Hebrews 11 (BOKCV2)
1 ನಂಬಿಕೆ ಎಂಬುದು ನಾವು ನಿರೀಕ್ಷಿಸುವವುಗಳ ನಿಶ್ಚಯವೂ ಕಾಣದವುಗಳ ನಿದರ್ಶನವೂ ಆಗಿದೆ. 2 ಹಿರಿಯರು ನಂಬಿಕೆಯಿಂದಲೇ ಒಳ್ಳೆಯ ಸಾಕ್ಷಿಹೊಂದಿದರು. 3 ವಿಶ್ವವು ದೇವರ ವಾಕ್ಯದಿಂದ ಉಂಟಾದವೆಂದೂ ಕಾಣುವಂತವುಗಳು ಕಾಣದವುಗಳಿಂದ ಉಂಟಾದವು ಎಂಬುದನ್ನು ನಾವು ನಂಬಿಕೆಯಿಂದ ತಿಳಿದುಕೊಂಡದ್ದರಿಂದ ಗ್ರಹಿಸುತ್ತೇವೆ. 4 ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಉತ್ತಮ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಅದರ ಮೂಲಕ ಅವನು ನೀತಿವಂತನೆಂದು ಸಾಕ್ಷಿಹೊಂದಿದನು. ದೇವರು ಸಹ ಅವನ ಕಾಣಿಕೆಗಳನ್ನು ಸ್ವೀಕಾರಮಾಡಿದರು. ಅವನು ಸತ್ತು ಹೋಗಿದ್ದರೂ ನಂಬಿಕೆಯ ಮೂಲಕ ಇನ್ನೂ ಮಾತನಾಡುತ್ತಿದ್ದಾನೆ. 5 ನಂಬಿಕೆಯಿಂದಲೇ ಹನೋಕನು ಮರಣ ಹೊಂದದೆ, ಒಯ್ಯಲಾದನು. “ದೇವರು ಅವನನ್ನು ತೆಗೆದುಕೊಂಡು ಹೋದದ್ದರಿಂದ ಅವನು ಕಾಣಲಿಲ್ಲ.” ಅವನು ಒಯ್ಯಲಾಗುವುದಕ್ಕಿಂತ ಮುಂಚೆ ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿಹೊಂದಿದನು. 6 ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವುದು ಅಸಾಧ್ಯ. ಏಕೆಂದರೆ ದೇವರ ಬಳಿಗೆ ಬರುವವರು, ದೇವರು ಇದ್ದಾರೆಂತಲೂ ತಮ್ಮನ್ನು ಜಾಗ್ರತೆಯಿಂದ ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾರೆಂತಲೂ ನಂಬಬೇಕು. 7 ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಕೆ ಪಡೆದು ಭಕ್ತಿಯಲ್ಲಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧಮಾಡಿದನು. ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಗೆ ಅನುಸಾರವಾಗಿ ನಂಬಿಕೆಯಿಂದ ಬರುವ ನೀತಿಗೆ ಬಾಧ್ಯನಾದನು. 8 ನಂಬಿಕೆಯಿಂದಲೇ ಅಬ್ರಹಾಮನು ಕರೆಕೊಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು. ತಾನು ಹೋಗುವುದು ಎಲ್ಲಿಗೆ ಎಂದು ತಿಳಿಯದೆ ಹೊರಟನು. 9 ನಂಬಿಕೆಯಿಂದಲೇ ಅವನು ವಾಗ್ದಾನದ ದೇಶಕ್ಕೆ ಬಂದಾಗಲೂ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರು ಸಹ ಗುಡಾರಗಳಲ್ಲಿ ವಾಸಿಸಿದರು. 