Leviticus 11 (BOKCV2)
1 ಯೆಹೋವ ದೇವರು ಮೋಶೆ ಆರೋನರಿಗೆ ಹೀಗೆ ಹೇಳಿದರು, 2 “ಇಸ್ರಾಯೇಲರೊಂದಿಗೆ ಮಾತನಾಡಿ ಹೀಗೆ ಹೇಳಬೇಕು: ‘ಭೂಮಿಯ ಮೇಲೆ ಇರುವ ಎಲ್ಲಾ ನೀವು ತಿನ್ನತಕ್ಕ ಪ್ರಾಣಿಗಳು ಯಾವವಂದರೆ: 3 ಪ್ರಾಣಿಗಳಲ್ಲಿ ಕಾಲ್ಗೊರಸು ಸೀಳಿದ ಮತ್ತು ಮೇವನ್ನು ಮೆಲುಕಾಡಿಸುವುದನ್ನೂ ನೀವು ತಿನ್ನಬಹುದು. 4 “ ‘ಯಾವ ಪ್ರಾಣಿ ಮೆಲುಕು ಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲುಕು ಹಾಕುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು. ಒಂಟೆಯು ಮೇವನ್ನು ಮೆಲುಕಾಡಿಸುವುದಾದರೂ ಅದಕ್ಕೆ ಸೀಳುಗೊರಸು ಇಲ್ಲ. ಅದು ನಿಮಗೆ ಅಶುದ್ಧ. 5 ಬೆಟ್ಟದ ಕುಣಿ ಮೊಲವು ಮೇವನ್ನು ಮೆಲುಕುಹಾಕುವುದಾದರೂ, ಆದರೂ ಸೀಳುಗೊರಸು ಇಲ್ಲವಾದದ್ದರಿಂದ ಅದು ನಿಮಗೆ ಅಶುದ್ಧವಾಗಿರುವುದು. 6 ಮೊಲವು ಮೆಲುಕುಹಾಕುವುದಾದರೂ, ಆದರೂ ಸೀಳುಗೊರಸು ಇಲ್ಲವಾದದ್ದರಿಂದ ಅದು ನಿಮಗೆ ಅಶುದ್ಧವಾಗಿರುವುದು. 7 ಹಂದಿಯ ಗೊರಸು ಸೀಳಿದ್ದರೂ ಅದು ಮೇವನ್ನು ಮೆಲುಕು ಹಾಕುವುದಿಲ್ಲ, ಅದು ನಿಮಗೆ ಅಶುದ್ಧವಾಗಿರುವುದು. 8 ಅವುಗಳ ಮಾಂಸವನ್ನು ನೀವು ತಿನ್ನಬಾರದು. ಅವುಗಳ ಹೆಣವನ್ನು ಮುಟ್ಟಬಾರದು. ಅವು ನಿಮಗೆ ಅಶುದ್ಧವಾಗಿವೆ. 9 “ ‘ನೀರಿನಲ್ಲಿ ಬಾಳುವ ಎಲ್ಲವುಗಳಲ್ಲಿ ಅಂದರೆ ಸಮುದ್ರದಲ್ಲಿ ಮತ್ತು ನದಿಯಲ್ಲಿ ಇರುವ ಈಜು ರೆಕ್ಕೆಗಳುಳ್ಳ ಮತ್ತು ಪೊರೆ ಇರುವವುಗಳನ್ನು ತಿನ್ನಬಹುದು. 10 ಸಮುದ್ರಗಳಲ್ಲಿಯೂ, ನದಿಗಳಲ್ಲಿಯೂ ನೀರೊಳಗೆ ಚಲಿಸುವ ಮತ್ತು ಜೀವಿಸುವ ಎಲ್ಲವುಗಳಲ್ಲಿ ಈಜುರೆಕ್ಕೆ ಮತ್ತು ಪೊರೆಯಿಲ್ಲದವುಗಳು ನಿಮಗೆ ನಿಷಿದ್ಧವಾಗಿವೆ. 11 ಅವು ನಿಮಗೆ ಅಶುದ್ಧವಾಗಿಯೇ ಇರುವವು. ನೀವು ಅವುಗಳ ಮಾಂಸವನ್ನು ತಿನ್ನಬಾರದು ಮತ್ತು ಅವುಗಳ ಶವಗಳು ನಿಮಗೆ ಹೇಯವಾಗಿರಬೇಕು. 12 ನೀರಲ್ಲಿ ಯಾವುದಕ್ಕೆ ಈಜುರೆಕ್ಕೆ ಮತ್ತು ಪೊರೆಗಳಿಲ್ಲವೋ ಅವು ನಿಮಗೆ ಹೇಯವಾಗಿರಬೇಕು. 13 “ ‘ಪಕ್ಷಿಗಳಲ್ಲಿ ಇವುಗಳು ನಿಮಗೆ ನಿಷಿದ್ಧವಾಗಿವೆ. ಇವುಗಳು ನಿಮಗೆ ಅಸಹ್ಯಕರವಾದ ಮತ್ತು ತಿನ್ನಲು ನಿಷೇಧಿಸಲಾದ ಪಕ್ಷಿಗಳು ನೀವು ತಿನ್ನಬಾರದವುಗಳು ಯಾವುವೆಂದರೆ: ಗರುಡ, ರಣಹದ್ದು, ಕಪ್ಪು ರಣಹದ್ದು. 14 ಕ್ರೌಂಚ, ಅದರ ಜಾತಿಯ ಹದ್ದು, 15 ಅದರ ಜಾತಿಗನುಸಾರವಾದ ಪ್ರತಿಯೊಂದು ಕಾಗೆ, 16 ಉಷ್ಟ್ರಪಕ್ಷಿ, ಚೀರು ಗೂಬೆ, ಕಡಲ ಹಕ್ಕಿ ಮತ್ತು ಅದರ ಪ್ರತಿಯೊಂದು ಜಾತಿಯ ಗಿಡುಗ. 17 ಸಣ್ಣ ಗೂಬೆ, ನೀರುಕಾಗೆ, ದೊಡ್ಡ ಗೂಬೆ, 18 ಬಿಳಿಗೂಬೆ, ಮರಳುಗಾಡು ಗೂಬೆ, ರಣಹದ್ದು, 19 ನೀರು ಕೋಳಿ, ಕೊಕ್ಕರೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಬಾವಲಿ. 20 “ ‘ನಾಲ್ಕು ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳು ನಿಮಗೆ ಹೇಯವಾಗಿರಬೇಕು. 21 ಆದರೂ ಹಾರಾಡುವ, ಹರಿದಾಡುವ ನಾಲ್ಕು ಕಾಲುಗಳ ಮೇಲೆ ಹೋಗುವ, ತಮ್ಮ ಪಾದಗಳ ಮೇಲೆ ಕಾಲುಗಳಿದ್ದು, ಭೂಮಿಯ ಮೇಲೆ ದುಮುಕುವವುಗಳನ್ನೂ ನೀವು ತಿನ್ನಬಹುದು. 22 ಮಿಡತೆಗಳನ್ನು ಜುಟ್ಟೆ ಮಿಡತೆಗಳನ್ನು ಅವುಗಳ ಜಾತಿಗನುಸಾರವಾಗಿ ತಿನ್ನಬಹುದು. 23 ಆದರೆ ನಾಲ್ಕು ಪಾದವಿರುವ ಎಲ್ಲಾ ಹಾರಾಡುವ, ಹರಿದಾಡುವ ಬೇರೆಯವುಗಳು ನಿಮಗೆ ಹೇಯವಾಗಿರಬೇಕು. 24 “ ‘ಇವುಗಳಿಂದ ನೀವು ಅಶುದ್ಧರಾಗುವಿರಿ. ಅಂದರೆ ಅವುಗಳ ಶವಗಳನ್ನು ಮುಟ್ಟುವವರು ಸಂಜೆಯವರೆಗೂ ಅಶುದ್ಧರಾಗಿರುವರು. 25 ಯಾರಾದರೂ ಅವುಗಳ ಶವವನ್ನು ಹೊತ್ತರೂ, ಅವರು ಬಟ್ಟೆಗಳನ್ನು ಒಗೆದುಕೊಂಡು ಸಂಜೆಯವರೆಗೂ ಅಶುದ್ಧರಾಗಿರುವರು. 26 “ ‘ಯಾವ ಪ್ರಾಣಿಯ ಗೊರಸು ಸ್ವಲ್ಪ ಸೀಳಿದ್ದರೂ, ಇಗ್ಗೊರಸಾಗಿಲ್ಲವೋ ಮತ್ತು ಮೆಲುಕು ಹಾಕುವುದಿಲ್ಲವೋ ಅದು ನಿಮಗೆ ಅಶುದ್ಧ. ಅವುಗಳ ಶವವನ್ನು ಮುಟ್ಟುವವರು ಅಶುದ್ಧರಾಗಿರುವರು. 27 ನಾಲ್ಕು ಕಾಲುಗಳ ಮೇಲೆ ಹೋಗುವ ಎಲ್ಲಾ ಬಗೆಯ ಮೃಗಗಳಲ್ಲಿ ಅಂಗಾಲಿನ ಮೇಲೆ ಹೋಗುವುದೆಲ್ಲವೂ ನಿಮಗೆ ಅಶುದ್ಧವಾಗಿರುವುವು. ಯಾರಾದರೂ ಅವುಗಳ ಶವವನ್ನು ಮುಟ್ಟಿದರೆ ಅವರು ಸಂಜೆಯವರೆಗೂ ಅಶುದ್ಧರಾಗಿರುವರು. 28 ಅವುಗಳ ಶವವನ್ನು ಹೊರುವವರು ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವರು ಸಂಜೆಯವರೆಗೂ ಅಶುದ್ಧರಾಗಿರುವರು. ಈ ಪ್ರಾಣಿಗಳು ನಿಮಗೆ ಅಶುದ್ಧವಾದವುಗಳು. 29 “ ‘ಭೂಮಿಯ ಮೇಲೆ ಹರಿದಾಡುವವುಗಳಲ್ಲಿ ಇವು ಸಹ ನಿಮಗೆ ಅಶುದ್ಧವಾಗಿರಬೇಕು: ಮುಂಗುಲಿ, ಇಲಿ, ಸಕಲವಿಧವಾದ ಉಡ, 30 ಅರೆ ಪಳಗಿಸಿದ ಪ್ರಾಣಿ, ಹಾವುರಾಣಿ, ಊಸುರುವಳ್ಳಿ, ಹಲ್ಲಿ, ಬಸವನ ಹುಳು ಮತ್ತು ಚಿಟ್ಟಿಲಿ. 31 ನೆಲದ ಮೇಲೆ ಹರಿದಾಡುವ ಇವು ನಿಮಗೆ ಅಶುದ್ಧ. ಸತ್ತಿರುವಾಗ ಅವುಗಳನ್ನು ಯಾರಾದರೂ ಮುಟ್ಟಿದರೆ ಅವರು ಸಂಜೆಯವರೆಗೂ ಅಶುದ್ಧರಾಗಿರುವರು. 32 ಅವು ಸತ್ತು ಹೋಗಿ, ಯಾವುದರ ಮೇಲೆ ಬೀಳುವವೋ ಅವೆಲ್ಲಾ ಅಶುದ್ಧವಾಗಿರುವುದು. ಅದು ಮರದ ಪಾತ್ರೆಯೇ ಆಗಿರಲಿ, ಉಡುಪೇ ಆಗಿರಲಿ, ಚೀಲವೇ ಆಗಿರಲಿ, ಕೆಲಸ ಮಾಡುವ ಯಾವ ವಸ್ತುವಾಗಲಿ, ಅದು ಏನೇ ಆಗಿರಲಿ ಸಂಜೆಯವರೆಗೆ ನೀರಲ್ಲಿ ಇಡುವವರೆಗೆ ಅಶುದ್ಧವಾಗಿರುವುದು. ನಂತರ ಅದು ಶುದ್ಧವಾಗುವುದು. 33 ಪ್ರತಿಯೊಂದು ಮಣ್ಣಿನ ಪಾತ್ರೆಯಲ್ಲಿ ಅವುಗಳಲ್ಲಿ ಯಾವುದಾದರೂ ಬಿದ್ದರೆ, ಅದರಲ್ಲಿ ಏನಿದ್ದರೂ ಅಶುದ್ಧವಾಗುವುದು ಮತ್ತು ನೀವು ಅದನ್ನು ಒಡೆದುಹಾಕಬೇಕು. 34 ಅದರಲ್ಲಿರುವ ಆಹಾರ ಪದಾರ್ಥವೆಲ್ಲಾ ನೀರಿನಿಂದ ನೆನೆದಿದ್ದರೆ ಅದು ಅಶುದ್ಧವಾಗಿರುವುದು. ಅಂಥ ಪ್ರತಿ ಪಾತ್ರೆಯಲ್ಲಿ ಕುಡಿಯುವ ಎಲ್ಲಾ ಪಾನವೂ ಅಶುದ್ಧವಾಗಿರುವುದು. 35 ಅವುಗಳ ಹೆಣ ಯಾವ ಸಾಮಾನಿನ ಮೇಲೆ ಬಿದ್ದರೂ ಅದು ಅಶುದ್ಧವಾಗಿರುವುದು. ಅದು ಹರಿವಾಣವಾಗಿದ್ದರೂ, ಮಣ್ಣುಗಳ ಒಲೆಯಾಗಿದ್ದರೂ ಅದನ್ನು ಒಡೆದುಹಾಕಬೇಕು. ಏಕೆಂದರೆ ಅವು ಅಶುದ್ಧವಾಗಿವೆ. ಅವು ನಿಮಗೆ ಅಶುದ್ಧವೇ. 36 ನೀರು ಹೆಚ್ಚಾಗಿರುವ ಬುಗ್ಗೆಯಾಗಲಿ, ಹಳ್ಳವಾಗಲಿ ಶುದ್ಧವಾಗಿರುವುದು. ಅವುಗಳೊಳಗಿಂದ ಹೆಣಗಳನ್ನು ಎತ್ತಿದವರು ಅಶುದ್ಧರಾಗುವರು. 37 ಯಾವ ಭಾಗವಾದರೂ ಬಿತ್ತುವ ಬೀಜದಲ್ಲಿ ಬಿದ್ದರೂ ಶುದ್ಧವಾಗಿರುವುದು. 38 ಆದರೆ ನೀರು ಹಾಕಿ ನೆನಸಿದ ಬೀಜದ ಮೇಲೆ ಆ ಹೆಣವು ಬಿದ್ದರೆ, ಅದು ನಿಮಗೆ ಅಶುದ್ಧವಾಗಿರುವುದು. 39 “ ‘ನೀವು ತಿನ್ನುವ ಯಾವುದಾದರೂ ಪ್ರಾಣಿ ಸತ್ತಿದ್ದರೆ, ಅದರ ಶವವನ್ನು ಮುಟ್ಟಿದವರು ಸಂಜೆಯವರೆಗೆ ಅಶುದ್ಧರಾಗಿರುವರು. 40 ಯಾರಾದರೂ ಅದರ ಮಾಂಸವನ್ನು ತಿಂದಲ್ಲಿ ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು. ಅದರ ಶವವನ್ನು ಹೊರುವವರೂ ತಮ್ಮ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಅವರು ಸಂಜೆಯವರೆಗೆ ಅಶುದ್ಧರಾಗಿರುವರು. 41 “ ‘ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯೂ ಹೇಯವಾಗಿದೆ. ಅದನ್ನು ತಿನ್ನಬಾರದು. 42 ಹೊಟ್ಟೆಯಿಂದ ಹರಿದಾಡುವ ಯಾವುದನ್ನೂ, ನಾಲ್ಕು ಕಾಲಿನ ಮೇಲೆ ನಡೆದಾಡುವ ಯಾವುದನ್ನೂ, ಇಲ್ಲವೆ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳಲ್ಲಿ ಬಹಳ ಕಾಲುಗಳಿದ್ದ ಯಾವುದನ್ನು ನೀವು ತಿನ್ನಬಾರದು. ಏಕೆಂದರೆ ಅವು ಹೇಯವಾಗಿವೆ. 43 ಯಾವುದೇ ಹರಿದಾಡುವ ಪ್ರಾಣಿಯೊಡನೆಯೂ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬಾರದು, ನೀವು ಅವುಗಳೊಂದಿಗೆ ನಿಮ್ಮನ್ನು ಅಶುದ್ಧಪಡಿಸಿಕೊಂಡು ಅವುಗಳಿಂದ ಮಲಿನರಾಗಬಾರದು. 44 ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಾನೇ. ನೀವು ನಿಮ್ಮನ್ನು ಪ್ರತಿಷ್ಠಿಸಿಕೊಳ್ಳಿರಿ. ನಾನು ಪರಿಶುದ್ಧನಾಗಿರುವುದರಿಂದ ನೀವೂ ಪರಿಶುದ್ಧರಾಗಿರಬೇಕು. ಇದಲ್ಲದೆ ಭೂಮಿಯ ಮೇಲೆ ಹರಿದಾಡುವ ಯಾವ ಬಗೆಯ ಜಂತುಗಳಿಂದಲೂ ನಿಮ್ಮನ್ನು ಅಶುದ್ಧಮಾಡಿಕೊಳ್ಳಬಾರದು. 45 ಏಕೆಂದರೆ ನಿಮ್ಮ ದೇವರಾಗಿರುವುದಕ್ಕೆ ಈಜಿಪ್ಟ್ ದೇಶದಿಂದ ನಿಮ್ಮನ್ನು ಹೊರಗೆ ಕರೆತಂದ ಯೆಹೋವ ದೇವರು ನಾನೇ. ನಾನು ಪರಿಶುದ್ಧನಾಗಿರುವುದರಿಂದ ನೀವು ಪರಿಶುದ್ಧರಾಗಿರಬೇಕು. 46 “ ‘ಪ್ರಾಣಿಗಳು, ಪಕ್ಷಿಗಳು, ನೀರಿನಲ್ಲಿರುವ ಮತ್ತು ನೆಲದ ಮೇಲೆ ತೆವಳುವ ಪ್ರತಿಯೊಂದು ಜೀವಿಗಳಿಗೆ ಕುರಿತಾದ ನಿಯಮವು ಇದೇ. 47 ಅಶುದ್ಧ ಮತ್ತು ಶುದ್ಧಗಳ ನಡುವಿನ ವ್ಯತ್ಯಾಸವನ್ನೂ ಮತ್ತು ತಿನ್ನಲರ್ಹವಾದ ಮೃಗ ಮತ್ತು ತಿನ್ನಬಾರದ ಮೃಗಗಳ ನಡುವಿನ ವ್ಯತ್ಯಾಸವನ್ನು ಹೀಗೆ ತಿಳಿದುಕೊಳ್ಳುವಿರಿ.’ ”