Exodus 29 (BOKCV2)
1 “ಅವರು ನನಗೆ ಯಾಜಕ ಸೇವೆಮಾಡುವಂತೆ ನೀನು ಅವರನ್ನು ಶುದ್ಧ ಮಾಡಲು ಮಾಡಬೇಕಾದದ್ದೇನೆಂದರೆ: ದೋಷವಿಲ್ಲದ ಒಂದು ಹೋರಿಯನ್ನೂ ಎರಡು ಟಗರುಗಳನ್ನೂ, 2 ಅತ್ಯುತ್ತಮ ಗೋಧಿಯ ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನೂ ಎಣ್ಣೆ ಹೊಯ್ದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹಚ್ಚಿದ ಹುಳಿಯಿಲ್ಲದ ಪೂರಿಗಳನ್ನೂ ತೆಗೆದುಕೊಳ್ಳಬೇಕು. 3 ಇವುಗಳನ್ನು ಒಂದೇ ಬುಟ್ಟಿಯಲ್ಲಿ ಇಟ್ಟುಕೊಂಡು ಹೋರಿ ಮತ್ತು ಎರಡು ಟಗರುಗಳ ಸಂಗಡ ತೆಗೆದುಕೊಂಡು ಬರಬೇಕು. 4 ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನದ ಗುಡಾರದ ಬಾಗಿಲಿನ ಬಳಿಗೆ ತಂದು, ನೀರಿನಲ್ಲಿ ಅವರನ್ನು ತೊಳೆಯಬೇಕು. 5 ತರುವಾಯ ಆ ವಸ್ತ್ರಗಳನ್ನು ತೆಗೆದುಕೊಂಡು ಆರೋನನಿಗೆ ಅಂಗಿಯನ್ನೂ ಏಫೋದಿನ ನಿಲುವಂಗಿಯನ್ನೂ ಏಫೋದನ್ನೂ ಎದೆಪದಕವನ್ನೂ ತೊಡಿಸಿ, ಏಫೋದಿನ ಕಲಾತ್ಮಕವಾದ ನಡುಕಟ್ಟಿನಿಂದ ಅವನ ನಡುವನ್ನೂ ಕಟ್ಟಿ, 6 ಅವನ ತಲೆಗೆ ಮುಂಡಾಸವನ್ನು ಇಟ್ಟು, ಮುಂಡಾಸದ ಮೇಲೆ ಪರಿಶುದ್ಧ ಪಟ್ಟವನ್ನು ಇಟ್ಟು, 7 ಅಭಿಷೇಕಿಸುವ ಎಣ್ಣೆಯನ್ನು ತೆಗೆದುಕೊಂಡು, ಅವನ ತಲೆಯ ಮೇಲೆ ಹೊಯ್ದು, ಅವನನ್ನು ಅಭಿಷೇಕಿಸಬೇಕು. 8 ನೀನು ಅವನ ಪುತ್ರರನ್ನು ಕರೆದುಕೊಂಡು ಬಂದು ಅವರಿಗೆ ನಿಲುವಂಗಿಗಳನ್ನು ತೊಡಿಸಿ, 9 ಆರೋನನಿಗೂ ಅವನ ಪುತ್ರರಿಗೂ ಮುಂಡಾಸುಗಳನ್ನು ಇಟ್ಟು ನಡುಕಟ್ಟುಗಳನ್ನು ಕಟ್ಟಬೇಕು, ಅವರಿಗೆ ಹೀಗೆ ಅವರಿಗೆ ಯಾಜಕತ್ವ ಸೇವೆಯು ಶಾಶ್ವತ ಕಟ್ಟಳೆಯಾಗಿರುವುದು.“ಈ ರೀತಿಯಾಗಿ ಆರೋನನನ್ನೂ ಅವನ ಪುತ್ರರನ್ನೂ ನೀನು ಪ್ರತಿಷ್ಠೆ ಮಾಡಬೇಕು. 10 “ಇದಲ್ಲದೆ ಆ ಹೋರಿಯನ್ನು ಸಭೆಯ ಗುಡಾರದ ಮುಂದೆ ತರಬೇಕು. ಆರೋನನೂ ಅವನ ಪುತ್ರರೂ ಹೋರಿಯ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. 11 ತರುವಾಯ ನೀನು ಆ ಹೋರಿಯನ್ನು ಯೆಹೋವ ದೇವರ ಮುಂದೆ ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. 12 ನೀನು ಹೋರಿಯ ರಕ್ತವನ್ನು ತೆಗೆದುಕೊಂಡು ನಿನ್ನ ಬೆರಳಿನಿಂದ ಬಲಿಪೀಠದ ಕೊಂಬುಗಳಿಗೆ ಹಚ್ಚಿ, ರಕ್ತವನ್ನೆಲ್ಲಾ ಬಲಿಪೀಠದ ಅಡಿಯಲ್ಲಿ ಸುರಿಯಬೇಕು. 13 ನೀನು ಕರುಳುಗಳನ್ನೂ ಅವುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ತೆಗೆದುಕೊಂಡು ಬಲಿಪೀಠದ ಮೇಲೆ ಸುಡಬೇಕು. 14 ಇದಲ್ಲದೆ ಹೋರಿಯ ಮಾಂಸವನ್ನೂ ಅದರ ಚರ್ಮವನ್ನೂ, ಅದರ ಸಗಣಿಯನ್ನೂ ಪಾಳೆಯದ ಹೊರಗೆ ಬೆಂಕಿಯಿಂದ ಸುಡಬೇಕು. ಅದು ಪಾಪ ಪರಿಹಾರದ ಬಲಿಯಾಗಿದೆ. 15 “ನೀನು ಒಂದು ಟಗರನ್ನು ಸಹ ತೆಗೆದುಕೊಳ್ಳಬೇಕು. ಆರೋನನು ಮತ್ತು ಅವನ ಪುತ್ರರು ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. 16 ತರುವಾಯ ಆ ಟಗರನ್ನು ನೀನು ವಧಿಸಿ, ಅದರ ರಕ್ತವನ್ನು ತೆಗೆದುಕೊಂಡು ಬಲಿಪೀಠದ ಮೇಲೆ ಸುತ್ತಲೂ ಚಿಮುಕಿಸಬೇಕು. 17 ಇದಲ್ಲದೆ ಆ ಟಗರನ್ನು ತುಂಡುತುಂಡಾಗಿ ಕಡಿದು, ಅದರ ಕರುಳುಗಳನ್ನೂ ಕಾಲುಗಳನ್ನೂ ತೊಳೆದು, ಅದರ ತುಂಡುಗಳನ್ನು ತಲೆಯ ಸಂಗಡ ಇಡಬೇಕು. 18 ಅದನ್ನೆಲ್ಲಾ ಬಲಿಪೀಠದ ಮೇಲೆ ಸುಡಬೇಕು. ಅದು ಯೆಹೋವ ದೇವರಿಗೆ ದಹನಬಲಿಯಾಗಿದೆ. ಅದು ಯೆಹೋವ ದೇವರಿಗೆ ಸುವಾಸನೆಯ ದಹನಬಲಿ. 19 “ಆ ಇನ್ನೊಂದು ಟಗರನ್ನು ನೀನು ತಂದಾಗ, ಆರೋನನೂ ಅವನ ಪುತ್ರರೂ ಆ ಟಗರಿನ ತಲೆಯ ಮೇಲೆ ತಮ್ಮ ಕೈಗಳನ್ನು ಇಡಬೇಕು. 20 ತರುವಾಯ ನೀನು ಅದನ್ನು ವಧಿಸಿ, ಅದರ ರಕ್ತವನ್ನು ಆರೋನನ ಮತ್ತು ಅವನ ಪುತ್ರರ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆಟ್ಟಿಗೂ ಹಚ್ಚಿ, ಆ ರಕ್ತವನ್ನು ಬಲಿಪೀಠದ ಸುತ್ತಲೂ ಚಿಮುಕಿಸಬೇಕು. 