Exodus 10 (BOKCV2)
1 ತರುವಾಯ ಯೆಹೋವ ದೇವರು ಮೋಶೆಗೆ, “ಫರೋಹನ ಬಳಿಗೆ ಹೋಗು, ಏಕೆಂದರೆ ನಾನು ನನ್ನ ಅದ್ಭುತ ಸೂಚಕಕಾರ್ಯಗಳನ್ನು ಅವನ ಮುಂದೆ ತೋರಿಸುವುದಕ್ಕಾಗಿ ಅವನ ಹೃದಯವನ್ನೂ ಅವನ ಅಧಿಕಾರಿಗಳ ಹೃದಯಗಳನ್ನೂ ಕಠಿಣ ಮಾಡಿದ್ದೇನೆ. 2 ಇದಲ್ಲದೆ ನೀನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ನಾನು ಈಜಿಪ್ಟಿನಲ್ಲಿ ಏನು ಮಾಡಿದೆನೆಂದೂ, ನಾನೇ ಯೆಹೋವ ದೇವರೆಂದೂ ನೀವು ತಿಳಿದುಕೊಳ್ಳುವಂತೆ ನಾನು ಅವರ ಮಧ್ಯದಲ್ಲಿ ಮಾಡಿದ ಅದ್ಭುತ ಸೂಚಕಕಾರ್ಯಗಳನ್ನು ತಿಳಿಸಬೇಕು,” ಎಂದು ಹೇಳಿದರು. 3 ಮೋಶೆ ಆರೋನರು ಫರೋಹನ ಬಳಿಗೆ ಬಂದು ಅವನಿಗೆ, “ಹಿಬ್ರಿಯರ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ, ‘ನನ್ನ ಸನ್ನಿಧಿಯಲ್ಲಿ ನೀನು ಎಷ್ಟು ಕಾಲ ತಲೆ ತಗ್ಗಿಸದಿರುವೆ? ನನ್ನನ್ನು ಆರಾಧಿಸುವಂತೆ ನನ್ನ ಜನರನ್ನು ಹೋಗಗೊಡಿಸು. 4 ನೀನು ನನ್ನ ಜನರನ್ನು ಹೋಗಗೊಡಿಸದಿದ್ದರೆ, ನಾಳೆಯೇ ನಾನು ನಿನ್ನ ರಾಜ್ಯದಲ್ಲಿ ಮಿಡತೆಗಳನ್ನು ಬರಮಾಡುವೆನು. 5 ಒಬ್ಬನು ಭೂಮಿಯನ್ನು ಕಾಣುವುದಕ್ಕಾಗದಷ್ಟು ಅವು ಭೂಮಿಯನ್ನೆಲ್ಲಾ ಮುಚ್ಚಿಕೊಳ್ಳುವುವು. ಇದಲ್ಲದೆ ಅವು ಆಲಿಕಲ್ಲಿನ ಮಳೆಯಿಂದ ಹಾಳಾಗದೆ ನಿಮಗಾಗಿ ಉಳಿದಿರುವುದೆಲ್ಲವನ್ನೂ, ಹೊಲಗಳಲ್ಲಿ ಚಿಗುರಿರುವ ಪ್ರತಿಯೊಂದು ಮರವನ್ನೂ ತಿಂದುಬಿಡುವುವು. 6 ಅವು ನಿನ್ನ ಮನೆಗಳಲ್ಲಿಯೂ ನಿನ್ನ ಅಧಿಕಾರಿಗಳ ಮನೆಗಳಲ್ಲಿಯೂ ಈಜಿಪ್ಟಿನ ಎಲ್ಲಾ ಮನೆಗಳಲ್ಲಿಯೂ ತುಂಬಿಕೊಳ್ಳುವುವು. ನಿನ್ನ ತಂದೆ ಅಲ್ಲದೆ ನಿನ್ನ ತಂದೆಯ ತಂದೆಗಳಾಗಲಿ, ಭೂಮಿಯ ಮೇಲೆ ಇದ್ದಂದಿನಿಂದ ಇಂದಿನವರೆಗೂ ಅಂಥ ಮಿಡತೆಯ ದಂಡನ್ನು ಯಾರೂ ನೋಡಿಲ್ಲ,’ ” ಎಂದು ಮೋಶೆ ಹೇಳಿ ಫರೋಹನ ಬಳಿಯಿಂದ ಹೊರಟುಹೋದನು. 