Judges 7 (BOKCV2)
1 ಗಿದ್ಯೋನನೆಂಬ ಯೆರುಬ್ಬಾಳನೂ, ಅವನ ಸಂಗಡ ಇದ್ದ ಜನರೆಲ್ಲರೂ ಉದಯದಲ್ಲಿ ಎದ್ದು, ಹೆರೋದಿನ ಬಾವಿಯ ಬಳಿಯಲ್ಲಿ ದಂಡಿಳಿಸಿದರು. ಮಿದ್ಯಾನ್ಯರ ದಂಡು ಅವರಿಗೆ ಉತ್ತರಕ್ಕೆ ಮೋರೆ ಬೆಟ್ಟದ ತಗ್ಗಿನಲ್ಲಿ ಇಳಿದಿತ್ತು. 2 ಆಗ ಯೆಹೋವ ದೇವರು ಗಿದ್ಯೋನನಿಗೆ, “ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ, ನಾನು ಮಿದ್ಯಾನ್ಯರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವುದಕ್ಕೆ ಸಾಧ್ಯವಿಲ್ಲ ಇಸ್ರಾಯೇಲರು, ‘ನನ್ನ ಕೈ ನನ್ನನ್ನು ರಕ್ಷಿಸಿತು,’ ಎಂದು ನನಗೆ ವಿರೋಧವಾಗಿ ಹೆಚ್ಚಳಪಟ್ಟಾರು. 3 ಆದ್ದರಿಂದ ನೀನು ಹೋಗಿ ಜನರು ಕೇಳುವ ಹಾಗೆ, ‘ಯಾವನಿಗೆ ಭಯವೂ, ಹೆದರಿಕೆಯೂ ಉಂಟೋ ಅವನು ತಿರುಗಿ ತ್ವರೆಯಾಗಿ ಗಿಲ್ಯಾದ್ ಬೆಟ್ಟದಿಂದ ಹೋಗಲಿ,’ ಎಂದು ಪ್ರಕಟಮಾಡು,” ಎಂದರು. ಆಗ ಜನರಲ್ಲಿ ಇಪ್ಪತ್ತೆರಡು ಸಾವಿರ ಜನರು ತಿರುಗಿ ಹೋದರು; ನಂತರ ಹತ್ತು ಸಾವಿರ ಜನರು ಉಳಿದರು. 4 ಯೆಹೋವ ದೇವರು ಗಿದ್ಯೋನನಿಗೆ, “ಜನರು ಇನ್ನೂ ತುಂಬ ಇದ್ದರೆ; ಅವರನ್ನು ಹತ್ತಿರದ ಹಳ್ಳಕ್ಕೆ ಕರೆದುಕೊಂಡು ಹೋಗು. ಅಲ್ಲಿ ನಾನು ಅವರನ್ನು ನಿನಗೋಸ್ಕರ ಪರೀಕ್ಷೆಮಾಡಿ ಆರಿಸುವೆನು. ನಿನ್ನ ಸಂಗಡ ಹೋಗುವವರಲ್ಲಿ ಯಾವನನ್ನು ಕುರಿತು ಹೇಳುವೆನೋ, ಅವನು ನಿನ್ನ ಸಂಗಡ ಹೋಗಲಿ. ಆದರೆ ನಾನು ನಿನ್ನ ಸಂಗಡ ಬರಬಾರದೆಂದು ಯಾವನನ್ನು ಕುರಿತು ಹೇಳುವೆನೋ, ಅವನು ಹೋಗಬಾರದು,” ಎಂದರು. 5 ಗಿದ್ಯೋನನು ಜನರನ್ನು ಹಳ್ಳದ ಬಳಿಗೆ ಕರಕೊಂಡು ಬಂದನು. ಆಗ ಯೆಹೋವ ದೇವರು ಗಿದ್ಯೋನನಿಗೆ, “ನಾಯಿ ನೆಕ್ಕುವ ಹಾಗೆ ಜಲವನ್ನು ತನ್ನ ನಾಲಿಗೆಯಿಂದ ನೆಕ್ಕುವ ಪ್ರತಿಯೊಬ್ಬನನ್ನೂ, ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗುವ ಪ್ರತಿಯೊಬ್ಬನನ್ನೂ ಬೇರೆಬೇರೆಯಾಗಿ ನಿಲ್ಲಿಸು,” ಎಂದರು. 