Exodus 12 (BOKCV2)
1 ಯೆಹೋವ ದೇವರು ಈಜಿಪ್ಟಿನಲ್ಲಿ ಮೋಶೆ ಆರೋನರ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 2 “ಎಲ್ಲಾ ಮಾಸಗಳಲ್ಲಿ ಇದೇ ನಿಮಗೆ ಆದಿಮಾಸವಾಗಿರಬೇಕು. ಇದು ನಿಮಗೆ ವರುಷದ ಮೊದಲನೆಯ ತಿಂಗಳಾಗಿರಬೇಕು. 3 ಇಸ್ರಾಯೇಲ್ ಸಭೆಗೆಲ್ಲಾ ನೀವು ಹೇಳಬೇಕಾದದ್ದೇನೆಂದರೆ, ಈ ತಿಂಗಳಿನ ಹತ್ತನೆಯ ದಿನದಲ್ಲಿ ಅವರು ತಮಗೆ ಪ್ರತಿ ಗೋತ್ರಗಳ ಪ್ರತಿಯೊಂದು ಕುಟುಂಬಕ್ಕೆ ಒಂದರಂತೆ ಕುರಿಮರಿಯನ್ನು ತೆಗೆದುಕೊಳ್ಳಬೇಕು. 4 ಆ ಕುರಿಮರಿಯನ್ನು ಪೂರ್ತಿಯಾಗಿ ತಿನ್ನುವುದಕ್ಕೆ ಕುಟುಂಬವು ಚಿಕ್ಕದಾಗಿದ್ದರೆ, ತನ್ನ ಮನೆಗೆ ಸಮೀಪವಾಗಿರುವ ತನ್ನ ನೆರೆಯವನ ಕುಟುಂಬದಲ್ಲಿ ಲೆಕ್ಕನೋಡಿ ಅವರೊಂದಿಗೆ ಪಾಲು ಹೊಂದಲಿ. ಒಬ್ಬೊಬ್ಬನು ತಿನ್ನುವ ಅಳತೆಯ ಪ್ರಕಾರ ಕುರಿಮರಿಯನ್ನು ತೆಗೆದುಕೊಳ್ಳಲಿ. 5 ನೀವು ಆಯ್ದುಕೊಳ್ಳುವ ಕುರಿಮರಿಯು ದೋಷರಹಿತವಾಗಿರುವ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ, ಆಡುಗಳಿಂದಾಗಲಿ ತೆಗೆದುಕೊಳ್ಳಬಹುದು. 6 ಈ ತಿಂಗಳಿನ ಹದಿನಾಲ್ಕನೆಯ ದಿನದವರೆಗೆ ಅವುಗಳನ್ನು ಇಟ್ಟುಕೊಳ್ಳಬೇಕು. ತರುವಾಯ ಸಂಜೆಯಲ್ಲಿ ಇಸ್ರಾಯೇಲಿನ ಜನಾಂಗದವರೆಲ್ಲರೂ ಅವುಗಳನ್ನು ವಧಿಸಬೇಕು. 7 ಅವರು ರಕ್ತದಲ್ಲಿ ಸ್ವಲ್ಪ ತೆಗೆದು, ಕುರಿಮರಿಯ ಮಾಂಸವನ್ನು ಭೋಜನಮಾಡುವ ಮನೆಗಳ ಬಾಗಿಲಿನ ನಿಲುವು ಪಟ್ಟಿಗಳಿಗೂ, ಮೇಲಿನ ಪಟ್ಟಿಗೂ ಹಚ್ಚಬೇಕು. 8 ಆ ರಾತ್ರಿಯಲ್ಲಿಯೇ ಮಾಂಸವನ್ನು ಸುಟ್ಟು, ಅದನ್ನೂ, ಹುಳಿಯಿಲ್ಲದ ರೊಟ್ಟಿಗಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು. 9 ಅದರಲ್ಲಿ ಯಾವುದನ್ನೂ ಹಸಿಯಾದದ್ದನ್ನಾಗಲಿ, ನೀರಿನಲ್ಲಿ ಬೇಯಿಸಿಯಾಗಲಿ ತಿನ್ನದೆ, ಅದರ ತಲೆ, ತೊಡೆ, ಒಳಗಿನವುಗಳ ಸಹಿತವಾಗಿ ಬೆಂಕಿಯಲ್ಲಿ ಸುಟ್ಟೇ ಅದನ್ನು ತಿನ್ನಬೇಕು. 