7 ಫರೋಹನ ಅಧಿಕಾರಿಗಳು ಅವನಿಗೆ, “ಇವನು ಎಷ್ಟು ಕಾಲ ನಮಗೆ ಉರುಲಾಗಿರಬೇಕು. ಆ ಜನರು ತಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡುವಂತೆ ಅವರನ್ನು ಕಳುಹಿಸಿಬಿಡು. ಈಜಿಪ್ಟ್ ನಾಶವಾಯಿತೆಂದು ನಿನಗೆ ಇನ್ನೂ ತಿಳಿಯಲಿಲ್ಲವೋ?” ಎಂದರು. 8 ಆದುದರಿಂದ ಫರೋಹನು ಮೋಶೆ ಮತ್ತು ಆರೋನರನ್ನು ಪುನಃ ಕರೆಯಿಸಿ ಅವರಿಗೆ, “ನೀವು ಹೋಗಿ ನಿಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡಿರಿ, ಆದರೆ ಹೋಗುವವರು ಯಾರ‍್ಯಾರು?” ಎಂದು ಕೇಳಿದನು. 9 ಅದಕ್ಕೆ ಮೋಶೆಯು ಅವನಿಗೆ, “ನಮ್ಮ ಚಿಕ್ಕವರನ್ನೂ ವೃದ್ಧರನ್ನೂ ಕರೆದುಕೊಂಡು ಹೋಗುತ್ತೇವೆ. ಇದಲ್ಲದೆ ನಮ್ಮ ಪುತ್ರಪುತ್ರಿಯರನ್ನೂ ನಮ್ಮ ದನಕುರಿಗಳನ್ನೂ ತೆಗೆದುಕೊಂಡು ಹೋಗುತ್ತೇವೆ. ಏಕೆಂದರೆ ನಾವು ಯೆಹೋವ ದೇವರಿಗಾಗಿ ಹಬ್ಬವನ್ನು ಮಾಡಬೇಕು,” ಎಂದನು. 10 ಫರೋಹನು ಅವರಿಗೆ, “ನಾನು ನಿಮ್ಮ ಮಡದಿ ಮಕ್ಕಳನ್ನೂ ಕಳುಹಿಸಿಕೊಟ್ಟು, ಯೆಹೋವ ದೇವರು ನಿಮ್ಮ ಸಂಗಡ ಇರಲಿ ಎಂದು ನಾನು ಹೇಳಬಯಸುವಿರೋ? ಇಲ್ಲಾ! ನೀವು ಕೇಡು ಮಾಡಲು ನಿರ್ಧರಿಸಿರುವಿರಿ? 11 ಹಾಗೆ ಮಾಡದೆ, ಗಂಡಸರಾದ ನೀವು ಮಾತ್ರ ಹೋಗಿ ಯೆಹೋವ ದೇವರಿಗೆ ಆರಾಧನೆ ಮಾಡಿರಿ, ಏಕೆಂದರೆ ಇದನ್ನೇ ನೀವು ಬಯಸಿದಿರಿ,” ಎಂದನು. ತರುವಾಯ ಫರೋಹನು ಅವರನ್ನು ತನ್ನ ಸನ್ನಿಧಿಯಿಂದ ಹೊರಡಿಸಿಬಿಟ್ಟನು. 12 ಆಗ ಯೆಹೋವ ದೇವರು ಮೋಶೆಗೆ, “ಮಿಡತೆಗಳಿಗಾಗಿ ನಿನ್ನ ಕೈಯನ್ನು ಈಜಿಪ್ಟಿನ ಮೇಲೆ ಚಾಚು. ಅವು ಈಜಿಪ್ಟಿನ ಮೇಲೆ ಬಂದು, ಆಲಿಕಲ್ಲಿನ ಮಳೆಯು ದೇಶದಲ್ಲಿ ಉಳಿಸಿದ ಹಸುರಾದದ್ದನ್ನೆಲ್ಲಾ ತಿಂದುಬಿಡಲಿ,” ಎಂದರು. 13 ಮೋಶೆಯು ತನ್ನ ಕೋಲನ್ನು ಈಜಿಪ್ಟ್ ದೇಶದ ಮೇಲೆ ಚಾಚಿದಾಗ, ಯೆಹೋವ ದೇವರು ಹಗಲಲ್ಲೂ ರಾತ್ರಿಯಲ್ಲೂ ಪೂರ್ವದಿಕ್ಕಿನಿಂದ ಗಾಳಿಯನ್ನು ಬರಮಾಡಿದರು. ಉದಯವಾದಾಗ ಆ ಗಾಳಿಯು ಮಿಡತೆಗಳನ್ನು ಅಟ್ಟಿಕೊಂಡು ಬಂದಿತು. 