2 Kings 14 (BOKCV2)
1 ಇಸ್ರಾಯೇಲಿನ ಅರಸನಾಗಿರುವ ಯೆಹೋವಾಹಾಜನ ಮಗನಾದ ಯೋವಾಷನ ಆಳ್ವಿಕೆಯ ಎರಡನೆಯ ವರ್ಷದಲ್ಲಿ, ಯೆಹೂದದ ಅರಸನಾದ ಯೋವಾಷನ ಮಗ ಅಮಚ್ಯನು ಅರಸನಾದನು. 2 ಅವನು ಆಳಲು ಆರಂಭಿಸಿದಾಗ, ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಇಪ್ಪತ್ತೊಂಬತ್ತು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಹೋವದ್ದಾನ್, ಅವಳು ಯೆರೂಸಲೇಮಿನವಳು. 3 ಅವನು ಯೆಹೋವ ದೇವರ ದೃಷ್ಟಿಯಲ್ಲಿ ಸರಿಯಾದದ್ದನ್ನೇ ಮಾಡಿದನು, ಆದರೆ ತನ್ನ ಪಿತೃವಾದ ದಾವೀದನ ಹಾಗಲ್ಲ. ತನ್ನ ತಂದೆ ಯೋವಾಷನು ಮಾಡಿದ ಹಾಗೆ ಸಮಸ್ತವನ್ನು ಮಾಡಿದನು. 4 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. 5 ಇವನು ರಾಜ್ಯವನ್ನು ಸ್ಥಿರಪಡಿಸಿಕೊಂಡ ತರುವಾಯ, ಅರಸನಾಗಿದ್ದ ತನ್ನ ತಂದೆಯನ್ನು ಕೊಂದ ಸೇವಕರಿಗೆ ಮರಣದಂಡನೆಯನ್ನು ವಿಧಿಸಿದನು. 6 ಆದರೆ, “ಮಕ್ಕಳು ಮಾಡಿದ ಪಾಪಕ್ಕೆ ತಂದೆಗಾಗಲಿ, ತಂದೆಯ ಪಾಪಕ್ಕಾಗಿ ಮಕ್ಕಳಿಗಾಗಲಿ ಮರಣಶಿಕ್ಷೆಯಾಗಬಾರದು. ಪ್ರತಿಯೊಬ್ಬನೂ ತನ್ನ ಪಾಪದ ನಿಮಿತ್ತವೇ ಮರಣಶಿಕ್ಷೆಯನ್ನು ಹೊಂದಬೇಕು,” ಎಂದು ಯೆಹೋವ ದೇವರು ಆಜ್ಞಾಪಿಸಿದ ಮೋಶೆಯ ನಿಯಮ ಗ್ರಂಥದಲ್ಲಿ ಬರೆದಿರುವ ಪ್ರಕಾರ, ಅವನು ಕೊಲೆಗಾರರ ಮಕ್ಕಳನ್ನು ಕೊಂದುಹಾಕಲಿಲ್ಲ. 7 ಅವನು ಉಪ್ಪಿನ ತಗ್ಗಿನಲ್ಲಿ ಎದೋಮ್ಯರಾದ ಹತ್ತು ಸಾವಿರ ಜನರನ್ನು ಸೋಲಿಸಿ, ಯುದ್ಧದಲ್ಲಿ ಸೆಲ ದುರ್ಗವನ್ನು ವಶಪಡಿಸಿಕೊಂಡು, ಅದಕ್ಕೆ ಯೊಕ್ತೆಯೇಲ್ ಎಂದು ಹೆಸರಿಟ್ಟನು. ಅದಕ್ಕೆ ಇಂದಿನವರೆಗೂ ಇದೇ ಹೆಸರಿರುತ್ತದೆ. 8 ಆಗ ಅಮಚ್ಯನು, ಯೇಹುವಿನ ಮೊಮ್ಮಗನೂ ಯೆಹೋವಾಹಾಜನ ಮಗನೂ ಇಸ್ರಾಯೇಲರ ಅರಸನಾದ ಯೋವಾಷನಿಗೆ, “ನಾವು ಒಬ್ಬರನ್ನೊಬ್ಬರು ಎದುರಿಸೋಣ ಬಾ,” ಎಂದು ದೂತರ ಮುಖಾಂತರ ಹೇಳಿ ಕಳುಹಿಸಿದನು. 