Deuteronomy 28 (BOKCV2)
1 ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಅನುಸರಿಸಿ ನಡೆದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಭೂಲೋಕದ ಎಲ್ಲಾ ಜನಾಂಗಗಳಿಗಿಂತ ಉನ್ನತ ಸ್ಥಿತಿಯಲ್ಲಿರಿಸುವರು. 2 ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಕೇಳಿ ಪಾಲಿಸಿದರೆ, ಈ ಎಲ್ಲಾ ಆಶೀರ್ವಾದಗಳು ನಿಮ್ಮ ಮೇಲೆ ಬಂದು, ನಿಮ್ಮೊಂದಿಗಿರುವವು: 3 ಪಟ್ಟಣದಲ್ಲಿ ನಿಮಗೆ ಆಶೀರ್ವಾದ, ಹೊಲದಲ್ಲಿ ನಿಮಗೆ ಆಶೀರ್ವಾದ, 4 ನಿಮ್ಮ ಸಂತಾನಕ್ಕೂ ನಿಮ್ಮ ಭೂಮಿಯ ಫಲಕ್ಕೂ ಪಶುಗಳ ಫಲಕ್ಕೂ ಪಶುಗಳ ಹಿಂಡಿಗೂ ಕುರಿಗಳ ಮಂದೆಗಳಿಗೂ ಆಶೀರ್ವಾದ. 5 ನಿಮ್ಮ ಬುಟ್ಟಿಗಳಿಗೂ, ಹಿಟ್ಟನ್ನು ನಾದುವ ಪಾತ್ರೆಗೂ ಆಶೀರ್ವಾದ. 6 ನೀವು ಕೆಲಸಕ್ಕೆ ಹೊರಡುವಾಗಲೂ ನಿಮಗೆ ಆಶೀರ್ವಾದ, ಬರುವಾಗಲೂ ನಿಮಗೆ ಆಶೀರ್ವಾದ. 7 ನಿಮಗೆ ವಿರೋಧವಾಗಿ ಏಳುವ ನಿಮ್ಮ ಶತ್ರುಗಳನ್ನು ಯೆಹೋವ ದೇವರು ನಿಮ್ಮ ಮುಂದೆಯೇ ಸೋಲಿಸಿಬಿಡುವರು. ಅವರು ಒಂದೇ ಮಾರ್ಗದಲ್ಲಿ ನಿಮಗೆ ವಿರೋಧವಾಗಿ ಹೊರಟು ಬಂದರೂ, ಏಳು ಮಾರ್ಗಗಳಿಂದ ಓಡಿಹೋಗುವರು. 8 ನಿಮ್ಮ ಕಣಜಗಳಲ್ಲಿಯೂ, ನೀವು ಕೈಹಾಕುವ ಎಲ್ಲಾದರಲ್ಲಿಯೂ ನಿಮಗೆ ಆಶೀರ್ವಾದ ಬರುವಂತೆ ಯೆಹೋವ ದೇವರು ಅಪ್ಪಣೆ ಕೊಡುವರು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶದಲ್ಲಿ ನಿಮ್ಮನ್ನು ಆಶೀರ್ವದಿಸುವರು. 9 ನೀವು ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಪಾಲಿಸಿ, ಅವರ ಮಾರ್ಗಗಳಲ್ಲಿ ನಡೆದರೆ, ಯೆಹೋವ ದೇವರು ನಿಮಗೆ ಪ್ರಮಾಣ ಮಾಡಿದಂತೆ ನಿಮ್ಮನ್ನು ತಮಗೆ ಮೀಸಲಾದ ಪರಿಶುದ್ಧ ಜನರನ್ನಾಗಿ ಸ್ಥಾಪಿಸುವರು. 10 ಆಗ ಭೂಲೋಕದ ಜನರೆಲ್ಲರೂ, ನೀವು ಯೆಹೋವ ದೇವರ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು. 11 ನಿಮಗೆ ಕೊಡುತ್ತೇನೆಂದು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಯೆಹೋವ ದೇವರು ಭೂಮಿಯ ಮೇಲೆ ನಿಮ್ಮನ್ನು ಸಂತಾನ, ಪಶು ಮತ್ತು ಕೃಷಿ ಫಲದಲ್ಲಿಯೂ ಸಮೃದ್ಧಿ ಹೊಂದುವಂತೆ ಮಾಡುವರು. 12 ಯೆಹೋವ ದೇವರು ಆಕಾಶವೆಂಬ ತಮ್ಮ ಒಳ್ಳೆಯ ಉಗ್ರಾಣವನ್ನು ನಿಮಗೆ ತೆರೆದು, ನಿಮ್ಮ ಭೂಮಿಗೆ ತಕ್ಕ ಕಾಲದಲ್ಲಿ ಮಳೆಯನ್ನು ಕೊಟ್ಟು, ನಿಮ್ಮ ಕೈಕೆಲಸವನ್ನೆಲ್ಲಾ ಆಶೀರ್ವದಿಸುವರು. ನೀವು ಅನೇಕ ಜನಾಂಗಗಳಿಗೆ ಸಾಲಕೊಡುವಿರೇ ಹೊರತು ಸಾಲ ತೆಗೆದುಕೊಳ್ಳುವುದಿಲ್ಲ. 13 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ನೀವು ಕೇಳಿ ಕಾಪಾಡಿ ಕೈಗೊಂಡರೆ, ಅವರು ಇತರರಿಗೆ ನಿಮ್ಮನ್ನು ಅಧೀನಮಾಡದೆ, ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವರು. ನೀವು ಎಲ್ಲರಿಗಿಂತಲೂ ಮೇಲಿನವರಾಗುವಿರೇ ಹೊರತು ಕೆಳಗಿನವರಾಗಿ ಇರುವುದಿಲ್ಲ. 14 ಹೀಗಿರುವುದರಿಂದ ನೀವು ಬೇರೆ ದೇವರುಗಳನ್ನು ಹಿಂಬಾಲಿಸಿ ಅವುಗಳನ್ನು ಅನುಸರಿಸಿ ನಡೆಯದಂತೆ, ನಾನು ಇಂದು ನಿಮಗೆ ಆಜ್ಞಾಪಿಸುವ ಈ ಮಾತುಗಳನ್ನು ಬಿಟ್ಟು ಎಡಕ್ಕಾದರೂ, ಬಲಕ್ಕಾದರೂ ತಿರುಗಬಾರದು. 15 ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೆ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಅವರ ಎಲ್ಲಾ ಆಜ್ಞೆಗಳನ್ನು ಕೈಗೊಳ್ಳದೇ ಹೋದರೆ, ಈ ಎಲ್ಲಾ ಶಾಪಗಳು ನಿಮ್ಮ ಮೇಲೆ ಬಂದು ನಿಮ್ಮನ್ನು ಹಿಡಿದುಕೊಳ್ಳುವವು: 16 ನಿಮಗೆ ಪಟ್ಟಣದಲ್ಲಿಯೂ ಶಾಪ, ಹೊಲದಲ್ಲಿಯೂ ನಿಮಗೆ ಶಾಪ. 17 ನಿಮ್ಮ ಬುಟ್ಟಿಗಳಿಗೂ, ಹಿಟ್ಟನ್ನು ನಾದುವ ಪಾತ್ರೆಗೂ ಶಾಪ. 18 ನಿಮ್ಮ ಗರ್ಭದ ಫಲಕ್ಕೂ ಪಶುಗಳ ಹಿಂಡಿಗೂ, ಕುರಿಗಳ ಮಂದೆಗಳಿಗೂ ಶಾಪ. 19 ನೀವು ಕೆಲಸಕ್ಕೆ ಹೊರಡುವಾಗಲೂ ನಿಮಗೆ ಶಾಪ, ಬರುವಾಗಲೂ ಶಾಪ. 20 ನೀವು ನಿಮ್ಮ ಯೆಹೋವ ದೇವರನ್ನು ಬಿಟ್ಟ ದುಷ್ಟಕ್ರಿಯೆಯ ನಿಮಿತ್ತ, ಯೆಹೋವ ದೇವರು ನೀವು ಬೇಗ ನಾಶವಾಗುವವರೆಗೂ ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ನಿಮಗೆ ಶಾಪ, ಗಲಿಬಿಲಿ ಹಾಗು ಗದರಿಕೆ ಮುಂತಾದವುಗಳನ್ನು ಉಂಟುಮಾಡುವರು. 21 ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿಂದ ಹಾಳಾಗಿ ಹೋಗುವವರೆಗೆ ಯೆಹೋವ ದೇವರು ನಿಮಗೆ ವ್ಯಾಧಿಯು ಅಂಟಿಕೊಳ್ಳುವಂತೆ ಮಾಡುವರು. 22 ಯೆಹೋವ ದೇವರು ಕ್ಷಯರೋಗದಿಂದಲೂ, ಚಳಿಜ್ವರದಿಂದಲೂ, ಉರಿವಾತದಿಂದಲೂ, ಉಷ್ಣಜ್ವರದಿಂದಲೂ ಕುಗ್ಗಿಸಿ, ದೇಶವನ್ನು ಕ್ಷಾಮದಿಂದಲೂ, ಬೆಳೆಯನ್ನು ಕಾಡಿನ ಬಿಸಿಗಾಳಿಯಿಂದಲೂ ಬಾಧಿಸುವರು. ನೀವು ನಾಶವಾಗುವ ತನಕ ಅವು ನಿಮ್ಮನ್ನು ಹಿಂದಟ್ಟಿಬರುವವು. 23 ನಿಮ್ಮ ತಲೆಯ ಮೇಲಿರುವ ಆಕಾಶವು ಕಂಚಿನಂತೆಯೂ ಕೆಳಗಿರುವ ಭೂಮಿ ಬೆಳೆಕೊಡದೆ ಕಬ್ಬಿಣದಂತೆಯೂ ಇರುವವು. 24 ಯೆಹೋವ ದೇವರು ನಿಮ್ಮ ದೇಶದಲ್ಲಿ ಮಳೆಗೆ ಬದಲಾಗಿ ಹುಡಿಯೂ ಧೂಳೂ ಆಗುವಂತೆ ಮಾಡುವರು. ನೀವು ನಾಶವಾಗುವವರೆಗೆ ಅದು ಆಕಾಶದಿಂದ ನಿಮ್ಮ ಮೇಲೆ ಸುರಿಯುವುದು. 25 ಯೆಹೋವ ದೇವರು ನಿಮ್ಮನ್ನು ನಿಮ್ಮ ಶತ್ರುಗಳ ಮುಂದೆ ಸೋಲಿಸಿಬಿಡುವರು. ನೀವು ಒಂದೇ ಮಾರ್ಗದಲ್ಲಿ ಅವರಿಗೆ ವಿರೋಧವಾಗಿ ದಾಳಿಮಾಡಲು ಹೊರಟು, ಏಳು ಮಾರ್ಗಗಳಲ್ಲಿ ಅವರ ಮುಂದೆ ಓಡಿಹೋಗುವಿರಿ. ಭೂಮಿಯ ರಾಜ್ಯಗಳೆಲ್ಲವೂ ಇದನ್ನು ಕಂಡು ಬೆರಗಾಗುವವು. 26 ನಿಮ್ಮ ಹೆಣಗಳು ಆಕಾಶದ ಎಲ್ಲಾ ಪಕ್ಷಿಗಳಿಗೂ ಕಾಡುಮೃಗಗಳಿಗೂ ಆಹಾರವಾಗುವುದು. ಯಾರೂ ಅವುಗಳನ್ನು ಬೆದರಿಸಿ ಓಡಿಸುವುದಿಲ್ಲ. 27 ಯೆಹೋವ ದೇವರು ನಿಮ್ಮನ್ನು ಈಜಿಪ್ಟನ್ನು ಬಾಧಿಸುವಂತೆ ಹುಣ್ಣುಗಳಿಂದಲೂ, ಮೂಲವ್ಯಾಧಿಯಿಂದಲೂ, ಕಜ್ಜಿಯಿಂದಲೂ, ಇಸುಬಿನಿಂದಲೂ ನೀವು ವಾಸಿಯಾಗದ ರೋಗಗಳಿಂದ ನಿಮ್ಮನ್ನು ಬಾಧಿಸುವರು. 28 ಯೆಹೋವ ದೇವರು ನಿಮ್ಮನ್ನು ಹುಚ್ಚುತನದಿಂದಲೂ ಕುರುಡುತನದಿಂದಲೂ ಹೃದಯದ ವಿಸ್ಮಯದಿಂದಲೂ ಕಾಡುವರು. 29 ಕಣ್ಣು ಕಾಣದವನು ಕತ್ತಲಲ್ಲಿ ತಡವಾಡುವಂತೆ ಮಧ್ಯಾಹ್ನದಲ್ಲಿ ತಡವಾಡುತ್ತಾ ಇರುವಿರಿ, ನಿಮ್ಮ ಮಾರ್ಗಗಳಲ್ಲಿ ಸಫಲವಾಗುವುದಿಲ್ಲ. ನೀವು ಯಾವಾಗಲೂ ರಕ್ಷಿಸುವವನಿಲ್ಲದೆ ಬಲಾತ್ಕಾರವನ್ನೂ, ಸುಲಿಗೆಯನ್ನೂ ಅನುಭವಿಸುವವರಾಗುವಿರಿ. 30 ನೀವು ಮದುವೆಮಾಡಿಕೊಳ್ಳಲು ನಿಶ್ಚಯಿಸಿಕೊಂಡ ಮಹಿಳೆಯನ್ನು ಮತ್ತೊಬ್ಬನು ಮಾನಭಂಗಗೊಳಿಸುವನು. ಮನೆಯನ್ನು ಕಟ್ಟಿದರೆ, ಅದರಲ್ಲಿ ವಾಸಮಾಡುವುದಿಲ್ಲ. ದ್ರಾಕ್ಷಿತೋಟವನ್ನು ನೆಟ್ಟರೆ, ಅದರ ಫಲ ನಿಮಗೆ ದೊರೆಯುವುದಿಲ್ಲ. 31 ನಿಮ್ಮ ದನಗಳನ್ನು ನಿಮ್ಮ ಕಣ್ಣು ಮುಂದೆಯೇ ಕೊಯ್ಯುವರು, ಆದರೆ ನೀವು ಅದರ ಮಾಂಸ ತಿನ್ನುವುದಿಲ್ಲ. ನಿಮ್ಮ ಕತ್ತೆಯನ್ನು ನಿಮ್ಮ ಕಣ್ಣ ಮುಂದೆಯೇ ಬಲಾತ್ಕಾರದಿಂದ ತೆಗೆದುಕೊಂಡು ಹೋಗುವರು. ಅದು ನಿಮಗೆ ಮತ್ತೆ ಸಿಕ್ಕುವುದಿಲ್ಲ. ನಿಮ್ಮ ಕುರಿಗಳು ನಿಮ್ಮ ಶತ್ರುವಿಗೆ ಕೊಡಲಾಗುವುದು. ಅವುಗಳನ್ನು ಬಿಡಿಸುವುದಕ್ಕೆ ಯಾರೂ ಇರುವುದಿಲ್ಲ. 32 ನಿಮ್ಮ ಪುತ್ರಪುತ್ರಿಯರು ಬೇರೆ ಜನರಿಗೆ ವಶಪಡಿಸಿರಲು, ನೀವು ಅವರನ್ನು ಕಾಣಬೇಕೆಂದು ಹಂಬಲಿಸುತ್ತಾ ಇರುವಿರಿ. ಆದರೆ ಅವರನ್ನು ಕಾಪಾಡಲು ನಿಮ್ಮ ಕೈಯಿಂದ ಸಾಧ್ಯವಾಗದೆ ಇರುವುದು. 33 ನಿಮ್ಮ ಭೂಮಿಯ ಫಲವನ್ನೂ, ನಿಮ್ಮ ಎಲ್ಲಾ ಆದಾಯವನ್ನೂ ನಿಮ್ಮನ್ನರಿಯದ ಜನರು ತಿಂದುಬಿಡುವರು. ನೀವು ಯಾವಾಗಲೂ ಬಲಾತ್ಕಾರವನ್ನೂ, ಸಂಕಟವನ್ನೂ ಅನುಭವಿಸುವಿರಿ. 34 ನಿಮ್ಮ ಕಣ್ಣಮುಂದೆ ನಡೆಯುವ ಘಟನೆಗಳನ್ನು ನೋಡಿ ಹುಚ್ಚರಾಗುವಿರಿ. 35 ಯೆಹೋವ ದೇವರು ನಿಮ್ಮನ್ನು ಮೊಣಕಾಲುಗಳಲ್ಲಿಯೂ, ತೊಡೆಗಳಲ್ಲಿಯೂ ವಾಸಿಯಾಗದ ಕೆಟ್ಟ ಉರಿ ಹುಣ್ಣಿನಿಂದ ಅಂಗಾಲು ಮೊದಲ್ಗೊಂಡು ನೆತ್ತಿಯವರೆಗೆ ಹೊಡೆಯುವರು. 36 ಯೆಹೋವ ದೇವರು ನಿಮ್ಮನ್ನೂ, ನೀವು ನಿಮ್ಮ ಮೇಲೆ ನೇಮಿಸಿಕೊಳ್ಳುವ ಅರಸನನ್ನೂ, ನೀವೂ, ನಿಮ್ಮ ಪಿತೃಗಳೂ ಅರಿಯದ ಜನಾಂಗದ ಬಳಿಗೆ ಹೋಗುವಂತೆ ಮಾಡುವರು. ಅಲ್ಲಿ ಮರವೂ, ಕಲ್ಲೂ ಆಗಿರುವ ಬೇರೆ ದೇವರುಗಳನ್ನೂ ನೀವು ಪೂಜಿಸುವಿರಿ. 37 ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಚೆದರಿಸುವ ಎಲ್ಲಾ ಜನಾಂಗಗಳಲ್ಲಿ ನೀವು ವಿಸ್ಮಯಕ್ಕೂ, ಗಾದೆಗೂ, ಹಾಸ್ಯಕ್ಕೂ ಗುರಿಯಾಗುವಿರಿ. 38 ಬಹಳ ಬೀಜವನ್ನು ಹೊಲದಲ್ಲಿ ಬಿತ್ತಿದರೂ ಸ್ವಲ್ಪವೇ ಬೆಳೆ. ಏಕೆಂದರೆ ಮಿಡತೆ ಅದನ್ನು ತಿಂದುಬಿಡುವುದು; 39 ದ್ರಾಕ್ಷಿತೋಟವನ್ನು ನೆಟ್ಟು ಕಾಪಾಡುವಿರಿ, ಆದರೆ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ ಮತ್ತು ಹಣ್ಣು ಕೂಡಿಸುವುದಿಲ್ಲ, ಏಕೆಂದರೆ ಹುಳುಗಳು ಅದನ್ನು ತಿಂದುಬಿಡುವುವು; 40 ಓಲಿವ್ ಮರಗಳು ನಿಮ್ಮ ಎಲ್ಲಾ ಮೇರೆಗಳಲ್ಲಿ ಇರುವುವು. ಆದರೆ ಅವುಗಳ ಕಾಯಿಗಳು ಉದುರುವುದರಿಂದ ನಿಮ್ಮ ಉಪಯೋಗಕ್ಕೆ ಎಣ್ಣೆ ಸಿಗದು. 41 ನೀವು ಪುತ್ರಪುತ್ರಿಯರನ್ನು ಪಡೆಯುವಿರಿ, ಆದರೆ ಅವರ ಕೂಡ ಸಂತೋಷಿಸುವುದಿಲ್ಲ. ಏಕೆಂದರೆ ಅವರು ಸೆರೆಯಾಗಿ ಹೋಗುವರು. 42 ನಿಮ್ಮ ಎಲ್ಲಾ ಮರಗಳನ್ನೂ, ನಿಮ್ಮ ಹೊಲದ ಪೈರನ್ನೂ ಮಿಡತೆ ತಿಂದುಬಿಡುವುದು. 43 ನಿಮ್ಮ ಮಧ್ಯದಲ್ಲಿರುವ ಪರದೇಶದವರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಯಾಗುವರು. ನೀವಾದರೋ ಕಡಿಮೆಯಾಗುತ್ತಾ ಹೀನಸ್ಥಿತಿಗೆ ಬರುವಿರಿ. 44 ಅವರು ನಿಮಗೆ ಸಾಲ ಕೊಡುವರು ಆದರೆ ನೀವು ಅವರಿಗೆ ಸಾಲಕೊಡುವ ಸ್ಥಿತಿಯಲ್ಲಿ ಇರುವುದಿಲ್ಲ. ಅವರು ನಿಮಗೆ ಶಿರಸ್ಸಾಗುವರು ಆದರೆ ನೀವು ಅವರಿಗೆ ಅಧೀನರಾಗುವಿರಿ. 45 ಇದಲ್ಲದೆ ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಕೇಳದೆ ಅವರು ನಿಮಗೆ ಆಜ್ಞಾಪಿಸಿದ ಆಜ್ಞೆಗಳನ್ನೂ ನಿಯಮಗಳನ್ನೂ ಕೈಗೊಳ್ಳದೆ ಇದ್ದುದರಿಂದ, ಈ ಶಾಪಗಳೆಲ್ಲಾ ನಿಮ್ಮ ಮೇಲೆ ಬಂದು, ನಿಮ್ಮನ್ನು ನಾಶಮಾಡುವವರೆಗೂ ನಿಮ್ಮನ್ನು ಹಿಂದಟ್ಟುವುವು. 46 ಅವು ನಿಮ್ಮ ಮೇಲೂ ನಿಮ್ಮ ಸಂತತಿಯ ಮೇಲೂ ಯಾವಾಗಲೂ ಗುರುತೂ ಅದ್ಭುತವೂ ಆಗಿರುವುವು. 47 ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿ ನಿಮ್ಮ ದೇವರಾದ ಯೆಹೋವ ದೇವರಿಗೆ ಸಂತೋಷದಿಂದಲೂ ಹರ್ಷದಿಂದಲೂ ಸೇವೆಮಾಡದೆ ಹೋದಿರಿ. 48 ಆದುದರಿಂದ ಹಸಿವೆಯಲ್ಲಿ, ದಾಹದಲ್ಲಿ, ಬಡತನದಲ್ಲಿ ಬಟ್ಟೆಬರೆ ಏನೂ ಇಲ್ಲದೆ, ಯೆಹೋವ ದೇವರು ನಿಮ್ಮ ಮೇಲೆ ಕಳುಹಿಸುವ ಆ ಶತ್ರುಗಳಿಗೇ ನೀವು ಸೇವಕರಾಗಬೇಕಾಗುವುದು. ಯೆಹೋವ ದೇವರು ನಿಮ್ಮನ್ನು ನಾಶಮಾಡುವವರೆಗೆ ಕಬ್ಬಿಣದ ನೊಗವನ್ನು ನಿಮ್ಮ ಮೇಲೆ ಹೊರಿಸುವರು. 49 ಯೆಹೋವ ದೇವರು ದೂರದಿಂದ ಅಂದರೆ, ಭೂಮಿಯ ಕೊನೆಯಿಂದ ರಣಹದ್ದು ಹೇಗೆ ಹಾರಿಬರುವುದೋ ಹಾಗೆಯೇ, ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗವನ್ನು ನಿಮ್ಮ ಮೇಲೆ ಬರುವಂತೆ ಮಾಡುವರು. 50 ಆ ಜನಾಂಗದವರು ಕ್ರೂರಮುಖವುಳ್ಳವರು. ನಿಮ್ಮನ್ನು ವೃದ್ಧರೆಂದು ಮರ್ಯಾದೆ ತೋರಿಸುವದಿಲ್ಲ, ಚಿಕ್ಕವರೆಂದು ದಯೆಯೂ ತೋರಿಸುವುದಿಲ್ಲ. 51 ಅವರು ನಿಮ್ಮ ಪಶುಗಳ ಫಲವನ್ನೂ ನಿಮ್ಮ ಭೂಮಿಯ ಫಲವನ್ನೂ ನೀವು ನಾಶವಾಗುವವರೆಗೆ ತಿಂದುಬಿಡುವರು. ಅವರು ಧಾನ್ಯವನ್ನೂ, ಹೊಸ ದ್ರಾಕ್ಷಾರಸವನ್ನೂ, ಓಲಿವ್ ಎಣ್ಣೆಯನ್ನೂ, ಪಶುಗಳ ಅಭಿವೃದ್ಧಿಯನ್ನೂ, ಕುರಿಗಳ ಮಂದೆಗಳನ್ನೂ ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು. 52 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ನಿಮ್ಮ ದೇಶದಲ್ಲೆಲ್ಲಾ ನಿಮ್ಮ ಎಲ್ಲಾ ಊರುಗಳಲ್ಲಿ ನಿಮಗೆ ಮುತ್ತಿಗೆ ಹಾಕುವರು. ನೀವು ನಂಬಿಕೊಂಡಿರುವ ಉದ್ದವಾದ ಮತ್ತು ಭದ್ರವಾದ ನಿಮ್ಮ ಗೋಡೆಗಳನ್ನು ಕೆಡವಿಬಿಡುವರು. 53 ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವುದರಿಂದ ನೀವು ನಿಮ್ಮ ಗರ್ಭದ ಫಲವನ್ನು ಅಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಪುತ್ರಪುತ್ರಿಯರ ಮಾಂಸವನ್ನು ತಿನ್ನುವಿರಿ. 54 ನಿಮ್ಮಲ್ಲಿರುವ ಅತ್ಯಂತ ಸೌಮ್ಯಸ್ವಭಾವದವನೂ ಬಹಳ ಸೂಕ್ಷ್ಮ ಗುಣವುಳ್ಳವನೂ ಸಹ ತನ್ನ ಸ್ವಂತ ಸಹೋದರ ಅಥವಾ ಅವನು ಪ್ರೀತಿಸುವ ಹೆಂಡತಿ ಅಥವಾ ಉಳಿದಿರುವ ಮಕ್ಕಳ ಮೇಲೆ ಅನುಕಂಪ ತೋರಿಸುವುದಿಲ್ಲ. 55 ಶತ್ರುಗಳು ನಿಮ್ಮ ಎಲ್ಲಾ ಪಟ್ಟಣಗಳಿಗೆ ಮುತ್ತಿಗೆ ಹಾಕಿ, ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕಾಲದಲ್ಲಿ ಅವನು ತನಗೆ ತಿನ್ನಲಿಕ್ಕೆ ಏನೂ ಸಿಗುವುದಿಲ್ಲ ಅಂದುಕೊಂಡು, ತನ್ನ ಮಕ್ಕಳ ಮಾಂಸವನ್ನು ಇತರರಿಗೆ ಕೊಡದೆ ತಿನ್ನುವನು. 56 ನಿಮ್ಮಲ್ಲಿರುವ ಅತ್ಯಂತ ಸೌಮ್ಯಸ್ವಭಾವದವಳೂ, ಬಹಳ ಸೂಕ್ಷ್ಮ ಗುಣವುಳ್ಳವಳೂ, ನೆಲಕ್ಕೆ ಅಂಗಾಲನ್ನು ಸಹ ಇಡದ ಮಹಿಳೆಯು, ತನ್ನ ಮಗ್ಗುಲಲ್ಲಿರುವ ಗಂಡನ ಕಡೆಗೂ ಹೆತ್ತ ಪುತ್ರಪುತ್ರಿಯರ ಕಡೆಗೂ ಕಠಿಣವಾಗಿರುವಳು. 57 ಅವಳು ಕೊರತೆಯಲ್ಲಿಯೂ, ಮುತ್ತಿಗೆಯಲ್ಲಿಯೂ, ಶತ್ರು ನಿಮಗೆ ನಿಮ್ಮ ಪಟ್ಟಣಗಳಲ್ಲಿ ಮಾಡುವ ಇಕ್ಕಟ್ಟಿನಲ್ಲಿಯೂ, ತನ್ನ ಮಕ್ಕಳನ್ನು ಗುಪ್ತವಾಗಿ ತಿಂದುಬಿಡುವಳು. 58 ನಿಮ್ಮ ದೇವರಾದ ಯೆಹೋವ ದೇವರೆಂಬ ಈ ಘನವುಳ್ಳ ಹೆಸರಿಗೆ ನೀವು ಭಯಪಡಬೇಕೆಂದು ಈ ಪುಸ್ತಕದಲ್ಲಿ ಬರೆದಿರುವ ಈ ನಿಯಮದ ಮಾತುಗಳನ್ನು ಅಲಕ್ಷಿಸಿ, ತಪ್ಪು ದಾರಿ ಹಿಡಿದರೆ, 59 ಯೆಹೋವ ದೇವರು ನಿಮಗೂ ನಿಮ್ಮ ಸಂತತಿಗೂ ಭಯಂಕರವಾದ ಉಪದ್ರವಗಳನ್ನು ಬರಮಾಡುವರು; ಅವು ಕಠಿಣವಾದ ಮತ್ತು ದೀರ್ಘಕಾಲದ ಬಾಧೆಗಳೂ ಘೋರವಾದ ಮತ್ತು ಗಂಭೀರವಾದ ರೋಗಗಳಾಗಿರುವವು. 60 ಇದಲ್ಲದೆ ನೀವು ಹೆದರಿಕೊಳ್ಳುತ್ತಿದ್ದ ಈಜಿಪ್ಟಿನ ರೋಗಗಳನ್ನೆಲ್ಲಾ ದೇವರು ತಿರುಗಿ ನಿಮ್ಮ ಮೇಲೆ ಬರಮಾಡುವರು; ಅವು ನಿಮ್ಮನ್ನು ಅಂಟಿಕೊಳ್ಳುವವು. 61 ಈ ನಿಯಮದ ಪುಸ್ತಕದಲ್ಲಿ ಬರೆಯದ ರೋಗಗಳನ್ನೂ ಬೇನೆಗಳನ್ನೂ ನೀವು ಪೂರ್ಣ ನಾಶವಾಗುವವರೆಗೆ ಯೆಹೋವ ದೇವರು ನಿಮ್ಮ ಮೇಲೆ ತರುವರು. 62 ನೀವು ನಿಮ್ಮ ದೇವರಾದ ಯೆಹೋವ ದೇವರ ಮಾತನ್ನು ಕೇಳದೇ ಹೋದದ್ದರಿಂದ, ಆಕಾಶದ ನಕ್ಷತ್ರಗಳ ಹಾಗೆ ಅಸಂಖ್ಯಾತರಾಗಿರುವ ನೀವು ಸ್ವಲ್ಪ ಮಂದಿಯಾಗಿ ಉಳಿಯುವಿರಿ. 63 ಯೆಹೋವ ದೇವರು ಹೇಗೆ ನಿಮಗೆ ಸಮೃದ್ಧಿಯನ್ನು ಕೊಡುವುದಕ್ಕೂ ನಿಮ್ಮನ್ನು ಹೆಚ್ಚಿಸುವುದಕ್ಕೂ ನಿಮಗೋಸ್ಕರ ಸಂತೋಷಿಸಿದರೋ, ಹಾಗೆಯೇ ಯೆಹೋವ ದೇವರು ನಿಮ್ಮನ್ನು ಕೆಡಿಸಿ, ನಾಶಮಾಡುವುದಕ್ಕೂ ನಿಮಗೆ ವಿರೋಧವಾಗಿ ಸಂತೋಷಿಸುವರು. ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಿಂದಲೂ ನಿಮ್ಮನ್ನು ಕಿತ್ತುಹಾಕುವರು. 64 ಇದಲ್ಲದೆ ಯೆಹೋವ ದೇವರು ನಿಮ್ಮನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯವರೆಗೂ ಎಲ್ಲಾ ಜನಾಂಗಗಳಲ್ಲಿ ಚದರಿಸುವರು. ಅಲ್ಲಿ ನೀವೂ ನಿಮ್ಮ ಪಿತೃಗಳು ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಆರಾಧಿಸುವಿರಿ. 65 ಆ ಜನಾಂಗಗಳಲ್ಲಿ ನಿಮಗೆ ವಿಶ್ರಾಂತಿ ದೊರೆಯುವುದಿಲ್ಲ. ಸ್ವಲ್ಪ ಹೊತ್ತು ಅಂಗಾಲಿಡುವುದಕ್ಕೂ ನಿಮಗೆ ಸ್ಥಳಸಿಕ್ಕುವುದಿಲ್ಲ. ಅಲ್ಲಿ ಯೆಹೋವ ದೇವರು ನಿಮಗೆ ನಡುಗುವ ಹೃದಯವನ್ನೂ ಕ್ಷೀಣಿಸುವ ಕಣ್ಣುಗಳನ್ನೂ ಕುಂದುವ ಪ್ರಾಣವನ್ನೂ ಕೊಡುವರು. 66 ಬದುಕುವೆವೋ ಇಲ್ಲವೋ ಎಂಬುದಾಗಿ ಅನುಮಾನಪಟ್ಟು ನೀವು ರಾತ್ರಿ ಹಗಲು ಜೀವದ ಮೇಲೆ ನಂಬಿಕೆ ಇಲ್ಲದೆ ಹೆದರಿಕೊಳ್ಳುವಿರಿ. 67 ನಿಮ್ಮ ಹೃದಯದಲ್ಲಿನ ಪ್ರಾಣಭೀತಿ, ಹೆದರಿಕೆಯ ನಿಮಿತ್ತವೂ ನಿಮ್ಮ ಕಣ್ಣುಗಳು ನೋಡುವ ಭಯಂಕರ ನೋಟದಿಂದ ನೀವು ಮುಂಜಾನೆಯಲ್ಲಿ, “ಸಂಜೆ ಆಗಬೇಕು,” ಎನ್ನುವಿರಿ. ಸಂಜೆಯಲ್ಲಿ, “ಮುಂಜಾನೆ ಆಗಬೇಕು,” ಎನ್ನುವಿರಿ. 68 ಇದಲ್ಲದೆ, ಯೆಹೋವ ದೇವರು, ನೀವು ಇನ್ನು ಮೇಲೆ ನೋಡುವುದಿಲ್ಲ ಎಂದು ಹೇಳಿದ ದಾರಿಯಲ್ಲಿಯೇ ಹಡಗುಗಳಲ್ಲಿ ಜನರು ನಿಮ್ಮನ್ನು ಈಜಿಪ್ಟಿಗೆ ತಿರುಗಿ ಬರಮಾಡುವರು. ನಿಮ್ಮನ್ನು ಅಲ್ಲಿ ದಾಸರಾಗಿಯೂ ದಾಸಿಯರಾಗಿಯೂ ನಿಮ್ಮ ಶತ್ರುಗಳಿಗೆ ಮಾರಿಕೊಳ್ಳಬೇಕೆಂದಿದ್ದರೂ, ಕೊಂಡುಕೊಳ್ಳುವವರು ಇರುವುದಿಲ್ಲ.
In Other Versions
Deuteronomy 28 in the ANTPNG2D
Deuteronomy 28 in the BNTABOOT
Deuteronomy 28 in the BOHNTLTAL
Deuteronomy 28 in the BOILNTAP
Deuteronomy 28 in the KBT1ETNIK
Deuteronomy 28 in the TBIAOTANT