Numbers 22 (BOKCV2)
1 ನಂತರ ಇಸ್ರಾಯೇಲರು ಹೊರಟು ಯೊರ್ದನಿಗೆ ಈಚೆಯಲ್ಲಿರುವ ಮೋವಾಬಿನ ಬಯಲುಗಳಲ್ಲಿ ಯೆರಿಕೋ ಪಟ್ಟಣಕ್ಕೆ ಎದುರಾಗಿ ಇಳಿದುಕೊಂಡರು. 2 ಆದರೆ ಚಿಪ್ಪೋರನ ಮಗ ಬಾಲಾಕನು ಇಸ್ರಾಯೇಲರು ಅಮೋರಿಯರಿಗೆ ಮಾಡಿದ್ದನ್ನೆಲ್ಲಾ ನೋಡಿದನು. 3 ಇದಲ್ಲದೆ ಮೋವಾಬಿನವರು, ಇಸ್ರಾಯೇಲರು ಬಹಳ ಜನರಾಗಿರುವುದರಿಂದ ಅವರಿಗೆ ಬಹಳವಾಗಿ ಅಂಜಿದರು. ಮೋವಾಬಿನವರು ಇಸ್ರಾಯೇಲರಿಗೆ ದಿಗಿಲುಪಟ್ಟರು. 4 ಮೋವಾಬ್ಯರು ಮಿದ್ಯಾನ್ಯರ ಹಿರಿಯರಿಗೆ, “ಎತ್ತು ಅಡವಿಯ ಹುಲ್ಲನ್ನು ಮೇಯುವಂತೆ, ಈಗ ಈ ಸಮೂಹವು ನಮ್ಮ ಸುತ್ತಲಿರುವುದನ್ನೆಲ್ಲಾ ಮೇಯುವುದು,” ಎಂದನು.ಆ ಕಾಲದಲ್ಲಿ ಚಿಪ್ಪೋರನ ಮಗ ಬಾಲಾಕನು ಮೋವಾಬ್ಯರ ಅರಸನಾಗಿದ್ದನು. 5 ಇವನು ಸ್ವಜನರ ನಾಡಾದ ಯೂಫ್ರೇಟೀಸ್ ನದಿಯ ತೀರದಲ್ಲಿರುವ ಪೆತೋರೂರಿಗೆ ದೂತರನ್ನು ಕಳುಹಿಸಿ, ಬೆಯೋರನ ಮಗ ಬಿಳಾಮನನ್ನೂ ಕರೆಯಿಸಿ,“ಒಂದು ಜನಾಂಗವು ಈಜಿಪ್ಟಿನಿಂದ ಹೊರಟು ಬಂದಿದೆ. ಅದು ದೇಶವನ್ನೆಲ್ಲಾ ಆವರಿಸಿಕೊಂಡು, ನನಗೆದುರಾಗಿ ವಾಸಿಸುತ್ತಿದೆ. 6 ಅವರು ನನಗಿಂತ ಬಲವುಳ್ಳವರಾಗಿದ್ದರಿಂದ ಈಗ ನೀನು ದಯಮಾಡಿ ಬಂದು, ಈ ಜನರನ್ನು ನನಗಾಗಿ ಶಪಿಸು. ಆಗ ನಾನು ಅವರನ್ನು ಗೆದ್ದು, ದೇಶದೊಳಗಿಂದ ಹೊರಡಿಸುವುದಕ್ಕೆ ನನ್ನಿಂದ ಸಾಧ್ಯವಾಗಬಹುದು. ಏಕೆಂದರೆ ನೀನು ಯಾವನನ್ನು ಆಶೀರ್ವದಿಸುತ್ತೀಯೋ, ಅವನು ಆಶೀರ್ವಾದ ಹೊಂದಿರುವನು; ನೀನು ಯಾವನನ್ನು ಶಪಿಸುತ್ತೀಯೋ, ಅವನು ಶಾಪಗ್ರಸ್ತನಾಗಿರುವನು; ಎಂದು ನಾನು ಬಲ್ಲೆನು,” ಎಂದು ಹೇಳಿ ಕಳುಹಿಸಿದನು. 