9 ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಯೆಹೂದದ ಅರಸನಾಗಿರುವ ಅಮಚ್ಯನಿಗೆ, “ಲೆಬನೋನಿನಲ್ಲಿದ್ದ ಮುಳ್ಳುಗಿಡವು ಲೆಬನೋನಿನಲ್ಲಿರುವ ದೇವದಾರು ಮರಕ್ಕೆ, ‘ನನ್ನ ಮಗನಿಗೆ ಹೆಂಡತಿಯಾಗಿರಲು ನೀನು ನಿನ್ನ ಮಗಳನ್ನು ಕೊಡು,’ ಎಂದು ಹೇಳಿ ಕಳುಹಿಸಿತು. ಆದರೆ ಲೆಬನೋನಿನಲ್ಲಿದ್ದ ಅಡವಿಯ ಮೃಗವು ಹಾದು ಹೋಗುತ್ತಿರುವಾಗ, ಆ ಮುಳ್ಳುಗಿಡವನ್ನು ತುಳಿಯಿತು. 10 ನೀನು ಎದೋಮ್ಯರನ್ನು ಸೋಲಿಸಿದ್ದರಿಂದ ಗರ್ವಪಡುತ್ತಿರುವೆ, ನಿನ್ನ ಜಯದಲ್ಲಿ ಘನಪಡುತ್ತಾ, ಮನೆಯಲ್ಲಿ ಸುಮ್ಮನೆ ಕೂತಿರು. ನೀನೂ, ನಿನ್ನ ಸಂಗಡ ಯೆಹೂದವೂ ಬಿದ್ದುಹೋಗುವಂತೆ ನಿನ್ನ ಕೇಡಿಗೆ ನೀನೇ ಕೈ ಹಾಕುವುದೇಕೆ?” ಎಂದು ಹೇಳಿ ಕಳುಹಿಸಿದನು. 11 ಆದರೆ ಅಮಚ್ಯನು ಕೇಳದೆ ಹೋದನು. ಆದ್ದರಿಂದ ಇಸ್ರಾಯೇಲಿನ ಅರಸನಾದ ಯೋವಾಷನು ಯುದ್ಧಕ್ಕೆ ಹೊರಟನು. ಅವನೂ ಯೆಹೂದದ ಅರಸನಾದ ಅಮಚ್ಯನೂ ಯೆಹೂದಕ್ಕೆ ಸೇರಿದ ಬೇತ್ ಷೆಮೆಷ್ ಊರಿನ ಬಳಿಯಲ್ಲಿ ಒಬ್ಬರನ್ನೊಬ್ಬರು ಎದುರಿಸಿದರು. 12 ಯೆಹೂದದವರು ಇಸ್ರಾಯೇಲರ ಮುಂದೆ ಸೋತುಹೋದದ್ದರಿಂದ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಓಡಿಹೋದರು. 13 ಆಗ ಇಸ್ರಾಯೇಲಿನ ಅರಸನಾದ ಯೋವಾಷನು ಅಹಜ್ಯನ ಮೊಮ್ಮಗನೂ ಯೆಹೋವಾಷನ ಮಗನೂ ಯೆಹೂದದ ಅರಸನೂ ಆದ ಅಮಚ್ಯನನ್ನು ಬೇತ್ ಷೆಮೆಷ್ ಬಳಿಯಲ್ಲಿ ವಶಪಡಿಸಿಕೊಂಡನು. ಅನಂತರ ಅವನನ್ನು ಯೆರೂಸಲೇಮಿಗೆ ತೆಗೆದುಕೊಂಡು, ಎಫ್ರಾಯೀಮಿನ ಬಾಗಿಲು ಮೊದಲುಗೊಂಡು ಮೂಲೆಯ ಬಾಗಿಲವರೆಗೂ, ಆರುನೂರು ಅಡಿ ಉದ್ದದ ಯೆರೂಸಲೇಮಿನ ಗೋಡೆಯನ್ನು ಕೆಡವಿಬಿಟ್ಟನು. 14 ಯೆಹೋವ ದೇವರ ಆಲಯದಲ್ಲಿ, ಅರಮನೆಯ ಬೊಕ್ಕಸಗಳಲ್ಲಿ ಸಿಕ್ಕಿದ ಸಕಲ ಬೆಳ್ಳಿಬಂಗಾರವನ್ನೂ ಎಲ್ಲಾ ಸಲಕರಣೆಗಳನ್ನೂ ಯುದ್ಧದಲ್ಲಿ ಬಂಧಿತರಾದವರನ್ನೂ ತೆಗೆದುಕೊಂಡು ಸಮಾರ್ಯಕ್ಕೆ ಹಿಂದಿರುಗಿದನು. 