Jonah 2 (IRVK)
1 ಯೋನನು ಆ ಮೀನಿನ ಹೊಟ್ಟೆಯೊಳಗೆ ಇದ್ದು ಕೊಂಡು ತನ್ನ ದೇವರಾದ ಯೆಹೋವನಿಗೆ ಹೀಗೆ ಪ್ರಾರ್ಥನೆ ಮಾಡಿದನು: 2 “ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು;ಆತನು ನನಗೆ ಸದುತ್ತರವನ್ನು ದಯಪಾಲಿಸಿದನು;ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ಕೂಗಿಕೊಂಡೆನು!ಆಹಾ, ನೀನು ನನ್ನ ಸ್ವರವನ್ನು ಲಾಲಿಸಿದೆ. 3 ನನ್ನನ್ನು ಸಮುದ್ರದ ಅಗಾಧಸ್ಥಳದಲ್ಲಿ ಹಾಕಿದ್ದೀಯಲ್ಲಾ;ಪ್ರವಾಹವು ನನ್ನನ್ನು ಸುತ್ತಿಕೊಂಡಿತು;ಲೆಕ್ಕವಿಲ್ಲದ ಸಮುದ್ರದ ಅಲೆಗಳೂ, ತೆರೆಗಳೂ ನನ್ನ ಮೇಲೆ ದಾಟಿ ಹೋದವು 4 ‘ನಿನ್ನ ಸಾನ್ನಿಧ್ಯದಿಂದ ತಳ್ಳಲ್ಪಟ್ಟಿದ್ದೇನೆ ಎಂದುಕೊಂಡೆನು;ನಾನು ನಿನ್ನ ಪರಿಶುದ್ಧ ಮಂದಿರದ ಕಡೆಗೆ ಪುನಃ ಹೇಗೆ ನೋಡುವೆನು?’ 5 ಜಲರಾಶಿಯು ನನ್ನನ್ನು ಮುತ್ತಿ ನನ್ನ ಪ್ರಾಣಕ್ಕೆ ಹಾನಿ ತಂದಿತು,ಮಹಾಸಾಗರವು ನನ್ನನ್ನು ಆವರಿಸಿತು,ಕಡಲಕಳೆಯು ನನ್ನ ತಲೆಯನ್ನು ಸುತ್ತಿಕೊಂಡಿತು. 6 ಪರ್ವತಗಳ ತಳಹದಿಗೆ ಇಳಿದುಹೋದೆನು,ಭೂಲೋಕದ ದ್ವಾರಗಳ ಚಿಲಕಗಳು ಎಂದಿಗೂ ತೆಗೆಯದ ಹಾಗೆ ನನ್ನನ್ನು ಬಂಧಿಸಿದವು;ನನ್ನ ದೇವರಾದ ಯೆಹೋವನೇ, ನೀನು ನನ್ನ ಪ್ರಾಣವನ್ನು ಅಧೋಲೋಕದೊಳಗಿನಿಂದ ಉದ್ಧರಿಸಿದ್ದೀ. 7 “ನನ್ನ ಆತ್ಮವು ನನ್ನಲ್ಲಿ ಕುಂದಿಹೋದಾಗ ಯೆಹೋವನಾದ ನಿನ್ನನ್ನು ನೆನಪು ಮಾಡಿಕೊಂಡು ಸ್ಮರಿಸಿದೆನು;ನನ್ನ ಬಿನ್ನಹವು ನಿನಗೆ ಮುಟ್ಟಿತು, ಅದು ನಿನ್ನ ಪರಿಶುದ್ಧಾಲಯವನ್ನು ಬಂದು ಸೇರಿತು. 8 “ನಿರ್ಜೀವ ವಿಗ್ರಹಗಳನ್ನು ಅವಲಂಬಿಸಿದವರುತಮ್ಮ ದೇವರ ಕರುಣಾನಿಧಿಯನ್ನು ತೊರೆದುಬಿಡುವರು. 9 ಆದರೆ ನಾನು ಸ್ತೋತ್ರ ಧ್ವನಿಯಿಂದ ನಿನಗೆ ಯಜ್ಞವನ್ನರ್ಪಿಸುವೆನು,ನಿನಗೆ ಮಾಡಿಕೊಂಡ ಹರಕೆಯನ್ನು ಸಲ್ಲಿಸುವೆನು.ರಕ್ಷಣೆಯು ಯೆಹೋವನಿಂದಲೇ ಉಂಟಾಗುವುದು.” 10 ಆಗ ಯೆಹೋವನು ಮೀನಿಗೆ ಅಪ್ಪಣೆಕೊಡಲು ಅದು ಯೋನನನ್ನು ಸಮುದ್ರದ ದಡದಲ್ಲಿ ಕಾರಿಬಿಟ್ಟಿತು.