14 ಹೀಗೆ ಮಿಡತೆಗಳ ಉಪದ್ರವ ಈಜಿಪ್ಟ್ ದೇಶದಲ್ಲೆಲ್ಲಾ ಬಂದು, ಈಜಿಪ್ಟಿನ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವುಗಳಂಥವು ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು. 15 ಏಕೆಂದರೆ ಅವು ಭೂಮಿಯನ್ನೆಲ್ಲಾ ಮುತ್ತಿಕೊಂಡದ್ದರಿಂದ, ಆ ದೇಶದಲ್ಲಿ ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ, ಆಲಿಕಲ್ಲಿನ ಮಳೆಯು ಉಳಿಸಿದ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾಗಲಿ, ಹೊಲದ ಗಿಡಗಳಲ್ಲಾಗಲಿ ಹಸುರಾದದ್ದು ಈಜಿಪ್ಟ್ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ. 16 ಆಗ ಫರೋಹನು ಮೋಶೆ ಆರೋನರನ್ನು ತ್ವರೆಯಾಗಿ ಕರೆಯಿಸಿ ಅವರಿಗೆ, “ನಾನು ನಿಮ್ಮ ದೇವರಾದ ಯೆಹೋವ ದೇವರಿಗೂ, ನಿಮಗೂ ವಿರೋಧವಾಗಿ ಪಾಪಮಾಡಿದ್ದೇನೆ. 17 ಹೀಗಿರುವುದರಿಂದ ಈಗ ಒಂದೇ ಸಾರಿ ಮಾತ್ರ ನನ್ನ ಪಾಪವನ್ನು ಕ್ಷಮಿಸಬೇಕು. ಈ ಮರಣಕರವಾದ ಉಪದ್ರವವನ್ನು ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಯೆಹೋವ ದೇವರನ್ನು ಬೇಡಿಕೊಳ್ಳಿರಿ,” ಎಂದನು. 18 ಆಗ ಮೋಶೆ ಫರೋಹನನ್ನು ಬಿಟ್ಟು ಹೋಗಿ ಯೆಹೋವ ದೇವರನ್ನು ಬೇಡಿಕೊಂಡನು. 19 ಯೆಹೋವ ದೇವರು ಬಲವಾದ ಪಶ್ಚಿಮ ಗಾಳಿಯನ್ನು ಬೀಸುವಂತೆ ಮಾಡಿದರು. ಅದು ಮಿಡತೆಗಳನ್ನು ಎತ್ತಿಕೊಂಡು ಹೋಗಿ ಕೆಂಪು ಸಮುದ್ರದಲ್ಲಿ ಹಾಕಿತು. ಈಜಿಪ್ಟ್ ಮೇರೆಗಳಲ್ಲೆಲ್ಲಾ ಒಂದು ಮಿಡತೆಯಾದರೂ ಉಳಿಯಲಿಲ್ಲ. 20 ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ, ಅವನು ಇಸ್ರಾಯೇಲರನ್ನು ಕಳುಹಿಸದೆ ಹೋದನು. 21 ಆಗ ಯೆಹೋವ ದೇವರು ಮೋಶೆಗೆ, “ಈಜಿಪ್ಟ್ ದೇಶದಲ್ಲಿ ಕತ್ತಲೆ ಕವಿದು ಗಾಡಾಂಧಕಾರವಾಗುವಂತೆ ನಿನ್ನ ಕೈಯನ್ನು ಆಕಾಶದ ಕಡೆಗೆ ಚಾಚು,” ಎಂದರು. 