Leviticus 13 (IRVK)
1 ಯೆಹೋವನು ಮೋಶೆ ಮತ್ತು ಆರೋನರಿಗೆ, 2 “ಒಬ್ಬ ಮನುಷ್ಯನ ಮೈಮೇಲೆ ಬಾವಾಗಲಿ, ಗುಳ್ಳೆಯಾಗಲಿ ಅಥವಾ ಹೊಳೆಯುವ ಮಚ್ಚೆಯಾಗಲಿ ಉಂಟಾಗಿ ಅದರಲ್ಲಿ ಕುಷ್ಠರೋಗದ ಲಕ್ಷಣಗಳು ತೋರಿದರೆ ಅವನನ್ನು ಮಹಾಯಾಜಕನಾದ ಆರೋನನ ಬಳಿಗೆ ಇಲ್ಲವೆ ಆರೋನನ ಮಕ್ಕಳಾದ ಯಾಜಕರಲ್ಲಿ ಒಬ್ಬನ ಬಳಿಗೆ ಕರೆದುಕೊಂಡು ಬರಬೇಕು. 3 ಯಾಜಕನು ಅವನ ಚರ್ಮದಲ್ಲಿರುವ ಮಚ್ಚೆಯನ್ನು ಪರೀಕ್ಷಿಸುವಾಗ ಆ ಮಚ್ಚೆಯಲ್ಲಿರುವ ರೋಮ ಬೆಳ್ಳಗಾಗಿದ್ದರೆ ಮತ್ತು ಆ ಮಚ್ಚೆ ಉಳಿದ ಚರ್ಮಕ್ಕಿಂತ ಆಳವಾಗಿದ್ದರೆ ಅದು ಕುಷ್ಠರೋಗ. ಯಾಜಕನು ಅದನ್ನು ಪರೀಕ್ಷಿಸಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. 4 ಆ ಹೊಳೆಯುವ ಮಚ್ಚೆ ಬೆಳ್ಳಗಾಗಿದ್ದು ಉಳಿದ ಚರ್ಮಕ್ಕಿಂತ ಆಳವಾಗಿರದೆ ಹೋದರೆ ಮತ್ತು ಅಲ್ಲಿರುವ ರೋಮ ಬೆಳ್ಳಗಾಗದಿದ್ದರೆ ಯಾಜಕನು ಆ ಮಚ್ಚೆಯಿದ್ದವನನ್ನು ಏಳು ದಿನಗಳ ವರೆಗೆ ಪ್ರತ್ಯೇಕವಾಗಿ ಇರಿಸಬೇಕು. 5 ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊದಲು ಇದ್ದಂತೆಯೇ ಕಾಣಿಸಿದರೆ ಯಾಜಕನು ಇನ್ನು ಏಳು ದಿನಗಳ ವರೆಗೂ ಅವನನ್ನು ಪ್ರತ್ಯೇಕವಾಗಿ ಇರಿಸಬೇಕು. 6 ಆ ಏಳು ದಿನಗಳಾದ ಮೇಲೆ ಯಾಜಕನು ಪುನಃ ಅವನನ್ನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಳ್ಳದೆ ಮೊಬ್ಬಾಗಿದ್ದರೆ ಯಾಜಕನು ಅದು ಬರೀ ಗುಳ್ಳೆಯೆಂದು ತಿಳಿದು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಶುದ್ಧನಾಗುವನು. 