21 ಆರೋನನೂ ಅವನ ವಸ್ತ್ರಗಳೂ ಅವನೊಂದಿಗೆ ಅವನ ಪುತ್ರರೂ ಅವರ ವಸ್ತ್ರಗಳೂ ಪರಿಶುದ್ಧವಾಗುವ ಹಾಗೆ ಬಲಿಪೀಠದ ಮೇಲಿರುವ ರಕ್ತವನ್ನೂ, ಅಭಿಷೇಕ ತೈಲವನ್ನೂ ತೆಗೆದುಕೊಂಡು ಆರೋನನ ಮೇಲೆಯೂ ಅವನ ವಸ್ತ್ರಗಳ ಮೇಲೆಯೂ ಅವನ ಪುತ್ರರ ಮೇಲೆಯೂ ಅವರ ವಸ್ತ್ರಗಳ ಮೇಲೆಯೂ ನೀನು ಚಿಮುಕಿಸಬೇಕು. 22 “ಇದಲ್ಲದೆ ಆ ಟಗರಿನ ಕೊಬ್ಬನ್ನೂ ಬಾಲವನ್ನೂ ಕರುಳುಗಳ ಮೇಲಿರುವ ಕೊಬ್ಬನ್ನೂ ಕಾಳಿಜದ ಮೇಲಿರುವ ಕೊಬ್ಬನ್ನೂ ಎರಡು ಮೂತ್ರ ಜನಕಾಂಗಗಳನ್ನೂ ಅವುಗಳ ಕೊಬ್ಬನ್ನೂ ಬಲದೊಡೆಯನ್ನೂ ತೆಗೆದುಕೊಳ್ಳಬೇಕು. ಏಕೆಂದರೆ ಅದು ಪ್ರತಿಷ್ಠೆಯ ಟಗರು. 23 ಯೆಹೋವ ದೇವರ ಸನ್ನಿಧಿಯಲ್ಲಿರುವ ಹುಳಿಯಿಲ್ಲದ ರೊಟ್ಟಿಯ ಪುಟ್ಟಿಯೊಳಗಿಂದ ಒಂದು ರೊಟ್ಟಿಯನ್ನೂ ಎಣ್ಣೆಯ ಒಂದು ಹೋಳಿಗೆಯನ್ನೂ ಒಂದು ಪೂರಿಯನ್ನೂ 24 ನೀನು ತೆಗೆದುಕೊಂಡು ಅವುಗಳನ್ನೆಲ್ಲಾ ಆರೋನನ ಮತ್ತು ಅವನ ಪುತ್ರರ ಕೈಗಳಿಗೆ ಕೊಟ್ಟು, ಅವರು ಯೆಹೋವ ದೇವರ ಮುಂದೆ ಅದನ್ನು ನೈವೇದ್ಯವಾಗಿ ನಿವಾಳಿಸಬೇಕು. 25 ನೀನು ಅವುಗಳನ್ನು ಅವರ ಕೈಗಳಿಂದ ತೆಗೆದುಕೊಂಡು, ಬಲಿಪೀಠದ ಮೇಲೆ ದಹನಬಲಿಯಾಗಿ ಯೆಹೋವ ದೇವರ ಮುಂದೆ ಸುವಾಸನೆಗೋಸ್ಕರ ದಹಿಸಬೇಕು. ಅದು ಯೆಹೋವ ದೇವರಿಗೆ ಬೆಂಕಿಯಿಂದ ಮಾಡಿದ ಅರ್ಪಣೆ. 26 ಇದಲ್ಲದೆ ಆರೋನನು ಪ್ರತಿಷ್ಠೆಯ ಟಗರಿನ ಎದೆಯ ಭಾಗವನ್ನು ತೆಗೆದುಕೊಂಡು, ನೈವೇದ್ಯವಾಗಿ ಯೆಹೋವ ದೇವರ ಸನ್ನಿಧಿಯಲ್ಲಿ ನಿವಾಳಿಸಬೇಕು. ಅದು ನಿನ್ನ ಪಾಲಾಗಿರುವುದು. 27 “ನೀನು ನೈವೇದ್ಯ ಮಾಡಿದ ಎದೆಯ ಭಾಗವನ್ನೂ, ಅರ್ಪಣೆ ಮಾಡಿದ ಬಲದ ಮುಂದೊಡೆಯನ್ನೂ, ಆರೋನನ, ಅವನ ಪುತ್ರರಿಗೆ ಸಲ್ಲಬೇಕಾದ ಪ್ರತಿಷ್ಠಿತ ಟಗರಿನ ಭಾಗವನ್ನು ಪ್ರತಿಷ್ಠಿಸು. 28 ಅದು ಆರೋನನಿಗೂ ಅವನ ಪುತ್ರರಿಗೂ ಇಸ್ರಾಯೇಲರ ಕಡೆಯಿಂದ ನಿತ್ಯವಾಗಿ ಕೊಡುವ ಭಾಗವಾಗಿರಬೇಕು. ಏಕೆಂದರೆ ಅದು ನೈವೇದ್ಯವಾಗಿದೆ. ಇಸ್ರಾಯೇಲರ ಸಮಾಧಾನದ ಬಲಿಗಳ ಅರ್ಪಣೆಗಳಿಂದ ಅವರು ಯೆಹೋವ ದೇವರಿಗೆ ನೈವೇದ್ಯ ಮಾಡುವಂಥದ್ದು ಆಗಿರಬೇಕು. 