2 Kings 3 (BOKCV2)
1 ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೆಂಟನೆಯ ವರ್ಷದಲ್ಲಿ, ಅಹಾಬನ ಮಗ ಯೋರಾಮನು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ, ಹನ್ನೆರಡು ವರ್ಷ ಆಳಿದನು. 2 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ತನ್ನ ತಂದೆಯಂತೆ, ತನ್ನ ತಾಯಿಯಂತೆ ಮಾಡಲಿಲ್ಲ. ತನ್ನ ತಂದೆಯು ಮಾಡಿಟ್ಟ ಬಾಳನ ಸ್ತಂಭವನ್ನು ತೆಗೆದುಹಾಕಿದನು. 3 ಆದರೂ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳಿಗೆ ಅವನು ಅಂಟಿಕೊಂಡು ಅವುಗಳನ್ನು ಬಿಟ್ಟು ತೊಲಗದೆ ಇದ್ದನು. 4 ಮೋವಾಬಿನ ಅರಸನಾದ ಮೇಷನು ಕುರಿ ಮಂದೆಯುಳ್ಳವನಾಗಿದ್ದು ಇಸ್ರಾಯೇಲಿನ ಅರಸನಿಗೆ ಒಂದು ಲಕ್ಷ ಕುರಿಮರಿಗಳನ್ನೂ, ಒಂದು ಲಕ್ಷ ಟಗರುಗಳ ಉಣ್ಣೆಯನ್ನೂ ಕಪ್ಪವಾಗಿ ಕೊಡುತ್ತಿದ್ದನು. 5 ಅಹಾಬನು ಮರಣ ಹೊಂದಿದ ತರುವಾಯ, ಮೋವಾಬಿನ ಅರಸನು ಇಸ್ರಾಯೇಲಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು. 6 ಆ ದಿವಸದಲ್ಲಿ ಅರಸನಾದ ಯೋರಾಮನು ಸಮಾರ್ಯದಿಂದ ಹೊರಟುಹೋಗಿ ಇಸ್ರಾಯೇಲರನ್ನು ಕೂಡಿಸಿದನು. 7 ಇದಲ್ಲದೆ ಅವನು ಹೋಗಿ, “ಮೋವಾಬಿನ ಅರಸನು ನನಗೆ ವಿರೋಧವಾಗಿ ತಿರುಗಿಬಿದ್ದನು. ನೀನು ನನ್ನ ಸಂಗಡ ಮೋವಾಬಿನ ಮೇಲೆ ಯುದ್ಧಮಾಡಲು ಬರುವೆಯೋ?” ಎಂದು ಯೆಹೂದದ ಅರಸನಾದ ಯೆಹೋಷಾಫಾಟನಿಗೆ ಹೇಳಿ ಕಳುಹಿಸಿದನು.ಅದಕ್ಕವನು, “ನಾನು ಬರುವೆನು, ನಾನು ನಿನ್ನವನೇ, ನನ್ನ ಜನರು ನಿನ್ನ ಜನರೇ, ಹಾಗೆಯೇ ನನ್ನ ಕುದುರೆಗಳು ನಿನ್ನ ಕುದುರೆಗಳೇ,” ಎಂದನು. 