Deuteronomy 31 (IRVK)
1 ಮೋಶೆ ಹೋಗಿ ಈ ಮಾತುಗಳನ್ನು ಇಸ್ರಾಯೇಲರೆಲ್ಲರಿಗೆ ತಿಳಿಸಿದನು. 2 ಅವನು ಅವರಿಗೆ, “ನಾನು ಈಗ ನೂರಿಪ್ಪತ್ತು ವರ್ಷದವನಾಗಿದ್ದೇನೆ; ವಿಶೇಷವಾದ ಕಾರ್ಯಗಳನ್ನು ನಿರ್ವಹಿಸುವುದು ಇನ್ನು ನನ್ನಿಂದಾಗದು. ಯೆಹೋವನು ನನಗೆ, ‘ನೀನು ಈ ಯೊರ್ದನ್ ನದಿಯನ್ನು ದಾಟಬಾರದು’ ಎಂದು ಆಜ್ಞಾಪಿಸಿದ್ದಾನೆ. 3 ನಿಮ್ಮ ದೇವರಾದ ಯೆಹೋವನು ತಾನೇ ನಿಮ್ಮ ಮುಂದೆ ಹೋಗುವನು; ಆತನು ಆ ಜನಾಂಗಗಳನ್ನು ನಿಮ್ಮ ಎದುರಿನಲ್ಲಿ ನಿಲ್ಲದಂತೆ ನಾಶಮಾಡುವುದರಿಂದ ನೀವು ಅವರ ದೇಶವನ್ನು ಸ್ವಾಧೀನಮಾಡಿಕೊಳ್ಳುವಿರಿ. ಯೆಹೋವನು ಆಜ್ಞಾಪಿಸಿದಂತೆ ಯೆಹೋಶುವನು ನಿಮ್ಮ ನಾಯಕನಾಗಿ ನದಿಯನ್ನು ದಾಟಿಹೋಗುವನು. 4 ಯೆಹೋವನು ಅಮೋರಿಯರ ಅರಸನಾದ ಸೀಹೋನ್ ಮತ್ತು ಓಗರನ್ನು ನಾಶಮಾಡಿ, ಅವರ ದೇಶವನ್ನು ನಿಮಗೆ ಸ್ವಾಧೀನಪಡಿಸಿದಂತೆ ಆ ಜನಾಂಗಗಳನ್ನೂ ನಾಶಮಾಡಿ ಅವರ ದೇಶವನ್ನು ನಿಮಗೆ ವಶಪಡಿಸುವನು. 5 ಯೆಹೋವನು ಅವರನ್ನು ನಿಮ್ಮಿಂದ ಪರಾಜಯಪಡಿಸಿದಾಗ ನೀವು ಅವರ ವಿಷಯದಲ್ಲಿ ನನ್ನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದುಕೊಳ್ಳಬೇಕು. 6 ನೀವು ಶೂರರಾಗಿ ಧೈರ್ಯದಿಂದ ಇರಿ; ಅವರಿಗೆ ಅಂಜಬೇಡಿರಿ, ಕಳವಳಪಡಬೇಡಿರಿ. ನಿಮ್ಮ ದೇವರಾದ ಯೆಹೋವನೇ ನಿಮ್ಮ ಸಂಗಡ ಇರುತ್ತಾನಲ್ಲಾ; ಆತನು ನಿಮ್ಮನ್ನು ಕೈಬಿಡುವುದಿಲ್ಲ, ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ” ಎಂದು ಹೇಳಿದನು. 7 ಆಗ ಮೋಶೆ ಯೆಹೋಶುವನನ್ನು ಕರೆದು ಇಸ್ರಾಯೇಲರ ಮುಂದೆ ಅವನಿಗೆ, “ಯೆಹೋವನು ಇವರ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶಕ್ಕೆ ನೀನೇ ಇವರೊಡನೆ ಹೋಗಿ ಅದನ್ನು ಅವರಿಗೆ ಸ್ವಾಧೀನಪಡಿಸಬೇಕು. ಆದುದರಿಂದ ಶೂರನಾಗಿ ಧೈರ್ಯದಿಂದಿರು; 8 ಯೆಹೋವನು ತಾನೇ ನಿನ್ನ ಮುಂದೆ ಹೋಗುವನು; ಆತನೇ ನಿನ್ನ ಸಂಗಡ ಇರುವನು; ನಿನ್ನನ್ನು ಅಪಜಯಕ್ಕೆ ಗುರಿಪಡಿಸುವುದೇ ಇಲ್ಲ, ಕೈಬಿಡುವುದಿಲ್ಲ; ಅಂಜಬೇಡ, ಧೈರ್ಯದಿಂದಿರು” ಎಂದು ಹೇಳಿದನು. 9 ಮೋಶೆ ಈ ಧರ್ಮಶಾಸ್ತ್ರವನ್ನು ಬರೆದು ಯೆಹೋವನ ಆಜ್ಞಾಶಾಸನಗಳ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮತ್ತು ಇಸ್ರಾಯೇಲರ ಹಿರಿಯರ ವಶಕ್ಕೆ ಕೊಟ್ಟನು. 10 ಆತನು ಅವರಿಗೆ, “ಪ್ರತಿ ಏಳು ವರ್ಷಗಳು ಪೂರ್ತಿಯಾದಾಗ ಬಿಡುಗಡೆಯ ಸಂವತ್ಸರದ ನೇಮಕ ಕಾಲದಲ್ಲಿ ಅಂದರೆ ಪರ್ಣಶಾಲೆಗಳ ಜಾತ್ರೆಯಲ್ಲಿ 11 ನಿಮ್ಮ ದೇವರಾದ ಯೆಹೋವನು ಆದುಕೊಂಡ ಸ್ಥಳದಲ್ಲಿ ಇಸ್ರಾಯೇಲರೆಲ್ಲರು ಆತನ ಸನ್ನಿಧಿಗೆ ಕೂಡಿಬಂದಾಗ ನೀವು ಅವರೆಲ್ಲರಿಗೆ ಕೇಳಿಸುವಂತೆ ಈ ಧರ್ಮಶಾಸ್ತ್ರವನ್ನು ಅವರ ಮುಂದೆ ಓದಬೇಕು. 12 ಜನರೆಲ್ಲರೂ ಈ ಧರ್ಮಶಾಸ್ತ್ರವನ್ನು ಕೇಳಿ ತಿಳಿದುಕೊಳ್ಳುವಂತೆ ಸ್ತ್ರೀಯರನ್ನೂ, ಪುರುಷರನ್ನೂ, ಮಕ್ಕಳನ್ನೂ ಮತ್ತು ನಿಮ್ಮ ಊರುಗಳಲ್ಲಿರುವ ಅನ್ಯರನ್ನೂ ಕೂಡಿಸಬೇಕು. ಆಗ ಅವರು ತಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಈ ಧರ್ಮಶಾಸ್ತ್ರದ ನಿಯಮಗಳನ್ನು ಅನುಸರಿಸಿ ನಡೆಯುವರು. 13 ಮತ್ತು ಯೆಹೋವನ ಮಹತ್ಕಾರ್ಯಗಳನ್ನು ನೋಡದಿರುವ ನಿಮ್ಮ ಸಂತತಿಯವರೂ ಕೇಳಿ ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಯೊರ್ದನ್ ನದಿಯನ್ನು ದಾಟಿ ಹೋಗುವ ದೇಶದಲ್ಲಿ ವಾಸವಾಗಿರುವವರೆಗೂ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿರುವುದಕ್ಕೆ ಕಲಿತುಕೊಳ್ಳುವರು” ಎಂದು ಹೇಳಿದನು. 14 ಯೆಹೋವನು ಮೋಶೆಗೆ, “ನೀನು ಸಾಯಬೇಕಾದ ದಿನಗಳು ಸಮೀಪವಾದವು, ಆದಕಾರಣ ನೀನು ಯೆಹೋಶುವನನ್ನು ಕರೆದುಕೊಂಡು ಬಂದು ದೇವದರ್ಶನದ ಗುಡಾರದಲ್ಲಿ ನನ್ನ ಸನ್ನಿಧಿಯಲ್ಲಿ ನಿಲ್ಲಬೇಕು; ಆಗ ನಾನು ಅವನಿಗೆ ಅಧಿಕಾರವನ್ನು ಕೊಡುವೆನು” ಎಂದು ಹೇಳಿದನು. ಆಗ ಮೋಶೆ ಮತ್ತು ಯೆಹೋಶುವನೂ ದೇವದರ್ಶನದ ಗುಡಾರದಲ್ಲಿ ಯೆಹೋವನ ಸನ್ನಿಧಿಯಲ್ಲಿ ನಿಂತುಕೊಂಡರು. 15 ಅಲ್ಲಿ ಯೆಹೋವನು ಮೇಘಸ್ತಂಭದಲ್ಲಿ ಕಾಣಿಸಿದನು; ಆ ಮೇಘಸ್ತಂಭವು ಗುಡಾರದ ಬಾಗಿಲಿನ ಬಳಿಯಲ್ಲಿ ನಿಂತಿತು. 16 ಯೆಹೋವನು ಮೋಶೆಗೆ, “ನೀನು ಪೂರ್ವಿಕರಲ್ಲಿ ಸೇರಿದ ಮೇಲೆ ಈ ಜನರು ನನ್ನನ್ನು ಬಿಟ್ಟು ನಾನು ಅವರೊಡನೆ ಮಾಡಿಕೊಂಡ ಒಡಂಬಡಿಕೆಯನ್ನು ಮೀರಿ ದೇವದ್ರೋಹಿಗಳಾಗಿ ತಾವು ಹೋಗುವ ದೇಶದಲ್ಲಿರುವ ಅನ್ಯದೇವತೆಗಳನ್ನು ಪೂಜಿಸುವರು. 17 ಆಗ ನಾನು ಅವರ ಮೇಲೆ ಬಲುಕೋಪಗೊಂಡು ಅವರನ್ನು ಬಿಟ್ಟು ಅವರಿಗೆ ವಿಮುಖನಾಗಿರುವೆನು. ಆದುದರಿಂದ ಅವರು ಸಂಹಾರಕ್ಕೆ ಗುರಿಯಾಗುವರು; ಮತ್ತು ಅನೇಕ ಕಷ್ಟಗಳೂ ಹಾಗು ವಿಪತ್ತುಗಳೂ ಅವರಿಗೆ ಒದಗುವವು. ಆಗ ಅವರು, ‘ನಮ್ಮ ದೇವರು ನಮ್ಮ ಮಧ್ಯದಲ್ಲಿ ಇಲ್ಲದೆ ಹೋದುದರಿಂದಲೇ ಈ ವಿಪತ್ತುಗಳೆಲ್ಲಾ ನಮಗೆ ಸಂಭವಿಸಿತ್ತಲ್ಲ’ ಅಂದುಕೊಳ್ಳುವರು. 18 ಅವರು ನನ್ನನ್ನು ಬಿಟ್ಟು ಇತರ ದೇವರುಗಳನ್ನು ಆಶ್ರಯಿಸಿ ಬಹಳ ದುಷ್ಕಾರ್ಯಗಳನ್ನು ನಡೆಸುವುದರಿಂದ ನಾನು ಆ ಕಾಲದಲ್ಲಿ ಖಂಡಿತವಾಗಿ ಅವರಿಗೆ ವಿಮುಖನಾಗಿರುವೆನು. 19 “ಆದಕಾರಣ ನೀನು ಈ ಪದ್ಯವನ್ನು ಬರೆದುಕೊಂಡು ಇಸ್ರಾಯೇಲರಿಗೆ ಕಲಿಸಿಕೊಡಬೇಕು. ಈ ಪದ್ಯವು ಇಸ್ರಾಯೇಲರಿಗೆ ವಿರುದ್ಧವಾಗಿ ನನ್ನ ಪಕ್ಷದಲ್ಲಿ ಸಾಕ್ಷಿಯಾಗಿರುವಂತೆ ಇದನ್ನು ಅವರಿಗೆ ಬಾಯಿಪಾಠಮಾಡಿಸು. 20 ನಾನು ಪ್ರಮಾಣಮಾಡಿಕೊಟ್ಟ ದೇಶದಲ್ಲಿ ಇವರು ಸೇರುವುದಕ್ಕಿಂತ ಮುಂಚಿತವಾಗಿಯೇ ಇವರು ಈಗಲೂ ಮಾಡುವ ದುರಾಲೋಚನೆಗಳನ್ನು ನಾನು ಬಲ್ಲೆನು. ನಾನು ಇವರ ಪೂರ್ವಿಕರಿಗೆ ಪ್ರಮಾಣಮಾಡಿದಂತೆ ಹಾಲೂ ಮತ್ತು ಜೇನೂ ಹರಿಯುವ ದೇಶಕ್ಕೆ ಇವರನ್ನು ಸೇರಿಸಿದ ಮೇಲೆ ಇವರು ಚೆನ್ನಾಗಿ ಊಟಮಾಡಿ ಕೊಬ್ಬಿದವರಾದಾಗ ಇತರ ದೇವರುಗಳನ್ನು ಅವಲಂಬಿಸಿ, ಸೇವಿಸಿ ನನ್ನನ್ನು ತಾತ್ಸಾರಮಾಡಿ ನನ್ನ ನಿಬಂಧನೆಯನ್ನು ಮೀರುವರು. 21 ಅನಂತರ ಅನೇಕ ಕಷ್ಟಗಳೂ ಮತ್ತು ವಿಪತ್ತುಗಳೂ ಸಂಭವಿಸಿದಾಗ ಈ ಪದ್ಯವು ಇವರ ಸಂತತಿಯವರ ಬಾಯಲ್ಲಿ ಇದ್ದುಕೊಂಡು ಅವರ ಮುಂದೆ ಸಾಕ್ಷಿಕೊಡುವುದು” ಎಂದು ಹೇಳಿದನು. 22 ಆದಕಾರಣ ಮೋಶೆ ಆ ದಿನದಲ್ಲೇ ಈ ಪದ್ಯವನ್ನು ಬರೆದು ಇಸ್ರಾಯೇಲರಿಗೆ ಕಲಿಸಿದನು. 23 ಆಗ ಯೆಹೋವನು ನೂನನ ಮಗನಾದ ಯೆಹೋಶುವನಿಗೆ, “ನಾನು ಇಸ್ರಾಯೇಲರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನೀನೇ ಅವರನ್ನು ಸೇರಿಸಬೇಕು; ಆದುದರಿಂದ ಶೂರನಾಗಿ ಧೈರ್ಯದಿಂದಿರು; ನಾನೇ ನಿನ್ನ ಸಂಗಡ ಇರುವೆನು” ಎಂದು ಆಜ್ಞಾಪಿಸಿದನು. 24 ಮೋಶೆ ಈ ಧರ್ಮಶಾಸ್ತ್ರವನ್ನು ಗ್ರಂಥರೂಪವಾಗಿ ಬರೆದು ಪೂರೈಸಿದಾಗ, 25 ಯೆಹೋವನ ಆಜ್ಞಾಶಾಸನಗಳ ಮಂಜೂಷವನ್ನು ಹೊರುವ ಲೇವಿಯರಿಗೆ, 26 “ನೀವು ಈ ಧರ್ಮಶಾಸ್ತ್ರ ಪುಸ್ತಕವನ್ನು ನಿಮ್ಮ ವಶಕ್ಕೆ ತೆಗೆದುಕೊಂಡು ನಿಮ್ಮ ದೇವರಾದ ಯೆಹೋವನ ಆಜ್ಞಾಶಾಸನಗಳ ಮಂಜೂಷದ ಬಳಿಯಲ್ಲಿ ಇಡಿರಿ. ಇಸ್ರಾಯೇಲರೇ, ಅಲ್ಲಿ ಇದು ನಿಮಗೆ ವಿರುದ್ಧವಾಗಿ ಸಾಕ್ಷಿಕೊಡುವುದಾಗಿರಲಿ. 27 ಯಾಕೆಂದರೆ ನೀವು ಹಟಮಾರಿಗಳು, ಆಜ್ಞೆಗೆ ಒಳಗಾಗದವರೆಂಬುದು ನನಗೆ ತಿಳಿದೇ ಇದೆ. ನಾನು ಇನ್ನೂ ಜೀವದಿಂದಿರುವಾಗಲೇ ನೀವು ಯೆಹೋವನಿಗೆ ವಿರುದ್ಧವಾಗಿ ಪ್ರತಿಭಟಿಸಿದ್ದೀರಿ; ನಾನು ಹೋದ ತರುವಾಯ ನೀವು ಪುನಃ ಬೀಳುವುದು ಮತ್ತಷ್ಟು ನಿಶ್ಚಯ. 28 ನಿಮ್ಮ ಕುಲಗಳ ಹಿರಿಯರನ್ನೂ, ಅಧಿಪತಿಗಳನ್ನೂ ನನ್ನ ಬಳಿಗೆ ಕೂಡಿಸಿರಿ; ನಾನು ಈ ಮಾತುಗಳನ್ನು ಅವರಿಗೆ ತಿಳಿಸಿ ಅವರಿಗೆ ವಿರುದ್ಧವಾಗಿ ಸಾಕ್ಷಿಗಳಾಗುವುದಕ್ಕೆ ಭೂಮಿ ಮತ್ತು ಆಕಾಶಗಳನ್ನು ಕರೆಯುವೆನು. 29 ನಾನು ಹೋದ ಮೇಲೆ ನೀವು ದ್ರೋಹಿಗಳಾಗಿ ನಾನು ಬೋಧಿಸಿದ ಮಾರ್ಗವನ್ನು ತಪ್ಪಿಹೋಗುವಿರೆಂದೂ ತಿಳಿದಿದೆ, ಅನಂತರದಲ್ಲಿ ನೀವು ಯೆಹೋವನ ದೃಷ್ಟಿಯಲ್ಲಿ ಕೆಟ್ಟದ್ದನ್ನು ನಡಿಸಿ ದುರಾಚಾರಿಗಳಾಗಿ ಆತನನ್ನು ಕೋಪಗೊಳಿಸುವುದರಿಂದ ನಿಮಗೆ ಆಪತ್ತುಗಳು ಉಂಟಾಗುವವೆಂದೂ ನಾನು ಬಲ್ಲೆ” ಎಂದು ಹೇಳಿದನು. 30 ಆಗ ಮೋಶೆ ಇಸ್ರಾಯೇಲರ ಸರ್ವಸಮೂಹದವರಿಗೆ ಕೇಳಿಸುವಂತೆ ಈ ಪದ್ಯದ ಮಾತುಗಳನ್ನೆಲ್ಲಾ ಹೇಳಿದನು.
In Other Versions
Deuteronomy 31 in the ANTPNG2D
Deuteronomy 31 in the BNTABOOT
Deuteronomy 31 in the BOHNTLTAL
Deuteronomy 31 in the BOILNTAP
Deuteronomy 31 in the KBT1ETNIK
Deuteronomy 31 in the TBIAOTANT