Leviticus 7 (IRVK)
1 “‘ಪ್ರಾಯಶ್ಚಿತ್ತಯಜ್ಞದ ನಿಯಮಗಳು: ಆ ಯಜ್ಞವು ಮಹಾಪರಿಶುದ್ಧವಾದದ್ದು. 2 ಸರ್ವಾಂಗಹೋಮಪಶುವನ್ನು ವಧಿಸುವ ಸ್ಥಳದಲ್ಲೇ ಪ್ರಾಯಶ್ಚಿತ್ತಯಜ್ಞದ ಪಶುವನ್ನು ವಧಿಸಬೇಕು. ಯಾಜಕನು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಬೇಕು. 3 ಅವನು ಅದರ ಕೊಬ್ಬನ್ನೆಲ್ಲಾ ಅಂದರೆ, 4 ಬಾಲದ ಕೊಬ್ಬನ್ನು, ಅಂಗಾಂಶದ ಕೊಬ್ಬನ್ನು, ಎರಡು ಮೂತ್ರಪಿಂಡಗಳನ್ನು, ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನು, ಕಳಿಜದ ಮೇಲಿನಿಂದ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನು ತೆಗೆಯಬೇಕು. 5 ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಯೆಹೋವನಿಗೆ ಹೋಮಮಾಡಬೇಕು. ಅದು ಪ್ರಾಯಶ್ಚಿತ್ತ ಯಜ್ಞವಾಗಿದೆ. 6 ಹೋಮಶೇಷವನ್ನು ಯಾಜಕರಲ್ಲಿ ಗಂಡಸರೆಲ್ಲರೂ ತಿನ್ನಬಹುದು; ಅದು ಮಹಾಪರಿಶುದ್ಧವಾದುದರಿಂದ ಪವಿತ್ರಸ್ಥಳದೊಳಗೆ ಅದನ್ನು ತಿನ್ನಬೇಕು. 7 ಪ್ರಾಯಶ್ಚಿತ್ತಯಜ್ಞದ ಹೋಮಶೇಷದ ವಿಷಯದಲ್ಲಿಯೂ ಮತ್ತು ದೋಷಪರಿಹಾರಕ ಯಜ್ಞದ ಹೋಮಶೇಷದ ವಿಷಯದಲ್ಲಿಯೂ ಒಂದೇ ನಿಯಮಯುಂಟು; ಹೇಗೆಂದರೆ ಆ ಹೋಮಶೇಷವು ದೋಷಪರಿಹಾರವನ್ನು ಮಾಡಿಸುವ ಯಾಜಕನಿಗೆ ಸಲ್ಲತಕ್ಕದ್ದು. 8 ಯಾರಾದರೂ ಸರ್ವಾಂಗಹೋಮಕ್ಕಾಗಿ ಪಶುವನ್ನು ತಂದಾಗ ಅದರ ಚರ್ಮವು ಆ ಪಶುವನ್ನು ಸಮರ್ಪಿಸುವ ಯಾಜಕನದ್ದಾಗಿಯೇ ಇರಬೇಕು. 9 ಒಲೆಯಲ್ಲಾಗಲಿ, ಕಬ್ಬಿಣದ ಹಂಚಿನಲ್ಲಾಗಲಿ ಅಥವಾ ಬಾಂಡ್ಲಿಯಲ್ಲಾಗಲಿ ಬೇಯಿಸಿದ ನೈವೇದ್ಯಪದಾರ್ಥವೆಲ್ಲಾ ಸಮರ್ಪಿಸುವ ಯಾಜಕನಿಗೆ ಆಗಬೇಕು. 10 ಆದರೆ ಎಣ್ಣೆ ಹೊಯ್ದ ಹಿಟ್ಟನ್ನಾಗಲಿ ಅಥವಾ ಬರೀ ಹಿಟ್ಟನ್ನಾಗಲಿ ಯಾರಾದರೂ ನೈವೇದ್ಯಕ್ಕಾಗಿ ತಂದಾಗ ಅದನ್ನು ಆರೋನನ ವಂಶದವರೆಲ್ಲರೂ ಸಮಾನವಾಗಿ ಅನುಭವಿಸಬೇಕು. 11 “‘ಜನರು ಯೆಹೋವನಿಗೆ ಅರ್ಪಿಸುವ ಸಮಾಧಾನಯಜ್ಞದ ನಿಯಮಗಳು ಇವೇ. 