29 “ಇದಲ್ಲದೆ ಆರೋನನಿಗೆ ಇದ್ದ ಪರಿಶುದ್ಧ ವಸ್ತ್ರಗಳು ಅವನ ತರುವಾಯ ಅವನ ಪುತ್ರರಿಗೆ ಆಗಬೇಕು. ಅವರು ಅಭಿಷಿಕ್ತರಾಗಿ ಅವುಗಳನ್ನು ಧರಿಸಿಕೊಂಡು, ಪ್ರತಿಷ್ಠಿತರಾಗಬೇಕು. 30 ಅವನ ಬದಲಾಗಿ ಅವನ ಮಗನು ಯಾಜಕತ್ವವನ್ನು ನಡೆಸಿ, ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವಂತೆ ದೇವದರ್ಶನದ ಗುಡಾರದೊಳಗೆ ಪ್ರವೇಶಿಸಿದ ದಿನದಿಂದ ಅವುಗಳನ್ನು ಏಳು ದಿನಗಳವರೆಗೆ ತೊಟ್ಟುಕೊಳ್ಳಬೇಕು. 31 “ಪ್ರತಿಷ್ಠೆಯ ಟಗರನ್ನು ತೆಗೆದುಕೊಂಡು ನೀನು ಅದರ ಮಾಂಸವನ್ನು ಪರಿಶುದ್ಧ ಸ್ಥಳದಲ್ಲಿ ಬೇಯಿಸಬೇಕು. 32 ಆರೋನನೂ ಅವನ ಪುತ್ರರೂ ಟಗರಿನ ಮಾಂಸವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಊಟಮಾಡಬೇಕು. 33 ಅವರನ್ನು ಪ್ರತಿಷ್ಠೆ ಮಾಡುವುದಕ್ಕೋಸ್ಕರ ಮತ್ತು ಪರಿಶುದ್ಧ ಮಾಡುವುದಕ್ಕೋಸ್ಕರ ಅವರಿಗಾಗಿ ಪ್ರಾಯಶ್ಚಿತ್ತ ಮಾಡಿದವುಗಳನ್ನು ಅವರೇ ಊಟಮಾಡಬೇಕು. ಇತರರು ಅದನ್ನು ಉಣ್ಣಬಾರದು. ಏಕೆಂದರೆ ಅವು ಪರಿಶುದ್ಧವಾದವುಗಳು. 34 ಪ್ರತಿಷ್ಠೆ ಬಲಿ ಮಾಂಸದಲ್ಲಿಯೂ ರೊಟ್ಟಿಯಲ್ಲಿಯೂ ಮರುದಿನದವರೆಗೆ ಏನಾದರೂ ಉಳಿದರೆ ಅದನ್ನು ಬೆಂಕಿಯಿಂದ ಸುಡಬೇಕು. ಅದು ಪರಿಶುದ್ಧವಾಗಿರುವುದರಿಂದ ಅದನ್ನು ಮರುದಿನ ತಿನ್ನಬಾರದು. 35 “ಹೀಗೆ ಆರೋನನಿಗೂ ಅವನ ಪುತ್ರಿರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರಮಾಡಿ, ಏಳು ದಿವಸ ಅವರನ್ನು ಪ್ರತಿಷ್ಠೆ ಕ್ರಮವನ್ನು ಮಾಡಬೇಕು. 36 ಪ್ರತಿದಿನ ದೋಷಪರಿಹಾರಕ್ಕಾಗಿ ಒಂದು ಹೋರಿಯನ್ನು ಯಜ್ಞ ಮಾಡಬೇಕು. ಬಲಿಪೀಠವನ್ನು ಶುದ್ಧಿಮಾಡುವುದಕ್ಕಾಗಿ ಅದರ ಮೇಲೆ ಪಾಪ ಪರಿಹಾರದ ಬಲಿಯನ್ನು ಸಮರ್ಪಿಸಿ, ಅದನ್ನು ದೇವರ ಸೇವೆಗಾಗಿ ಪ್ರತಿಷ್ಠಿಸುವುದಕ್ಕಾಗಿ ಅಭಿಷೇಕಿಸಬೇಕು. 