Psalms 46 (IRVK)
undefined 1 ಪ್ರಧಾನಗಾಯಕನ ಕೀರ್ತನಸಂಗ್ರಹದಿಂದ ಆರಿಸಿಕೊಂಡದ್ದು; ಕೋರಹೀಯರ ಗೀತೆ; ತಾರಕಸ್ಥಾಯಿಯಲ್ಲಿ ಹಾಡತಕ್ಕದ್ದು. 1 ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ;ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. 2 ಆದುದರಿಂದ ಭೂಮಿಯು ಮಾರ್ಪಟ್ಟರೂ,ಬೆಟ್ಟಗಳು ಸಮುದ್ರದಲ್ಲಿ ಮುಳುಗಿಹೋದರೂ,ನಮಗೇನೂ ಭಯವಿಲ್ಲ. 3 ಸಮುದ್ರವು ಬೋರ್ಗರೆಯುತ್ತಾ ನೊರೆಯನ್ನು ಕಾರಿದರೇನು?ಅದರ ಅಲ್ಲಕಲ್ಲೋಲಗಳಿಂದ ಪರ್ವತಗಳು ಚಲಿಸಿದರು ಭಯವಿಲ್ಲ? ಸೆಲಾ 4 ಒಂದು ನದಿ ಇದೆ; ಅದರ ಕಾಲುವೆಗಳು,ಪರಾತ್ಪರನಾದ ದೇವರ ಪರಿಶುದ್ಧ ನಿವಾಸಸ್ಥಾನವಾಗಿರುವ,ದೇವರ ನಗರವನ್ನು ಸಂತೋಷಪಡಿಸುತ್ತವೆ. 5 ದೇವರು ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ.ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು. 6 ಜನಾಂಗಗಳು ಕಳವಳಗೊಂಡವು;ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿ ಹೋಯಿತು. 7 ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ;ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ 8 ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ;ಆತನು ಭೂಲೋಕದಲ್ಲಿ ಎಂಥಾ ವಿನಾಶವನ್ನು ಉಂಟುಮಾಡಿದ್ದಾನೆ. 9 ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ಸ್ಥಗಿತಗೊಳಿಸಿದ್ದಾನೆ;ಬಿಲ್ಲುಗಳನ್ನೂ, ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ. 10 “ಕಾದಾಡುವುದನ್ನು ನಿಲ್ಲಿಸಿರಿ, ನಾನೇ ದೇವರು;ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ” ಎಂದು ಹೇಳಿದ್ದಾನೆ. 11 ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ;ಯಾಕೋಬವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ.