುತ್ತಿದ್ದ ಸ್ತ್ರೀಯರೊಡನೆ ಸಂಗಮಿಸುತ್ತಿರುವುದನ್ನೂ ಕೇಳಿ 23 ಅವರಿಗೆ, “ಎಲ್ಲಾ ಜನರಿಂದಲೂ ನಿಮ್ಮ ದುಷ್ಕೃತ್ಯಗಳನ್ನು ಕೇಳುತ್ತೇನೆ. ಹೀಗೇಕೆ ಮಾಡುತ್ತೀರಿ?” 24 ನನ್ನ ಮಕ್ಕಳೇ, ಹೀಗೆ ಮಾಡಬಾರದು, ನೀವು ಯೆಹೋವನ ಜನರನ್ನು ದುರ್ಮಾರ್ಗಕ್ಕೆ ಎಳೆಯುವವರಾಗಿದ್ದೀರೆಂದು ಕೇಳಿದ್ದೇನೆ; ಇದು ಒಳ್ಳೆಯದಲ್ಲ. 25 “ಮನುಷ್ಯನು ಮನುಷ್ಯರಿಗೆ ಅಪರಾಧಮಾಡಿದರೆ ದೇವರು ಮಧ್ಯಸ್ಥಿಕೆಯನ್ನು ವಹಿಸುವನು; ಆದರೆ ಮನುಷ್ಯನು ಯೆಹೋವನಿಗೆ ಅಪರಾಧಮಾಡಿದರೆ ಮಧ್ಯಸ್ಥಿಕೆ ವಹಿಸುವವರಾರು?” ಎಂದು ಎಚ್ಚರಿಸಿದರೂ ಅವರು ತಮ್ಮ ತಂದೆಯ ಮಾತಿಗೆ ಕಿವಿಗೊಡಲಿಲ್ಲ, ಯಾಕೆಂದರೆ ಯೆಹೋವನು ಅವರನ್ನು ನಾಶಮಾಡಲು ನಿರ್ಧರಿಸಿದ್ದನು. 26 ಬಾಲಕನಾದ ಸಮುವೇಲನಾದರೋ ಬೆಳೆಯುತ್ತಾ ಬಂದ ಹಾಗೆಲ್ಲಾ ಯೆಹೋವನ ಮತ್ತು ಮನುಷ್ಯರ ದಯೆಗೆ ಪಾತ್ರನಾದನು. 27 ದೇವರ ಮನುಷ್ಯನೊಬ್ಬನು ಏಲಿಯ ಬಳಿಗೆ ಬಂದು ಅವನಿಗೆ, “ಯೆಹೋವನು ನಿನಗೆ ಹೇಳುವುದೇನಂದರೆ, ‘ಇಸ್ರಾಯೇಲರು ಐಗುಪ್ತದಲ್ಲಿ ಫರೋಹನ ದಾಸತ್ವದಲ್ಲಿದ್ದಾಗ ನಾನು ನಿನ್ನ ಗೋತ್ರದವರಿಗೆ ಪ್ರತ್ಯಕ್ಷನಾಗಿ 28 ಇಸ್ರಾಯೇಲರ ಎಲ್ಲಾ ಕುಟುಂಬಗಳಿಂದ ಅವರನ್ನೇ ಯಾಜಕೋದ್ಯೋಗಕ್ಕೆ ಅಂದರೆ ಯಜ್ಞವನ್ನರ್ಪಿಸುವುದಕ್ಕೂ, ಧೂಪಹಾಕುವುದಕ್ಕೂ, ನನ್ನ ಸನ್ನಿಧಿಯಲ್ಲಿ ಏಫೋದನ್ನು ಧರಿಸಿಕೊಳ್ಳುವುದಕ್ಕೂ ಆರಿಸಿಕೊಂಡೆನು; ಅವರಿಗೆ ಇಸ್ರಾಯೇಲರ ಯಜ್ಞಶೇಷದ ಹಕ್ಕನ್ನು ಅನುಗ್ರಹಿಸಿದೆನು. 29 ನನ್ನ ಪ್ರಜೆಗಳಾದ ಇಸ್ರಾಯೇಲರು ನನ್ನ ಆಜ್ಞಾನುಸಾರವಾಗಿ ನನ್ನ ಮಂದಿರಕ್ಕೆ ತರುವ ಯಜ್ಞನೈವೇದ್ಯಗಳ ಘನತೆಯನ್ನು ನೀವು ಭಂಗಪಡಿಸಿ, ಅವುಗಳ ಶ್ರೇಷ್ಠ ಭಾಗಗಳಿಂದ ನಿಮ್ಮನ್ನು ಕೊಬ್ಬಿಸಿಕೊಳ್ಳುವುದೇಕೆ? ನೀನು ನನ್ನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ನಿನ್ನ ಮಕ್ಕಳನ್ನೇ ಗೌರವಿಸುವುದು ಸರಿಯೋ?’ 