6 ಆಗ ನೀರನ್ನು ತಮ್ಮ ಕೈಯಿಂದ ತೆಗೆದುಕೊಂಡು, ತಮ್ಮ ಬಾಯಿಗೆ ಎತ್ತಿ ನೆಕ್ಕಿದವರು ಮುನ್ನೂರು ಜನ, ಉಳಿದ ಜನರೆಲ್ಲಾ ನೀರು ಕುಡಿಯುವುದಕ್ಕೆ ಮೊಣಕಾಲೂರಿ ಬಗ್ಗಿದರು. 7 ಆಗ ಯೆಹೋವ ದೇವರು ಗಿದ್ಯೋನನಿಗೆ, “ನೆಕ್ಕಿ ಕುಡಿದ ಆ ಮುನ್ನೂರು ಜನರಿಂದ ನಾನು ನಿಮ್ಮನ್ನು ರಕ್ಷಿಸಿ, ಮಿದ್ಯಾನ್ಯರನ್ನು ನಿನ್ನ ಕೈಯಲ್ಲಿ ಒಪ್ಪಿಸುವೆನು. ಇತರ ಜನರೆಲ್ಲಾ ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ,” ಎಂದರು. 8 ಆಗ ಜನರು ಆಹಾರವನ್ನೂ, ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು. ಆದರೆ ಗಿದ್ಯೋನನು ಇಸ್ರಾಯೇಲರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ, ಆ ಮುನ್ನೂರು ಜನರನ್ನು ಇಟ್ಟುಕೊಂಡನು.ಮಿದ್ಯಾನ್ಯರ ದಂಡು ಅವನಿಗೆ ಕೆಳಭಾಗದ ಕಣಿವೆಯಲ್ಲಿ ಇತ್ತು. 9 ಆಗ ರಾತ್ರಿಯಲ್ಲಿ, ಯೆಹೋವ ದೇವರು ಅವನಿಗೆ, “ನೀನು ಎದ್ದು ಪಾಳೆಗೆ ವಿರೋಧವಾಗಿ ಇಳಿದು ಹೋಗು. ಏಕೆಂದರೆ ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ. 10 ಇಳಿದು ಹೋಗುವುದಕ್ಕೆ ನೀನು ಭಯಪಟ್ಟರೆ, ಮೊದಲು ನೀನು ನಿನ್ನ ಸೇವಕನಾದ ಪುರನ ಸಂಗಡ ಪಾಳೆಯ ಬಳಿಗೆ ಇಳಿದು ಹೋಗಿ, 11 ಅವರು ಮಾತನಾಡುವುದನ್ನು ಕೇಳು. ತರುವಾಯ ಪಾಳೆಯಲ್ಲಿ ಇಳಿದು ಹೋಗುವುದಕ್ಕೆ ನಿನ್ನ ಕೈಗಳು ಬಲಗೊಳ್ಳುವುವು,” ಎಂದರು. ಹಾಗೆಯೇ ಅವನು ತನ್ನ ಸೇವಕನಾದ ಪುರನ ಸಂಗಡ ಪಾಳೆಯ ಹೊರಗಿರುವ ಸೈನಿಕರ ಬಳಿಗೆ ಹೋದನು. 12 ಮಿದ್ಯಾನ್ಯರೂ, ಅಮಾಲೇಕ್ಯರೂ, ಪೂರ್ವದೇಶದ ಜನರೆಲ್ಲರೂ ಮಿಡತೆಗಳಷ್ಟು ಗುಂಪಾಗಿ ತಗ್ಗಿನಲ್ಲಿ ಮಲಗಿದ್ದರು. ಅವರ ಒಂಟೆಗಳು ಸಮುದ್ರದ ಮರಳಿನ ಹಾಗೆ ಅಸಂಖ್ಯವಾಗಿದ್ದವು. 