7 ಆಗ ಮೋವಾಬಿನ ಹಿರಿಯರೂ ಮಿದ್ಯಾನಿನ ಹಿರಿಯರೂ ಭವಿಷ್ಯವಾಣಿ ಕೇಳಲು ಸಲ್ಲಿಸಬೇಕಾದ ಕಾಣಿಕೆಗಳನ್ನು ತೆಗೆದುಕೊಂಡು ಹೋದರು. ಅವರು ಬಿಳಾಮನ ಬಳಿಗೆ ಬಂದು, ಅವನಿಗೆ ಬಾಲಾಕನ ಮಾತುಗಳನ್ನು ಹೇಳಿದರು. 8 ಅವನು ಅವರಿಗೆ, “ಈ ರಾತ್ರಿ ಇಲ್ಲಿ ಇಳಿದುಕೊಳ್ಳಿರಿ. ಯೆಹೋವ ದೇವರು ನನಗೆ ಹೇಳುವ ಪ್ರಕಾರ ನಿಮಗೆ ಉತ್ತರವನ್ನು ಕೊಡುವೆನು,” ಎಂದು ಹೇಳಿದನು. ಆದಕಾರಣ ಮೋವಾಬಿನ ಪ್ರಭುಗಳು ಬಿಳಾಮನ ಸಂಗಡ ಇಳಿದುಕೊಂಡರು. 9 ದೇವರು ಬಿಳಾಮನ ಬಳಿಗೆ ಬಂದು, “ನಿನ್ನ ಸಂಗಡ ಇರುವ ಈ ಮನುಷ್ಯರು ಯಾರು?” ಎಂದರು. 10 ಬಿಳಾಮನು ದೇವರಿಗೆ, “ಚಿಪ್ಪೋರನ ಮಗನಾಗಿಯೂ ಮೋವಾಬಿನ ಅರಸನಾಗಿಯೂ ಇರುವ ಬಾಲಾಕನು ನನ್ನ ಬಳಿಗೆ ಹೇಳಿ ಕಳುಹಿಸಿದ್ದೇನೆಂದರೆ: 11 ‘ಇಗೋ, ಈಜಿಪ್ಟ್ ದೇಶದಿಂದ ಹೊರಟಿರುವ ಒಂದು ಜನಾಂಗವು ದೇಶವನ್ನೆಲ್ಲಾ ಆವರಿಸಿಕೊಂಡಿದೆ. ಈಗ ನೀನು ಬಂದು ನನಗೋಸ್ಕರ ಅವರನ್ನು ಶಪಿಸು. ಒಂದು ವೇಳೆ ಅವರ ಸಂಗಡ ಯುದ್ಧಮಾಡಿ ಹೊರಗೆ ಹಾಕುವುದಕ್ಕೆ ನನ್ನಿಂದ ಸಾಧ್ಯವಾಗಬಹುದು,’ ಎಂದು ಹೇಳಿ ಕಳುಹಿಸಿದ್ದಾನೆ,” ಎಂದನು. 12 ಆಗ ದೇವರು ಬಿಳಾಮನಿಗೆ, “ನೀನು ಅವರ ಸಂಗಡ ಹೋಗಬೇಡ, ನೀನು ಆ ಜನರನ್ನು ಶಪಿಸಬೇಡ, ಏಕೆಂದರೆ ಅವರು ನನ್ನಿಂದ ಆಶೀರ್ವಾದ ಹೊಂದಿದವರು,” ಎಂದರು. 13 ಬಿಳಾಮನು ಉದಯದಲ್ಲಿ ಎದ್ದು ಬಾಲಾಕನ ಪ್ರಭುಗಳಿಗೆ, “ನಿಮ್ಮ ದೇಶಕ್ಕೆ ಹೋಗಿರಿ. ಯೆಹೋವ ದೇವರು ನಿಮ್ಮ ಸಂಗಡ ಹೋಗುವುದಕ್ಕೆ ನನಗೆ ಅಪ್ಪಣೆ ಕೊಡಲಿಲ್ಲ,” ಎಂದನು. 14 ಆದಕಾರಣ ಮೋವಾಬಿನ ಪ್ರಭುಗಳು ಎದ್ದು ಬಾಲಾಕನ ಬಳಿಗೆ ಬಂದು, “ಬಿಳಾಮನು ನಮ್ಮ ಸಂಗಡ ಬರಲಿಲ್ಲ,” ಎಂದರು. 15 ಆದರೆ ಬಾಲಾಕನು ತಿರುಗಿ ಇವರಿಗಿಂತ ಹೆಚ್ಚು ಘನವುಳ್ಳವರಾದ ಅನೇಕ ಪ್ರಧಾನರನ್ನು ಕಳುಹಿಸಿದನು. 16 ಅವರು ಬಿಳಾಮನ ಬಳಿಗೆ ಬಂದು ಅವನಿಗೆ,“ಚಿಪ್ಪೋರನ ಮಗ ಬಾಲಾಕನು ಹೀಗೆ ಹೇಳುತ್ತಾನೆ: ನೀನು ದಯಮಾಡಿ ನನ್ನ ಬಳಿಗೆ ಬರಲು ಅಡ್ಡಿಮಾಡುವ ಯಾವುದಕ್ಕೂ ಅವಕಾಶ ಕೊಡಬಾರದು. 17 ಏಕೆಂದರೆ ನಾನು ನಿನ್ನನ್ನು ಬಹಳವಾಗಿ ಘನಪಡಿಸುವೆನು. ನೀನು ಹೇಳುವುದನ್ನೆಲ್ಲಾ ನಾನು ಮಾಡುವೆನು. ಆದಕಾರಣ ನೀನು ದಯಮಾಡಿ ಬಂದು ಈ ಜನರನ್ನು ನನಗಾಗಿ ಶಪಿಸು,” ಎಂದನು. 18 ಬಿಳಾಮನು ಪ್ರತ್ಯುತ್ತರವಾಗಿ ಬಾಲಾಕನ ಸೇವಕರಿಗೆ, “ಬಾಲಾಕನು ನನಗೆ ತನ್ನ ಮನೆ ತುಂಬುವಷ್ಟು ಬೆಳ್ಳಿಬಂಗಾರ ಕೊಟ್ಟರೂ ನಾನು ನನ್ನ ದೇವರಾಗಿರುವ ಯೆಹೋವ ದೇವರ ಮಾತನ್ನು ಮೀರಿ ಹೆಚ್ಚು ಕಡಿಮೆ ಏನನ್ನೂ ಮಾಡಲಾರೆನು. 19 ಆದರೆ ಈಗ ಯೆಹೋವ ದೇವರು ನನಗೆ ಮತ್ತೇನು ಹೇಳುವರೆಂದು ನಾನು ತಿಳಿದುಕೊಳ್ಳುವ ಹಾಗೆ, ನೀವು ಸಹ ದಯಮಾಡಿ ಈ ರಾತ್ರಿ ಇಲ್ಲಿ ಇಳಿದುಕೊಳ್ಳಿರಿ,” ಎಂದನು. 20 ಆಗ ದೇವರು ಬಿಳಾಮನ ಬಳಿಗೆ ರಾತ್ರಿಯಲ್ಲಿ ಬಂದು ಅವನಿಗೆ, “ಈ ಮನುಷ್ಯರು ನಿನ್ನನ್ನು ಕರೆಯುವುದಕ್ಕೆ ಬಂದಿದ್ದರೆ, ನೀನು ಎದ್ದು ಅವರ ಸಂಗಡ ಹೋಗು. ಆದರೆ ನಾನು ನಿನಗೆ ಹೇಳುವ ಮಾತಿನಂತೆಯೇ ನೀನು ಮಾಡಬೇಕು,” ಎಂದರು. 21 ಬಿಳಾಮನು ಬೆಳಿಗ್ಗೆ ಎದ್ದು, ತನ್ನ ಕತ್ತೆಯನ್ನು ಹತ್ತಿ, ಮೋವಾಬಿನ ಪ್ರಧಾನರ ಸಂಗಡ ಹೋದನು. 