Joshua 21 (BOKCV2)
1 ಲೇವಿ ಗೋತ್ರದ ಹಿರಿಯರು, ನೂನನ ಮಗನಾದ ಯೆಹೋಶುವನ ಬಳಿಗೂ ಇಸ್ರಾಯೇಲರ ಗೋತ್ರಗಳ ಹಿರಿಯರ ಬಳಿಗೂ ಯಾಜಕನಾದ ಎಲಿಯಾಜರನ ಬಳಿಗೂ ಬಂದರು. 2 ಅವರು ಕಾನಾನ್ ದೇಶದ ಶೀಲೋವಿನಲ್ಲಿ ಅವರನ್ನು ಸಂಧಿಸಿ, “ನಾವು ವಾಸವಾಗಿರುವ ಪಟ್ಟಣಗಳನ್ನು ನಮ್ಮ ಪಶುಗಳಿಗೋಸ್ಕರ ಅವುಗಳ ಉಪನಗರಗಳೊಂದಿಗೆ ನಮಗೆ ಕೊಡಬೇಕೆಂದು ಯೆಹೋವ ದೇವರು ಮೋಶೆಯ ಮುಖಾಂತರವಾಗಿ ಆಜ್ಞಾಪಿಸಿದ್ದಾರೆ,” ಎಂದರು. 3 ಹಾಗೆಯೇ ಇಸ್ರಾಯೇಲರು ತಮ್ಮ ಬಾಧ್ಯತೆಯಲ್ಲಿ ಲೇವಿಯರಿಗೆ ಯೆಹೋವ ದೇವರ ಆಜ್ಞೆಯ ಪ್ರಕಾರ ಪಟ್ಟಣಗಳನ್ನೂ ಗೋಮಾಳಗಳನ್ನೂ ಕೊಟ್ಟರು. ಅವುಗಳ ವಿವರ: 4 ಕೊಹಾತ್ಯರ ಗೋತ್ರಗಳಿಗೆ ಚೀಟು ಬಂದಾಗ ಲೇವಿಯರಲ್ಲಿ ಯಾಜಕನಾದ ಆರೋನನ ಮಕ್ಕಳಿಗೆ ಯೆಹೂದದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ, ಬೆನ್ಯಾಮೀನನ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು. 5 ಕೊಹಾತ್ಯರಿಗೆ ಎಫ್ರಾಯೀಮನ ಗೋತ್ರದಲ್ಲಿಯೂ, ದಾನನ ಗೋತ್ರದಲ್ಲಿಯೂ, ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹತ್ತು ಪಟ್ಟಣಗಳು ಚೀಟಿಯಿಂದ ದೊರಕಿದವು. 6 ಗೇರ್ಷೋನ್ಯರಿಗೆ ಇಸ್ಸಾಕಾರನ ಗೋತ್ರದಲ್ಲಿಯೂ, ಆಶೇರನ ಗೋತ್ರದಲ್ಲಿಯೂ, ನಫ್ತಾಲಿಯ ಗೋತ್ರದಲ್ಲಿಯೂ, ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಗೋತ್ರದಲ್ಲಿಯೂ ಹದಿಮೂರು ಪಟ್ಟಣಗಳು ಚೀಟಿಯಿಂದ ದೊರಕಿದವು. 7 ಇದಲ್ಲದೆ ಮೆರಾರೀಯರಿಗೆ ಅವರ ಕುಟುಂಬಗಳ ಪ್ರಕಾರ ರೂಬೇನನ ಗೋತ್ರದಲ್ಲಿಯೂ, ಗಾದನ ಗೋತ್ರದಲ್ಲಿಯೂ, ಜೆಬುಲೂನನ ಗೋತ್ರದಲ್ಲಿಯೂ ಹನ್ನೆರಡು ಪಟ್ಟಣಗಳು ದೊರಕಿದವು. 8 ಈ ಪಟ್ಟಣಗಳನ್ನೂ, ಅವುಗಳಿಗೆ ಸೇರಿದ ಗೋಮಾಳಗಳನ್ನೂ ಇಸ್ರಾಯೇಲರು ಯೆಹೋವ ದೇವರು ಮೋಶೆಯ ಮುಖಾಂತರ ಆಜ್ಞಾಪಿಸಿದ ಪ್ರಕಾರ, ಲೇವಿಯರಿಗೆ ಚೀಟು ಹಾಕಿಕೊಟ್ಟರು. 