10 ಅದರಲ್ಲಿ ಬೆಳಗಿನವರೆಗೆ ಏನನ್ನೂ ಉಳಿಸಬಾರದು. ಬೆಳಗಿನವರೆಗೆ ಅದರಲ್ಲಿ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. 11 ನೀವು ಅದನ್ನು ತಿನ್ನತಕ್ಕ ರೀತಿ ಇದೇ: ನೀವು ನಿಮ್ಮ ನಡುಕಟ್ಟಿಕೊಂಡು, ಕೆರಮೆಟ್ಟಿಕೊಂಡು ಊರುಗೋಲನ್ನು ಹಿಡಿದುಕೊಂಡು ತ್ವರೆಯಾಗಿ ಅದನ್ನು ತಿನ್ನಬೇಕು, ಅದು ಯೆಹೋವ ದೇವರ ಪಸ್ಕವಾಗಿದೆ. 12 “ಏಕೆಂದರೆ ನಾನು ಈ ರಾತ್ರಿ ಈಜಿಪ್ಟ್ ದೇಶದಲ್ಲಿರುವ ಎಲ್ಲಾ ಮನುಷ್ಯರಲ್ಲಿಯೂ, ಪಶುಗಳಲ್ಲಿಯೂ ಇರುವ ಚೊಚ್ಚಲಾದವುಗಳನ್ನು ಸಂಹರಿಸುವೆನು. ಈಜಿಪ್ಟಿನ ದೇವರುಗಳಿಗೆಲ್ಲಾ ನಾನು ನ್ಯಾಯತೀರಿಸುವೆನು. ನಾನೇ ಯೆಹೋವ ದೇವರು. 13 ಆದರೆ ನೀವು ಇರುವ ಎಲ್ಲಾ ಮನೆಗಳ ಮೇಲೆ ರಕ್ತವು ನಿಮಗೆ ಗುರುತಾಗಿರುವುದು. ಆ ರಕ್ತವನ್ನು ನಾನು ನೋಡುವಾಗ, ನಿಮ್ಮನ್ನು ದಾಟಿಹೋಗುವೆನು. ಈಜಿಪ್ಟ್ ದೇಶವನ್ನು ನಾನು ಸಂಹರಿಸುವ ಸಮಯದಲ್ಲಿ, ನಿಮ್ಮನ್ನು ನಾಶಮಾಡುವ ಯಾವ ಉಪದ್ರವವು ನಿಮ್ಮ ಮೇಲೆ ಬರುವುದಿಲ್ಲ. 14 “ಈ ದಿನವು ನಿಮಗೆ ಜ್ಞಾಪಕಾರ್ಥವಾಗಿರುವುದು. ನೀವು ಅದನ್ನು ಯೆಹೋವ ದೇವರಿಗೆ ಹಬ್ಬವಾಗಿ ತಲತಲಾಂತರಗಳಲ್ಲಿ ಆಚರಿಸಬೇಕು. ಅದನ್ನು ಶಾಶ್ವತ ನಿಯಮವೆಂದು ಎಂದೆಂದಿಗೂ ಆಚರಿಸಬೇಕು. 15 ಏಳು ದಿನಗಳವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು. ಏಕೆಂದರೆ ಮೊದಲನೆಯ ದಿನದಿಂದ ಏಳನೆಯ ದಿನದವರೆಗೆ ಹುಳಿರೊಟ್ಟಿ ತಿನ್ನುವವರನ್ನು ಇಸ್ರಾಯೇಲಿನೊಳಗಿಂದ ಬಹಿಷ್ಕರಿಸಬೇಕು. 16 ಇದಲ್ಲದೆ ಮೊದಲನೆಯ ದಿನದಲ್ಲಿ ಪರಿಶುದ್ಧ ದೇವಾರಾಧನೆಗಾಗಿ ಸಭೆ ಸೇರಬೇಕು, ಏಳನೆಯ ದಿನದಲ್ಲಿ ದೇವಾರಾಧನೆಗಾಗಿ ಸಭೆ ಸೇರಬೇಕು. ಊಟಕ್ಕೆ ಬೇಕಾದದ್ದನ್ನು ಮಾಡುವುದನ್ನು ಬಿಟ್ಟು, ಆ ದಿನಗಳಲ್ಲಿ ಯಾವ ತರವಾದ ಕೆಲಸವನ್ನೂ ಮಾಡಬಾರದು. 