Genesis 26 (IRVK)
1 ಅಬ್ರಹಾಮನ ಕಾಲದಲ್ಲಿ ಬಂದ ಮೊದಲನೆಯ ಬರಗಾಲವಲ್ಲದೆ ಇನ್ನೊಂದು ಬರಗಾಲವು ಕಾನಾನ್ ದೇಶಕ್ಕೆ ಬಂದಿತು. ಆಗ ಇಸಾಕನು ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಗೆರಾರಿಗೆ ಹೋದನು. 2 ಅಲ್ಲಿ ಯೆಹೋವನು ಇಸಾಕನಿಗೆ ದರ್ಶನಕೊಟ್ಟು, “ನೀನು ಐಗುಪ್ತ ದೇಶಕ್ಕೆ ಇಳಿದು ಹೋಗಬೇಡ; ನಾನು ಹೇಳುವ ದೇಶದಲ್ಲಿ ನೀನು ವಾಸಮಾಡಬೇಕು. 3 ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಬಳಿಯಲ್ಲಿದ್ದು ನಿನ್ನನ್ನು ಅಭಿವೃದ್ಧಿಪಡಿಸಿ ನಿನಗೂ, ನಿನ್ನ ಸಂತತಿಯವರಿಗೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಹೀಗೆ ನಿನ್ನ ತಂದೆಯಾದ ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು, 4 ನಿನ್ನ ಸಂತತಿಯವರನ್ನು ಆಕಾಶದಲ್ಲಿರುವ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವುಂಟಾಗುವುದು. 5 ಏಕೆಂದರೆ ಅಬ್ರಹಾಮನು ನನ್ನ ಮಾತಿಗೆ ವಿಧೇಯನಾಗಿ ನನ್ನ ವಿಧಿಗಳನ್ನು, ನನ್ನ ಆಜ್ಞೆಗಳನ್ನು, ನನ್ನ ನೇಮಗಳನ್ನು, ನನ್ನ ಕಟ್ಟಳೆಗಳನ್ನು, ಕೈಗೊಂಡು ನಡೆದನು” ಎಂದನು. 6 ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು. 7 ಆ ಸ್ಥಳದ ಜನರು ಅವನ ಹೆಂಡತಿಯನ್ನು ನೋಡಿ ಆಕೆಯನ್ನು ಕುರಿತು ವಿಚಾರಿಸಿದಾಗ ಅವನು ರೆಬೆಕ್ಕಳು ಸುಂದರಿಯಾಗಿರುವುದರಿಂದ ಈ ಸ್ಥಳದ ಜನರು ಈಕೆಯ ನಿಮಿತ್ತ ನನ್ನನ್ನು ಕೊಂದಾರು ಅಂದುಕೊಂಡು ಆಕೆಯನ್ನು ತನ್ನ ಹೆಂಡತಿ ಎಂದು ಹೇಳುವುದಕ್ಕೆ ಭಯಪಟ್ಟು ತಂಗಿಯಾಗಬೇಕು ಎಂದು ಹೇಳಿದನು. 8 ಅವನು ಆ ಸ್ಥಳದಲ್ಲಿ ಬಹಳ ದಿನ ಇದ್ದ ಮೇಲೆ ಒಂದು ದಿನ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನು ಕಿಟಿಕಿಯಿಂದ ನೋಡಿದಾಗ ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸವಾಡುವುದನ್ನು ಕಂಡನು. 