30 ಇಸ್ರಾಯೇಲಿನ ದೇವರಾದ ಯೆಹೋವನು ಹೇಳುವುದೇನೆಂದರೆ, ‘ನಿನ್ನ ಗೋತ್ರದವರೂ, ಸಂತಾನದವರೂ ನಿರಂತರವೂ ನನ್ನ ಸನ್ನಿಧಿಯಲ್ಲಿ ಸೇವೆಮಾಡಬೇಕೆಂದು ವಾಗ್ದಾನಮಾಡಿದ್ದೆನು. ಆದರೆ ಈಗ ನಾನು ತಿಳಿಸುವುದೇನಂದರೆ, ಅದು ನನಗೆ ದೂರವಾಗಿರಲಿ; ನನ್ನನ್ನು ಸನ್ಮಾನಿಸುವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸುವವರನ್ನು ನಾನು ತಿರಸ್ಕರಿಸುವೆನು. 31 ಇಗೋ, ನಾನು ನಿನ್ನ ಮತ್ತು ನಿನ್ನ ಮನೆಯವರ ಭುಜಬಲವನ್ನು ಮುರಿಯುವ ದಿನಗಳು ಬರುವವು. ನಿನ್ನ ಮನೆಯಲ್ಲಿ ಯಾರೂ ಪೂರ್ಣಾಯುಷ್ಯವನ್ನು ಮುಟ್ಟುವುದಿಲ್ಲ. 32 ನಿನ್ನ ವೈರಿಯು ನನ್ನ ಮಂದಿರದಲ್ಲಿ ಸೇವೆಮಾಡುವುದನ್ನು ನೋಡುವಿ. ಇಸ್ರಾಯೇಲರಿಗೆ ಸರ್ವಶುಭವನ್ನು ದಯಪಾಲಿಸುವೆನು; ಆದರೆ ನಿನ್ನ ಮನೆಯಲ್ಲಿ ಪೂರ್ಣಾಯುಷ್ಯವನ್ನು ಹೊಂದಿ ಜೀವಿಸುವವರು ಇನ್ನು ಮುಂದೆ ಒಬ್ಬರಾದರು ಇರುವುದಿಲ್ಲ. 33 ನಾನು ನಿನ್ನ ಸಂತಾನವನ್ನು ನನ್ನ ಸಾನ್ನಿಧ್ಯ ಸೇವೆಯಿಂದ ತೆಗೆದುಹಾಕದೆ, ಒಬ್ಬನನ್ನಾದರೂ ಉಳಿಸಿದರೆ ಅವನು ನಿನ್ನ ಕಣ್ಣೀರಿಗೂ ಮತ್ತು ಮನೋವ್ಯಥೆಗೂ ಕಾರಣನಾಗುವನು. ನಿನ್ನ ಸಂತಾನದವರೆಲ್ಲರೂ ಕತ್ತಿಯಿಂದ ಸಂಹಾರವಾಗುವರು. 34 ಇದೆಲ್ಲಾ ನೆರವೇರುವುದೆಂಬುದಕ್ಕೆ ನಿನ್ನ ಮಕ್ಕಳಾದ ಹೊಫ್ನಿ ಹಾಗೂ ಫೀನೆಹಾಸರು ಒಂದೇ ದಿನದಲ್ಲಿ ಸಾಯುವುದೇ ಗುರುತಾಗಿರುವುದು. 35 ನನ್ನ ಹೃದಯದ ಹಾಗೂ ಮನಸ್ಸಿನ ಆಲೋಚನೆಗಳನ್ನು ನೆರವೇರಿಸುವ ಒಬ್ಬ ನಂಬಿಗಸ್ತನಾದ ಯಾಜಕನನ್ನು ಎಬ್ಬಿಸುವೆನು; ಅವನಿಗೆ ಶಾಶ್ವತ ಗೃಹವನ್ನು ಅನುಗ್ರಹಿಸುವೆನು. ಅವನು ನನ್ನ ಅಭಿಷಿಕ್ತನ ಬಳಿಯಲ್ಲಿ ಸದಾಕಾಲ ಸೇವೆಮಾಡುವನು.’ 36 ನಿನ್ನ ಮನೆಯಲ್ಲಿ ಉಳಿದವರು ಬಂದು ಅವನ ಮುಂದೆ ಅಡ್ಡ ಬಿದ್ದು, ನಮಗೆ ಒಂದು ಬೆಳ್ಳಿಕಾಸನ್ನು ರೊಟ್ಟಿಯ ಚೂರನ್ನು ಕೊಡು; ಒಂದು ತುತ್ತು ಅನ್ನಕ್ಕೆ ಮಾರ್ಗವಾಗುವ ಹಾಗೆ ಯಾಜಕನ ಸೇವೆಯಲ್ಲಿ ಯಾವುದಕ್ಕಾದರೂ ನಮ್ಮನ್ನು ಸೇರಿಸಿಕೋ” ಎಂದು ಅವನನ್ನು ಬೇಡಿಕೊಳ್ಳುವರು, ಎಂದು ಹೇಳಿದನು.