17 “ನೀವು ಹುಳಿಯಿಲ್ಲದ ರೊಟ್ಟಿಯ ಹಬ್ಬವನ್ನು ಆಚರಿಸಬೇಕು. ಏಕೆಂದರೆ ಆ ದಿನದಲ್ಲಿಯೇ ನಾನು ನಿಮ್ಮ ಸೈನ್ಯಗಳನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ್ದೇನೆ. ಆದಕಾರಣ ನಿಮ್ಮ ಸಂತತಿಗಳಲ್ಲಿ ಅದನ್ನು ಶಾಶ್ವತ ನಿಯಮವೆಂದು ಎಂದೆಂದಿಗೂ ಆಚರಿಸಬೇಕು. 18 ಮೊದಲನೆಯ ತಿಂಗಳಿನ ಹದಿನಾಲ್ಕನೆಯ ದಿನದ ಸಂಜೆಯಿಂದ ಅದೇ ತಿಂಗಳಿನ ಇಪ್ಪತ್ತೊಂದನೆಯ ದಿನ ಸಂಜೆಯವರೆಗೆ ನೀವು ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. 19 ಏಳು ದಿನಗಳವರೆಗೆ ಹುಳಿ ಹಿಟ್ಟು ನಿಮ್ಮ ಮನೆಗಳಲ್ಲಿ ಸಿಕ್ಕಬಾರದು, ಏಕೆಂದರೆ ಹುಳಿ ಬೆರೆಸಿದ್ದನ್ನು ಯಾರು ತಿನ್ನುವರೋ ಅವರು ಪರದೇಶದವರಾಗಲಿ, ಸ್ವದೇಶದವರಾಗಲಿ ಅವರನ್ನು ಇಸ್ರಾಯೇಲ್ ಸಭೆಯೊಳಗಿಂದ ಬಹಿಷ್ಕರಿಸಬೇಕು. 20 ಹುಳಿ ಕಲಸಿದ್ದು ಯಾವುದೇ ಆಗಿರಲಿ ನೀವು ತಿನ್ನಬಾರದು. ನಿಮ್ಮ ಎಲ್ಲಾ ನಿವಾಸಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳನ್ನೇ ತಿನ್ನಬೇಕು,” ಎಂದು ಹೇಳಿದರು. 21 ಆಗ ಮೋಶೆಯು ಇಸ್ರಾಯೇಲಿನ ಎಲ್ಲಾ ಹಿರಿಯರನ್ನು ಕರೆದು ಅವರಿಗೆ, “ನಿಮ್ಮ ಕುಟುಂಬಗಳ ಪ್ರಕಾರ ಕುರಿಗಳನ್ನು ಆಯ್ದುಕೊಂಡು ಪಸ್ಕಹಬ್ಬಕ್ಕಾಗಿ ಕೊಯ್ಯಿರಿ. 22 ಹಿಸ್ಸೋಪ ಗಿಡದ ಕಟ್ಟನ್ನು ತೆಗೆದುಕೊಂಡು, ಬೋಗುಣಿಯಲ್ಲಿರುವ ರಕ್ತದಲ್ಲಿ ಅದನ್ನು ಅದ್ದಿ, ಬಾಗಿಲಿನ ಮೇಲೆ ಅಡ್ಡ ಪಟ್ಟಿಗೂ, ಅದರ ಪಕ್ಕದಲ್ಲಿರುವ ಎರಡು ನಿಲುವು ಕಂಬಗಳಿಗೂ ಹಚ್ಚಿರಿ. ನಿಮ್ಮಲ್ಲಿ ಯಾರೂ ಬೆಳಗಾಗುವವರೆಗೆ ಮನೆಯ ಬಾಗಿಲನ್ನು ಬಿಟ್ಟುಹೋಗಬಾರದು. 23 ಏಕೆಂದರೆ ಯೆಹೋವ ದೇವರು ಈಜಿಪ್ಟಿನವರನ್ನು ಸಂಹರಿಸುವುದಕ್ಕಾಗಿ ಹಾದುಹೋಗುವರು. ಅವರು ಅಡ್ಡ ಪಟ್ಟಿಯ ಮೇಲೂ, ಅದರ ಪಕ್ಕದ ಎರಡು ನಿಲುವು ಕಂಬಗಳ ಮೇಲೂ ರಕ್ತವನ್ನು ನೋಡಿದಾಗ, ಸಂಹಾರಕನು ನಿಮ್ಮ ಮನೆಗಳೊಳಗೆ ಬಂದು ನಿಮ್ಮನ್ನು ಸಂಹಾರಮಾಡದಂತೆ, ಯೆಹೋವ ದೇವರು ನಿಮ್ಮ ಬಾಗಿಲುಗಳನ್ನು ದಾಟಿಹೋಗುವರು. 24 “ಇದನ್ನು ಒಂದು ಶಾಸನವಾಗಿ ನೀವೂ, ನಿಮ್ಮ ಪುತ್ರರೂ ಸದಾಕಾಲಕ್ಕೂ ಆಚರಿಸತಕ್ಕದ್ದು. 25 ಯೆಹೋವ ದೇವರು ಕೊಡುವೆನೆಂದು ಪ್ರಮಾಣ ಮಾಡಿದ ದೇಶಕ್ಕೆ ನೀವು ಬಂದಾಗ, ಈ ಆಚರಣೆಯನ್ನು ನೀವು ಕೈಗೊಳ್ಳಬೇಕು. 26 ನಿಮ್ಮ ಮಕ್ಕಳು, ‘ಈ ಆಚರಣೆಯ ಅರ್ಥವೇನು?’ ಎಂದು ಕೇಳಿದಾಗ, 27 ನೀವು ಅವರಿಗೆ, ‘ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಈಜಿಪ್ಟಿನವರನ್ನು ಸಂಹರಿಸಿ, ನಮ್ಮ ಮನೆಗಳನ್ನು ಕಾಪಾಡುವುದಕ್ಕಾಗಿ ಇಸ್ರಾಯೇಲರ ಮನೆಗಳನ್ನು ದಾಟಿಹೋದ ಯೆಹೋವ ದೇವರ ಪಸ್ಕ ಬಲಿಯ ಆಚರಣೆಯನ್ನು ನಡೆಸುತ್ತಿದ್ದೇವೆ,’ ಎಂದು ನೀವು ಹೇಳಬೇಕು,” ಎಂದನು. ಆಗ ಜನರು ತಲೆಬಾಗಿಸಿ ಆರಾಧಿಸಿದರು. 28 ಯೆಹೋವ ದೇವರು ಮೋಶೆ ಆರೋನರಿಗೆ ಆಜ್ಞಾಪಿಸಿದ ಮೇರೆಗೆ ಇಸ್ರಾಯೇಲರು ಮಾಡಿದರು. 29 ಮಧ್ಯರಾತ್ರಿಯಲ್ಲಿ ಸಿಂಹಾಸನದ ಮೇಲೆ ಕೂತುಕೊಂಡ ಫರೋಹನ ಚೊಚ್ಚಲು ಮಗನು ಮೊದಲುಗೊಂಡು, ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಎಂದರೆ ಈಜಿಪ್ಟ್ ದೇಶದಲ್ಲಿದ್ದ ಎಲ್ಲಾ ಚೊಚ್ಚಲು ಮಕ್ಕಳನ್ನೂ, ಪಶುಗಳಲ್ಲಿ ಚೊಚ್ಚಲಾದವುಗಳೆಲ್ಲವನ್ನೂ ಯೆಹೋವ ದೇವರು ಸಂಹರಿಸಿದರು. 30 ಆಗ ಫರೋಹನೂ, ಅವನ ಎಲ್ಲಾ ಅಧಿಕಾರಿಗಳೂ, ಎಲ್ಲಾ ಈಜಿಪ್ಟಿನವರೂ ರಾತ್ರಿಯಲ್ಲಿ ಎದ್ದರು. ಆ ಈಜಿಪ್ಟಿನಲ್ಲಿ ದೊಡ್ಡ ಗೋಳಾಟವಾಯಿತು. ಏಕೆಂದರೆ ಅಲ್ಲಿ ಸತ್ತವರು ಇಲ್ಲದ ಒಂದು ಮನೆಯಾದರೂ ಇರಲಿಲ್ಲ. 31 ಫರೋಹನು ರಾತ್ರಿಯಲ್ಲಿ ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, “ನೀವು ಮತ್ತು ಇಸ್ರಾಯೇಲರೆಲ್ಲರೂ ಎದ್ದು ನನ್ನ ಜನರೊಳಗಿಂದ ಹೊರಟು ಹೋಗಿರಿ. ನೀವು ಹೇಳಿದ ಹಾಗೆಯೇ, ಯೆಹೋವ ದೇವರನ್ನು ಆರಾಧಿಸುವುದಕ್ಕೆ ಹೊರಟುಹೋಗಿರಿ. 32 ನೀವು ಹೇಳಿದಂತೆ ನಿಮ್ಮ ಕುರಿದನಗಳನ್ನು ತೆಗೆದುಕೊಳ್ಳಿರಿ. ನನ್ನನ್ನು ಸಹ ಆಶೀರ್ವದಿಸಿರಿ,” ಎಂದನು. 33 ಇದಲ್ಲದೆ ಈಜಿಪ್ಟಿನವರು, “ನಾವೆಲ್ಲರೂ ಸಾಯುತ್ತೇವೆ,” ಎಂದು ಹೇಳಿ, ಅವರನ್ನು ತ್ವರೆಯಾಗಿ ದೇಶದೊಳಗಿಂದ ಕಳುಹಿಸಿಬಿಡುವ ಹಾಗೆ ಜನರನ್ನು ಒತ್ತಾಯಮಾಡಿದರು. 34 ಆದ್ದರಿಂದ ಜನರು ಹಿಟ್ಟಿಗೆ ಹುಳಿ ಹಾಕುವುದಕ್ಕಿಂತ ಮುಂಚೆ, ಅಡಿಗೆ ಮಾಡುವ ಪಾತ್ರೆಗಳ ಸಂಗಡ ಬಟ್ಟೆಗಳಲ್ಲಿ ಕಟ್ಟಿ, ಹೆಗಲಿನ ಮೇಲೆ ಹೊತ್ತುಕೊಂಡು ಹೋದರು. 35 ಇಸ್ರಾಯೇಲರು ಮೋಶೆಯು ಹೇಳಿದಂತೆ ಮಾಡಿ, ಬೆಳ್ಳಿಬಂಗಾರದ ಒಡವೆಗಳನ್ನೂ, ಬಟ್ಟೆಗಳನ್ನೂ ಈಜಿಪ್ಟಿನವರಿಂದ ಕೇಳಿ ಪಡೆದರು. 36 ಯೆಹೋವ ದೇವರು ಈಜಿಪ್ಟಿನವರ ಎದುರಿನಲ್ಲಿ ಜನರ ಮೇಲೆ ದಯೆ ತೋರಿಸಿದ್ದರಿಂದ, ಅವರು ಕೇಳಿದ್ದನ್ನು ಕೊಟ್ಟರು. ಹೀಗೆ ಅವರು ಈಜಿಪ್ಟಿನವರ ಸೊತ್ತನ್ನು ಸುಲಿದುಕೊಂಡರು. 37 ಆಗ ಇಸ್ರಾಯೇಲರಲ್ಲಿ ಮಕ್ಕಳಲ್ಲದೆ ಗಂಡಸರು ಮಾತ್ರ ಆರು ಲಕ್ಷ ಜನರು ಕಾಲುನಡಿಗೆಯಾಗಿ ರಮ್ಸೇಸನ್ನು ಬಿಟ್ಟು ಸುಕ್ಕೋತಿಗೆ ಪ್ರಯಾಣಮಾಡಿದರು. 38 ಬೇರೆ ಜನಸಮೂಹವೂ ಕುರಿದನ ಮೊದಲಾದ ಪಶುಗಳ ಬಹುದೊಡ್ಡ ಹಿಂಡೂ ಇಸ್ರಾಯೇಲರ ಸಂಗಡ ಹೋದವು. 39 ಆಗ ಅವರು ಈಜಿಪ್ಟಿನಿಂದ ತಂದಿದ್ದ ನಾದಿದ ಹಿಟ್ಟು ಇನ್ನೂ ಹುಳಿಯಾಗದ ಕಾರಣ, ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿದರು. ಏಕೆಂದರೆ ಅವರನ್ನು ಅಲ್ಲಿ ನಿಲ್ಲಗೊಡದೆ ಈಜಿಪ್ಟಿನಿಂದ ಓಡಿಸಿಬಿಟ್ಟಿದ್ದರು. ಅವರು ತಮಗಾಗಿ ಯಾವ ಆಹಾರವನ್ನೂ ಸಿದ್ಧಪಡಿಸಿಕೊಂಡಿರಲಿಲ್ಲ. 40 ಇಸ್ರಾಯೇಲರು ಈಜಿಪ್ಟಿನಲ್ಲಿ ಪ್ರವಾಸವಾಗಿ ವಾಸಮಾಡಿದ್ದ ಕಾಲವು ನಾನೂರ ಮೂವತ್ತು ವರ್ಷಗಳಾಗಿದ್ದವು. 41 ನಾನೂರ ಮೂವತ್ತು ವರ್ಷಗಳು ತೀರಿದ ತರುವಾಯ, ಅದೇ ದಿನದಲ್ಲಿ ಯೆಹೋವ ದೇವರ ಸೈನ್ಯಗಳೆಲ್ಲಾ ಈಜಿಪ್ಟ್ ದೇಶವನ್ನು ಬಿಟ್ಟು ಹೊರಗೆ ಹೋದವು. 