8 ಯೋರಾಮನು, “ಯಾವ ಮಾರ್ಗವಾಗಿ ಹೋಗೋಣ?” ಎಂದು ಇವನು ಕೇಳಿದನು.ಯೆಹೋಷಾಫಾಟನು, “ಎದೋಮಿನ ಮರುಭೂಮಿಯ ಮಾರ್ಗವಾಗಿ,” ಎಂದನು. 9 ಹೀಗೆ ಇಸ್ರಾಯೇಲಿನ ಅರಸನು ಮತ್ತು ಯೆಹೂದದ ಅರಸನು, ಎದೋಮಿನ ಅರಸನೊಂದಿಗೆ ಹೊರಟು, ಸುತ್ತಾದ ಮಾರ್ಗದಲ್ಲಿ ಏಳು ದಿವಸ ನಡೆದರು. ಆದರೆ ಸೈನ್ಯಕ್ಕೂ, ಅವರು ತಂದಿದ್ದ ಪಶುಗಳಿಗೂ ನೀರು ಇಲ್ಲದೆ ಹೋಯಿತು. 10 ಆಗ ಇಸ್ರಾಯೇಲಿನ ಅರಸನು, “ಅಯ್ಯೋ, ಯೆಹೋವ ದೇವರು ಈ ಮೂರು ಮಂದಿ ಅರಸರನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿಕೊಡಲು ಕರೆದಿದ್ದಾರಲ್ಲಾ?” ಎಂದನು. 11 ಆದರೆ ಯೆಹೋಷಾಫಾಟನು ಪ್ರವಾದಿಯ ಮೂಲಕವಾಗಿ ಯೆಹೋವ ದೇವರನ್ನು ಕೇಳುವ ಹಾಗೆ, “ಇಲ್ಲಿ ಯೆಹೋವ ದೇವರ ಪ್ರವಾದಿಯು ಯಾವನೂ ಇಲ್ಲವೋ?” ಎಂದನು.ಆಗ ಇಸ್ರಾಯೇಲಿನ ಅರಸನ ಸೇವಕರಲ್ಲಿ ಒಬ್ಬನು ಉತ್ತರವಾಗಿ, “ಎಲೀಯನ ಕೈಗಳ ಮೇಲೆ ನೀರು ಹೊಯ್ಯುತ್ತಿದ್ದ ಶಾಫಾಟನ ಮಗ ಎಲೀಷನು ಇಲ್ಲಿದ್ದಾನೆ,” ಎಂದು ಹೇಳಿದನು. 12 ಆಗ ಯೆಹೋಷಾಫಾಟನು, “ಅವನ ಬಳಿಯಲ್ಲಿ ಯೆಹೋವ ದೇವರ ವಾಕ್ಯ ಇದೆ,” ಎಂದನು. ಇಸ್ರಾಯೇಲಿನ ಅರಸನೂ, ಯೆಹೋಷಾಫಾಟನೂ, ಎದೋಮಿನ ಅರಸನೂ ಅವನ ಬಳಿಗೆ ಇಳಿದು ಹೋದರು. 13 ಎಲೀಷನು ಇಸ್ರಾಯೇಲಿನ ಅರಸನಿಗೆ, “ನಿನ್ನೊಂದಿಗೆ ನಾನೇನು ಮಾಡಬೇಕು? ನೀನು ನಿನ್ನ ತಂದೆಯ ಪ್ರವಾದಿಗಳ ಬಳಿಗೂ, ನಿನ್ನ ತಾಯಿಯ ಪ್ರವಾದಿಗಳ ಬಳಿಗೂ ಹೋಗು,” ಎಂದನು.ಇಸ್ರಾಯೇಲಿನ ಅರಸನು ಅವನಿಗೆ, “ಇಲ್ಲ, ಯೆಹೋವ ದೇವರು ಈ ಮೂರು ಮಂದಿ ಅರಸರನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿಕೊಡುವುದಕ್ಕೆ ಒಟ್ಟಾಗಿ ಕರೆದಿದ್ದಾರಲ್ಲಾ,” ಎಂದನು. 