Genesis 29 (BOKCV2)
1 ಆಗ ಯಾಕೋಬನು ಪ್ರಯಾಣವನ್ನು ಮುಂದುವರಿಸುತ್ತಾ ಪೂರ್ವದಿಕ್ಕಿನ ಜನರ ದೇಶಕ್ಕೆ ಬಂದನು. 2 ಅವನು ಕಣ್ಣೆತ್ತಿ ನೋಡಲಾಗಿ, ಹೊಲದಲ್ಲಿ ಒಂದು ಬಾವಿ ಇತ್ತು. ಅದರ ಸಮೀಪದಲ್ಲಿ ಮೂರು ಕುರಿಮಂದೆಗಳು ಮಲಗಿದ್ದವು. ಏಕೆಂದರೆ ಆ ಬಾವಿಯ ನೀರನ್ನು ಮಂದೆಗಳಿಗೆ ಕುಡಿಸುತ್ತಿದ್ದರು. ಆ ಬಾವಿಯ ಮೇಲೆ ಒಂದು ದೊಡ್ಡ ಕಲ್ಲು ಇತ್ತು. 3 ಅಲ್ಲಿ ಮಂದೆಗಳೆಲ್ಲಾ ಕೂಡಿದಾಗ, ಬಾವಿಯ ಮೇಲಿದ್ದ ಕಲ್ಲನ್ನು ಉರುಳಿಸಿ, ಕುರಿಗಳಿಗೆ ನೀರನ್ನು ಕುಡಿಸಿ, ಕಲ್ಲನ್ನು ಮತ್ತೆ ಅದರ ಸ್ಥಳದಲ್ಲಿ ಇಡುತ್ತಿದ್ದರು. 4 ಯಾಕೋಬನು ಅವರಿಗೆ, “ನನ್ನ ಸಹೋದರರೇ, ನೀವು ಎಲ್ಲಿಯವರು?” ಎಂದಾಗ.ಅವರು, “ನಾವು ಹಾರಾನಿನವರು,” ಎಂದರು. 5 ಅದಕ್ಕವನು ಅವರಿಗೆ, “ನಾಹೋರನ ಮೊಮ್ಮಗ ಲಾಬಾನನನ್ನು ನೀವು ಬಲ್ಲಿರೋ?” ಎಂದಾಗ.ಅವರು, “ನಾವು ಅವನನ್ನು ಬಲ್ಲೆವು,” ಎಂದರು. 6 ಯಾಕೋಬನು ಅವರಿಗೆ, “ಅವನು ಕ್ಷೇಮವಾಗಿದ್ದಾನೋ?” ಎಂದು ಕೇಳಿದಾಗ,ಆಗ ಅವರು, “ಕ್ಷೇಮವಾಗಿದ್ದಾನೆ, ಅಗೋ, ಅವನ ಮಗಳಾದ ರಾಹೇಲಳು ಕುರಿಗಳ ಸಂಗಡ ಬರುತ್ತಿದ್ದಾಳೆ,” ಎಂದರು. 7 ಯಾಕೋಬನು ಅವರಿಗೆ, “ಇನ್ನೂ ಬಹಳ ಹೊತ್ತು ಇದೆ. ಮಂದೆಗಳನ್ನು ಕೂಡಿಸುವ ಸಮಯವು ಇದಲ್ಲ. ಕುರಿಗಳಿಗೆ ನೀರು ಕುಡಿಸಿ ಹೋಗಿ ಮೇಯಿಸಿರಿ,” ಎಂದನು. 8 ಅದಕ್ಕೆ ಅವರು, “ಮಂದೆಗಳನ್ನೆಲ್ಲಾ ಒಟ್ಟುಗೂಡಿಸಿದ ಮೇಲೆ ಬಾವಿಯ ಮೇಲಿರುವ ಕಲ್ಲನ್ನು ಉರುಳಿಸುತ್ತಾರೆ. ಆಗ ನಾವು ಕುರಿಗಳಿಗೆ ನೀರನ್ನು ಕುಡಿಸುತ್ತೇವೆ,” ಎಂದರು. 9 ಯಾಕೋಬನು ಇನ್ನೂ ಅವರ ಸಂಗಡ ಮಾತನಾಡುತ್ತಿದ್ದಾಗ, ಕುರಿಗಳನ್ನು ಮೇಯಿಸುವ ರಾಹೇಲಳು ತನ್ನ ತಂದೆಯ ಕುರಿಗಳ ಸಂಗಡ ಬಂದಳು. 10 ಯಾಕೋಬನು ತನ್ನ ತಾಯಿಯ ಸಹೋದರ ಲಾಬಾನನ ಮಗಳಾದ ರಾಹೇಲಳನ್ನೂ, ಅವಳ ಕುರಿಗಳನ್ನೂ ನೋಡಿದಾಗ, ಯಾಕೋಬನು ಹತ್ತಿರ ಬಂದು, ಬಾವಿಯ ಮೇಲಿದ್ದ ಕಲ್ಲನ್ನು ಹೊರಳಿಸಿ, ತನ್ನ ತಾಯಿಯ ಸಹೋದರನಾದ ಲಾಬಾನನ ಕುರಿಗಳಿಗೆ ನೀರನ್ನು ಕುಡಿಸಿದನು. 11 ಆಗ ಯಾಕೋಬನು ರಾಹೇಲಳಿಗೆ ಮುದ್ದಿಟ್ಟು, ತನ್ನ ಸ್ವರವನ್ನೆತ್ತಿ ಗಟ್ಟಿಯಾಗಿ ಅತ್ತನು. 12 ಯಾಕೋಬನು ರಾಹೇಲಳಿಗೆ, ತಾನು ಆಕೆಯ ತಂದೆಗೆ ಸೋದರಳಿಯನೆಂದೂ ರೆಬೆಕ್ಕಳ ಮಗನೆಂದೂ ತಿಳಿಸಿದನು. ಆಗ ಆಕೆಯು ಓಡಿಹೋಗಿ ತನ್ನ ತಂದೆಗೆ ತಿಳಿಸಿದಳು. 13 ಲಾಬಾನನು ತನ್ನ ಸಹೋದರಿಯ ಮಗ ಯಾಕೋಬನ ಸುದ್ದಿಯನ್ನು ಕೇಳಿದಾಗ, ಅವನನ್ನು ಎದುರುಗೊಳ್ಳುವುದಕ್ಕೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವನನ್ನು ಮನೆಗೆ ಕರೆದುಕೊಂಡು ಬಂದನು. ಅವನು ಲಾಬಾನನಿಗೆ ಎಲ್ಲಾ ವಿಷಯಗಳನ್ನು ತಿಳಿಸಿದನು. 14 ಆಗ ಲಾಬಾನನು ಅವನಿಗೆ, “ನಿಶ್ಚಯವಾಗಿ ನೀನು ನನ್ನ ರಕ್ತಸಂಬಂಧಿಯಾಗಿದ್ದೀ,” ಎಂದನು.ಯಾಕೋಬನು ಅವನ ಸಂಗಡ ಒಂದು ತಿಂಗಳು ವಾಸವಾಗಿದ್ದನು. 15 ಲಾಬಾನನು ಯಾಕೋಬನಿಗೆ, “ನೀನು ನನ್ನ ಸಂಬಂಧಿಕನಾಗಿರುವುದರಿಂದ ಸುಮ್ಮನೆ ನನಗೆ ಸೇವೆ ಮಾಡಬೇಕೆ? ನಿನ್ನ ಸಂಬಳ ಎಷ್ಟೆಂಬುದನ್ನು ನನಗೆ ಹೇಳು?” ಎಂದನು. 16 ಲಾಬಾನನಿಗೆ ಇಬ್ಬರು ಪುತ್ರಿಯರಿದ್ದರು. ದೊಡ್ಡವಳ ಹೆಸರು ಲೇಯಳು, ಚಿಕ್ಕವಳ ಹೆಸರು ರಾಹೇಲಳು. 17 ಲೇಯಳ ಕಣ್ಣುಗಳು ಕಾಂತಿಹೀನವಾಗಿದ್ದವು. ಆದರೆ ರಾಹೇಲಳು ಸುಂದರಿಯೂ ರೂಪವತಿಯೂ ಆಗಿದ್ದಳು. 