9 ಅವರು ಯೆಹೂದನ ಗೋತ್ರದಲ್ಲಿಯೂ ಸಿಮೆಯೋನನ ಗೋತ್ರದಲ್ಲಿಯೂ ಕೆಲವು ಪಟ್ಟಣಗಳನ್ನು ಕೊಟ್ಟರು. 10 ಲೇವಿಯರಿಗೆ ಮೊದಲನೆಯ ಚೀಟು ಬಿದ್ದ ಕಾರಣ, ಲೇವಿ ಗೋತ್ರಕ್ಕೆ ಸೇರಿದ ಕೊಹಾತ್ಯರಾದ ಆರೋನನ ಸಂತತಿಯರಿಗೆ ಯೆಹೂದ ಗೋತ್ರದಲ್ಲಿಯೂ, ಸಿಮೆಯೋನನ ಗೋತ್ರದಲ್ಲಿಯೂ ಕೂಡಲಾದ ಪಟ್ಟಣಗಳ ವಿವರ: 11 ಯೆಹೂದದ ಬೆಟ್ಟಗಳಲ್ಲಿರುವ ಅನಾಕನ ಪಿತೃವಾದ ಕಿರ್ಯತ್ ಅರ್ಬನ ಹೆಸರಿದ್ದ ಪಟ್ಟಣವಾದ ಹೆಬ್ರೋನನ್ನೂ, ಅದರ ಸುತ್ತಲಿರುವ ಗೋಮಾಳಗಳನ್ನೂ ಅವರಿಗೆ ಕೊಟ್ಟರು. 12 ಆದರೆ ಆ ಪಟ್ಟಣದ ಹೊಲಗಳನ್ನೂ, ಅದರ ಗ್ರಾಮಗಳನ್ನೂ ಯೆಫುನ್ನೆಯ ಮಗನಾದ ಕಾಲೇಬನಿಗೂ ಬಾಧ್ಯತೆಯಾಗಿ ಕೊಟ್ಟರು. 13 ಹೀಗೆಯೇ ಯಾಜಕನಾದ ಆರೋನನ ವಂಶದವರಿಗೆ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಹೆಬ್ರೋನನ್ನೂ ಕೊಟ್ಟರು. ಲಿಬ್ನಾವನ್ನೂ 14 ಯತ್ತೀರನ್ನೂ ಎಷ್ಟೆಮೋವನ್ನೂ 15 ಹೋಲೋನನ್ನೂ ದೆಬೀರನ್ನೂ 16 ಆಯಿನ್, ಯುಟ್ಟಾ, ಬೇತ್ ಷೆಮೆಷ್ ಎಂಬ ಆ ಎರಡು ಗೋತ್ರಗಳಿಂದ ಈ ಒಂಬತ್ತು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಟ್ಟರು. 17 ಇದಲ್ಲದೆ ಬೆನ್ಯಾಮೀನನ ಗೋತ್ರದಲ್ಲಿಗಿಬ್ಯೋನನ್ನೂ ಗೆಬಾನನ್ನೂ 18 ಅನಾತೋತನ್ನೂ ಅಲ್ಮೋನನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಟ್ಟರು. 19 ಯಾಜಕನಾದ ಆರೋನನ ವಂಶದವರಿಗೆ ಒಟ್ಟು ಹದಿಮೂರು ಪಟ್ಟಣಗಳೂ, ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 20 ಇದಲ್ಲದೆ ಲೇವಿಯರಾದ ಕೊಹಾತ್ಯನ ಗೋತ್ರದ ಕುಟುಂಬದಲ್ಲಿ ಉಳಿದವರಿಗೆ ಎಫ್ರಾಯೀಮನ ಗೋತ್ರದಲ್ಲಿ ಚೀಟಿಯಿಂದ ದೊರಕಿದ ಪಟ್ಟಣಗಳ ವಿವರ: 21 ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಎಫ್ರಾಯೀಮನ ಬೆಟ್ಟಗಳಲ್ಲಿರುವ,ಶೆಕೆಮನ್ನೂ ಗೆಜೆರನ್ನೂ 22 ಕಿಬ್‌ಚೈಮ್ ಮತ್ತು ಬೇತ್ ಹೋರೋನ್ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 23 ಇದಲ್ಲದೆ ದಾನ್ಯನ ಗೋತ್ರದಲ್ಲಿ,ಎಲ್ತೆಕೇಯನ್ನೂ ಗಿಬ್ಬೆತೋನನ್ನೂ 24 ಅಯ್ಯಾಲೋನನ್ನೂ ಗತ್ ರಿಮ್ಮೋನನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 25 ಮನಸ್ಸೆಯ ಅರ್ಧಗೋತ್ರದಲ್ಲಿ,ತಾನಕನ್ನೂ ಗತ್ ರಿಮ್ಮೋನನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 26 ಹೀಗೆ ಉಳಿದಂಥ ಕೊಹಾತ್ಯನ ಗೋತ್ರಗಳಲ್ಲಿ ಹತ್ತು ಪಟ್ಟಣಗಳೂ ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 27 ಲೇವಿ ಗೋತ್ರದ ಗೇರ್ಷೋನ್ಯರಿಗೆಮನಸ್ಸೆಯ ಅರ್ಧಗೋತ್ರದಲ್ಲಿಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಬಾಷಾನಿನಲ್ಲಿರುವ ಗೋಲಾನನ್ನೂ ಬೆಯೆಷ್ಟೆರಾವನ್ನೂ ಹೀಗೆ ಎರಡು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 28 ಇದಲ್ಲದೆ ಇಸ್ಸಾಕಾರನ ಗೋತ್ರದ ಸೊತ್ತಿನಿಂದಕಿಷ್ಯೋನನ್ನೂ ದಾಬೆರತನ್ನೂ 29 ಯರ್ಮೂತ್ ಮತ್ತು ಏಂಗನ್ನೀಮನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 30 ಆಶೇರನ ಗೋತ್ರದ ಸೊತ್ತಿನಿಂದಮಿಷಾಲನ್ನೂ, ಅಬ್ದೋನನ್ನೂ 31 ಹೆಲ್ಕತನ್ನೂ ರೆಹೋಬನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 32 ನಫ್ತಾಲಿಯ ಗೋತ್ರದಲ್ಲಿ ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದಗಲಿಲಾಯದಲ್ಲಿರುವ ಕೆದೆಷನ್ನೂ ಹಮ್ಮೋತ್ ದೋರನ್ನೂ ಕರ್ತಾನನ್ನೂ ಹೀಗೆ ಮೂರು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 33 ಗೇರ್ಷೋನ್ಯರಿಗೆ ಅವರ ಕುಟುಂಬಗಳ ಪ್ರಕಾರ ಹದಿಮೂರು ಪಟ್ಟಣಗಳೂ ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 