15 ಯೋವಾಷನು ಮಾಡಿದ ಇತರ ಕ್ರಿಯೆಗಳೂ, ಅವನ ಪರಾಕ್ರಮವೂ, ಅವನು ಯೆಹೂದದ ಅರಸನಾದ ಅಮಚ್ಯನ ವಿರುದ್ಧ ಯುದ್ಧ ಮಾಡಿದ್ದೂ, ಇಸ್ರಾಯೇಲಿನ ಅರಸುಗಳ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 16 ಯೋವಾಷನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನನ್ನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸುಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನ ಮಗ ಯಾರೊಬ್ಬಾಮನು ಅವನ ಬದಲಿಗೆ ಅರಸನಾದನು. 17 ಇಸ್ರಾಯೇಲಿನ ಅರಸನಾದ ಯೆಹೋವಾಹಾಜನ ಮಗನಾದ ಯೆಹೋವಾಷನ ಮರಣದ ತರುವಾಯ, ಯೆಹೂದದ ಅರಸನಾದ ಯೋವಾಷನ ಮಗನಾಗಿರುವ ಅಮಚ್ಯನು ಹದಿನೈದು ವರ್ಷ ಬದುಕಿದನು. 18 ಅಮಚ್ಯನ ಆಳ್ವಿಕೆಯ ಇತರ ಕ್ರಿಯೆಗಳನ್ನು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 19 ಯೆರೂಸಲೇಮಿನವರು ಅಮಚ್ಯನ ವಿರೋಧವಾಗಿ ಒಳಸಂಚು ಮಾಡಿದ್ದರಿಂದ, ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ, ಅಲ್ಲಿ ಅವನನ್ನು ಕೊಂದುಹಾಕಿದರು. 20 ಅವರು ಅವನ ಶವವನ್ನು ಕುದುರೆಗಳ ಮೇಲೆ ತೆಗೆದುಕೊಂಡು ಬಂದು, ದಾವೀದನ ಪಟ್ಟಣವಾದ ಯೆರೂಸಲೇಮಿನಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. 21 ಆಗ ಯೆಹೂದದ ಎಲ್ಲಾ ಜನರು ಹದಿನಾರು ವರ್ಷದವನಾದ ಅಜರ್ಯನನ್ನು ತೆಗೆದುಕೊಂಡು, ಅವನನ್ನು ಅವನ ತಂದೆಯಾದ ಅಮಚ್ಯನಿಗೆ ಬದಲಾಗಿ ಅರಸನಾಗಿ ಮಾಡಿದರು. 22 ಅಮಚ್ಯನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದ ತರುವಾಯ, ಅಜರ್ಯನು ಏಲತನ್ನು ಪುನಃ ಕಟ್ಟಿಸಿ, ಅದನ್ನು ಯೆಹೂದಕ್ಕೆ ತಿರುಗಿ ಸೇರಿಸಿಕೊಂಡನು. 