37 ಏಳು ದಿವಸ ಬಲಿಪೀಠಕ್ಕೊಸ್ಕರ ಪ್ರಾಯಶ್ಚಿತ್ತ ಮಾಡಿ, ಅದನ್ನು ಪವಿತ್ರ ಮಾಡಬೇಕು. ಆಗ ಬಲಿಪೀಠವು ಅತಿ ಪರಿಶುದ್ಧವಾಗಿರುವುದು. ಬಲಿಪೀಠವನ್ನು ಮುಟ್ಟುವುದೆಲ್ಲಾ ಪವಿತ್ರವಾಗಿರಬೇಕು. 38 “ಬಲಿಪೀಠದ ಮೇಲೆ ನೀನು ಅರ್ಪಿಸಬೇಕಾದದ್ದು ಇದೇ: ಒಂದು ವರ್ಷದ ಎರಡು ಕುರಿಮರಿಗಳನ್ನು ಪ್ರತಿದಿನ ಬಿಟ್ಟುಬಿಡದೆ ದಹನಬಲಿಯಾಗಿ ಅರ್ಪಿಸಬೇಕು. 39 ಒಂದು ಕುರಿಮರಿಯನ್ನು ಮುಂಜಾನೆಯಲ್ಲಿಯೂ ಮತ್ತೊಂದನ್ನು ಸಾಯಂಕಾಲದಲ್ಲಿಯೂ ಸಮರ್ಪಿಸಬೇಕು. 40 ಒಂದು ಲೀಟರ್ ಕುಟ್ಟಿ ತೆಗೆದ ಓಲಿವ್ ಎಣ್ಣೆಯನ್ನು ಸುಮಾರು ಒಂದುವರೆ ಕಿಲೋಗ್ರಾಂ ಗೋಧಿಹಿಟ್ಟಿಗೆ ಬೆರೆಸಿ, ಒಂದು ಲೀಟರ್ ದ್ರಾಕ್ಷಾರಸವನ್ನು ಸಮರ್ಪಣೆಗಾಗಿ ಆ ಮೊದಲನೆಯ ಕುರಿಯ ಸಮೇತ ಹೋಮ ಮಾಡಬೇಕು. 41 ಇನ್ನೊಂದು ಕುರಿಮರಿಯನ್ನು ಸಂಜೆಯಲ್ಲಿ ಅರ್ಪಿಸಬೇಕು. ಬೆಳಿಗ್ಗೆ ಮಾಡಿದಂತೆಯೇ ಅದರ ಧಾನ್ಯ ಸಮರ್ಪಣೆಯನ್ನೂ ಪಾನದ ಅರ್ಪಣೆಯನ್ನೂ ಯೆಹೋವ ದೇವರಿಗೆ ಸುವಾಸನೆಯಾಗಿರುವಂತೆ ಬೆಂಕಿಯಿಂದ ಅರ್ಪಿಸಬೇಕು. 42 “ಇದು ತಲತಲಾಂತರಗಳಲ್ಲಿಯೂ ನಿತ್ಯಕ್ಕೂ ದೇವದರ್ಶನದ ಗುಡಾರದ ಮುಂದೆ ಯೆಹೋವ ದೇವರ ಸನ್ನಿಧಿಯಲ್ಲಿ ನಾನು ನಿಮ್ಮ ಸಂಗಡ ಮಾತನಾಡುವುದಕ್ಕೆ ಸಂಧಿಸುವಲ್ಲಿ ಇದೇ ನಿತ್ಯವಾದ ದಹನಬಲಿಯಾಗಿರುವುದು. 43 ಅಲ್ಲಿ ನಾನು ಇಸ್ರಾಯೇಲರನ್ನು ಸಂಧಿಸುವೆನು. ಅದು ನನ್ನ ಮಹಿಮೆಯಿಂದ ಪವಿತ್ರವಾಗುವುದು. 44 “ನಾನು ದೇವದರ್ಶನದ ಗುಡಾರವನ್ನೂ ಬಲಿಪೀಠವನ್ನೂ ಪರಿಶುದ್ಧ ಮಾಡುವೆನು. ಆರೋನನನ್ನೂ ಅವನ ಪುತ್ರರನ್ನೂ ನನಗೆ ಯಾಜಕ ಸೇವೆಮಾಡುವಂತೆ ಪವಿತ್ರ ಮಾಡುವೆನು. 45 ಇಸ್ರಾಯೇಲರ ಮಧ್ಯದಲ್ಲಿ ನಾನು ವಾಸಮಾಡಿ, ಅವರಿಗೆ ನಾನು ದೇವರಾಗಿರುವೆನು. 46 ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದ ಅವರ ದೇವರಾದ ಯೆಹೋವ ದೇವರು ನಾನೇ ಎಂದು ಅವರಿಗೆ ತಿಳಿಯುವುದು. ನಾನೇ ಅವರ ದೇವರಾದ ಯೆಹೋವ ದೇವರು.