42 ದೇವರು ಈಜಿಪ್ಟ್ ದೇಶದಿಂದ ಅವರನ್ನು ಹೊರಗೆ ತಂದ ಕಾರಣ, ಇದು ಯೆಹೋವ ದೇವರಿಗೆ ಆಚರಿಸಬೇಕಾದ ರಾತ್ರಿಯಾಗಿತ್ತು. ಇಸ್ರಾಯೇಲರು ತಮ್ಮ ಸಂತತಿಗಳಲ್ಲಿ ಯೆಹೋವ ದೇವರಿಗೆ ಆಚರಿಸಬೇಕಾದ ರಾತ್ರಿಯು ಇದೇ. 43 ಯೆಹೋವ ದೇವರು ಮೋಶೆ ಆರೋನರಿಗೆ, “ಪಸ್ಕದ ಶಾಸನವು ಇದೆ:“ವಿದೇಶಿಯರಲ್ಲಿ ಯಾರೂ ಪಸ್ಕಭೋಜನವನ್ನು ತಿನ್ನಬಾರದು. 44 ಆದರೆ ಕ್ರಯಕ್ಕೆ ತೆಗೆದುಕೊಂಡ ಪ್ರತಿಯೊಬ್ಬ ಗುಲಾಮನು ಸುನ್ನತಿ ಮಾಡಿಸಿಕೊಂಡ ತರುವಾಯ, ಅಂಥವನು ಅದನ್ನು ತಿನ್ನಬಹುದು. 45 ಪರದೇಶದವರೂ, ಕೂಲಿಯವರೂ, ಅದನ್ನು ತಿನ್ನಬಾರದು. 46 “ಒಂದೇ ಮನೆಯಲ್ಲಿ ಅದನ್ನು ತಿನ್ನಬೇಕು. ಆ ಮಾಂಸದಲ್ಲಿ ಸ್ವಲ್ಪ ಅಂಶವನ್ನಾದರೂ ಮನೆಯ ಹೊರಗೆ ತೆಗೆದುಕೊಂಡು ಹೋಗಬಾರದು. ಪಶುವಿನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು. 47 ಇಸ್ರಾಯೇಲಿನ ಸಮೂಹದಲ್ಲಿರುವವರೆಲ್ಲರೂ ಇದನ್ನು ಆಚರಿಸಬೇಕು. 48 “ನಿಮ್ಮ ಜೊತೆಯಲ್ಲಿ ವಾಸಮಾಡಿದ ಪರದೇಶದವನು ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಬೇಕೆಂದಿದ್ದರೆ, ಅವನ ಗಂಡಸರೆಲ್ಲಾ ಸುನ್ನತಿ ಮಾಡಿಸಿಕೊಳ್ಳಲಿ. ತರುವಾಯ ಅವನು ಅದನ್ನು ಆಚರಿಸುವುದಕ್ಕೆ ಸಮೀಪಬರಲಿ, ಅಂಥವರು ಸ್ವದೇಶದಲ್ಲಿ ಹುಟ್ಟಿದವರಂತೆ ಇರುವರು. ಆದರೆ ಸುನ್ನತಿ ಮಾಡಿಸಿಕೊಳ್ಳದ ಒಬ್ಬನಾದರೂ ಅದನ್ನು ತಿನ್ನಬಾರದು. 49 ಸ್ವದೇಶದಲ್ಲಿ ಹುಟ್ಟಿದವನಿಗೂ, ನಿಮ್ಮಲ್ಲಿ ಪ್ರವಾಸಿಯಾಗಿರುವ ಅನ್ಯನಿಗೂ ಒಂದೇ ನಿಯಮವಿರಲಿ,” ಎಂದು ಹೇಳಿದರು. 50 ಇಸ್ರಾಯೇಲರೆಲ್ಲಾ ಯೆಹೋವ ದೇವರು ಮೋಶೆ ಆರೋನರಿಗೆ ಆಜ್ಞಾಪಿಸಿದಂತೆಯೇ ಮಾಡಿದರು. 51 ಅದೇ ದಿನದಲ್ಲಿ ಯೆಹೋವ ದೇವರು ಇಸ್ರಾಯೇಲರನ್ನು ಅವರ ಸೈನ್ಯಗಳ ಪ್ರಕಾರ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದರು.