Job 18 (BOKCV2)
1 ಆಗ ಶೂಹ್ಯನಾದ ಬಿಲ್ದದನು ಉತ್ತರಕೊಟ್ಟು ಹೀಗೆಂದನು: 2 “ಯೋಬನೇ, ಈ ಮಾತುಗಳನ್ನು ನೀನು ಯಾವಾಗ ಕೊನೆಗೊಳಿಸುತ್ತೀ?ವಿವೇಕಿಯಾಗು, ಆಮೇಲೆ ಮಾತನಾಡೋಣ. 3 ನಮ್ಮನ್ನು ಮೃಗಗಳೆಂದು ಎಣಿಸಿರುವೆಯಾ?ನಿನ್ನ ದೃಷ್ಟಿಯಲ್ಲಿ ನಾವು ದಡ್ಡರೋ? 4 ಕೋಪದಿಂದ ನಿನ್ನನ್ನು ನೀನೇ ಸೀಳಿಕೊಳ್ಳುವೆಯಾ?ನಿನ್ನ ನಿಮಿತ್ತ ಭೂಮಿ ಹಾಳಾಗಬೇಕೋ?ಬಂಡೆಯು ತನ್ನ ಸ್ಥಳದಿಂದ ತೊಲಗಬೇಕೋ? 5 “ಹೌದು, ನಿಶ್ಚಯವಾಗಿ ದುಷ್ಟರ ಬೆಳಕು ಆರಿಹೋಗುವುದು;ಅವನ ಬಾಳಿನ ಬೆಂಕಿಯ ಜ್ವಾಲೆಯು ಉರಿಯದೆ ಹೋಗುವುದು. 6 ಅವನ ಗುಡಾರದಲ್ಲಿ ಬೆಳಕು ಕತ್ತಲಾಗುವುದು;ಅವನ ಮೇಲಣ ತೂಗು ದೀಪವು ಆರಿಹೋಗುವುದು. 7 ಅವನ ಬಲವುಳ್ಳ ಹೆಜ್ಜೆಗಳು ದುರ್ಬಲಗೊಳ್ಳುವುದು;ಅವನ ಯೋಜನೆಗಳೇ ಅವನನ್ನು ಕೆಡವಿಹಾಕುವವು. 8 ಏಕೆಂದರೆ ದುಷ್ಟನು ತನ್ನ ಹೆಜ್ಜೆಗಳಿಂದಲೇ ಬಲೆಯಲ್ಲಿ ಬೀಳುವನು;ಅವನು ಕುಣಿಯಲ್ಲಿ ಬಿದ್ದು ಅಲೆದಾಡುವನು. 9 ಬೋನು ಅವನ ಹಿಮ್ಮಡಿಯನ್ನು ಹಿಡಿದುಕೊಳ್ಳುವುದು;ಉರುಳು ಅವನನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವುದು. 10 ನೆಲದ ಮೇಲೆ ಪಾಶವೂ,ದಾರಿಯಲ್ಲಿ ಜಾಲವೂ ಅವನಿಗೆ ಹೊಂಚಿಕೊಂಡಿರುವುವು. 11 ಸುತ್ತಲೂ ದಿಗಿಲುಗಳು ಅವನನ್ನು ಹೆದರಿಸಿ,ಅವನ ಕಾಲುಗಳನ್ನು ಓಡುವಂತೆ ಮಾಡುವುವು. 12 ಅವನ ಬಲವು ಕುಸಿಯುವುದು;ವಿನಾಶವು ಅವನ ಬೀಳುವಿಕೆಗಾಗಿ ಸಿದ್ಧವಾಗಿರುವುದು. 13 ಅದು ಅವನ ಚರ್ಮದ ಬಲವನ್ನು ತಿಂದುಬಿಡುವುದು;ಮರಣದ ಚೊಚ್ಚಲತನವು ಅವನ ಅಂಗಾಂಗಗಳನ್ನು ನುಂಗಿಬಿಡುವುದು. 14 ಅವನು ಭದ್ರತೆಯ ಗುಡಾರದಿಂದ ಹೊರಬೀಳುವನು.ಅವನು ಭಯಂಕರ ಅರಸನ ಬಳಿಗೆ ಸಾಗಬೇಕಾಗುವುದು. 15 ಬೆಂಕಿಯು ಅವನ ಮನೆಯನ್ನು ಸುಡುವುದು;ಅವನ ಮನೆಯ ಮೇಲೆ ಗಂಧಕವನ್ನು ಎರಚಲಾಗುವುದು. 16 ಬುಡದಿಂದ ಅವನ ಬೇರುಗಳು ಒಣಗುವುವು;ಮೇಲಿನಿಂದ ಅವನ ರೆಂಬೆಯು ಬಾಡುವುದು. 17 ಅವನ ಸ್ಮರಣೆಯು ಭೂಮಿಯಿಂದ ಅಳಿದುಹೋಗುವುದು;ನಾಡಿನಲ್ಲಿ ಅವನ ಹೆಸರು ಇಲ್ಲದೆ ಹೋಗುವುದು. 18 ಬೆಳಕಿನಿಂದ ಅವನನ್ನು ಕತ್ತಲೆಗೆ ದಬ್ಬಲಾಗುವುದು;ಅವನು ಲೋಕದಿಂದ ಬಹಿಷ್ಕರಿಸಲಾಗುವನು. 19 ಅವನ ಜನರಲ್ಲಿ ಅವನಿಗೆ ಮಗನೂ, ಮೊಮ್ಮಗನೂ ಇರುವುದಿಲ್ಲ,ಅವನು ವಾಸಿಸಿದ ಸ್ಥಳದಲ್ಲಿ ಯಾರೂ ಉಳಿಯುವುದಿಲ್ಲ. 20 ಪಶ್ಚಿಮ ಜನರು ಅವನ ಸ್ಥಿತಿಯನ್ನು ನೋಡಿ ಆಶ್ಚರ್ಯಪಡುವರು;ಪೂರ್ವದ ಕಡೆಯವರನ್ನು ದಿಗಿಲು ಹಿಡಿಯುವುದು. 21 ನಿಶ್ಚಯವಾಗಿ ದುಷ್ಟರ ನೆಲೆಯು ಹೀಗೆಯೇ ಇರುವುದು;ದೇವರನ್ನು ಅರಿಯದವನ ಸ್ಥಿತಿ ಇದೇ.”