34 ಉಳಿದ ಲೇವಿಯರಾದ ಮೆರಾರೀಯ ಕುಟುಂಬಗಳಿಗೆಜೆಬುಲೂನನ ಗೋತ್ರದ ಸೊತ್ತಿನಿಂದಯೊಕ್ನೆಯಾಮ್, ಕರ್ತಾ, 35 ದಿಮ್ನಾ, ನಹಲಾಲ್, ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 36 ಇದಲ್ಲದೆ ರೂಬೇನನ ಗೋತ್ರದಲ್ಲಿಬೆಚೆರನ್ನೂ ಯಹಚವನ್ನೂ 37 ಕೆದೇಮೋತನ್ನೂ ಮೇಫಾತನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 38 ಗಾದ್ಯರ ಗೋತ್ರದಲ್ಲಿ,ಅಕಸ್ಮಾತ್ತಾಗಿ ಕೊಲೆ ಮಾಡಿದವನಿಗೆ ಆಶ್ರಯ ಪಟ್ಟಣವಾದ ಗಿಲ್ಯಾದಿನ ರಾಮೋತನ್ನೂ, ಮಹನಯಿಮನ್ನೂ, 39 ಹೆಷ್ಬೋನನ್ನೂ ಯಜ್ಜೇರನ್ನೂ ಹೀಗೆ ನಾಲ್ಕು ಪಟ್ಟಣಗಳನ್ನು ಅವುಗಳ ಗೋಮಾಳ ಸಹಿತವಾಗಿ ಕೊಡಲಾಯಿತು. 40 ಹೀಗೆಯೇ ಲೇವಿ ಗೋತ್ರದ ಉಳಿದಂಥ ಮೆರಾರೀಯರ ಕುಟುಂಬಗಳ ಪ್ರಕಾರ ಚೀಟಿಯಿಂದ ದೊರೆತ ಪಟ್ಟಣಗಳು ಹನ್ನೆರಡು. 41 ಇಸ್ರಾಯೇಲರ ನಡುವೆ ಲೇವಿಯರಿಗೆ ಒಟ್ಟು ನಾಲ್ವತ್ತೆಂಟು ಪಟ್ಟಣಗಳು ಅವುಗಳ ಗೋಮಾಳ ಸಹಿತವಾಗಿ ದೊರಕಿದವು. 42 ಈ ಪಟ್ಟಣಗಳ ಸುತ್ತಲೂ ಪ್ರತಿ ಒಂದಕ್ಕೂ ಗೋಮಾಳಗಳಿದ್ದವು. ಎಲ್ಲ ಪಟ್ಟಣಗಳಿಗೂ ಹೀಗೆಯೇ ಇದ್ದವು. 43 ಈ ರೀತಿಯಾಗಿ ಯೆಹೋವ ದೇವರು ಅವರ ಪಿತೃಗಳಿಗೆ ಕೊಡುವೆನೆಂದು ಆಣೆಯಿಟ್ಟ ದೇಶವನ್ನೆಲ್ಲಾ ಇಸ್ರಾಯೇಲಿಗೆ ಕೊಟ್ಟರು. ಇಸ್ರಾಯೇಲರು ಅದನ್ನು ಸ್ವಾಧೀನಮಾಡಿಕೊಂಡು, ಅದರಲ್ಲಿ ವಾಸವಾಗಿದ್ದರು. 44 ಯೆಹೋವ ದೇವರು ಅವರ ತಂದೆಗಳಿಗೆ ಆಣೆಯಿಟ್ಟ ಪ್ರಕಾರವೇ ಅವರ ಸುತ್ತಲೂ ಅವರಿಗೆ ವಿಶ್ರಾಂತಿಕೊಟ್ಟರು. ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ. ಅವರ ಶತ್ರುಗಳನ್ನೆಲ್ಲಾ ಯೆಹೋವ ದೇವರು ಅವರ ಕೈಗಳಿಗೆ ಒಪ್ಪಿಸಿದರು. 45 ಯೆಹೋವ ದೇವರು ಇಸ್ರಾಯೇಲರಿಗೆ ಹೇಳಿದ ಅತಿ ಶ್ರೇಷ್ಠವಾಗ್ದಾನಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ. ಎಲ್ಲಾ ನೆರವೇರಿದವು.