7 ಆದರೆ ಅವನು ತನ್ನ ಶುದ್ಧಿಯ ವಿಷಯದಲ್ಲಿ ತನ್ನನ್ನು ಯಾಜಕನಿಗೆ ತೋರಿಸಿಕೊಂಡನಂತರ ಆ ಗುಳ್ಳೆ ದೇಹದ ಚರ್ಮದಲ್ಲಿ ಹರಡಿಕೊಂಡರೆ ಅವನು ಪುನಃ ಯಾಜಕನಿಗೆ ತೋರಿಸಿಕೊಳ್ಳಬೇಕು. 8 ಯಾಜಕನು ಪರೀಕ್ಷಿಸುವಾಗ ಆ ಮಚ್ಚೆ ದೇಹದ ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠವೆಂದು ತಿಳಿದು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. 9 “ಕುಷ್ಠರೋಗದ ಲಕ್ಷಣಗಳು ಯಾವನಲ್ಲಾದರೂ ಕಾಣಿಸಿದರೆ ಅವನನ್ನು ಯಾಜಕನ ಬಳಿಗೆ ಕರೆದುಕೊಂಡು ಬರಬೇಕು. 10 ಯಾಜಕನು ಅವನನ್ನು ಪರೀಕ್ಷಿಸುವಾಗ ದೇಹದ ಚರ್ಮದಲ್ಲಿ ಬೆಳ್ಳಗಾದ ಬಾವು ಇದ್ದರೆ ಮತ್ತು ಅಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಆ ಬಾವಿನಲ್ಲಿ ಮಾಂಸ ಕಾಣಿಸಿದರೆ ಅದು ಹಳೇ ಕುಷ್ಠರೋಗದ ಗುರುತು. 11 ಅವನು ಅಶುದ್ಧನಾದುದರಿಂದ ಯಾಜಕನು ಅವನನ್ನು ಪ್ರತ್ಯೇಕಿಸದೆ ಅಶುದ್ಧನೆಂದು ನಿರ್ಣಯಿಸಬೇಕು. 12 “ಆದರೆ ಒಬ್ಬನ ಚರ್ಮದಲ್ಲಿ ತೊನ್ನು ಹತ್ತಿ ಯಾಜಕನು ನೋಡುವ ಎಲ್ಲಾ ಕಡೆಯಲ್ಲಿಯೂ ತಲೆ ಮೊದಲುಗೊಂಡು ಅಂಗಾಲಿನವರೆಗೂ ಹರಡಿಕೊಂಡಿದ್ದರೆ, 13 ಯಾಜಕನು ಪರೀಕ್ಷಿಸುವಾಗ ಆ ತೊನ್ನು ದೇಹದಲ್ಲೆಲ್ಲಾ ವ್ಯಾಪಿಸಿಕೊಂಡಿದ್ದರೆ, ಅಂಥವನನ್ನು ಶುದ್ಧನೆಂದು ಯಾಜಕನು ನಿರ್ಣಯಿಸಬೇಕು. ಅವನ ಚರ್ಮವೆಲ್ಲಾ ಬೆಳ್ಳಗಾಗಿ ಹೋದುದರಿಂದ ಅವನು ಶುದ್ಧನು. 14 ಆದರೆ ಅಂಥವನ ದೇಹದಲ್ಲಿ ಎಲ್ಲಿಯಾದರೂ ಮಾಂಸ ಕಂಡುಬಂದರೆ ಅವನು ಅಶುದ್ಧನಾಗುವನು. 15 ಯಾಜಕನು ಆ ಮಾಂಸವನ್ನು ನೋಡಿ ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. ಅಂತಹ ಮಾಂಸವು ಅಶುದ್ಧವೇ; ಅದು ಕುಷ್ಠವೇ. 