Proverbs 18 (BOKCV2)
1 ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾಸಮಸ್ತ ಸುಜ್ಞಾನಕ್ಕೂ ರೇಗುವನು. 2 ವಿವೇಕದಲ್ಲಿ ಬುದ್ಧಿಹೀನನಿಗೆ ಸಂತೋಷವಿಲ್ಲ;ಆದರೆ ತನ್ನ ಹೃದಯವನ್ನು ಹೊರಪಡಿಸಿಕೊಳ್ಳುವುದೇ ಅವನಿಗೆ ಸಂತೋಷ. 3 ದುಷ್ಟತ್ವವು ಬಂದಾಗ ತಾತ್ಸಾರವೂ,ಅವಮಾನದೊಂದಿಗೆ ನಿಂದೆಯೂ ಬರುತ್ತವೆ. 4 ಮನುಷ್ಯನ ಬಾಯಿಯ ಮಾತುಗಳು ಆಳವಾದ ನೀರಿನಂತೆಯೂ,ಜ್ಞಾನದ ಬುಗ್ಗೆಯು ಹರಿಯುವ ತೊರೆಯಂತೆಯೂ ಇವೆ. 5 ನ್ಯಾಯತೀರ್ಪಿನಲ್ಲಿ ನೀತಿವಂತರನ್ನು ಕೆಡವುವಂತೆ,ದುಷ್ಟರಿಗೆ ಪಕ್ಷಪಾತ ತೋರಿಸುವುದು ಯುಕ್ತವಲ್ಲ. 6 ಜ್ಞಾನಹೀನನ ತುಟಿಗಳು ಕಲಹದಲ್ಲಿ ಸೇರುವುದರಿಂದಏಟುಗಳನ್ನು ತಿನ್ನುವುದಕ್ಕೆ ಅವನ ಬಾಯಿಯು ಕೂಗಿಕೊಳ್ಳುತ್ತದೆ. 7 ಬುದ್ಧಿಹೀನನ ಬಾಯಿಯು ಅವನ ನಾಶನ;ಅವನ ತುಟಿಗಳು ಅವನ ಪ್ರಾಣಕ್ಕೆ ಪಾಶ. 8 ಚಾಡಿಕೋರನ ಮಾತುಗಳು ರುಚಿಕರವಾದ ತುತ್ತುಗಳು;ಅವು ಹೊಟ್ಟೆಯ ಒಳಭಾಗಗಳಿಗೆ ಇಳಿದು ಹೋಗುವುವು. 9 ತನ್ನ ಕೆಲಸದಲ್ಲಿ ಸೋಮಾರಿಯಾಗಿರುವವನು,ಕೆಡುಕನಿಗೆ ಸಹೋದರನಾಗಿದ್ದಾನೆ. 10 ಯೆಹೋವ ದೇವರ ನಾಮವು ಬಲವಾದ ಬುರುಜು;ನೀತಿವಂತನು ಅದರೊಳಕ್ಕೆ ಓಡಿ ಭದ್ರವಾಗಿರುತ್ತಾನೆ. 11 ಧನವಂತರ ಸಂಪತ್ತು ಅವರಿಗೆ ಬಲವಾದ ಪಟ್ಟಣವೂಅವನ ಕಲ್ಪನೆಯಲ್ಲಿ ಅದು ಸುರಕ್ಷತೆಯ ಎತ್ತರವಾದ ಗೋಡೆಯೂ ಆಗಿದೆ. 12 ನಾಶನಕ್ಕೆ ಮುಂಚೆ ಮನುಷ್ಯನ ಹೃದಯವು ಗರ್ವಿಷ್ಠವಾಗಿರುವುದು;ಸನ್ಮಾನಕ್ಕೆ ಮುಂಚೆ ದೀನತ್ವವು ಬರುತ್ತದೆ. 13 ಕೇಳಿಸಿಕೊಳ್ಳದೆ ಉತ್ತರ ಕೊಡುವವರಿಗೆಅದು ಮೂರ್ಖತನವೂ, ಅವಮಾನವೂ ಆಗಿದೆ. 