22 ಆದರೆ ಅವನು ಹೋದದ್ದರಿಂದ ದೇವರಿಗೆ ಕೋಪ ಬಂದಿತು. ಯೆಹೋವ ದೇವರ ದೂತನು ಅವನಿಗೆ ಎದುರಾಳಿಯಾಗಿ ಮಾರ್ಗದಲ್ಲಿ ನಿಂತುಕೊಂಡನು. ಬಿಳಾಮನು ತನ್ನ ಕತ್ತೆಯ ಮೇಲೆ ಹತ್ತಿಕೊಂಡಿದ್ದನು. ಅವನ ಇಬ್ಬರು ಆಳುಗಳು ಅವನ ಸಂಗಡ ಇದ್ದರು. 23 ಕತ್ತೆಯು ಮಾರ್ಗದಲ್ಲಿ ನಿಂತಿದ್ದ ಯೆಹೋವ ದೇವರ ದೂತನನ್ನೂ, ಅವನ ಕೈಯಲ್ಲಿರುವ ಬಿಚ್ಚುಗತ್ತಿಯನ್ನೂ ನೋಡಿ, ಮಾರ್ಗದಿಂದ ವಾರೆಯಾಗಿ ಹೊಲದೊಳಗೆ ಹೋಯಿತು. ಆಗ ಬಿಳಾಮನು ಕತ್ತೆಯನ್ನು ಮಾರ್ಗದೊಳಗೆ ತಿರುಗಿಸುವುದಕ್ಕೆ ಅದನ್ನು ಹೊಡೆದನು. 24 ಆದರೆ ಯೆಹೋವ ದೇವರ ದೂತನು ದ್ರಾಕ್ಷಿತೋಟಗಳ ನಡುವಿನ ಕಿರಿದಾದ ಹಾದಿಯಲ್ಲಿ ಎರಡೂ ಕಡೆಯಲ್ಲಿ ಗೋಡೆ ಇದ್ದಲ್ಲಿ ನಿಂತನು. 25 ಕತ್ತೆಯು ಯೆಹೋವ ದೇವರ ದೂತನನ್ನು ನೋಡಿ ಗೋಡೆಗೆ ಒತ್ತಿಕೊಂಡು, ಬಿಳಾಮನ ಕಾಲನ್ನು ಗೋಡೆಗೆ ಒತ್ತಿ ಹಾಕಿತು. ಅವನು ಅದನ್ನು ಮತ್ತೆ ಹೆಚ್ಚಾಗಿ ಹೊಡೆದನು. 26 ಆಗ ಯೆಹೋವ ದೇವರ ದೂತನು ಮುಂದೆ ಹೋಗಿ ಬಲಕ್ಕೂ ಎಡಕ್ಕೂ ತಿರುಗುವುದಕ್ಕೆ ಮಾರ್ಗವಿಲ್ಲದ ಇಕ್ಕಟ್ಟಿನ ಸ್ಥಳದಲ್ಲಿ ನಿಂತನು. 27 ಕತ್ತೆಯು ಯೆಹೋವ ದೇವರ ದೂತನನ್ನು ನೋಡಿ ಬಿಳಾಮನ ಕೆಳಗೆ ಬಿತ್ತು. ಆದಕಾರಣ ಬಿಳಾಮನು ಕೋಪಿಸಿಕೊಂಡು ಕತ್ತೆಯನ್ನು ಬೆತ್ತದಿಂದ ಹೊಡೆದನು. 28 ಆಗ ಯೆಹೋವ ದೇವರು ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟರು. ಅದು ಬಿಳಾಮನಿಗೆ, “ಈಗ ನನ್ನನ್ನು ಮೂರು ಸಾರಿ ಹೊಡೆಯುವ ಹಾಗೆ ನಾನು ನಿನಗೆ ಏನು ಮಾಡಿದೆನು?” ಎಂದು ಕೇಳಿತು. 