16 ಆದರೆ ಆ ಮಾಂಸವು ಅದೇ ಪ್ರಕಾರವಾಗಿ ಇರದೆ ಪುನಃ ಬೆಳ್ಳಗಾದರೆ ಅವನು ಯಾಜಕನ ಬಳಿಗೆ ಬರಬೇಕು. 17 ಯಾಜಕನು ಪರೀಕ್ಷಿಸುವಾಗ ಆ ಮಚ್ಚೆಯು ಬೆಳ್ಳಗಾಗಿಹೋಗಿದ್ದರೆ ಆ ಮನುಷ್ಯನನ್ನು ಶುದ್ಧನೆಂದು ನಿರ್ಣಯಿಸಬೇಕು; ಅವನು ಶುದ್ಧನೇ. 18 “ಒಬ್ಬನ ದೇಹದ ಚರ್ಮದಲ್ಲಿ ಹುಣ್ಣು ಆಗಿದ್ದು ಅದು ವಾಸಿಯಾದ ಮೇಲೆ, 19 ಅದು ಇದ್ದ ಸ್ಥಳದಲ್ಲಿ ಬಿಳಿ ಬಾವಾಗಲಿ ಅಥವಾ ಕೆಂಪು ಬಿಳುಪು ಮಿಶ್ರವಾಗಿ ಹೊಳೆಯುವ ಕಲೆಯಾಗಲಿ ಉಂಟಾದರೆ ಅವನು ತನ್ನನ್ನು ಯಾಜಕನಿಗೆ ತೋರಿಸಿಕೊಳ್ಳಬೇಕು. 20 ಯಾಜಕನು ಪರೀಕ್ಷಿಸುವಾಗ ಆ ಕಲೆ ಉಳಿದ ಚರ್ಮಕ್ಕಿಂತ ಆಳವಾಗಿ ಕಂಡರೆ ಮತ್ತು ಅದರಲ್ಲಿರುವ ರೋಮ ಬೆಳ್ಳಗಾಗಿ ಹೋಗಿದ್ದರೆ ಆ ಹುಣ್ಣಿನಲ್ಲಿ ಕುಷ್ಠ ಹುಟ್ಟಿದ್ದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು. 21 ಆದರೆ ಯಾಜಕನು ಪರೀಕ್ಷಿಸುವಾಗ ಅದರಲ್ಲಿ ಬಿಳಿ ರೋಮವಿಲ್ಲದೆ ಹೋದರೆ ಮತ್ತು ಆ ಕಲೆ ಉಳಿದ ಚರ್ಮಕ್ಕಿಂತ ಆಳವಾಗಿರದೆ ಮೊಬ್ಬಾಗಿದ್ದರೆ ಯಾಜಕನು ಅವನನ್ನು ಏಳು ದಿನಗಳು ಪ್ರತ್ಯೇಕವಾಗಿ ಇರಿಸಬೇಕು. 22 ತರುವಾಯ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು; ಅದು ಕುಷ್ಠರೋಗವೇ. 23 ಆದರೆ ಆ ಹೊಳೆಯುವ ಕಲೆ ಹರಡಿಕೊಳ್ಳದೆ ಮೊದಲಿದ್ದಂತೆಯೇ ಇದ್ದರೆ ಅದು ಆ ಹುಣ್ಣಿನ ಕಲೆಯೆಂದು ತಿಳಿದುಕೊಂಡು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. 