13 ಗಿದ್ಯೋನನು ಬಂದಾಗ, ಒಬ್ಬನು ತನ್ನ ಜೊತೆಗಾರನಿಗೆ ತನಗಾದ ಸ್ವಪ್ನವನ್ನು ವಿವರಿಸಿ ಹೇಳಿದ್ದೇನೆಂದರೆ, “ಇಗೋ, ನಾನು ಒಂದು ಕನಸನ್ನು ಕಂಡೆನು. ಒಂದು ಜವೆಗೋಧಿಯ ರೊಟ್ಟಿಯು ಮಿದ್ಯಾನ್ಯರ ಪಾಳೆಯ ಮೇಲೆ ಹೊರಳಿ, ಒಂದು ಡೇರೆಯ ಮೇಲೆ ಬಂದು, ಅದು ಬೀಳುವ ಹಾಗೆ ಅದನ್ನು ಹೊಡೆದು, ಅದನ್ನು ಕೆಡವಿ ಹಾಕಿತು. ಆಗ ಡೇರೆಯು ಬಿದ್ದುಹೋಯಿತು,” ಎಂದನು. 14 ಅವನ ಜೊತೆಗಾರನು ಉತ್ತರಕೊಟ್ಟು, “ಇದು ಯೋವಾಷನ ಮಗನಾದ ಗಿದ್ಯೋನನೆಂಬ ಇಸ್ರಾಯೇಲಿನ ಮನುಷ್ಯನ ಖಡ್ಗವೇ ಹೊರತು ಬೇರೆ ಅಲ್ಲ. ದೇವರು ಮಿದ್ಯಾನ್ಯರನ್ನೂ, ಈ ಸಮಸ್ತ ಪಾಳೆಯನ್ನೂ ಅವನ ಕೈಯಲ್ಲಿ ಒಪ್ಪಿಸಿಕೊಟ್ಟರು,” ಎಂದನು. 15 ಗಿದ್ಯೋನನು ಆ ಕನಸಿನ ವಿವರವನ್ನೂ, ಅದರ ಅರ್ಥವನ್ನೂ ಕೇಳಿದಾಗ, ಅವನು ಯೆಹೋವ ದೇವರನ್ನು ಆರಾಧಿಸಿ, ಇಸ್ರಾಯೇಲ್ ಪಾಳೆಗೆ ತಿರುಗಿಬಂದು, “ಏಳಿರಿ, ಯೆಹೋವ ದೇವರು ಮಿದ್ಯಾನ್ಯರ ಪಾಳೆಯನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾರೆ,” ಎಂದು ಹೇಳಿದನು. 16 ಆ ಮುನ್ನೂರು ಜನರನ್ನು ಮೂರು ಭಾಗವಾಗಿ ಹಂಚಿ, ಎಲ್ಲರ ಕೈಯಲ್ಲಿ ತುತೂರಿಗಳನ್ನೂ, ಬರಿದಾದ ಕೊಡಗಳನ್ನೂ, ಅವುಗಳಲ್ಲಿ ಇಡುವ ಪಂಜುಗಳನ್ನೂ ಕೊಟ್ಟನು. 17 ಅನಂತರ ಗಿದ್ಯೋನನು, “ನಾನು ಮಾಡುವುದನ್ನು ನೋಡಿ ಹಾಗೆಯೇ ನೀವೂ ಮಾಡಿರಿ. ನಾನು ಪಾಳೆಯ ಹೊರಗೆ ಬಂದಾಗ ಹೇಗೆ ಮಾಡುವೆನೋ, ಹಾಗೆಯೇ ನೀವೂ ಮಾಡಿರಿ. 18 ನಾನೂ, ನನ್ನ ಸಂಗಡ ಇರುವವರೆಲ್ಲರೂ ತುತೂರಿಯನ್ನು ಊದುವಾಗ, ನೀವೆಲ್ಲರೂ ಪಾಳೆಯ ಸುತ್ತಲೂ, ಎಲ್ಲಾ ಕಡೆಯಲ್ಲಿಯೂ ತುತೂರಿಗಳನ್ನು ಊದಿ, ‘ಯೆಹೋವ ದೇವರಿಗಾಗಿ, ಗಿದ್ಯೋನನಿಗಾಗಿ,’ ಎಂದು ಕೂಗಿರಿ,” ಎಂದನು. 19 ಮಧ್ಯರಾತ್ರಿ ಆರಂಭದ ಜಾವದಲ್ಲಿ ಕಾವಲುಗಾರರನ್ನು ಬದಲಾಯಿಸಿದಾಗ, ಗಿದ್ಯೋನನೂ, ಅವನ ಸಂಗಡ ಇದ್ದ ನೂರು ಮಂದಿಯೂ ಪಾಳೆಯ ಹೊರಗೆ ಬಂದು, ತುತೂರಿಗಳನ್ನು ಊದಿ, ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದರು. 