Psalms 33 (IRVK)
1 ನೀತಿವಂತರೇ, ಯೆಹೋವನ ವಿಷಯದಲ್ಲಿ ಉಲ್ಲಾಸಪಡಿರಿ;ಯಥಾರ್ಥಚಿತ್ತರು ಆತನನ್ನು ಸ್ತುತಿಸುವುದು ಯುಕ್ತವಾಗಿದೆ. 2 ಕಿನ್ನರಿಯನ್ನು ನುಡಿಸುತ್ತಾ ಯೆಹೋವನನ್ನು ಕೊಂಡಾಡಿರಿ;ಹತ್ತುತಂತಿಗಳ ಸ್ವರಮಂಡಲವನ್ನು ನುಡಿಸುತ್ತಾ ಸಂಕೀರ್ತಿಸಿರಿ. 3 ಆತನ ಘನಕ್ಕಾಗಿ ನೂತನ ಕೀರ್ತನೆಯನ್ನು ಹಾಡಿರಿ;ಉತ್ಸಾಹಧ್ವನಿಯೊಡನೆ ಇಂಪಾಗಿ ಬಾರಿಸಿರಿ. 4 ಯೆಹೋವನ ವಚನವು ಯಥಾರ್ಥವಾದದ್ದು;ಆತನ ಕೃತ್ಯವೆಲ್ಲಾ ನಂಬಿಕೆಯುಳ್ಳದ್ದಾಗಿವೆ. 5 ಆತನು ನೀತಿ ಮತ್ತು ನ್ಯಾಯಗಳನ್ನು ಪ್ರೀತಿಸುವವನು;ಭೂಲೋಕವೆಲ್ಲಾ ಯೆಹೋವನ ಕೃಪೆಯಿಂದ ತುಂಬಿದೆ. 6 ಯೆಹೋವನ ಅಪ್ಪಣೆಯಿಂದಲೇ ಆಕಾಶವು ಉಂಟಾಯಿತು;ಅದರಲ್ಲಿರುವುದೆಲ್ಲವೂ ಆತನ ಶ್ವಾಸದಿಂದ ನಿರ್ಮಿತವಾಯಿತು. 7 ನೀರುಗಳನ್ನು ಒಟ್ಟುಗೂಡಿಸಿ ಸಮುದ್ರವನ್ನು ಮಾಡಿದವನು ಆತನೇ;ಭೂಮಿಯ ಕೆಳಗೆ ಜಲಾಶಯಗಳನ್ನು ಇಟ್ಟವನು ಆತನೇ. 8 ಭೂಲೋಕದವರೆಲ್ಲರೂ ಯೆಹೋವನಿಗೆ ಭಯಪಡಲಿ;ಭೂನಿವಾಸಿಗಳೆಲ್ಲರೂ ಆತನಿಗೆ ಹೆದರಲಿ. 9 ಆತನು ನುಡಿದ ಮಾತ್ರಕ್ಕೆ ಸಮಸ್ತವೂ ಉಂಟಾಯಿತು;ಆತನು ಆಜ್ಞಾಪಿಸುತ್ತಲೇ ಸರ್ವವೂ ಸ್ಥಾಪನೆಯಾಯಿತು. 10 ಯೆಹೋವನು ಅನ್ಯಜನರ ಸಂಕಲ್ಪಗಳನ್ನು ವ್ಯರ್ಥಮಾಡುತ್ತಾನೆ;ಅವರ ಯೋಚನೆಗಳನ್ನು ನಿಷ್ಫಲಮಾಡುತ್ತಾನೆ. 11 ಯೆಹೋವನ ಆಲೋಚನೆಯೋ ಶಾಶ್ವತವಾಗಿಯೇ ನಿಲ್ಲುವುದು;ಆತನ ಸಂಕಲ್ಪವು ಎಂದಿಗೂ ಕದಲುವುದಿಲ್ಲ. 12 ಯಾರಿಗೆ ಯೆಹೋವನೇ ದೇವರಾಗಿದ್ದಾನೋ,ಯಾವ ಜನಾಂಗದವರನ್ನು ಸ್ವಕೀಯರನ್ನಾಗಿ ಆದುಕೊಂಡಿದ್ದಾನೋ ಅವರೇ ಧನ್ಯರು. 13 ಯೆಹೋವನು ಆಕಾಶದಿಂದ ಮನುಷ್ಯರೆಲ್ಲರನ್ನು ನೋಡುತ್ತಾನೆ; 14 ತಾನಿರುವ ಸ್ಥಾನದಿಂದ ಭೂನಿವಾಸಿಗಳೆಲ್ಲರನ್ನು ದೃಷ್ಟಿಸುತ್ತಾನೆ. 15 ಅವರೆಲ್ಲರ ಹೃದಯಗಳನ್ನು ನಿರ್ಮಿಸಿದವನೂ,ಅವರ ಕೃತ್ಯಗಳನ್ನೆಲ್ಲಾ ವಿವೇಚಿಸುವವನೂ ಆತನೇ. 16 ಮಹಾ ಸೇನಾಬಲದಿಂದಲೇ ಯಾವ ಅರಸನಿಗೂ ಜಯವಾಗುವುದಿಲ್ಲ;ಯಾವ ಶೂರನೂ ಅಧಿಕವಾದ ಭುಜಬಲದಿಂದ ಸುರಕ್ಷಿತನಾಗುವುದಿಲ್ಲ. 17 ಜೀವದ ರಕ್ಷಣೆಗಾಗಿ ಕುದುರೆಯು ಪ್ರಯೋಜನವಿಲ್ಲ;ಅದು ತನ್ನ ವಿಶೇಷಬಲದಿಂದ ಯಾರನ್ನೂ ರಕ್ಷಿಸಲಾರದು. 18 ಯೆಹೋವನಾದರೋ ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕಟಾಕ್ಷಿಸುತ್ತಾನೆ;ತನ್ನ ಕೃಪೆಯನ್ನು ನಿರೀಕ್ಷಿಸುವವರನ್ನು ಲಕ್ಷಿಸುತ್ತಾನೆ. 19 ಅವರ ಪ್ರಾಣವನ್ನು ಮರಣದಿಂದ ತಪ್ಪಿಸುವನು;ಬರಗಾಲದಲ್ಲಿ ಅವರ ಜೀವವನ್ನು ಉಳಿಸುವನು. 20 ನಮ್ಮ ಮನಸ್ಸು ಯೆಹೋವನಿಗೋಸ್ಕರ ಕಾದಿದೆ;ನಮ್ಮ ಸಹಾಯವೂ, ಗುರಾಣಿಯೂ ಆತನೇ. 21 ಆತನಲ್ಲಿ ನಮ್ಮ ಹೃದಯವು ಸಂತೋಷಿಸುವುದು;ಆತನ ಪರಿಶುದ್ಧನಾಮದಲ್ಲಿ ಭರವಸವಿಟ್ಟಿದ್ದೇವೆ. 22 ಯೆಹೋವನೇ, ನಾವು ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇವೆ;ನಿನ್ನ ಕೃಪೆಯು ನಮ್ಮ ಮೇಲೆ ಇರಲಿ.