29 ಬಿಳಾಮನು ಕತ್ತೆಗೆ, “ನೀನು ನನಗೆ ಹಾಸ್ಯಮಾಡಿದೆಯಲ್ಲಾ? ನನ್ನ ಕೈಯಲ್ಲಿ ಖಡ್ಗ ಇದ್ದಿದ್ದರೆ, ನಾನು ಈಗಲೇ ನಿನ್ನನ್ನು ಕೊಂದು ಹಾಕುತ್ತಿದ್ದೆ,” ಎಂದನು. 30 ಕತ್ತೆಯು ಬಿಳಾಮನಿಗೆ, “ಈ ದಿವಸದವರೆಗೂ ನೀನು ಯಾವಾಗಲೂ ಸವಾರಿಮಾಡುತ್ತಿದ್ದ ಕತ್ತೆಯು ನಾನಲ್ಲವೋ? ನಾನು ಎಂದಾದರೂ ನಿನಗೆ ಈ ರೀತಿ ಮಾಡಿದೆನೋ?” ಎಂದು ಪ್ರಶ್ನಿಸಿತು.ಅದಕ್ಕವನು, “ಇಲ್ಲ,” ಎಂದನು. 31 ಆಗ ಯೆಹೋವ ದೇವರು ಬಿಳಾಮನ ಕಣ್ಣುಗಳನ್ನು ತೆರೆದರು. ಅವನು ಮಾರ್ಗದಲ್ಲಿ ನಿಂತಿದ್ದ ಯೆಹೋವ ದೇವರ ದೂತನನ್ನೂ, ಆತನ ಕೈಯಲ್ಲಿರುವ ಬಿಚ್ಚುಗತ್ತಿಯನ್ನೂ ನೋಡಿ ಬೋರಲು ಬಿದ್ದನು. 32 ಯೆಹೋವ ದೇವರ ದೂತನು ಅವನಿಗೆ, “ನಿನ್ನ ಕತ್ತೆಯನ್ನು ಈಗ ಮೂರು ಸಾರಿ ಹೊಡೆದದ್ದು ಏಕೆ? ಇಗೋ, ನಿನ್ನ ಮಾರ್ಗವು ನನ್ನ ಮುಂದೆ ವಕ್ರವಾಗಿರುವುದರಿಂದ ನಾನು ನಿನ್ನನ್ನು ತಡೆಯುವುದಕ್ಕೆ ಬಂದಿದ್ದೇನೆ. 33 ಆ ಕತ್ತೆ ನನ್ನನ್ನು ನೋಡಿ, ನನ್ನ ಮುಂದೆ ಈಗ ಮೂರು ಸಾರಿ ಓರೆಯಾಗಿ ಹೋಯಿತು. ಅದು ನನ್ನ ಮುಂದೆ ಓರೆಯಾಗಿ ಹೋಗದಿದ್ದರೆ, ನಿಶ್ಚಯವಾಗಿ ಆಗಲೇ ನಿನ್ನನ್ನು ಕೊಂದುಹಾಕಿ ಕತ್ತೆಯನ್ನು ಉಳಿಸುತ್ತಿದ್ದೆನು,” ಎಂದನು. 34 ಆಗ ಬಿಳಾಮನು ಯೆಹೋವ ದೇವರ ದೂತನಿಗೆ, “ನಾನು ಪಾಪಮಾಡಿದ್ದೇನೆ. ನೀನು ನನಗೆದುರಾಗಿ ಮಾರ್ಗದಲ್ಲಿ ನಿಂತಿದ್ದಿ ಎಂದು ನನಗೆ ತಿಳಿಯಲಿಲ್ಲ. ಹೀಗಿರಲಾಗಿ ಅದು ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದಾದರೆ, ನಾನು ತಿರುಗಿ ಹಿಂದಕ್ಕೆ ಹೋಗುತ್ತೇನೆ,” ಎಂದನು. 35 ಆದರೆ ಯೆಹೋವ ದೇವರ ದೂತನು ಬಿಳಾಮನಿಗೆ, “ಈ ಮನುಷ್ಯರ ಸಂಗಡ ಹೋಗು ಆದರೆ ನಾನು ನಿನಗೆ ಹೇಳುವುದನ್ನೇ ಹೇಳಬೇಕೇ ಹೊರತು ಬೇರೆ ಯಾವದನ್ನೂ ಹೇಳಬಾರದು,” ಎಂದನು. ಹಾಗೆಯೇ ಬಿಳಾಮನು ಬಾಲಾಕನ ಪ್ರಭುಗಳ ಸಂಗಡ ಹೋದನು. 36 ಬಿಳಾಮನು ಬಂದನೆಂದು ಬಾಲಾಕನು ಕೇಳಿದಾಗ, ಅವನು ಕಡೆಯ ಮೇರೆಯಲ್ಲಿರುವ ಅರ್ನೋನ್ ಹೊಳೆಯ ತೀರದಲ್ಲಿದ್ದ ಮೋವಾಬಿನ ಪಟ್ಟಣಕ್ಕೆ ಬರಮಾಡಿಕೊಳ್ಳಲು ಹೊರಟನು. 37 ಬಾಲಾಕನು ಬಿಳಾಮನಿಗೆ, “ನಾನು ನಿನಗೆ ತುರ್ತಾಗಿ ಬರುವಂತೆ ಹೇಳಿ ಕಳುಹಿಸಲಿಲ್ಲವೋ? ನೀನು ನನ್ನ ಬಳಿಗೆ ಏಕೆ ಬರಲಿಲ್ಲ? ನಾನು ನಿನ್ನನ್ನು ಘನಪಡಿಸಲು ನಿಶ್ಚಯವಾಗಿ ಸಾಮರ್ಥ್ಯವುಳ್ಳವನಲ್ಲವೋ?” ಎಂದನು. 38 ಬಿಳಾಮನು ಬಾಲಾಕನಿಗೆ, “ಇಗೋ, ನಾನು ನಿನ್ನ ಬಳಿಗೆ ಬಂದಿದ್ದೇನೆ. ಆದರೆ ಈಗ ನಿನಗೆ ಇಷ್ಟವಾಗುವಂಥದ್ದನ್ನು ಹೇಳುವುದು ನನಗೆ ಸಾಧ್ಯವಿಲ್ಲ? ದೇವರು ನನ್ನಿಂದ ಆಡಿಸಿದ ಮಾತನ್ನೇ ಹೇಳುವೆನು,” ಎಂದನು. 39 ಆಗ ಬಿಳಾಮನು ಬಾಲಾಕನ ಸಂಗಡ ಹೋದನು. ಇಬ್ಬರು ಕಿರ್ಯತ್ ಹುಚೋತಿಗೆ ಬಂದರು. 40 ಬಾಲಾಕನು ಎತ್ತುಗಳನ್ನೂ ಕುರಿಗಳನ್ನೂ ಅರ್ಪಿಸಿದನು. ಅದರಲ್ಲಿ ಸ್ವಲ್ಪವನ್ನು ಬಿಳಾಮನಿಗೂ ಅವನ ಸಂಗಡ ಇದ್ದ ಪ್ರಭುಗಳಿಗೂ ಕಳುಹಿಸಿದನು. 41 ಮರುದಿವಸದಲ್ಲಿ ಬಾಲಾಕನು ಬಿಳಾಮನನ್ನು ಕರೆದುಕೊಂಡು ಬಾಮೋತ್ ಬಾಳ್ ದೇವತೆಯ ಎತ್ತರವಾದ ಸ್ಥಳಕ್ಕೆ ಹತ್ತಿ, ಅಲ್ಲಿಂದ ಅವನು ಇಸ್ರಾಯೇಲ್ ಜನರ ಒಂದು ಭಾಗವನ್ನು ತೋರಿಸಿದನು.