12 ಯಾರಾದರೂ ಕೃತಜ್ಞತೆಯನ್ನು ತೋರಿಸುವುದಕ್ಕಾಗಿ ಸಮಾಧಾನಯಜ್ಞವನ್ನು ಯೆಹೋವನಿಗೆ ಮಾಡುವುದಾದರೆ ಅದರೊಡನೆ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಕಡುಬುಗಳನ್ನು ಮತ್ತು ಎಣ್ಣೆಯಿಂದ ಪೂರಾ ನೆನಸಿದ ಗೋದಿ ಹಿಟ್ಟಿನ ಹೋಳಿಗೆಗಳನ್ನು ಸಮರ್ಪಿಸಬೇಕು. 13 ಕೃತಜ್ಞತೆಯನ್ನು ತೋರಿಸುವುದಕ್ಕಾಗಿ ಸಮಾಧಾನಯಜ್ಞದಲ್ಲಿ ಒಪ್ಪಿಸುವ ಪಶುವಿನೊಡನೆ ಹುಳಿರೊಟ್ಟಿಗಳನ್ನು ಸಮರ್ಪಿಸಬೇಕು. 14 ಸಮರ್ಪಿಸಿದ ಪ್ರತಿಯೊಂದು ವಿಧವಾದ ಯಜ್ಞದ ಪದಾರ್ಥಗಳಲ್ಲಿಯೂ ಒಂದೊಂದನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಬೇಕು. ಅವು ಯಜ್ಞವೇದಿಗೆ ಯಜ್ಞಪಶುವಿನ ರಕ್ತವನ್ನು ಎರಚಿದ ಯಾಜಕನಿಗೆ ಅರ್ಪಿಸಬೇಕು. 15 ಕೃತಜ್ಞತೆಯ ಯಜ್ಞಪಶುವಿನ ಮಾಂಸವನ್ನು ಯಜ್ಞವು ನಡೆದ ದಿನದಲ್ಲೇ ಭೋಜನ ಮಾಡಬೇಕು; ಮರುದಿನದ ವರೆಗೆ ಸ್ವಲ್ಪವನ್ನಾದರೂ ಉಳಿಸಬಾರದು. 16 “‘ಯಾರಾದರೂ ಹರಕೆಯನ್ನು ಸಲ್ಲಿಸುವುದಕ್ಕಾಗಲಿ, ಸ್ವ ಇಚ್ಛೆಯಿಂದಾಗಲಿ ಅಂತಹ ಯಜ್ಞವನ್ನು ಮಾಡಿಸಿದರೆ ಅದನ್ನು ಸಮರ್ಪಿಸಿದ ದಿನದಲ್ಲೇ ಅದರ ಮಾಂಸವನ್ನು ಊಟಮಾಡಬೇಕು; ಆದರೆ ಉಳಿದದ್ದನ್ನು ಮರುದಿನದಲ್ಲಿ ತಿನ್ನಬಹುದು. 17 ಮೂರನೆಯ ದಿನದ ವರೆಗೆ ಉಳಿದದ್ದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. 18 ಆ ಯಜ್ಞಪಶುವಿನ ಮಾಂಸದಲ್ಲಿ ಸ್ವಲ್ಪವನ್ನಾದರೂ ಮೂರನೆಯ ದಿನದಲ್ಲಿ ಊಟಮಾಡಿದರೆ ಆ ಯಜ್ಞವು ಸಮರ್ಪಕವಾದದ್ದಲ್ಲ; ಅರ್ಪಿಸಿದವನಿಗೆ ಅದರಿಂದ ಫಲವೇನೂ ದೊರೆಯುವುದಿಲ್ಲ. ಅದು ಅಸಹ್ಯವಾದುದರಿಂದ ಅದನ್ನು ತಿಂದವನು ಆ ಪಾಪದ ಫಲವನ್ನು ಅನುಭವಿಸಬೇಕು. 19 ಅಶುದ್ಧವಾದ ವಸ್ತುವಿಗೆ ಸೋಂಕಿದ ಮಾಂಸವನ್ನು ತಿನ್ನದೆ ಬೆಂಕಿಯಲ್ಲಿ ಸುಟ್ಟುಬಿಡಬೇಕು. ಶುದ್ಧರಾಗಿರುವವರೆಲ್ಲರೂ ಯಜ್ಞಪಶುವಿನ ಮಾಂಸವನ್ನು ತಿನ್ನಬಹುದು. 