Ezekiel 18 (BOKCV2)
1 ಯೆಹೋವ ದೇವರ ವಾಕ್ಯವು ನನಗೆ ಬಂದಿತು: 2 “ನೀವು ಇಸ್ರಾಯೇಲ್ ದೇಶದ ವಿಷಯವಾಗಿ ಈ ಗಾದೆಯನ್ನು ಉಲ್ಲೇಖಿಸುವುದರ ಅರ್ಥವೇನು:“ ‘ಪಿತೃಗಳು ಹುಳಿದ್ರಾಕ್ಷಿಗಳನ್ನು ತಿಂದರು,ಮಕ್ಕಳ ಹಲ್ಲು ಚಳಿತು ಹೋಯಿತು.’ 3 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಹೇಳುವ ಸಂದರ್ಭವು ಇರುವುದಿಲ್ಲ. 4 ಎಲ್ಲಾ ಪ್ರಾಣಗಳು ನನ್ನವೇ, ತಂದೆಯ ಪ್ರಾಣವು ಹೇಗೋ ಹಾಗೆಯೇ ಮಗನ ಪ್ರಾಣವು ನನ್ನದೇ. ಪಾಪ ಮಾಡುವವನೇ ಸಾಯುವನು. 5 “ಆದರೆ ಒಬ್ಬ ಮನುಷ್ಯನು ನೀತಿವಂತನಾಗಿದ್ದು,ನೀತಿಯನ್ನೂ ನ್ಯಾಯವನ್ನೂ ನಡೆಸಿ, 6 ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನದೆ,ಇಸ್ರಾಯೇಲಿನ ಮನೆತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ,ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ,ಮುಟ್ಟಾಗಿರುವ ಸ್ತ್ರೀಯನ್ನು ಸಮೀಪಿಸದೆ, 7 ಯಾರನ್ನೂ ಉಪದ್ರವಪಡಿಸದೆ,ಸಾಲ ಮಾಡಿದವನ ಒತ್ತೆಯನ್ನು ಹಿಂದಕ್ಕೆ ಕೊಟ್ಟು,ಹಿಂಸೆ ಸುಲಿಗೆ ಮಾಡದೆ,ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟುಮತ್ತು ಬೆತ್ತಲೆಯಿರುವವನಿಗೆ ಬಟ್ಟೆಯನ್ನು ಹೊದಿಸಿ, 8 ಬಡ್ಡಿಗೆ ಸಾಲ ಕೊಡದೆ,ಲಾಭವನ್ನು ತೆಗೆದುಕೊಳ್ಳದೆ,ಅನ್ಯಾಯದಿಂದ ತನ್ನ ಕೈಯನ್ನು ಹಿಂತೆಗೆದುವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯತೀರಿಸಿ, 9 ಸತ್ಯವನ್ನು ನಡೆಸುವುದಕ್ಕಾಗಿ ನನ್ನ ನಿಯಮಗಳಲ್ಲಿ ನಡೆದು,ನನ್ನ ನ್ಯಾಯಗಳನ್ನು ಕೈಗೊಂಡು ಸತ್ಯಪರನಾಗಿ ನಡೆದರೆ,ಅವನು ನೀತಿವಂತನು ಮತ್ತುನಿಶ್ಚಯವಾಗಿ ಬದುಕುವನು,”ಎಂದು ಸಾರ್ವಭೌಮ ಯೆಹೋವ ದೇವರು ಹೇಳಿದ್ದಾರೆ. 10 “ಒಂದು ವೇಳೆ ಇಂಥವನು ಪಡೆದ ಮಗನು, ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವುದನ್ನಾದರೂ ನಡೆಸಿ, 11 ಸುಕೃತ್ಯಗಳಲ್ಲಿ ಯಾವುದನ್ನೂ ನಡೆಸದೆ,“ಪರ್ವತಗಳ ಪೂಜಾಸ್ಥಳಗಳಲ್ಲಿ ತಿಂದುತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿ, 12 ಬಡವರನ್ನೂ, ದರಿದ್ರರನ್ನೂ ಉಪದ್ರವಗೊಳಿಸಿ,ಹಿಂಸಿಸಿ, ಸುಲಿಗೆ ಮಾಡಿ,ಒತ್ತೆಗಳನ್ನು ಹಿಂದೆ ಕೊಡದೆ,ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತಿಅಸಹ್ಯವಾದವುಗಳನ್ನು ಮಾಡಿ, 13 ಸಾಲಕ್ಕೆ ಬಡ್ಡಿ ತೆಗೆದುಕೊಂಡು, ಲಾಭ ಪಡೆಯುವವನು ಆಗಿದ್ದರೆ,ಅವನು ಬದುಕುವನೋ? ಅವನು ಬದುಕುವುದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿದ್ದರಿಂದ ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ. 