20 ಈ ಮೂರು ಗುಂಪಿನ ಜನರು ತುತೂರಿಗಳನ್ನು ಊದಿ, ಆ ಕೊಡಗಳನ್ನು ಒಡೆದುಬಿಟ್ಟು, ಪಂಜುಗಳನ್ನು ತಮ್ಮ ಎಡಗೈಯಲ್ಲಿಯೂ, ಊದುವ ತುತೂರಿಗಳನ್ನು ತಮ್ಮ ಬಲಗೈಯಲ್ಲಿಯೂ ಹಿಡಿದು, “ಯೆಹೋವ ದೇವರಿಗಾಗಿ ಖಡ್ಗ, ಗಿದ್ಯೋನನಿಗಾಗಿ ಖಡ್ಗ,” ಎಂದು ಕೂಗಿ ಪಾಳೆಯ ಸುತ್ತಲೂ ಅವರವರ ಸ್ಥಳದಲ್ಲಿ ನಿಂತರು. 21 ಆಗ ಪಾಳೆಯದವರಾದರೋ ಕೂಗುತ್ತಾ ಓಡಿಹೋದರು. 22 ಮುನ್ನೂರು ಜನರು ತುತೂರಿಗಳನ್ನು ಊದುವಾಗ, ಯೆಹೋವ ದೇವರು ಪಾಳೆಯದಲ್ಲಿ ಎಲ್ಲೆಲ್ಲಿಯೂ ಒಬ್ಬನ ಖಡ್ಗವನ್ನು ಒಬ್ಬನ ಮೇಲೆ ಬರಮಾಡಿದರು. ಪಾಳೆಯ ಚೆರೇರಿನಲ್ಲಿರುವ ಬೇತ್ ಷಿಟ್ಟದವರೆಗೂ, ಟಬ್ಬಾತಿನ ಬಳಿಯಲ್ಲಿರುವ ಆಬೇಲ್ ಮೆಹೋಲಾದ ಮೇರೆಯವರೆಗೂ ಓಡಿಹೋಯಿತು. 23 ಇಸ್ರಾಯೇಲರು ನಫ್ತಾಲಿಯಿಂದಲೂ, ಆಶೇರನಿಂದಲೂ, ಸಮಸ್ತ ಮನಸ್ಸೆಯವರೆಲ್ಲರೂ ಕೂಡಿಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು. 24 ಇದಲ್ಲದೆ ಗಿದ್ಯೋನನು ಎಫ್ರಾಯೀಮ್ ಬೆಟ್ಟದಲ್ಲೆಲ್ಲಾ ದೂತರನ್ನು ಕಳುಹಿಸಿ, “ನೀವು ಮಿದ್ಯಾನ್ಯರಿಗೆ ಎದುರಾಗಿ ಇಳಿದು ಹೋಗಿ, ಬೇತ್‌ಬಾರದವರೆಗಿರುವ ನೀರನ್ನೂ, ಯೊರ್ದನನ್ನೂ ಅವರಿಗೆ ಮುಂದಾಗಿ ಹಿಡಿಯಿರಿ,” ಎಂದು ಹೇಳಿದನು.ಹಾಗೆಯೇ ಎಫ್ರಾಯೀಮನ ಜನರೆಲ್ಲರೂ ಕೂಡಿಕೊಂಡು, ಬೇತ್‌ಬಾರದವರೆಗೆ ನೀರನ್ನೂ, ಯೊರ್ದನನ್ನೂ ಹಿಡಿದರು. 25 ಮಿದ್ಯಾನ್ಯರ ಇಬ್ಬರು ಅಧಿಪತಿಗಳಾದ ಓರೇಬನನ್ನೂ, ಜೇಬನನ್ನೂ ಹಿಡಿದು, ಓರೇಬನನ್ನು ಓರೇಬೆಂಬ ಬಂಡೆಯಲ್ಲಿಯೂ, ಜೇಬನನ್ನು ಜೇಬನ ದ್ರಾಕ್ಷಿಯ ಆಲೆಯ ಬಳಿಯಲ್ಲಿಯೂ ಕೊಂದುಹಾಕಿ, ಮಿದ್ಯಾನ್ಯರನ್ನು ಹಿಂದಟ್ಟಿ, ಓರೇಬ್, ಜೇಬರ ತಲೆಗಳನ್ನು ಯೊರ್ದನಿಗೆ ಈಚೆಯಲ್ಲಿದ್ದ ಗಿದ್ಯೋನನ ಬಳಿಗೆ ತಂದರು.