Psalms 6 (IRVK)
undefined ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದ ಮಂದರಸ್ಥಾಯಿಯೊಡನೆ ಹಾಡತಕ್ಕದ್ದು; ದಾವೀದನು ರಚಿಸಿದ ಕೀರ್ತನೆ. 1 ಯೆಹೋವನೇ, ಕೋಪದಿಂದ ನನ್ನನ್ನು ಗದರಿಸಬೇಡ;ರೋಷದಿಂದ ನನ್ನನ್ನು ದಂಡಿಸಬೇಡ. 2 ಯೆಹೋವನೇ, ಕನಿಕರಿಸು; ನಾನು ನಿಶ್ಶಕ್ತನಾಗಿ ಹೋಗಿದ್ದೇನೆ.ಯೆಹೋವನೇ, ವಾಸಿಮಾಡು; ನನ್ನ ಎಲುಬುಗಳೆಲ್ಲಾ ಅದುರುತ್ತವೆ. 3 ನನ್ನ ಪ್ರಾಣವು ಸಹ ಬಹಳವಾಗಿ ತತ್ತರಿಸುತ್ತದೆ.ಯೆಹೋವನೇ, ಎಷ್ಟರ ವರೆಗೆ ನನ್ನನ್ನು ಕೈಬಿಟ್ಟಿರುವಿ? 4 ಯೆಹೋವನೇ, ಹಿಂತಿರುಗು, ನನ್ನನ್ನು ಬಿಡಿಸು;ನಿನ್ನ ಕೃಪೆಯ ನಿಮಿತ್ತ ನನ್ನನ್ನು ರಕ್ಷಿಸು. 5 ಮೃತರಿಗೆ ನಿನ್ನ ಜ್ಞಾಪಕವಿರುವುದಿಲ್ಲವಲ್ಲಾ;ಪಾತಾಳದಲ್ಲಿ ನಿನ್ನನ್ನು ಸ್ತುತಿಸುವವರು ಯಾರು? 6 ನಾನು ನರಳಿ ನರಳಿ ದಣಿದಿದ್ದೇನೆ;ಪ್ರತಿರಾತ್ರಿಯೂ ನನ್ನ ಮಂಚವು ಕಣ್ಣೀರಿನಿಂದ ತೇಲಾಡುತ್ತದೆ.ಹಾಸಿಗೆಯು ಕಣ್ಣೀರಿನಿಂದ ನೆನದುಹೋಗುತ್ತದೆ. 7 ದುಃಖದಿಂದ ನನ್ನ ಕಣ್ಣು ಬತ್ತಿ ಹೋಯಿತು;ವಿರೋಧಿಗಳ ಬಾಧೆಯ ದೆಸೆಯಿಂದಲೇ ಅವು ಮೊಬ್ಬಾಯಿತು. 8 ಧರ್ಮವನ್ನು ಮೀರಿ ನಡೆಯುವವರೇ,ನೀವೆಲ್ಲರೂ ನನ್ನಿಂದ ತೊಲಗಿಹೋಗಿರಿ;ಯೆಹೋವನು ನನ್ನ ಗೋಳಾಟಕ್ಕೆ ಕಿವಿಗೊಟ್ಟಿದ್ದಾನೆ. 9 ಆತನು ನನ್ನ ವಿಜ್ಞಾಪನೆಯನ್ನು ಕೇಳಿದ್ದಾನಲ್ಲಾ;ನನ್ನ ಪ್ರಾರ್ಥನೆಯನ್ನು ಅಂಗೀಕರಿಸುವನು. 10 ನನ್ನ ವಿರೋಧಿಗಳೆಲ್ಲರು ನಾಚಿಕೆಯಿಂದ ಕಳವಳಗೊಳ್ಳುವರು;ಅವರು ಪಕ್ಕನೆ ಲಜ್ಜೆಗೊಂಡು ಹಿಂದಿರುಗುವರು.