14 “ಒಂದು ವೇಳೆ ಇವನು ಪಡೆದ ಮಗನು ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ಕಂಡು ಆಲೋಚಿಸಿ, ಇಂಥಾ ಕಾರ್ಯಗಳನ್ನು ನಡೆಸದೆ, 15 “ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನದೆ,ಇಸ್ರಾಯೇಲಿನ ಮನೆತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ,ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ, 16 ಯಾರನ್ನೂ ಹಿಂಸಿಸದೆ,ಒತ್ತೆಯನ್ನು ಕೇಳದೆ,ಹಿಂಸೆಯಿಂದ ಸುಲಿಗೆ ಮಾಡದೆ,ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟುಮತ್ತು ಬೆತ್ತಲೆಯಾದವನಿಗೆ ವಸ್ತ್ರವನ್ನು ಹೊದಿಸಿ, 17 ತನ್ನ ಕೈಯನ್ನು ಪಾಪ ಮಾಡುವುದರಿಂದ ಹಿಂತೆಗೆದು ಬಡ್ಡಿಯನ್ನೂ,ಲಾಭವನ್ನೂ ತೆಗೆದುಕೊಳ್ಳದೆ, ನನ್ನ ವಿಧಿಗಳನ್ನು ಪಾಲಿಸಿ,ನನ್ನ ನಿಯಮಗಳಲ್ಲಿ ನಡೆದರೆ,ಅವನು ತನ್ನ ತಂದೆಯ ಅಕ್ರಮಗಳ ನಿಮಿತ್ತ ಸಾಯುವುದಿಲ್ಲ, ಅವನು ನಿಶ್ಚಯವಾಗಿ ಬದುಕುವನು. 18 ಇವನ ತಂದೆಯಾದರೊ ಸ್ವಜನರನ್ನು ಬಲಾತ್ಕಾರ ಮಾಡಿದ್ದರಿಂದಲೂ, ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ, ತನ್ನ ಜನರ ಮಧ್ಯದಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದಲೂ ಅವನು ತನ್ನ ಅಕ್ರಮದಲ್ಲಿ ಸಾಯುವನು. 19 “ಆದರೂ ಇನ್ನೂ ನೀವು ಹೇಳುವುದೇನು? ‘ಮಗನು ತಂದೆಯ ಅಕ್ರಮವನ್ನು ಹೊರುವುದಿಲ್ಲವೇ?’ ಎಂದು ಹೇಳುವಿರಿ. ಮಗನು ನ್ಯಾಯವನ್ನೂ, ನೀತಿಯನ್ನೂ ಮಾಡಿ, ನನ್ನ ನಿಯಮಗಳನ್ನೆಲ್ಲಾ ಕೈಗೊಂಡು ನಡೆದರೆ ಅವನು ನಿಶ್ಚಯವಾಗಿ ಬದುಕುವನು. 20 ಪಾಪ ಮಾಡುವವನೇ ಸಾಯುವನು. ಮಗನು ತಂದೆಯ ಅಕ್ರಮವನ್ನು ಹೊರುವುದಿಲ್ಲ; ನೀತಿವಂತನ ನೀತಿಯು ಅವನ ಮೇಲೆಯೇ ಇರುವುದು; ದುಷ್ಟನ ದುಷ್ಟತನವು ಅವನ ಮೇಲೆಯೇ ಇರುವುದು. 21 “ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು, ನನ್ನ ನಿಯಮಗಳನ್ನೆಲ್ಲಾ ಕೈಗೊಂಡು, ನ್ಯಾಯವನ್ನೂ, ನೀತಿಯನ್ನೂ ನಡೆಸಿದರೆ, ಅವನು ಸಾಯದೆ ಖಂಡಿತವಾಗಿ ಬದುಕುವನು. 22 ಅವನು ಮಾಡಿದ ಪಾಪಗಳಲ್ಲಿ ಒಂದಾದರೂ ಅವನ ಲೆಕ್ಕಕ್ಕೆ ಸೇರಿಸಲಾಗುವುದಿಲ್ಲ. ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು. 