20 ಯಾವನಾದರೂ ಅಶುದ್ಧನಾಗಿದ್ದು, ಯೆಹೋವನಿಗೆ ಸಮರ್ಪಿತವಾದ ಸಮಾಧಾನ ಯಜ್ಞಪಶುವಿನ ಮಾಂಸವನ್ನು ತಿಂದರೆ ಅವನು ತನ್ನ ಕುಲದಿಂದ ಬಹಿಷ್ಕರಿಸಲ್ಪಡಬೇಕು. 21 ಯಾವನಿಗಾದರೂ ಮನುಷ್ಯದೇಹದಿಂದ ಉಂಟಾದ ಅಶುದ್ಧವಸ್ತು ಅಥವಾ ಅಶುದ್ಧ ಮೃಗ ಮತ್ತು ನಿಷಿದ್ಧವಸ್ತು ಇವುಗಳಲ್ಲಿ ಯಾವುದಾದರೂ ಸೋಂಕಿದರೆ ಮತ್ತು ಅವನು ಯೆಹೋವನಿಗೆ ಸಮರ್ಪಿತವಾದ ಯಜ್ಞಪಶುವಿನ ಮಾಂಸವನ್ನು ತಿಂದರೆ ತನ್ನ ಕುಲದಿಂದ ಬಹಿಷ್ಕರಿಸಲ್ಪಡಬೇಕು’” ಎಂದು ಹೇಳಿದನು. 22 ಯೆಹೋವನು ಮೋಶೆಗೆ, 23 “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ನೀವು ಎತ್ತು, ಕುರಿ ಮತ್ತು ಆಡುಗಳ ಕೊಬ್ಬನ್ನು ತಿನ್ನಬಾರದು. 24 ಅಂತಹ ಪಶುವು ರೋಗದಿಂದ ಸತ್ತರೆ ಇಲ್ಲವೇ ಕಾಡುಮೃಗವು ಕೊಂದರೆ, ಅದರ ಕೊಬ್ಬನ್ನು ಬೇರೆ ಕೆಲಸಕ್ಕೆ ಉಪಯೋಗಿಸಬಹುದೇ ಹೊರತು ಎಷ್ಟು ಮಾತ್ರವೂ ತಿನ್ನಬಾರದು. 25 ಮನುಷ್ಯರು ಯೆಹೋವನಿಗೆ ಹೋಮಮಾಡುವಂತಹ ಪಶು ಜಾತಿಯ ಕೊಬ್ಬನ್ನು ಯಾವನಾದರೂ ತಿಂದರೆ ಅವನು ಕುಲದಿಂದ ಬಹಿಷ್ಕಾರಕ್ಕೆ ಒಳಗಾಗುವನು. 26 ಪಕ್ಷಿಯದಾಗಲಿ ಅಥವಾ ಪಶುವಿನದಾಗಲಿ ಯಾವ ರಕ್ತವನ್ನು ನೀವು ಎಲ್ಲಿಯೂ ಊಟಮಾಡಬಾರದು. 27 ರಕ್ತಭೋಜನವನ್ನು ಮಾಡಿದವನು ಕುಲದಿಂದ ಬಹಿಷ್ಕಾರಕ್ಕೆ ಒಳಗಾಗುವನು’” ಎಂದು ಹೇಳಿದನು. 28 ಯೆಹೋವನು ಮೋಶೆಯೊಂದಿಗೆ ಮಾತನಾಡಿ, 29 “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಸಮಾಧಾನಯಜ್ಞದ ಪಶುಗಳನ್ನು ಯೆಹೋವನಿಗೆ ಸಮರ್ಪಿಸುವವನು ಆ ಯಜ್ಞದ್ರವ್ಯಗಳಲ್ಲಿ ಯೆಹೋವನಿಗೆ ಸಲ್ಲಬೇಕಾದದ್ದನ್ನು ತಂದುಕೊಡಬೇಕು. 30 ಯೆಹೋವನಿಗೆ ಹೋಮರೂಪವಾಗಿ ಸಮರ್ಪಿಸಬೇಕಾದುದನ್ನು ಅಂದರೆ ಪಶುವಿನ ಕೊಬ್ಬನ್ನು ತನ್ನ ಕೈಯಿಂದಲೇ ಕೊಡಬೇಕು. ಅದರೊಂದಿಗೆ ಅದರ ಎದೆಯ ಭಾಗವನ್ನು ನೈವೇದ್ಯರೂಪವಾಗಿ ಯೆಹೋವನ ಸನ್ನಿಧಿಯಲ್ಲಿ ನಿವಾಳಿಸುವುದಕ್ಕಾಗಿ ತಂದು ಸಮರ್ಪಿಸಬೇಕು. 