24 “ಒಬ್ಬನ ದೇಹದ ಚರ್ಮದಲ್ಲಿ ಬೆಂಕಿಯಿಂದುಂಟಾದ ಬೊಬ್ಬೆ ಇರಲಾಗಿ ಆ ಬೊಬ್ಬೆಯ ಸ್ಥಳವು ಹೊಳೆಯುವ ಕಲೆಯಾಗಿ ಬೆಳ್ಳಗಾಗಿಯಾಗಲಿ ಕೆಂಪು ಬಿಳುಪು ಮಿಶ್ರವಾಗಿ ಇದ್ದರೆ ಯಾಜಕನು ಅದನ್ನು ನೋಡಬೇಕು. 25 ಅವನು ಪರೀಕ್ಷಿಸುವಾಗ ಆ ಹೊಳೆಯುವ ಕಲೆಯಲ್ಲಿರುವ ರೋಮವು ಬೆಳ್ಳಗಾಗಿದ್ದರೆ ಮತ್ತು ಆ ಕಲೆಯು ಉಳಿದ ಚರ್ಮಕ್ಕಿಂತ ಆಳವಾಗಿ ತೋರಿದರೆ ಅದು ಆ ಬೊಬ್ಬೆಯಲ್ಲಿ ಹುಟ್ಟಿದ ಕುಷ್ಠವೆಂದು ತಿಳಿದು ಯಾಜಕನು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. 26 ಆದರೆ ಯಾಜಕನು ಪರೀಕ್ಷಿಸುವಾಗ ಆ ಹೊಳೆಯುವ ಕಲೆಯಲ್ಲಿ ಬಿಳಿ ರೋಮವಿಲ್ಲದೆ ಹೋದರೆ ಮತ್ತು ಅದು ಉಳಿದ ಚರ್ಮಕ್ಕಿಂತ ಆಳವಾಗಿ ಕಾಣದೆ, ಮೊಬ್ಬಾಗಿ ಹೋಗಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು. 27 ಏಳನೆಯ ದಿನದಲ್ಲಿ ಯಾಜಕನು ಅವನನ್ನು ಪರೀಕ್ಷಿಸುವಾಗ ಅದು ಚರ್ಮದಲ್ಲಿ ಹರಡಿಕೊಂಡಿದ್ದರೆ ಅದು ಕುಷ್ಠರೋಗವೆಂದು ತಿಳಿದು ಅವನನ್ನು ಅಶುದ್ಧನೆಂದು ನಿರ್ಣಯಿಸಬೇಕು. 28 ಆ ಹೊಳೆಯುವ ಕಲೆಯು ಚರ್ಮದಲ್ಲಿ ಹರಡಿಕೊಳ್ಳದೆ ಮೊದಲಿನಂತೆಯೇ ಇದ್ದು ಮೊಬ್ಬಾಗಿಹೋಗಿದ್ದರೆ ಅದು ಬೆಂಕಿಸುಟ್ಟ ಬೊಬ್ಬೆಯೆಂದು ತಿಳಿದು ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅದು ಬೆಂಕಿಯಿಂದ ಸುಟ್ಟ ಕಲೆಯೇ ಹೊರತು ಮತ್ತೇನೂ ಅಲ್ಲ. 29 “ಹೆಂಗಸಿನ ತಲೆಯಲ್ಲಿ ಆಗಲಿ, ಗಂಡಸಿನ ತಲೆಯಲ್ಲಿ ಆಗಲಿ ಅಥವಾ ಗಡ್ಡದ ಮೇಲೆ ಆಗಲಿ ಕಲೆಯುಂಟಾದರೆ ಯಾಜಕನು ಅದನ್ನು ಪರೀಕ್ಷಿಸಬೇಕು. 30 ಆಗ ಅದು ಉಳಿದ ಚರ್ಮಕ್ಕಿಂತ ಆಳವಾಗಿ ತೋರಿದರೆ ಮತ್ತು ಅದರಲ್ಲಿ ಹಳದಿಬಣ್ಣವುಳ್ಳ ಸಣ್ಣ ಕೂದಲು ಇದ್ದರೆ ಅದು ತಲೆಯಲ್ಲಾಗಲಿ ಅಥವಾ ಗಡ್ಡದಲ್ಲಾಗಲಿ ಉಂಟಾದ ಕುಷ್ಠವನ್ನು ಸೂಚಿಸುವ ಲಕ್ಷಣವಿದ್ದರೆ ಯಾಜಕನು ಅಂಥವನನ್ನು ಅಶುದ್ಧನೆಂದು ನಿರ್ಣಯಿಸಬೇಕು. 31 ಯಾಜಕನು ಆ ಗಾಯವನ್ನು ನೋಡುವಾಗ ಅದು ಬೇರೆ ಚರ್ಮಕ್ಕಿಂತ ಆಳವಾಗಿ ಕಾಣದೆ ಹೋದಾಗ್ಯೂ, ಅದು ಇರುವ ಭಾಗದಲ್ಲಿ ಕಪ್ಪು ಕೂದಲು ಇಲ್ಲದಿದ್ದರೆ ಯಾಜಕನು ಅವನನ್ನು ಏಳು ದಿನಗಳ ತನಕ ಪ್ರತ್ಯೇಕವಾಗಿ ಇರಿಸಬೇಕು. 32 ಏಳನೆಯ ದಿನದಲ್ಲಿ ಯಾಜಕನು ಪರೀಕ್ಷಿಸುವಾಗ ಆ ಗಾಯ ಹರಡಿಕೊಳ್ಳದೆ ಇದ್ದರೆ ಮತ್ತು ಅದು ಇರುವ ಭಾಗದಲ್ಲಿ ಹಳದಿ ಬಣ್ಣದ ಕೂದಲು ಇಲ್ಲದಿದ್ದರೆ ಮತ್ತು ಅದು ಉಳಿದ ಚರ್ಮಕ್ಕಿಂತ ಆಳವಾಗಿ ಕಾಣದೆಹೋದರೆ, 33 ಅವನು ಕ್ಷೌರಮಾಡಿಸಿಕೊಳ್ಳಬೇಕು. ಆ ಗಾಯ ಇರುವ ಭಾಗವನ್ನು ಮಾತ್ರ ಕ್ಷೌರಮಾಡಿಸಿಕೊಳ್ಳಬಾರದು. ಯಾಜಕನು ಅವನನ್ನು ಇನ್ನು ಏಳು ದಿನಗಳವರೆಗೂ ಪ್ರತ್ಯೇಕಿಸಬೇಕು. 34 ಏಳನೆಯ ದಿನದಲ್ಲಿ ಯಾಜಕನು ಪುನಃ ಆ ಗಾಯವನ್ನು ನೋಡುವಾಗ ಅದು ಚರ್ಮದಲ್ಲಿ ಹರಡಿಕೊಳ್ಳದೆ ಹೋಗಿದ್ದರೆ ಉಳಿದ ಚರ್ಮಕ್ಕಿಂತ ಆಳವಾಗಿ ತೋರದೆ ಇದ್ದರೆ ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡಾಗ ಶುದ್ಧನಾಗುವನು. 35 ಆದರೆ ಅವನು ಶುದ್ಧನೆಂದು ನಿರ್ಣಯಿಸಲ್ಪಟ್ಟ ಮೇಲೆ ಆ ಗಾಯ ಚರ್ಮದಲ್ಲಿ ಹರಡಿಕೊಂಡರೆ, 36 ಯಾಜಕನು ಅವನನ್ನು ಪರೀಕ್ಷಿಸಬೇಕು; ಆದರೆ ಹಳದಿಬಣ್ಣದ ಕೂದಲು ಇದೆಯೋ ಇಲ್ಲವೋ ಎಂದು ನೋಡಬೇಕಾದ ಅಗತ್ಯವಿಲ್ಲ; ಅವನು ಅಶುದ್ಧನೇ. 37 ಆ ಗಾಯ ಮೊದಲು ಇದ್ದಂತೆಯೇ ಇದ್ದು ಅದರಲ್ಲಿ ಕಪ್ಪು ಕೂದಲು ಹುಟ್ಟಿದ್ದರೆ ಅದು ವಾಸಿಯಾಯಿತು. ಅವನು ಶುದ್ಧನು; ಯಾಜಕನು ಅವನನ್ನು ಶುದ್ಧನೆಂದು ನಿರ್ಣಯಿಸಬೇಕು. 38 “ಪುರುಷನಿಗಾಗಲಿ ಅಥವಾ ಸ್ತ್ರೀಗಾಗಲಿ ಚರ್ಮದಲ್ಲಿ ಹೊಳೆಯುವ ಬಿಳುಪಾದ ಕಲೆಗಳು ಅಲ್ಲಲ್ಲಿ ಹುಟ್ಟಿದ್ದರೆ ಯಾಜಕನು ಅವುಗಳನ್ನು ಪರೀಕ್ಷಿಸಬೇಕು. 39 ಆ ಹೊಳೆಯುವ ಕಲೆಗಳು ಮೊಬ್ಬಾದ ಬಿಳೀ ಬಣ್ಣವಾಗಿದ್ದರೆ ಅದು ದೇಹದ ಚರ್ಮದಲ್ಲಿ ಹುಟ್ಟಿದ ಚಿಬ್ಬು; ಅವನು ಶುದ್ಧನು. 40 “ಯಾವನ ತಲೆಯ ಕೂದಲು ಉದುರಿ ಹೋಗಿ ಅವನು ಬೋಳುತಲೆಯವನಾದರೂ ಅವನು ಶುದ್ಧನೇ. 41 ಮುಂದಲೆಯ ಕೂದಲು ಉದುರಿದರೆ ಅವನು ಪಟ್ಟೆತಲೆಯವನಾದರೂ ಶುದ್ಧನೇ. 42 ಆದರೆ ಬೋಳುತಲೆಯಲ್ಲಾಗಲಿ ಅಥವಾ ಪಟ್ಟೆತಲೆಯಲ್ಲಾಗಲಿ ಕೆಂಪು ಬಿಳುಪು ಮಿಶ್ರವಾದ ಮಚ್ಚೆ ಹುಟ್ಟಿದರೆ ಅದು ಕುಷ್ಠವೇ. 43 ಯಾಜಕನು ಅವನನ್ನು ಪರೀಕ್ಷಿಸಬೇಕು. ಆಗ ಅದರಿಂದುಂಟಾದ ಬಾವು ಕೆಂಪು ಬಿಳುಪು ಮಿಶ್ರವಾಗಿ ಚರ್ಮದಲ್ಲಿನ ಕುಷ್ಠದಂತೆ ತೋರಿದರೆ, 44 ಅವನು ಕುಷ್ಠರೋಗಿ ಮತ್ತು ಅಶುದ್ಧನು. ಅವನ ತಲೆಯ ಮೇಲೆ ಕುಷ್ಠದ ಗುರುತು ಕಾಣಿಸಿದ್ದರಿಂದ ಅವನು ಅಶುದ್ಧನೆಂದು ಯಾಜಕನು ನಿರ್ಣಯಿಸಬೇಕು. 45 “ಯಾರಲ್ಲಿ ಕುಷ್ಠದ ಗುರುತು ಕಾಣಿಸಿತೋ ಅವನು ತನ್ನ ಬಟ್ಟೆಗಳನ್ನು ಹರಿದುಕೊಂಡು, ತಲೆಯನ್ನು ಕೆದರಿಕೊಂಡು, ಬಾಯಿಯನ್ನು ಬಟ್ಟೆಯಿಂದ ಮುಚ್ಚಿಕೊಂಡು ‘ನಾನು ಅಶುದ್ಧನು, ಅಶುದ್ಧನು’ ಎಂದು ಕೂಗಿಕೊಳ್ಳಬೇಕು. 46 ಆ ರೋಗದ ಗುರುತುಗಳು ಅವನಲ್ಲಿ ಇರುವ ದಿನಗಳೆಲ್ಲಾ ಅವನು ಅಶುದ್ಧನಾಗಿರುವನು. ಅವನು ಅಶುದ್ಧನಾದುದರಿಂದ ಪ್ರತ್ಯೇಕವಾಗಿಯೇ ವಾಸವಾಗಿರಬೇಕು; ಅವನ ನಿವಾಸವು ಪಾಳೆಯದ ಹೊರಗೆ ಇರಬೇಕು. 47 “ಕುಷ್ಠರೋಗದ ಗುರುತು ಬಟ್ಟೆಯಲ್ಲಿ ಕಂಡು ಬಂದಾಗ ಅದು ಉಣ್ಣೆಯ ಬಟ್ಟೆಯಾಗಲಿ ಅಥವಾ ನಾರಿನ ಬಟ್ಟೆಯಾಗಲಿ, 48 ನಾರಿನ ಅಥವಾ ಉಣ್ಣೆಯ ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಇಲ್ಲವೆ ತೊಗಲಿನಲ್ಲಾಗಲಿ, ತೊಗಲಿನಿಂದ ಮಾಡಲ್ಪಟ್ಟ ವಸ್ತುವಿನಲ್ಲಾಗಲಿ, 49 ಆ ಬಟ್ಟೆ, ತೊಗಲು, ಹಾಸು, ಹೆಣಿಗೆ, ತೊಗಲಿನ ಸಾಮಾನುಗಳಲ್ಲಿ ಹಸುರಾಗಿ ಇಲ್ಲವೆ ಕೆಂಪಾಗಿ ಮಚ್ಚೆಕಾಣಿಸಿದರೆ ಅದು ಕುಷ್ಠದ ಗುರುತು; ಅದನ್ನು ಯಾಜಕನಿಗೆ ತೋರಿಸಬೇಕು. 50 ಯಾಜಕನು ಅದನ್ನು ಪರೀಕ್ಷಿಸಿ ನೋಡಿ ಏಳು ದಿನಗಳ ವರೆಗೆ ಪ್ರತ್ಯೇಕವಾಗಿ ಇಡಿಸಬೇಕು. 51 ಏಳನೆಯ ದಿನದಲ್ಲಿ ಅವನು ಅದನ್ನು ಪರೀಕ್ಷಿಸುವಾಗ ಆ ಬಟ್ಟೆಯ ಹಾಸಿನಲ್ಲಾಗಲಿ ಅಥವಾ ಹೆಣಿಗೆಯಲ್ಲಾಗಲಿ ಇಲ್ಲವೆ ಯಾವುದಾದರೂ ಒಂದು ಕೆಲಸಕ್ಕೆ ಉಪಯೋಗವಾಗಿರುವ ಆ ತೊಗಲಿನಲ್ಲಿ ಆ ಮಚ್ಚೆ ಹರಡಿಕೊಂಡಿದ್ದರೆ ಅದು ಪ್ರಾಣಕ್ಕೆ ಅಪಾಯಕರವಾದ ಕುಷ್ಠವೇ, ಆ ವಸ್ತುವು ಅಶುದ್ಧ. 52 ಆ ವಸ್ತುವು ಬಟ್ಟೆಯಾದರೂ, ಹಾಸಾದರೂ, ಹೊಕ್ಕಾದರೂ, ಉಣ್ಣೆಯದಾದರೂ, ನಾರಿನದಾದರೂ ಅಥವಾ ತೊಗಲಿನದಾದರೂ ಅದರಲ್ಲಿ ಪ್ರಾಣಕ್ಕೆ ಅಪಾಯಕರವಾದ ಕುಷ್ಠವಿರುವುದರಿಂದ ಅದನ್ನು ಬೆಂಕಿಯಿಂದ ಸುಡಿಸಿಬಿಡಬೇಕು. 53 ಆದರೆ ಯಾಜಕನು ಪರೀಕ್ಷಿಸುವಾಗ ಆ ವಸ್ತುವಿನಲ್ಲಿ ಅಂದರೆ ಆ ಬಟ್ಟೆ, ಹಾಸು, ಹೆಣಿಗೆ, ತೊಗಲಿನ ಸಾಮಾನು ಇವುಗಳಲ್ಲಿ ಆ ಮಚ್ಚೆ ಹರಡಿಕೊಳ್ಳದಿದ್ದರೆ, 54 ಅದನ್ನು ನೀರಿನಿಂದ ತೊಳೆಯಬೇಕೆಂದು ಯಾಜಕನು ಅಪ್ಪಣೆಕೊಟ್ಟು ಇನ್ನು ಏಳು ದಿನಗಳ ತನಕ ಅದನ್ನು ಪ್ರತ್ಯೇಕವಾಗಿ ಇಡಿಸಬೇಕು. 