14 ಮನುಷ್ಯನ ಆತ್ಮವು ಅಸ್ವಸ್ಥತೆಯನ್ನು ಸಹಿಸುವುದು;ಆದರೆ ಮುರಿದ ಆತ್ಮವನ್ನು ಸಹಿಸುವವರು ಯಾರು? 15 ವಿವೇಕಿಯ ಹೃದಯವು ತಿಳುವಳಿಕೆಯನ್ನು ಸಂಪಾದಿಸುತ್ತದೆ;ಜ್ಞಾನಿಯ ಕಿವಿಯು ತಿಳುವಳಿಕೆಯನ್ನು ಹುಡುಕುತ್ತದೆ. 16 ಕಾಣಿಕೆಯನ್ನು ಕೊಡುವವನಿಗೆ ಬಾಗಿಲು ತೆರೆಯುತ್ತದೆ;ಅದು ದೊಡ್ಡವರ ಸನ್ನಿಧಾನಕ್ಕೂ ಅವನನ್ನು ಕರೆದುಕೊಂಡು ಹೋಗುತ್ತದೆ. 17 ಪ್ರತಿವಾದಿ ಬಂದು ಪರಿಶೀಲಿಸುವವರೆಗೆ,ಮೊದಲು ವಾದಿಸುವವನು ನ್ಯಾಯವಂತನೆಂದು ತೋರುತ್ತಾನೆ. 18 ಚೀಟು ಹಾಕುವುದರಿಂದ ವ್ಯಾಜ್ಯಶಮನ;ಬಲಿಷ್ಠ ಪ್ರತಿವಾದಿಗಳ ವಿವಾದಗಳನ್ನು ಸಹ ಬಗೆಹರಿಸುತ್ತದೆ. 19 ಬಲವಾದ ಪಟ್ಟಣವನ್ನು ಗೆಲ್ಲುವುದಕ್ಕಿಂತ ಬೇಸರಗೊಂಡ ಸಹೋದರನನ್ನು ಗೆಲ್ಲುವುದು ಕಷ್ಟಕರ;ಅವರ ಕಲಹಗಳು ಕೋಟೆಯ ಬಾಗಿಲಿಗೆ ಅಗುಳಿಗಳಂತೆ ಇವೆ. 20 ತನ್ನ ಬಾಯಿಯ ಫಲದಿಂದ ಮನುಷ್ಯನ ಹೊಟ್ಟೆಯು ತೃಪ್ತಿ ಹೊಂದುವುದು;ತನ್ನ ತುಟಿಗಳ ಆದಾಯದಿಂದ ಅವನು ತೃಪ್ತಿಹೊಂದುವನು. 21 ನಾಲಿಗೆಗೆ ಮರಣ ಮತ್ತು ಜೀವದ ಶಕ್ತಿಯಿದೆ;ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು. 22 ಪತ್ನಿಯನ್ನು ದೊರಕಿಸಿಕೊಂಡವನು ಒಳ್ಳೆಯದನ್ನು ಸಂಪಾದಿಸಿದವನಾಗಿ,ಯೆಹೋವ ದೇವರ ದಯೆಯನ್ನು ಹೊಂದುತ್ತಾನೆ. 23 ಬಡವನು ಕರುಣೆಗಾಗಿ ವಿಜ್ಞಾಪನೆ ಮಾಡುತ್ತಾನೆ;ಆದರೆ ಧನಿಕನು ಕಠಿಣವಾಗಿ ಉತ್ತರ ಕೊಡುತ್ತಾರೆ. 24 ವಿಶ್ವಾಸಕ್ಕೆ ಅರ್ಹರಲ್ಲದ ಸ್ನೇಹಿತರನ್ನು ಹೊಂದಿರುವವನು ಶೀಘ್ರವೇ ನಾಶವಾಗುತ್ತಾನೆ;ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.