23 ದುಷ್ಟನು ಸಾಯುವುದರಲ್ಲಿ ನನಗೆ ಸ್ವಲ್ಪ ಸಂತೋಷವಿರುವುದೋ?” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾನೆ. “ಅವನು ತನ್ನ ದುರ್ಮಾರ್ಗಗಳನ್ನು ಬಿಟ್ಟು ಬದುಕಿದರೆ ನನಗೆ ಸಂತೋಷವಲ್ಲವೇ? 24 “ಆದರೆ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ, ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿರುವ ಎಲ್ಲಾ ಸುಕೃತ್ಯಗಳು ಅವನ ಲೆಕ್ಕಕ್ಕೆ ಸೇರುವುದಿಲ್ಲ. ಅವನು ಮಾಡಿರುವ ಅಪರಾಧದಿಂದಲೂ, ಪಾಪದಿಂದಲೂ ಅವುಗಳಲ್ಲಿಯೇ ಅವನು ಸಾಯುವನು. 25 “ಆದರೆ ನೀವು, ‘ಯೆಹೋವ ದೇವರ ಮಾರ್ಗವು ಸರಿಯಲ್ಲ’ ಎಂದು ಹೇಳುತ್ತೀರಿ. ಇಸ್ರಾಯೇಲ್ ಜನರೇ, ಈಗ ಕೇಳಿರಿ, ನನ್ನ ಮಾರ್ಗವು ಸರಿಯಲ್ಲವೇ? ನಿಜಕ್ಕೂ ನಿಮ್ಮ ಮಾರ್ಗಗಳೇ ಸರಿಯಲ್ಲ. 26 ಒಬ್ಬ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಪಾಪವನ್ನು ಮಾಡಿದರೆ, ಅವನು ಅದಕ್ಕಾಗಿ ಸಾಯಬೇಕು; ಹೌದು, ಅವನು ಮಾಡಿದ ಪಾಪದಿಂದಲೇ ಅವನು ಸಾಯಬೇಕು. 27 ಒಬ್ಬ ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು, ನೀತಿನ್ಯಾಯವನ್ನು ಅನುಸರಿಸಿದರೆ, ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು. 28 ಏಕೆಂದರೆ ಅವನು ತಾನು ಮಾಡಿದ ದುಷ್ಕೃತ್ಯಗಳನ್ನು ಯೋಚಿಸಿ, ಅವುಗಳನ್ನು ಬಿಟ್ಟು ತಿರುಗಿಕೊಳ್ಳುವುದರಿಂದ ಸಾಯದೆ ನಿಶ್ಚಯವಾಗಿ ಬದುಕುವನು. 29 ಆದರೆ ಇಸ್ರಾಯೇಲ್ ಜನರು, ‘ಯೆಹೋವ ದೇವರ ಮಾರ್ಗ ನೀತಿಯುಕ್ತವಲ್ಲ,’ ಎನ್ನುತ್ತಾರೆ. ಇಸ್ರಾಯೇಲ್ ಜನರೇ, ನನ್ನ ಮಾರ್ಗ ಸರಿಯಲ್ಲವೇ? ನಿಮ್ಮ ಮಾರ್ಗಗಳು ಅನೀತಿಯ ಮಾರ್ಗಗಳಲ್ಲವೇ? 30 “ಆದ್ದರಿಂದ ಇಸ್ರಾಯೇಲ್ ಜನರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ಪ್ರತಿಯೊಬ್ಬನಿಗೆ ನ್ಯಾಯತೀರಿಸುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ನಿಮ್ಮ ದುಷ್ಟತನಗಳನ್ನೆಲ್ಲಾ ಬಿಟ್ಟು ತಿರುಗಿಕೊಳ್ಳಿರಿ. ಆಗ ಪಾಪವು ನಿಮ್ಮ ಪತನಕ್ಕೆ ಕಾರಣವಾಗುವುದಿಲ್ಲ. 31 ನೀವು ಮಾಡುವ ದುಷ್ಕೃತ್ಯಗಳನ್ನೆಲ್ಲಾ ನಿಮ್ಮಿಂದ ಎಸೆದುಬಿಡಿರಿ. ಹೊಸ ಹೃದಯವನ್ನೂ, ಹೊಸ ಆತ್ಮವನ್ನೂ ನೀವು ಪಡೆದುಕೊಳ್ಳಿರಿ. ಇಸ್ರಾಯೇಲಿನ ಮನೆತನದವರೇ, ನೀವು ಸಾಯುವುದೇಕೆ? 32 ಏಕೆಂದರೆ ಯಾವುದೇ ವ್ಯಕ್ತಿಯ ಸಾವಿನಲ್ಲಿ ನನಗೆ ಸಂತೋಷವಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಆದಕಾರಣ ಮಾನಸಾಂತರಪಟ್ಟು ಬಾಳಿರಿ.