55 ಆ ಮಚ್ಚೆ ಇದ್ದ ವಸ್ತುಗಳನ್ನು ತೊಳೆಸಿದ ಮೇಲೆ ಯಾಜಕನು ಪರೀಕ್ಷಿಸುವಾಗ ಆ ಮಚ್ಚೆಯು ಹರಡಿಕೊಳ್ಳದೆ ಇದ್ದಾಗ್ಯೂ ಅದರ ಬಣ್ಣ ಮೊದಲಿದ್ದಂತೆಯೇ ಇದ್ದರೆ ಆ ವಸ್ತು ಅಶುದ್ಧ. ಕುಷ್ಠರೋಗದ ಗುರುತು ಅದರ ಮೇಲ್ಭಾಗದಿಂದಾಗಲಿ ಅಥವಾ ಕೆಳಭಾಗದಿಂದಾಗಲಿ ಆ ವಸ್ತುವಿನೊಳಗೆ ವ್ಯಾಪಿಸಿದ್ದರಿಂದ ಅದನ್ನು ಬೆಂಕಿಯಿಂದ ಸುಟ್ಟುಬಿಡಬೇಕು. 56 ಆದರೆ ತೊಳೆದ ಬಟ್ಟೆಯನ್ನು ಯಾಜಕನು ಪರೀಕ್ಷಿಸುವಾಗ ಅದರಲ್ಲಿದ್ದ ಮಚ್ಚೆ ಮೊಬ್ಬಾಗಿಹೋಗಿದ್ದರೆ ಅವನು ಆ ಮಚ್ಚೆ ಇರುವ ಭಾಗವನ್ನು ಆ ಬಟ್ಟೆಯಿಂದಾಗಲಿ, ತೊಗಲಿನಿಂದಾಗಲಿ, ಹಾಸಿನಿಂದಾಗಲಿ, ಹೆಣಿಗೆಯಿಂದಾಗಲಿ ಕತ್ತರಿಸಬೇಕು. 57 ಆ ಮೇಲೆಯೂ ಕುಷ್ಠದ ಮಚ್ಚೆ ಆ ಬಟ್ಟೆಯಲ್ಲಾಗಲಿ, ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಅಥವಾ ತೊಗಲಿನ ಸಾಮಾನಿನಲ್ಲಾಗಲಿ ಕಂಡು ಬಂದರೆ ಕುಷ್ಠರೋಗವು ಇನ್ನು ಅದರಲ್ಲಿ ಉಂಟೆಂದು ತಿಳಿದುಕೊಳ್ಳಬೇಕು. ಆ ಮಚ್ಚೆ ಇರುವ ವಸ್ತುವನ್ನೇ ಬೆಂಕಿಯಿಂದ ಸುಟ್ಟುಬಿಡಬೇಕು. 58 ಆ ಬಟ್ಟೆಯನ್ನಾಗಲಿ, ಹಾಸನ್ನಾಗಲಿ, ಹೆಣಿಗೆಯನ್ನಾಗಲಿ ಅಥವಾ ತೊಗಲಿನ ಸಾಮಾನನ್ನಾಗಲಿ ತೊಳೆದನಂತರ ಆ ಮಚ್ಚೆ ಕಾಣದೆಹೋದರೆ ಅದನ್ನು ಎರಡನೆಯ ಸಾರಿ ತೊಳೆಯಬೇಕು; ಆಗ ಅದು ಶುದ್ಧವಾಗುವುದು. 59 “ಉಣ್ಣೇ ಬಟ್ಟೆಯಲ್ಲಾಗಲಿ, ನಾರಿನ ಬಟ್ಟೆಯಲ್ಲಾಗಲಿ, ಹಾಸಿನಲ್ಲಾಗಲಿ, ಹೆಣಿಗೆಯಲ್ಲಾಗಲಿ ಅಥವಾ ತೊಗಲಿನ ಸಾಮಾನಿನಲ್ಲಾಗಲಿ ಕಂಡುಬಂದ ಕುಷ್ಠರೋಗದ ಗುರುತಿನ ವಿಷಯವಾದ ನಿಯಮ ಇದೇ. ಅದು ಶುದ್ಧವೆಂದು ನಿರ್ಣಯಿಸಬೇಕೋ ಅಥವಾ ಅಶುದ್ಧವೆಂದು ನಿರ್ಣಯಿಸಬೇಕೋ ಎಂಬುದು ಇದರಿಂದ ತಿಳಿಯುವುದು” ಎಂದು ಹೇಳಿದನು.