9 ಆಗ ಅಬೀಮೆಲೆಕನು ಇಸಾಕನನ್ನು ಕರೆಯಿಸಿ, “ನಿಶ್ಚಯವಾಗಿ ಈಕೆಯ ನಿನ್ನ ಹೆಂಡತಿಯಲ್ಲವೇ, ತಂಗಿ ಎಂದು ಯಾಕೆ ಹೇಳಿದೆ” ಎಂದು ಕೇಳಲು ಇಸಾಕನು, “ಜನರು ಈಕೆಯ ನಿಮಿತ್ತ ನನ್ನನ್ನು ಕೊಂದಾರೆಂದು ಹಾಗೆ ಹೇಳಿದೆನು” ಎಂದನು. 10 ಅದಕ್ಕೆ ಅಬೀಮೆಲೆಕನು, “ನೀನು ನಮಗೆ ಹೀಗೆ ಯಾಕೆ ಮಾಡಿದೆ? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯೊಡನೆ ಸಂಗಮಿಸುವುದಕ್ಕೆ ಆಸ್ಪದವಾಗುತ್ತಿತ್ತು. ನಿನ್ನ ಮೂಲಕ ನಮಗೆ ದೋಷ ಪ್ರಾಪ್ತವಾಗುತ್ತಿತ್ತಲ್ಲಾ?” 11 ಎಂದು ಹೇಳಿ ಅಬೀಮೆಲೆಕನು ತನ್ನ ಪ್ರಜೆಗಳಿಗೆ, “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಕೇಡುಮಾಡುವವನಿಗೆ ತಪ್ಪದೆ ಮರಣ ದಂಡನೆಯಾಗುವುದು” ಎಂದು ಆಜ್ಞೆ ಮಾಡಿದನು. 12 ಇಸಾಕನು ಆ ದೇಶದಲ್ಲಿ ಬೀಜವನ್ನು ಬಿತ್ತಿ ಅದೇ ವರ್ಷದಲ್ಲಿ ನೂರರಷ್ಟು ಬೆಳೆಯನ್ನು ಕೊಯ್ದನು; ಯೆಹೋವನು ಅವನನ್ನು ಅಭಿವೃದ್ಧಿಪಡಿಸಿದನು; 13 ಅವನ ಐಶ್ವರ್ಯವು ದಿನೇ ದಿನೇ ಹೆಚ್ಚಿದ್ದರಿಂದ ಬಹು ಧನವಂತನಾದನು. 14 ಅವನಿಗೆ ದನಕುರಿಗಳೂ, ಸಂಪತ್ತೂ, ಸೇವಕರು ಹೇರಳವಾಗಿದ್ದುದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು. 15 ಅವನ ತಂದೆಯಾದ ಅಬ್ರಹಾಮನ ಸೇವಕರು ಅಬ್ರಹಾಮನ ಕಾಲದಲ್ಲೇ ತೋಡಿದ್ದ ಬಾವಿಗಳನ್ನು ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದ್ದರು. 16 ಹೀಗಿರಲಾಗಿ ಅಬೀಮೆಲೆಕನು ಇಸಾಕನಿಗೆ, “ನೀನು ನಮಗಿಂತ ಬಹು ಬಲಿಷ್ಠನಾಗಿದ್ದೀ; 17 ಆದ್ದರಿಂದ ನಮ್ಮ ಬಳಿಯಿಂದ ಹೊರಟುಹೋಗಬೇಕು” ಎಂದು ಹೇಳಲು ಇಸಾಕನು ಅಲ್ಲಿಂದ ಹೋಗಿ ಗೆರಾರ್ ತಗ್ಗಿನ ಬಯಲಿನಲ್ಲಿ ಬಿಡಾರ ಮಾಡಿಕೊಂಡು ಅಲ್ಲಿ ವಾಸವಾಗಿದ್ದನು. 18 ಅಬ್ರಹಾಮನು ತೋಡಿಸಿದ್ದ ಬಾವಿಗಳನ್ನು ಅವನು ಸತ್ತ ನಂತರ ಫಿಲಿಷ್ಟಿಯರು ಮುಚ್ಚಿ ಹಾಕಿದ್ದರಿಂದ ಇಸಾಕನು ಅವುಗಳನ್ನು ತಿರುಗಿ ಅಗೆಸಿ, ತಂದೆ ಇಟ್ಟಿದ್ದ ಹೆಸರುಗಳನ್ನೇ ಇಟ್ಟನು. 19 ಇಸಾಕನ ಸೇವಕರು ತಗ್ಗಿನಲ್ಲಿ ಅಗೆಯುವಾಗ ಅವರಿಗೆ ಉಕ್ಕುವ ಒರತೆಯ ನೀರಿನ ಬಾವಿಯು ಸಿಕ್ಕಿತು. 20 ಗೆರಾರಿನ ದನ ಕಾಯುವವರು ಬಂದು ಆ ನೀರು ತಮ್ಮದು ಎಂದು ಹೇಳಿ ಇಸಾಕನ ದನ ಕಾಯುವವರ ಸಂಗಡ ಜಗಳವಾಡಿದ್ದರಿಂದ ಇಸಾಕನು ಆ ಬಾವಿಗೆ “ಏಸೆಕ್” ಎಂದು ಹೆಸರಿಟ್ಟನು. 21 ತರುವಾಯ ಅವನ ಜನರು ಬೇರೊಂದು ಬಾವಿಯನ್ನು ತೋಡಿದಾಗ ಆ ದೇಶದವರು ಅದಕ್ಕಾಗಿಯೂ ಜಗಳವಾಡಿದ್ದರಿಂದ ಅವನು ಅದಕ್ಕೆ “ಸಿಟ್ನಾ” ಎಂದು ಹೆಸರಿಟ್ಟನು. 22 ಅವನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನೂ ತೋಡಿಸಿದಾಗ ಅದರ ವಿಷಯದಲ್ಲಿ ಯಾರೂ ಜಗಳವಾಡದೆ ಹೋದುದರಿಂದ ಅವನು, “ಈಗ ಯೆಹೋವನು ನಮಗೋಸ್ಕರ ಸ್ಥಳ ಮಾಡಿದ್ದರಿಂದ ಅಭಿವೃದ್ಧಿಯಾಗುವೆವು” ಎಂದು ಹೇಳಿ ಅದಕ್ಕೆ “ರೆಹೋಬೋತ್” ಎಂದು ಹೆಸರಿಟ್ಟನು. 23 ಇಸಾಕನು ಅಲ್ಲಿಂದ ಹೊರಟು ಗಟ್ಟಾ ಹತ್ತಿ ಬೇರ್ಷೆಬಕ್ಕೆ ಬಂದನು. 24 ಆ ರಾತ್ರಿ ಯೆಹೋವನು ಅವನಿಗೆ ಕಾಣಿಸಿಕೊಂಡು, “ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರು; ನೀನು ಭಯಪಡಬೇಡ; ನಾನು ನಿನ್ನ ಸಂಗಡ ಇದ್ದೇನೆ; ನನ್ನ ಸೇವಕನಾದ ಅಬ್ರಹಾಮನ ನಿಮಿತ್ತ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು” ಎಂದು ಹೇಳಿದನು. 25 ಇಸಾಕನು ಯಜ್ಞವೇದಿಯನ್ನು ಕಟ್ಟಿಸಿ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿ ಅಲ್ಲಿ ತನ್ನ ಗುಡಾರವನ್ನು ಹಾಕಿಸಿಕೊಂಡನು. 26 ಅಲ್ಲಿಯೂ ಇಸಾಕನ ಸೇವಕರು ಬಾವಿಯನ್ನು ಅಗೆದರು. ಆ ಸಮಯದಲ್ಲಿ ಅಬೀಮೆಲೆಕನು ತನ್ನ ಮಂತ್ರಿಯಾದ ಅಹುಜ್ಜತನನ್ನೂ, ಸೇನಾಪತಿಯಾದ ಫೀಕೋಲನನ್ನೂ ಸಂಗಡ ಕರೆದುಕೊಂಡು ಗೆರಾರಿನಿಂದ ಇಸಾಕನ ಬಳಿಗೆ ಬರಲು ಇಸಾಕನು. 27 ನೀವು, “ನನ್ನನ್ನು ದ್ವೇಷಿಸಿ ನಿಮ್ಮ ಬಳಿಯಿಂದ ಕಳುಹಿಸಿ ಬಿಟ್ಟಿರಲ್ಲಾ; ಈಗ ನನ್ನ ಬಳಿಗೆ ಯಾಕೆ ಬಂದಿರಿ” ಎಂದು ಅವರನ್ನು ಕೇಳಿದ್ದಕ್ಕೆ ಅವರು, 28 “ಯೆಹೋವನು ನಿನ್ನ ಸಂಗಡ ಇದ್ದಾನೆ ಎಂದು ನಮಗೆ ಸ್ಪಷ್ಟವಾಗಿ ಕಂಡು ಬಂದುದರಿಂದ ನೀನೂ, ನಾವೂ ಒಬ್ಬರಿಗೊಬ್ಬರು ಪ್ರಮಾಣಪೂರ್ವಕವಾಗಿ ಒಡಂಬಡಿಕೆ ಮಾಡಿಕೊಳ್ಳೋಣವೆಂದು ಆಲೋಚಿಸಿದೆವು. 29 ನಾವು ನಿನಗೆ ಯಾವ ಕೇಡನ್ನೂ ಮಾಡದೆ ಹಿತವನ್ನೇ ಮಾಡಿ ನಿನ್ನನ್ನು ಸಮಾಧಾನದಿಂದ ಕಳುಹಿಸಿದೆವಲ್ಲಾ. ಅದರಂತೆ ನೀನು ನಮಗೆ ಕೇಡನ್ನು ಮಾಡುವುದಿಲ್ಲವೆಂಬುದಾಗಿ ಪ್ರಮಾಣಮಾಡಬೇಕು. ನೀನು ಈಗ ಯೆಹೋವನ ದಯೆಯನ್ನು ಹೊಂದಿದವನಾಗಿದ್ದೀಯಲ್ಲವೇ” ಎಂದು ಹೇಳಿದರು. 30 ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು. ಅವರೆಲ್ಲರೂ ಭೋಜನ ಉಪಚಾರಗಳನ್ನು ಮುಗಿಸಿಕೊಂಡರು. 31 ಅವರು ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಒಡಂಬಡಿಕೆ ಮಾಡಿಕೊಂಡರು. ಇಸಾಕನು ಅವರನ್ನು ಕಳುಹಿಸಲು ಅವರು ಸಮಾಧಾನದಿಂದ ಹೊರಟುಹೋದರು. 32 ಅದೇ ದಿನದಲ್ಲಿ ಇಸಾಕನ ಸೇವಕರು ಬಂದು, “ನಮಗೆ ನೀರು ಸಿಕ್ಕಿತು” ಎಂದು ಹೇಳಿ ತಾವು ತೋಡಿದ ಬಾವಿಯ ಸಂಗತಿಯನ್ನು ತಿಳಿಸಿದರು. 33 ಅವನು ಆ ಬಾವಿಗೆ “ಷಿಬಾ” ಎಂದು ಹೆಸರಿಟ್ಟನು. ಆದುದರಿಂದ ಅಲ್ಲಿರುವ ಊರಿಗೆ ಇಂದಿನವರೆಗೂ “ಬೇರ್ಷೆಬ” ಎಂದು ಹೆಸರಾಯಿತು. 34 ಏಸಾವನು ನಲವತ್ತು ವರ್ಷದವನಾದಾಗ ಹಿತ್ತಿಯನಾದ ಬೇರಿಯ ಮಗಳಾದ ಯೆಹೂದೀತಳನ್ನೂ ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಮದುವೆ ಮಾಡಿಕೊಂಡನು. 35 ಇವರ ದೆಸೆಯಿಂದ ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆ ಉಂಟಾಯಿತು.