10 ಏಕೆಂದರೆ ದೇವರು ಯಾವುದನ್ನು ಕಟ್ಟುವವರೂ ಮಾಡುವವರೂ ಆಗಿದ್ದಾರೋ ಆ ಅಸ್ತಿವಾರಗಳುಳ್ಳ ಪಟ್ಟಣಕ್ಕೋಸ್ಕರ ಅವರು ಎದುರುನೋಡುತ್ತಿದ್ದರು. 11 ನಂಬಿಕೆಯಿಂದಲೇ ಸಾರಳು ಸಹ ವಾಗ್ದಾನ ಮಾಡಿದ ದೇವರು ನಂಬಿಗಸ್ತರು ಎಂದೆಣಿಸಿ ತಾನು ಪ್ರಾಯಮೀರಿದವಳಾಗಿದ್ದರೂ ಗರ್ಭವತಿಯಾಗುವುದಕ್ಕೆ ಸಾಮರ್ಥ್ಯ ಹೊಂದಿ, ಒಂದು ಮಗುವನ್ನು ಹೆತ್ತಳು. 12 ಆದ್ದರಿಂದ ಮೃತಪ್ರಾಯನಾಗಿದ್ದ ಒಬ್ಬನಿಂದ ಆಕಾಶದ ನಕ್ಷತ್ರಗಳಂತೆ ಗುಂಪುಗುಂಪಾಗಿಯೂ ಸಮುದ್ರ ತೀರದಲ್ಲಿರುವ ಮರಳಿನಂತೆ ಅಸಂಖ್ಯವಾಗಿಯೂ ಸಂತತಿಯವರು ಹುಟ್ಟಿದರು. 13 ಈ ಎಲ್ಲಾ ಜನರು ಮರಣ ಹೊಂದುವಾಗಲೂ ವಿಶ್ವಾಸದಿಂದ ಜೀವಿಸುವವರಾಗಿದ್ದರು. ವಾಗ್ದಾನದ ಸಂಗತಿಗಳನ್ನು ಅವರು ಹೊಂದಲಿಲ್ಲ. ಅವುಗಳನ್ನು ಅವರು ದೂರದಿಂದಲೇ ನೋಡಿ ಸ್ವಾಗತಿಸಿದರು. ತಾವು ಭೂಮಿಯ ಮೇಲೆ ಪರದೇಶದವರೂ ಅಪರಿಚಿತರೂ ಆಗಿದ್ದೇವೆಂದು ಒಪ್ಪಿಕೊಂಡರು. 14 ಇಂಥಾ ಸಂಗತಿಗಳನ್ನು ಹೇಳುವ ಜನರು ತಮ್ಮ ಸ್ವಂತ ದೇಶಕ್ಕಾಗಿ ಎದುರುನೋಡುತ್ತಿದ್ದರು. 15 ಒಂದು ವೇಳೆ ತಾವು ಬಿಟ್ಟುಬಂದ ದೇಶವನ್ನು ಕುರಿತು ಅವರು ಯೋಚಿಸುತ್ತಿದ್ದರೆ, ಅಲ್ಲಿಗೆ ಹಿಂದಿರುಗಿ ಹೋಗುವ ಅವಕಾಶಗಳು ಅವರಿಗಿದ್ದವು. 16 ಅದರ ಬದಲು ಅವರು ಅದಕ್ಕಿಂತ ಉತ್ತಮವಾದ ಪರಲೋಕದ ದೇಶವನ್ನು ನಿರೀಕ್ಷಿಸಿದರು. ಆದ್ದರಿಂದ ದೇವರು ಅವರ ದೇವರೆನಿಸಿಕೊಳ್ಳುವುದಕ್ಕೆ ನಾಚಿಕೊಳ್ಳದೆ ಅವರಿಗಾಗಿ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾರೆ. 17 ಅಬ್ರಹಾಮನು ಪರೀಕ್ಷೆಗೆ ಒಳಗಾದಾಗ ಇಸಾಕನನ್ನು ನಂಬಿಕೆಯಿಂದಲೇ ಸಮರ್ಪಿಸಿದನು. ಆ ವಾಗ್ದಾನಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು. 18 ಅವನ ವಿಷಯದಲ್ಲಿ, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂದು ದೇವರು ಅವನಿಗೆ ಹೇಳಿದ್ದರೂ ವಾಗ್ದಾನ ಸ್ವೀಕರಿಸಿದವನು ತನ್ನ ಒಬ್ಬನೇ ಮಗನನ್ನು ಬಲಿಗಾಗಿ ಅರ್ಪಿಸಿದನು. 19 ತನ್ನ ದೇವರು ಸತ್ತವರೊಳಗಿಂದ ಎಬ್ಬಿಸಲು ಸಮರ್ಥರು ಎಂದು ಅಬ್ರಹಾಮನು ತಿಳಿದಿದ್ದನು. ಅವನು ಇಸಾಕನನ್ನು ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಹೊಂದಿದನು. 20 ನಂಬಿಕೆಯಿಂದಲೇ ಇಸಾಕನು ಮುಂದೆ ಬರಬೇಕಾದವುಗಳ ವಿಷಯದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು. 21 ನಂಬಿಕೆಯಿಂದಲೇ ಯಾಕೋಬನು ಮರಣ ಹೊಂದುವ ಸಮಯದಲ್ಲಿ ಯೋಸೇಫನ ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು. 22 ನಂಬಿಕೆಯಿಂದಲೇ ಯೋಸೇಫನು ಸಾಯುವಾಗ ಇಸ್ರಾಯೇಲರು ಹೊರಡುವುದನ್ನು ಕುರಿತು ಮಾತನಾಡಿ ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆಕೊಟ್ಟನು. 23 ನಂಬಿಕೆಯಿಂದಲೇ ಮೋಶೆ ಹುಟ್ಟಿದಾಗ ಕೂಸು ಸುಂದರವಾಗಿರುವುದನ್ನು ಅವನ ತಂದೆತಾಯಿಗಳು ನೋಡಿ ಅರಸನ ಅಪ್ಪಣೆಗೆ ಭಯಪಡದೆ ಅವನನ್ನು ಮೂರು ತಿಂಗಳು ಬಚ್ಚಿಟ್ಟರು. 24 ಮೋಶೆಯು ದೊಡ್ಡವನಾಗಿ ಬೆಳೆದ ಮೇಲೆ ನಂಬಿಕೆಯಿಂದಲೇ ಫರೋಹನ ಪುತ್ರಿಯ ಮಗನೆಂದು ಕರೆಯಿಸಿಕೊಳ್ಳಲು ನಿರಾಕರಿಸಿದ್ದನು. 25 ಮೋಶೆ ಗತಿಸಿ ಹೋಗುವ ಪಾಪಭೋಗಗಳನ್ನು ಅನುಭವಿಸುವುದಕ್ಕಿಂತ, ದೇವಜನರೊಂದಿಗೆ ಕಷ್ಟ ಅನುಭವಿಸುವುದನ್ನೇ ಆರಿಸಿಕೊಂಡನು. 26 ಈಜಿಪ್ಟಿನ ನಿಕ್ಷೇಪಕ್ಕಿಂತಲೂ ಕ್ರಿಸ್ತ ಯೇಸುವಿಗಾಗಿ ನಿಂದೆಯನ್ನು ಹೊಂದುವುದು ಮಹಾಐಶ್ವರ್ಯವೆಂದೆಣಿಸಿಕೊಂಡನು. ಏಕೆಂದರೆ ಅವನು ತನ್ನ ಬಹುಮಾನಕ್ಕಾಗಿ ಎದುರು ನೋಡಿದನು. 27 ನಂಬಿಕೆಯಿಂದಲೇ ಮೋಶೆ ಅರಸನ ಕೋಪಕ್ಕೆ ಭಯಪಡದೆ ಈಜಿಪ್ಟನ್ನು ಬಿಟ್ಟುಹೋದನು. ಏಕೆಂದರೆ ಅವನು ಕಣ್ಣಿಗೆ ಕಾಣದ ದೇವರನ್ನು ಕಣ್ಣಾರೆ ಕಾಣುತ್ತಿರುವನೋ ಎನ್ನುವಷ್ಟು ದೃಢಚಿತ್ತನಾಗಿದ್ದನು. 28 ಚೊಚ್ಚಲ ಮಕ್ಕಳನ್ನು ಸಂಹರಿಸುವ ದೂತನು ಇಸ್ರಾಯೇಲರ ಚೊಚ್ಚಲ ಮಕ್ಕಳನ್ನು ಮುಟ್ಟದಂತೆ ಮೋಶೆ ನಂಬಿಕೆಯಿಂದಲೇ ಪಸ್ಕವನ್ನೂ ರಕ್ತ ಪ್ರೋಕ್ಷಣೆಯನ್ನೂ ಆಚರಿಸಿದ್ದನು. 29 ನಂಬಿಕೆಯಿಂದಲೇ ಇಸ್ರಾಯೇಲರು ಒಣ ಭೂಮಿಯನ್ನು ದಾಟುವಂತೆ ಕೆಂಪು ಸಮುದ್ರವನ್ನು ದಾಟಿದರು. ಈಜಿಪ್ಟಿನವರು ಅದನ್ನು ದಾಟುವುದಕ್ಕೆ ಪ್ರಯತ್ನಿಸಿ ಮುಳುಗಿ ಹೋದರು. 30 ಇಸ್ರಾಯೇಲರು ಏಳು ದಿವಸಗಳು ಯೆರಿಕೋವಿನ ಗೋಡೆಗಳನ್ನು ಸುತ್ತಿದ ಮೇಲೆ, ಅವು ಬಿದ್ದು ಹೋದದ್ದು ನಂಬಿಕೆಯಿಂದಲೇ. 