14 ಎಲೀಷನು, “ನಾನು ಸನ್ನಿಧಿಸೇವೆ ಮಾಡುತ್ತಿರುವ ಸೇನಾಧೀಶ್ವರ ಯೆಹೋವ ದೇವರ ಆಣೆ, ನಿಶ್ಚಯವಾಗಿ ಯೆಹೂದದ ಅರಸನಾದ ಯೆಹೋಷಾಫಾಟನು ನಿನ್ನ ಜೊತೆಯಲ್ಲಿ ಬಂದಿರುವುದರಿಂದ ಗೌರವಿಸುತ್ತಿದ್ದೇನೆ; ಇಲ್ಲದಿದ್ದರೆ, ನಾನು ನಿನ್ನ ಕಡೆ ಸಹ ನೋಡುತ್ತಿರಲಿಲ್ಲ. 15 ಆದರೆ ಈಗ ವಾದ್ಯಗಾರನನ್ನು ನನ್ನ ಬಳಿಗೆ ಕರೆದುಕೊಂಡು ಬಾ,” ಎಂದನು.ಆ ವಾದ್ಯ ಬಾರಿಸುವವನು ಬಾರಿಸಿದಾಗ, ಯೆಹೋವ ದೇವರ ಕೈ ಎಲೀಷನ ಮೇಲೆ ಬಂತು. 16 ಆಗ ಅವನು, “ಈ ತಗ್ಗನ್ನು ಹಳ್ಳಕೊಳ್ಳಗಳಾಗಿ ಮಾಡಿರೆಂದು ಯೆಹೋವ ದೇವರು ಹೇಳುತ್ತಾರೆ. 17 ಏಕೆಂದರೆ ಯೆಹೋವ ದೇವರು, ‘ನೀವು ಗಾಳಿಯನ್ನೂ, ಮಳೆಯನ್ನೂ ಕಾಣುವುದಿಲ್ಲ. ಆದರೆ ನೀವು ನಿಮ್ಮ ದನಗಳೂ, ನಿಮ್ಮ ಪಶುಗಳೂ ಕುಡಿಯುವ ಹಾಗೆ ಈ ತಗ್ಗು ನೀರಿನಿಂದ ತುಂಬುವುದು.’ 18 ಇದಲ್ಲದೆ ಇದು ಯೆಹೋವ ದೇವರ ದೃಷ್ಟಿಗೆ ಅಲ್ಪವಾಗಿರುವುದು. ಅವರು ಮೋವಾಬ್ಯರನ್ನು ನಿಮ್ಮ ಕೈಯಲ್ಲಿ ಒಪ್ಪಿಸಿಕೊಡುವರು. 19 ನೀವು ಕೋಟೆಯುಳ್ಳ ಎಲ್ಲಾ ಪಟ್ಟಣಗಳನ್ನೂ ನಾಶಮಾಡಿಬಿಟ್ಟು, ಉತ್ತಮವಾದ ಎಲ್ಲಾ ಮರಗಳನ್ನೂ ಬೀಳಮಾಡಿ, ನೀರು ಬಾವಿಗಳನ್ನೆಲ್ಲಾ ಮುಚ್ಚಿ, ಉತ್ತಮವಾದ ಭೂಮಿಯಲ್ಲಿರುವ ಹೊಲಗಳನ್ನೆಲ್ಲಾ ಕಲ್ಲುಗಳಿಂದ ಕೆಡಿಸುವಿರಿ,” ಎಂದನು. 20 ಉದಯದಲ್ಲಿ ಕಾಣಿಕೆಗಳನ್ನು ಅರ್ಪಿಸುತ್ತಿರುವಾಗ, ನೀರು ಎದೋಮಿನ ಮಾರ್ಗವಾಗಿ ಬಂದದ್ದರಿಂದ ದೇಶವು ನೀರಿನಿಂದ ತುಂಬಿಕೊಂಡಿತು. 21 ಅರಸರು ತಮ್ಮ ಸಂಗಡ ಯುದ್ಧಮಾಡುವುದಕ್ಕೆ ಬಂದಿದ್ದಾರೆಂದು ಮೋವಾಬ್ಯರು ಕೇಳಿದಾಗ, ಅವರು ಆಯುಧ ಧರಿಸತಕ್ಕ ಪ್ರಾಯಸ್ಥರು ಮೊದಲುಗೊಂಡು, ಸಮಸ್ತರನ್ನು ಕೂಡಿಸಿಕೊಂಡು ಮೇರೆಯಲ್ಲಿ ನಿಂತರು. 22 ಮೋವಾಬ್ಯರು ಉದಯಕಾಲದಲ್ಲಿ ಎದ್ದು, ಆ ನೀರಿನ ಮೇಲೆ ಸೂರ್ಯ ಪ್ರಕಾಶ ಮೂಡಿದ್ದರಿಂದ ಆಚೆಯಲ್ಲಿರುವ ಆ ನೀರು ರಕ್ತದ ಹಾಗೆ ಕೆಂಪಾಗಿರುವುದನ್ನು ಕಂಡರು. 23 ಆಗ ಅವರು, “ಇದು ರಕ್ತವೇ. ಆ ಅರಸರು ತಮ್ಮನ್ನು ತಾವೇ ನಿಜವಾಗಿ ನಾಶಮಾಡಿ ಒಬ್ಬರನ್ನೊಬ್ಬರು ಕೊಂದಿದ್ದಾರೆ. ಈಗ ಮೋವಾಬ್ಯರೇ ಕೊಳ್ಳೆಗೆ ಬನ್ನಿರಿ,” ಎಂದು ಹೇಳಿಕೊಂಡರು. 24 ಅವರು ಇಸ್ರಾಯೇಲಿನ ದಂಡಿಗೆ ಬಂದಾಗ, ಇಸ್ರಾಯೇಲರು ಎದ್ದು ಮೋವಾಬ್ಯರು ತಮ್ಮ ಮುಂದೆ ಓಡಿಹೋಗುವ ಹಾಗೆ ಅವರನ್ನು ಸೋಲಿಸಿ, ಮೋವಾಬ್ಯರನ್ನು ಅವರ ದೇಶದವರೆಗೂ ಹೊಡೆಯುತ್ತಾ ಬಂದರು. 25 ಇದಲ್ಲದೆ ಅವರು ಪಟ್ಟಣಗಳನ್ನು ಕೆಡವಿಹಾಕಿ, ಹೊಲಗಳ ಮೇಲೆ ಕಲ್ಲನ್ನು ಹಾಕಿ ತುಂಬಿಸಿ, ಬಾವಿಗಳನ್ನೆಲ್ಲಾ ಮುಚ್ಚಿ, ಸಮಸ್ತ ಉತ್ತಮವಾದ ಮರಗಳನ್ನು ಕಡಿದುಹಾಕಿದರು. ಕೀರ್ ಹರೆಷೆತ್ ನಲ್ಲಿ ಮಾತ್ರ ಅದರ ಕಲ್ಲುಗಳನ್ನು ಉಳಿಸಿಬಿಟ್ಟರು. ಆದರೆ ಕಲ್ಲೆಸೆಯುವವರು ಅದನ್ನು ಸುತ್ತಿಕೊಂಡು ಹೊಡೆದುಬಿಟ್ಟರು. 26 ಮೋವಾಬಿನ ಅರಸನು ಯುದ್ಧವು ತನಗೆ ಅತಿ ಕಷ್ಟವಾಯಿತೆಂದು ಕಂಡಾಗ, ಎದೋಮಿನ ಅರಸನ ಮೇಲೆ ಹೋಗಿ ಬೀಳುವ ನಿಮಿತ್ತ, ಖಡ್ಗ ಹಿಡಿಯುವ ಏಳು ನೂರು ಮಂದಿಯನ್ನು ತನ್ನ ಸಂಗಡ ತೆಗೆದುಕೊಂಡನು. ಆದರೆ ಅದು ಅವರಿಂದ ಆಗದೆ ಹೋಯಿತು. 27 ಆಗ ಮೋವಾಬಿನ ಅರಸನು ತನಗೆ ಬದಲಾಗಿ ಆಳುವುದಕ್ಕಿರುವ ತನ್ನ ಹಿರಿಯ ಮಗನನ್ನು ತೆಗೆದುಕೊಂಡು, ಅವನನ್ನು ಗೋಡೆಯ ಮೇಲೆ ದಹನಬಲಿಯಾಗಿ ಅರ್ಪಿಸಿದನು. ಮೋವಾಬ್ಯರು ಇಸ್ರಾಯೇಲರಿಗೆ ವಿರೋಧವಾಗಿ ರೋಷವುಳ್ಳವರಾಗಿ ಅವರನ್ನು ಬಿಟ್ಟು, ತಮ್ಮ ದೇಶಕ್ಕೆ ಹಿಂದಿರುಗಿ ಹೋದರು.