23 ಯೆಹೂದದ ಅರಸನಾದ ಯೋವಾಷನ ಮಗನಾದ ಅಮಚ್ಯನ ಆಳ್ವಿಕೆಯ ಹದಿನೈದನೆಯ ವರ್ಷದಲ್ಲಿ ಇಸ್ರಾಯೇಲಿನ ಅರಸನಾದ ಯೋವಾಷನ ಮಗನಾದ ಯಾರೊಬ್ಬಾಮನು ಸಮಾರ್ಯದಲ್ಲಿ ಆಳಲು ಆರಂಭಿಸಿ, ನಾಲ್ವತ್ತೊಂದು ವರ್ಷ ಆಳಿದನು. 24 ಆದರೆ ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನೆಲ್ಲಾ ಅವನು ತೊರೆದುಬಿಡಲಿಲ್ಲ. 25 ಇದಲ್ಲದೆ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಗತ್‌ಹೇಫೆರಿನ ಪ್ರವಾದಿಯಾದ ಅಮಿತ್ತೈಯನ ಮಗ ಯೋನನೆಂಬ ತನ್ನ ಸೇವಕನ ಮುಖಾಂತರ ಹೇಳಿದ ವಾಕ್ಯದಂತೆ ಅವನು ಹಮಾತಿನ ಪ್ರವೇಶ ಮೊದಲುಗೊಂಡು ಅರಾಬಾ ತಗ್ಗಿನ ಸಮುದ್ರದವರೆಗೂ ಇರುವ ಇಸ್ರಾಯೇಲಿನ ಮೇರೆಯನ್ನು ತಿರುಗಿ ತೆಗೆದುಕೊಂಡನು. 26 ಇಸ್ರಾಯೇಲಿನಲ್ಲಿ ಪ್ರತಿಯೊಬ್ಬರೂ ಸ್ವತಂತ್ರನಾಗಿರಲಿ, ಗುಲಾಮನಾಗಿರಲಿ, ಎಲ್ಲರು ಎಷ್ಟು ಕಷ್ಟದಲ್ಲಿದ್ದಾರೆಂಬುದನ್ನು ಯೆಹೋವ ದೇವರು ನೋಡಿದರು. ಅವರಿಗೆ ಸಹಾಯ ಮಾಡುವವರು ಯಾರೂ ಇರಲಿಲ್ಲ. 27 ಇಸ್ರಾಯೇಲಿನ ನಾಮವನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನೆಂದು ಯೆಹೋವ ದೇವರು ಹೇಳದೇ ಇದ್ದುದರಿಂದ, ಯೋವಾಷನ ಮಗ ಯಾರೊಬ್ಬಾಮನ ಕೈಯಿಂದ ಅವರನ್ನು ರಕ್ಷಿಸಿದರು. 28 ಯಾರೊಬ್ಬಾಮನ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಅವನ ಪರಾಕ್ರಮವೂ, ಅವನ ಯುದ್ಧಗಳೂ, ಯೆಹೂದಕ್ಕೆ ಸೇರಿದ ದಮಸ್ಕವನ್ನೂ, ಹಮಾತನ್ನೂ ಇಸ್ರಾಯೇಲಿಗೋಸ್ಕರ ಹಿಂದಿರುಗಿ ತೆಗೆದುಕೊಂಡದ್ದೂ, ಇಸ್ರಾಯೇಲಿನ ಅರಸುಗಳ ದಿನಚರ್ಯೆಗಳ ಪುಸ್ತಕದಲ್ಲಿ ಬರೆದಿರುತ್ತವೆ. 29 ಯಾರೊಬ್ಬಾಮನು ಮೃತನಾಗಿ ಇಸ್ರಾಯೇಲಿನ ಅರಸುಗಳಾದ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಜೆಕರ್ಯನು ಅವನಿಗೆ ಬದಲಾಗಿ ಅರಸನಾದನು.