31 ಯಾಜಕನು ಆ ಕೊಬ್ಬನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು; ಎದೆಯ ಭಾಗವು ಆರೋನನಿಗೂ ಮತ್ತು ಅವನ ವಂಶದವರಿಗೂ ಸೇರಬೇಕು. 32 ನೀವು ಸಮಾಧಾನಯಜ್ಞದ್ರವ್ಯಗಳಲ್ಲಿ ಬಲತೊಡೆಯನ್ನು ಯಾಜಕನಿಗೋಸ್ಕರ ಪ್ರತ್ಯೇಕಿಸಿ ಕೊಡಬೇಕು. 33 ಆರೋನನ ವಂಶದವರಲ್ಲಿ ಯಾವನು ಆ ಯಜ್ಞಪಶುವಿನ ರಕ್ತವನ್ನು ಮತ್ತು ಕೊಬ್ಬನ್ನು ಸಮರ್ಪಿಸುತ್ತಾನೋ ಅದರ ಬಲತೊಡೆಯು ಅವನ ಭಾಗವಾಗಿರಬೇಕು. 34 ಇಸ್ರಾಯೇಲರು ಸಮಾಧಾನಯಜ್ಞಪಶುವಿನ ಮಾಂಸದಲ್ಲಿ ನೈವೇದ್ಯರೂಪವಾಗಿ ನಿವಾಳಿಸುವ ಎದೆಯ ಭಾಗವನ್ನು ಮತ್ತು ಯಾಜಕನಿಗೋಸ್ಕರ ಪ್ರತ್ಯೇಕಿಸುವ ತೊಡೆಯನ್ನು ನಾನು ತೆಗೆದುಕೊಂಡು ಮಹಾಯಾಜಕನಾದ ಆರೋನನಿಗೂ ಹಾಗು ಅವನ ವಂಶದವರಿಗೂ ಕೊಟ್ಟು ಇವು ಇಸ್ರಾಯೇಲರಿಂದ ಯಾಜಕರಿಗೆ ಯಾವಾಗಲೂ ಸಲ್ಲಬೇಕೆಂದು ಶಾಶ್ವತವಾದ ನಿಯಮವನ್ನು ಮಾಡಿದ್ದೇನೆ’” ಎಂದು ಹೇಳಿದನು. 35 ಯೆಹೋವನಿಗೆ ಹೋಮರೂಪವಾಗಿ ಅರ್ಪಿತವಾದ ದ್ರವ್ಯಗಳಲ್ಲಿ ಇವೇ ಆರೋನನಿಗೂ ಅವನ ವಂಶದವರಿಗೂ ಶಾಶ್ವತವಾಗಿ ಸಲ್ಲತಕ್ಕ ಭಾಗಗಳಾಗಿರುವವು. ಮೋಶೆ ಅವರನ್ನು ಯೆಹೋವನ ಸನ್ನಿಧಿಯಲ್ಲಿ ಯಾಜಕೋದ್ಯೋಗಕ್ಕಾಗಿ ಪ್ರತಿಷ್ಠಿಸಿದ ದಿನದಲ್ಲೇ ಇದು ನೇಮಕವಾಯಿತು. 36 ಇಸ್ರಾಯೇಲರು ಇವುಗಳನ್ನು ಯಾಜಕರಿಗೆ ಸಲ್ಲಿಸಬೇಕೆಂದು ಯೆಹೋವನು ಮೋಶೆಯ ಮುಖಾಂತರ ಕೈಯಿಂದ ಅವರನ್ನು ಪ್ರತಿಷ್ಠಿಸಿ ಅಭಿಷೇಕಿಸಿದ ದಿನದಲ್ಲೇ ನೇಮಿಸಿದನು. 37 ಸರ್ವಾಂಗಹೋಮ, ಧಾನ್ಯನೈವೇದ್ಯ, ದೋಷಪರಿಹಾರಕ ಯಜ್ಞ, ಪ್ರಾಯಶ್ಚಿತ್ತಯಜ್ಞ, ಯಾಜಕ ಪ್ರತಿಷ್ಠೆ ಮತ್ತು ಸಮಾಧಾನಯಜ್ಞ ಎಂಬ ಯಜ್ಞಗಳ ವಿಷಯದಲ್ಲಿ ಮೇಲೆ ಹೇಳಿದ ನಿಯಮಗಳನ್ನು ಅನುಸರಿಸಬೇಕು. 38 ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಗೆ ಈ ಎಲ್ಲಾ ಆಜ್ಞೆಗಳನ್ನು ಕೊಟ್ಟನು. ಮೋಶೆ ಸೀನಾಯಿ ಅರಣ್ಯದಲ್ಲಿ ಇಸ್ರಾಯೇಲರು ಅರ್ಪಿಸಬೇಕಾದ ಯಜ್ಞವನ್ನು ಯೆಹೋವನಿಗೆ ಸಮರ್ಪಿಸಬೇಕೆಂದು ಆಜ್ಞಾಪಿಸಿ ಅವರಿಗೆ ಮೇಲೆ ಕಂಡ ನಿಯಮಗಳನ್ನು ಕೊಟ್ಟನು.