31 ರಹಾಬಳೆಂಬ ವೇಶ್ಯೆಯು ಗೂಢಚಾರರನ್ನು ಸಮಾಧಾನವಾಗಿ ಸ್ವಾಗತಿಸಿದ್ದರಿಂದ ಅವಿಧೇಯರೊಂದಿಗೆ ನಾಶವಾಗದೆ ಉಳಿದದ್ದು ನಂಬಿಕೆಯಿಂದಲೇ. 32 ಇನ್ನೂ ಏನು ಹೇಳಬೇಕು? ಗಿಡಿಯೋನ್, ಬಾರಾಕ್, ಸಂಸೋನ್, ಎಪ್ತಾಹ, ದಾವೀದ, ಸಮುಯೇಲ ಮತ್ತು ಪ್ರವಾದಿಗಳ ವಿಷಯವಾಗಿ ಹೇಳುವುದಕ್ಕೆ ನನಗೆ ಸಮಯ ಸಾಲದು. 33 ಇವರೆಲ್ಲರೂ ನಂಬಿಕೆಯ ಮೂಲಕವೇ ರಾಜ್ಯಗಳನ್ನು ಸ್ವಾಧೀನಮಾಡಿಕೊಂಡರು. ನೀತಿಯನ್ನು ಸ್ಥಾಪಿಸಿದರು, ವಾಗ್ದಾನಗಳನ್ನು ಪಡೆದುಕೊಂಡರು, ಸಿಂಹಗಳ ಬಾಯಿ ಕಟ್ಟಿದರು, 34 ಬೆಂಕಿಯ ಶಕ್ತಿಯನ್ನು ಆರಿಸಿದರು, ಕತ್ತಿಯ ಬಾಯಿಂದ ತಪ್ಪಿಸಿಕೊಂಡರು, ಬಲಹೀನತೆಯಿಂದ ಬಲಿಷ್ಠರಾದರು, ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು, ಪರರ ಸೈನ್ಯಗಳನ್ನು ಓಡಿಸಿಬಿಟ್ಟರು, 35 ಸ್ತ್ರೀಯರು ಸತ್ತು ಹೋಗಿದ್ದ ತಮ್ಮವರನ್ನು ಜೀವದಿಂದ ತಿರುಗಿ ಪಡೆದುಕೊಂಡರು. ಆದರೆ ಬೇರೆ ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಉತ್ತಮ ಪುನರುತ್ಥಾನ ಹೊಂದುವುದಕ್ಕಾಗಿ ತಮಗೆ ಬಿಡುಗಡೆಯನ್ನು ಸ್ವೀಕರಿಸದೆ ಹೋದರು, 36 ಇನ್ನೂ ಬೇರೆ ಕೆಲವರು ಅಪಹಾಸ್ಯ, ಕೊರಡೆಯ ಪೆಟ್ಟು ತಿಂದು ಬೇಡಿ ಸೆರೆವಾಸವನ್ನು ಸಹ ಅನುಭವಿಸಿದರು, 37 ಕೆಲವರ ಮೇಲೆ ಕಲ್ಲೆಸೆದರು, ಕೆಲವರನ್ನು ಗರಗಸದಿಂದ ಎರಡು ಭಾಗವಾಗಿ ಕೊಯ್ದು ಸಾಯಿಸಿದರು, ಕೆಲವರನ್ನು ಶೋಧಿಸಿದರು, ಕೆಲವರನ್ನು ಕತ್ತಿಯಿಂದ ಕೊಂದರು, ಕೆಲವರು ಕೊರತೆ, ಹಿಂಸೆ, ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿಮೇಕೆಗಳ ಚರ್ಮಗಳನ್ನು ಉಟ್ಟುಕೊಂಡವರಾಗಿ 38 ಭೂಮಿಯ ಕಾಡು, ಬೆಟ್ಟ, ಗವಿ, ಕುಣಿಗಳಲ್ಲಿ ಅಲೆಯುವವರಾಗಿದ್ದರು. ಇಂಥವರಿಗೆ ಈ ಲೋಕವು ಯೋಗ್ಯವಾದ ಸ್ಥಳವಲ್ಲ. 39 ಇವರೆಲ್ಲರೂ ತಮ್ಮ ನಂಬಿಕೆಯ ಮೂಲಕ ಒಳ್ಳೆಯ ಸಾಕ್ಷಿಯನ್ನು ಹೊಂದಿದವರಾಗಿದ್ದರೂ ವಾಗ್ದಾನವಾದದ್ದನ್ನು ಹೊಂದಲಿಲ್ಲ. 40 ಏಕೆಂದರೆ ನಮ್ಮೊಂದಿಗೆ ಅವರು ಪರಿಪೂರ್ಣರಾಗಬೇಕೆಂದು ದೇವರು ನಮಗೋಸ್ಕರ ಉತ್ತಮವಾದದ್ದನ್ನು ಸಂಕಲ್ಪಿಸಿದ್ದಾರೆ.