22 ಮೋಶೆಯು ಆಕಾಶದ ಕಡೆಗೆ ಕೈಚಾಚಿದಾಗ, ಈಜಿಪ್ಟ್ ದೇಶದಲ್ಲೆಲ್ಲಾ ಮೂರು ದಿನಗಳವರೆಗೆ ಘೋರವಾದ ಕತ್ತಲೆ ಕವಿಯಿತು. 23 ಮೂರು ದಿನಗಳವರೆಗೆ ಅವರು ಒಬ್ಬರನ್ನೊಬ್ಬರು ನೋಡಲಾಗಲಿಲ್ಲ. ಯಾರೂ ತಮ್ಮ ಸ್ಥಳವನ್ನು ಬಿಟ್ಟು ಏಳಲಿಲ್ಲ. ಆದರೆ ಇಸ್ರಾಯೇಲರಿಗೆಲ್ಲಾ ಅವರು ವಾಸಿಸುವ ಸ್ಥಳದಲ್ಲಿ ಅವರಿಗೆ ಬೆಳಕಿತ್ತು. 24 ಆಗ ಫರೋಹನು ಮೋಶೆಯನ್ನು ಕರೆಯಿಸಿ ಅವನಿಗೆ, “ನೀವು ಹೋಗಿ ಯೆಹೋವ ದೇವರಿಗೆ ಆರಾಧನೆ ಮಾಡಿರಿ. ನಿಮ್ಮ ಕುರಿದನಗಳು ಮಾತ್ರ ಇಲ್ಲಿರಲಿ. ನಿಮ್ಮ ಮಡದಿ ಮಕ್ಕಳೂ ನಿಮ್ಮ ಸಂಗಡ ಹೋಗಲಿ,” ಎಂದನು. 25 ಅದಕ್ಕೆ ಮೋಶೆಯು ಅವನಿಗೆ, “ನಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸುವುದಕ್ಕಾಗಿ ಯಜ್ಞಗಳನ್ನೂ ದಹನಬಲಿಗಳನ್ನೂ ತೆಗೆದುಕೊಂಡು ಹೋಗಲು ಅಪ್ಪಣೆಬೇಕು. 26 ನಮ್ಮ ಪಶುಪ್ರಾಣಿಗಳನ್ನೂ ನಾವು ನಮ್ಮ ಸಂಗಡ ತೆಗೆದುಕೊಂಡು ಹೋಗುವೆವು. ಒಂದು ಗೊರಸನ್ನೂ ಬಿಡಲಾರೆವು. ಏಕೆಂದರೆ ನಮ್ಮ ದೇವರಾದ ಯೆಹೋವ ದೇವರಿಗೆ ಆರಾಧನೆ ಮಾಡುವುದಕ್ಕೆ ಅವುಗಳಿಂದಲೇ ಬಲಿ ಅರ್ಪಿಸಬೇಕು. ಯೆಹೋವ ದೇವರಿಗೆ ಯಾವ ಅರ್ಪಣೆ ಮಾಡಬೇಕೆಂಬುದು ಅಲ್ಲಿಗೆ ಹೋಗುವವರೆಗೂ ನಮಗೆ ತಿಳಿಯದು,” ಎಂದನು. 27 ಆದರೆ ಯೆಹೋವ ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದ್ದರಿಂದ, ಅವನು ಅವರನ್ನು ಕಳುಹಿಸಲಾರದೆ ಹೋದನು. 28 ಆಗ ಫರೋಹನು ಮೋಶೆಗೆ, “ನನ್ನನ್ನು ಬಿಟ್ಟು ಹೋಗು. ಇನ್ನು ನನ್ನ ಮುಖವನ್ನು ನೋಡದಂತೆ ಎಚ್ಚರ. ಏಕೆಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ಸಾಯುವೆ,” ಎಂದನು. 29 ಮೋಶೆಯು ಅವನಿಗೆ, “ನೀನು ಸರಿಯಾಗಿ ಹೇಳಿದ್ದೀ. ಇನ್ನು ಮೇಲೆ ನಾನು ನಿನ್ನ ಮುಖವನ್ನು ನೋಡುವುದಿಲ್ಲ,” ಎಂದನು.