2 Chronicles 30 (BOKCV2)
1 ಆಗ ಅವರು ಇಸ್ರಾಯೇಲಿನ ದೇವರಾದ ಯೆಹೋವ ದೇವರ ಪಸ್ಕವನ್ನು ಆಚರಿಸಲು ಯೆರೂಸಲೇಮಿನಲ್ಲಿ ಯೆಹೋವ ದೇವರ ಆಲಯಕ್ಕೆ ಬರುವಂತೆ ಹಿಜ್ಕೀಯನು ಸಮಸ್ತ ಇಸ್ರಾಯೇಲಿಗೂ ಯೆಹೂದಕ್ಕೂ ಹೇಳಿ ಕಳುಹಿಸಿ ಎಫ್ರಾಯೀಮ್ಯರಿಗೂ ಮನಸ್ಸೆಯವರಿಗೂ ಪತ್ರಗಳನ್ನು ಬರೆದನು. 2 ಯೆರೂಸಲೇಮಿನಲ್ಲಿರುವ ಅರಸನೂ ಅವನ ಪ್ರಧಾನರೂ ಸಮಸ್ತ ಸಭೆಯೂ ಎರಡನೆಯ ತಿಂಗಳಲ್ಲಿ ಪಸ್ಕವನ್ನು ಆಚರಿಸಲು ತೀರ್ಮಾನಿಸಿಕೊಂಡರು. 3 ಯಾಜಕರು ತಮ್ಮನ್ನು ತಕ್ಕ ಹಾಗೆ ಪ್ರತಿಷ್ಠೆ ಮಾಡಿಕೊಂಡಿರಲಿಲ್ಲ. ಜನರು ಯೆರೂಸಲೇಮಿನಲ್ಲಿ ಇನ್ನೂ ಕೂಡಿರಲಿಲ್ಲವಾದುದರಿಂದ ಆ ಕಾಲದಲ್ಲಿ ಪಸ್ಕಹಬ್ಬವನ್ನು ಆಚರಿಸಲಾರದೆ ಇದ್ದರು. 4 ಈ ಕಾರ್ಯವು ಅರಸನಿಗೂ ಸಮಸ್ತ ಜನರಿಗೂ ಸ್ಪಷ್ಟವಾಯಿತು. 5 ಆದ್ದರಿಂದ ಅವರು ಯೆರೂಸಲೇಮಿನಲ್ಲಿ ಇಸ್ರಾಯೇಲಿನ ದೇವರಾದ ಯೆಹೋವ ದೇವರಿಗೆ ಪಸ್ಕವನ್ನು ಆಚರಿಸಲು ಬರಬೇಕೆಂದು ಬೇರ್ಷೆಬ ಮೊದಲುಗೊಂಡು ದಾನಿನವರೆಗೂ ಸಮಸ್ತ ಇಸ್ರಾಯೇಲಿನಲ್ಲಿ ಕೂಗಿ ಸಾರಲು ನಿರ್ಣಯಿಸಿದರು. ಯೆಹೋವ ದೇವರ ನಿಯಮದ ಪ್ರಕಾರ ಅವರು ಬಹುಕಾಲದಿಂದ ಪಸ್ಕವನ್ನು ಆಚರಿಸಿರಲಿಲ್ಲ. 6 ಅದೇ ಪ್ರಕಾರ ಓಟಗಾರರು ಅರಸನ ಕೈಯಿಂದಲೂ ಅವನ ಪ್ರಧಾನರ ಕೈಯಿಂದಲೂ ಪತ್ರಗಳನ್ನು ತೆಗೆದುಕೊಂಡು, ಅರಸನ ಅಪ್ಪಣೆಯ ಪ್ರಕಾರ ಸಮಸ್ತ ಇಸ್ರಾಯೇಲ್ ಮತ್ತು ಯೆಹೂದ ದೇಶಗಳಿಗೆ ಹೋಗಿ,“ಇಸ್ರಾಯೇಲರೇ, ಅಬ್ರಹಾಮನ, ಇಸಾಕನ, ಇಸ್ರಾಯೇಲಿನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿರಿ. ಆಗ ಅವರು ಅಸ್ಸೀರಿಯದ ಅರಸರ ಕೈಗೆ ತಪ್ಪಿಸಿಕೊಂಡ ನಿಮ್ಮ ಉಳಿದವರ ಕಡೆಗೆ ತಿರುಗುವರು. 7 ನಿಮ್ಮ ತಂದೆಗಳೂ ಸಹೋದರರೂ ನಡೆದಂತೆ ನೀವೂ ನಡೆಯಬೇಡಿರಿ. ಅವರು ತಮ್ಮ ಪಿತೃಗಳ ದೇವರಾದ ಯೆಹೋವ ದೇವರಿಗೆ ವಿರೋಧವಾಗಿ ದ್ರೋಹಿಗಳಾದದರಿಂದ ಆತನು ಅವರನ್ನು ನಾಶನಕ್ಕೆ ಒಪ್ಪಿಸಿದನು. ಅದಕ್ಕೆ ನೀವೇ ಸಾಕ್ಷಿಗಳು. 8 ಆದ್ದರಿಂದ ನಿಮ್ಮ ಪಿತೃಗಳ ಹಾಗೆ ನಿಮ್ಮನ್ನು ಕಠಿಣಪಡಿಸಿಕೊಳ್ಳಬೇಡಿರಿ. ಯೆಹೋವ ದೇವರಿಗೆ ಅಧೀನರಾಗಿ ಅವರು ಯುಗಯುಗಕ್ಕೂ ಪ್ರತಿಷ್ಠೆ ಮಾಡಿದ ಪರಿಶುದ್ಧ ಸ್ಥಾನದಲ್ಲಿ ಪ್ರವೇಶಿಸಿದ ನಿಮ್ಮ ದೇವರಾದ ಯೆಹೋವ ದೇವರನ್ನು ಸೇವಿಸಿರಿ. ಆಗ ದೇವರು ತಮ್ಮ ಕೋಪವನ್ನು ಬಿಟ್ಟು ನಿಮ್ಮ ಕಡೆಗೆ ತಿರುಗುವರು. 9 ನೀವು ಯೆಹೋವ ದೇವರ ಕಡೆಗೆ ತಿರುಗಿ ಈ ದೇಶಕ್ಕೆ ಬರುವಂತೆ ತಮ್ಮನ್ನು ಸೆರೆಯಾಗಿ ಒಯ್ದವರ ಸಮ್ಮುಖದಲ್ಲಿ ಅನುಕಂಪವನ್ನು ಹೊಂದುವರು. ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ಕೃಪೆಯೂ ಅನುಕಂಪವೂ ಉಳ್ಳವರಾಗಿದ್ದಾರೆ. ನೀವು ಅವರ ಕಡೆಗೆ ತಿರುಗಿದರೆ, ಅವರು ನಿಮ್ಮ ಕಡೆಯಿಂದ ತಮ್ಮ ಮುಖವನ್ನು ತಿರುಗಿಸುವುದಿಲ್ಲ,” ಎಂದು ಹೇಳಿದರು. 10 ಹೀಗೆಯೇ ಓಟಗಾರರು ಎಫ್ರಾಯೀಮನ, ಮನಸ್ಸೆಯ ದೇಶದಲ್ಲಿ ಜೆಬುಲೂನ್ ಪರ್ಯಂತರ ಸಂಚರಿಸಿ, ಪಟ್ಟಣ ಪಟ್ಟಣವನ್ನು ಹಾದುಹೋದರು. ಆದರೆ ಜನರು ಇವರನ್ನು ನೋಡಿ ನಕ್ಕು ಗೇಲಿ ಮಾಡಿದರು. 11 ಆದರೂ ಆಶೇರ್, ಮನಸ್ಸೆ, ಜೆಬುಲೂನ್, ಇವರಲ್ಲಿ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು. 12 ಇದಲ್ಲದೆ ಯೆಹೋವ ದೇವರ ವಾಕ್ಯದಿಂದ ಉಂಟಾದ ಅರಸನ ಪ್ರಧಾನರ ಆಜ್ಞೆಯನ್ನು ಕೈಗೊಳ್ಳಲು ಅವರಿಗೆ ಒಂದೇ ಹೃದಯವನ್ನು ಕೊಡಲು ದೇವರ ಕೈ ಯೆಹೂದದವರ ಮೇಲೆ ಇತ್ತು. 13 ಎರಡನೆಯ ತಿಂಗಳಲ್ಲಿ ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಆಚರಿಸುವುದಕ್ಕೆ ಯೆರೂಸಲೇಮಿನಲ್ಲಿ ಬಹಳ ಜನರು ಕೂಡಿಕೊಂಡು ಮಹಾ ದೊಡ್ಡ ಸಮೂಹವಾಯಿತು. 14 ಆಗ ಅವರು ಎದ್ದು ಯೆರೂಸಲೇಮಿನಲ್ಲಿದ್ದ ಬಲಿಪೀಠಗಳನ್ನು ಮತ್ತು ಧೂಪಪೀಠಗಳನ್ನು ತೆಗೆದುಹಾಕಿದರು. ಆ ಧೂಪಪೀಠಗಳನ್ನೆಲ್ಲಾ ತೆಗೆದುಕೊಂಡುಹೋಗಿ ಕಿದ್ರೋನ್ ಹಳ್ಳದಲ್ಲಿ ಹಾಕಿದರು. 15 ಎರಡನೆಯ ತಿಂಗಳ ಹದಿನಾಲ್ಕನೆಯ ದಿವಸದಲ್ಲಿ ಪಸ್ಕದ ಕುರಿಮರಿಯನ್ನು ವಧಿಸಿದರು. ಯಾಜಕರೂ, ಲೇವಿಯರೂ ನಾಚಿಕೆಪಟ್ಟು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡು, ಯೆಹೋವ ದೇವರ ಆಲಯದೊಳಗೆ ದಹನಬಲಿಗಳನ್ನು ತಂದರು. 16 ಇದಲ್ಲದೆ ಅವರು ದೇವರ ಮನುಷ್ಯನಾದ ಮೋಶೆಯ ನಿಯಮದ ಹಾಗೆ ತಮ್ಮ ಪದ್ಧತಿಯ ಪ್ರಕಾರ ತಮ್ಮ ತಮ್ಮ ಸ್ಥಳದಲ್ಲಿ ನಿಂತು, ಯಾಜಕರು, ಲೇವಿಯರ ಕೈಯಿಂದ ರಕ್ತವನ್ನು ತೆಗೆದುಕೊಂಡು ಚಿಮುಕಿಸಿದರು. 17 ಜನರಲ್ಲಿ ಅನೇಕರು ಅಪರಿಶುದ್ಧರಾಗಿದ್ದರು. ಆದ್ದರಿಂದ ಲೇವಿಯರು ಅಶುದ್ಧರಾದ ಎಲ್ಲರ ನಿಮಿತ್ತ ಅವರನ್ನು ಯೆಹೋವ ದೇವರಿಗೆ ಪ್ರತಿಷ್ಠೆ ಮಾಡುವ ಹಾಗೆ ಪಸ್ಕದ ಬಲಿಗಳನ್ನು ವಧಿಸುವುದಕ್ಕೆ ಇದ್ದರು. 18 ಎಫ್ರಾಯೀಮ್, ಮನಸ್ಸೆ, ಇಸ್ಸಾಕಾರ್, ಜೆಬುಲೂನ್ ಇವರಲ್ಲಿ ಅನೇಕರು ತಮ್ಮನ್ನು ಶುದ್ಧಮಾಡಿಕೊಳ್ಳದೆ ಮೋಶೆಯ ನಿಯಮಕ್ಕೆ ವಿರುದ್ಧ ರೀತಿಯಿಂದ ಪಸ್ಕದ ಭೋಜನವನ್ನು ಮಾಡಿದರು. ಆದರೆ ಹಿಜ್ಕೀಯನು ಅವರಿಗೋಸ್ಕರ ಪ್ರಾರ್ಥಿಸಿ, “ಯಾವನಾದರೂ ಪರಿಶುದ್ಧ ಸ್ಥಾನದ ಶುದ್ಧಿಯ ಪ್ರಕಾರ ಶುಚಿಯಾಗದೆ ಇದ್ದರೂ, 19 ಯೆಹೋವ ದೇವರೇ, ತಮ್ಮ ಪಿತೃಗಳ ದೇವರಾದ ನಿಮ್ಮನ್ನು ಹುಡುಕಬೇಕೆಂದು ಮನಸ್ಸು ಮಾಡುವವರಿಗೆಲ್ಲ ಕ್ಷಮೆಯನ್ನು ಅನುಗ್ರಹಿಸಿರಿ,” ಎಂದು ವಿಜ್ಞಾಪನೆ ಮಾಡಿದನು. 20 ಯೆಹೋವ ದೇವರು ಹಿಜ್ಕೀಯನ ಮಾತನ್ನು ಕೇಳಿ, ಜನರನ್ನು ಸ್ವಸ್ಥಮಾಡಿದರು. 21 ಆದ್ದರಿಂದ ಯೆರೂಸಲೇಮಿನಲ್ಲಿದ್ದ ಇಸ್ರಾಯೇಲರು ಹುಳಿಯಿಲ್ಲದ ರೊಟ್ಟಿಗಳ ಹಬ್ಬವನ್ನು ಏಳು ದಿವಸ ಸಂತೋಷದಿಂದ ಆಚರಿಸಿದರು. ಲೇವಿಯರೂ ಯಾಜಕರೂ ಯೆಹೋವ ದೇವರಿಗೆ ಸಮರ್ಪಿತವಾದ ಮಹಾ ಶಬ್ದದ ವಾದ್ಯಗಳಿಂದ ಯೆಹೋವ ದೇವರಿಗೆ ಹಾಡಿ ಪ್ರತಿದಿನವೂ ಯೆಹೋವ ದೇವರನ್ನು ಸ್ತುತಿಸಿದರು. 22 ಹಿಜ್ಕೀಯನು ಯೆಹೋವ ದೇವರ ಕಾರ್ಯಗಳಲ್ಲಿ ಒಳ್ಳೆಯ ತಿಳುವಳಿಕೆಯನ್ನು ಹೊಂದಿದ್ದ ಸಮಸ್ತ ಲೇವಿಯರೊಡನೆ ಉತ್ತೇಜನದ ಮಾತುಗಳಿಂದ ಮಾತನಾಡಿದನು. ಅವರು ಹಬ್ಬವನ್ನು ಏಳು ದಿನಗಳವರೆಗೂ ಸಮಾಧಾನದ ಬಲಿಗಳನ್ನು ಅರ್ಪಿಸುತ್ತಾ, ತಮ್ಮ ಪಿತೃಗಳ ದೇವರಾದ ಯೆಹೋವ ದೇವರನ್ನು ಸ್ತುತಿಸುತ್ತಾ, ಔತಣಮಾಡಿ ಆಚರಿಸಿದರು. 23 ಅಲ್ಲದೆ ಕೂಟವೆಲ್ಲಾ ಇನ್ನೂ ಏಳು ದಿವಸಗಳ ಕಾಲ ಹಬ್ಬವನ್ನು ಆಚರಿಸಬೇಕೆಂದು ತಿರ್ಮಾನಿಸಿ ಇನ್ನೂ ಏಳು ದಿನಗಳ ಕಾಲ ಬಹಳ ಸಂತೋಷದಿಂದ ಹಬ್ಬವನ್ನು ಆಚರಿಸಿದರು. 24 ಯೆಹೂದದ ಅರಸನಾದ ಹಿಜ್ಕೀಯನು ಸಭೆಗೆ 1,000 ಹೋರಿಗಳನ್ನೂ 7,000 ಕುರಿಗಳನ್ನೂ ಕೊಟ್ಟನು. ಇದಲ್ಲದೆ ಪ್ರಧಾನರು ಕೂಟಕ್ಕೆ 1,000 ಹೋರಿಗಳನ್ನೂ 10,000 ಕುರಿಗಳನ್ನೂ ಕೊಟ್ಟರು. ಯಾಜಕರಲ್ಲಿ ಅನೇಕರು ತಮ್ಮನ್ನು ಪ್ರತಿಷ್ಠೆ ಮಾಡಿಕೊಂಡರು. 25 ಯೆಹೂದದ ಸಮೂಹದವರೆಲ್ಲರೂ ಯಾಜಕರೂ, ಲೇವಿಯರೂ, ಇಸ್ರಾಯೇಲಿನಿಂದ ಬಂದ ಸಮಸ್ತ ಜನರೂ, ಇಸ್ರಾಯೇಲಿನ ದೇಶದಿಂದ ಬಂದ ಪರದೇಶಿಗಳೂ, ಯೆಹೂದದಲ್ಲಿ ವಾಸವಾಗಿರುವವರೂ ಸಂತೋಷಪಟ್ಟರು. 26 ಹೀಗೆಯೇ ಯೆರೂಸಲೇಮಿನಲ್ಲಿ ಮಹಾ ಸಂತೋಷ ಉಂಟಾಗಿತ್ತು. ಇಸ್ರಾಯೇಲಿನ ಅರಸನಾದ ದಾವೀದನ ಮಗ ಸೊಲೊಮೋನನ ಕಾಲದಿಂದ ಯೆರೂಸಲೇಮಿನಲ್ಲಿ ಅಂಥಾ ಆಚರಣೆಯು ನಡೆದಿರಲಿಲ್ಲ. 27 ಆಗ ಯಾಜಕರೂ ಲೇವಿಯರೂ ಎದ್ದು ಜನರನ್ನು ಆಶೀರ್ವದಿಸಿದರು. ದೇವರು ಅವರ ಪ್ರಾರ್ಥನೆಯನ್ನು ಕೇಳಿದರು. ಅವರ ಪ್ರಾರ್ಥನೆಯು ದೇವರ ಪರಿಶುದ್ಧ ನಿವಾಸ ಸ್ಥಾನವಾದ ಪರಲೋಕಕ್ಕೆ ತಲುಪಿತು.
In Other Versions
2 Chronicles 30 in the ANTPNG2D
2 Chronicles 30 in the BNTABOOT
2 Chronicles 30 in the BOATCB2
2 Chronicles 30 in the BOGWICC
2 Chronicles 30 in the BOHNTLTAL
2 Chronicles 30 in the BOILNTAP
2 Chronicles 30 in the BOKHWOG
2 Chronicles 30 in the KBT1ETNIK
2 Chronicles 30 in the TBIAOTANT