18 ಹೀಗಿರುವುದರಿಂದ ಯಾಕೋಬನು ರಾಹೇಲಳನ್ನು ಪ್ರೀತಿಸಿ, “ನಾನು ನಿನ್ನ ಕಿರಿ ಮಗಳಾಗಿರುವ ರಾಹೇಲಳಿಗೋಸ್ಕರ ನಿಮ್ಮಲ್ಲಿ ಏಳು ವರ್ಷ ಸೇವೆ ಮಾಡುತ್ತೇನೆ,” ಎಂದನು. 19 ಅದಕ್ಕೆ ಲಾಬಾನನು, “ಅವಳನ್ನು ಬೇರೊಬ್ಬನಿಗೆ ಕೊಡುವುದಕ್ಕಿಂತ, ನಿನಗೆ ಕೊಡುವುದು ಒಳ್ಳೆಯದು. ಆದ್ದರಿಂದ ನನ್ನ ಸಂಗಡವಿರು,” ಎಂದನು. 20 ಈ ಪ್ರಕಾರ ಯಾಕೋಬನು ರಾಹೇಲಳಿಗೋಸ್ಕರ ಏಳು ವರ್ಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರ್ಷಗಳು ಅವನಿಗೆ ಸ್ವಲ್ಪದಿನಗಳಾಗಿ ತೋರಿದವು. 21 ತರುವಾಯ ಯಾಕೋಬನು ಲಾಬಾನನಿಗೆ, “ನನ್ನ ಸೇವಾ ದಿನಗಳು ಪೂರ್ತಿಯಾದವು. ನಾನು ನನ್ನ ಹೆಂಡತಿಯೊಂದಿಗೆ ಬಾಳುವಂತೆ ಆಕೆಯನ್ನು ನನಗೆ ಕೊಡು,” ಎಂದನು. 22 ಆಗ ಲಾಬಾನನು ಆ ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣ ಮಾಡಿಸಿದನು. 23 ರಾತ್ರಿಯಾದಾಗ ಅವನು ತನ್ನ ಮಗಳಾದ ಲೇಯಳನ್ನು ಯಾಕೋಬನ ಬಳಿಗೆ ಕರೆತಂದನು. ಆಗ ಅವನು ಲೇಯಳ ಬಳಿಗೆ ಬಂದನು. 24 ಇದಲ್ಲದೆ ಲಾಬಾನನು ತನ್ನ ದಾಸಿಯಾದ ಜಿಲ್ಪಳನ್ನು, ತನ್ನ ಮಗಳಾದ ಲೇಯಳಿಗೆ ದಾಸಿಯಾಗಿ ಕೊಟ್ಟನು. 25 ಬೆಳಿಗ್ಗೆ ನೋಡಲಾಗಿ ಆಕೆಯು ಲೇಯಳಾಗಿದ್ದಳು. ಆಗ ಯಾಕೋಬನು ಲಾಬಾನನಿಗೆ, “ಇದೇನು ನೀನು ನನಗೆ ಮಾಡಿದೆ? ರಾಹೇಲಳಿಗೋಸ್ಕರ ನಾನು ನಿನಗೆ ಸೇವೆಮಾಡಿದೆನಲ್ಲಾ? ಏಕೆ ನನಗೆ ಮೋಸಮಾಡಿದೆ?” ಎಂದನು. 26 ಅದಕ್ಕೆ ಲಾಬಾನನು, “ಹಿರಿಯಳಿಗಿಂತ ಮೊದಲು ಕಿರಿಯಳನ್ನು ಮದುವೆ ಮಾಡಿಕೊಡುವುದು ನಮ್ಮ ಪದ್ಧತಿಯಲ್ಲ. 27 ಹಿರಿಯಳೊಡನೆ ಈ ವಾರವನ್ನು ಪೂರೈಸು. ತರುವಾಯ ನೀನು ಇನ್ನು ಬೇರೆ ಏಳು ವರ್ಷಗಳವರೆಗೆ ಸೇವೆ ಮಾಡಲು ಒಪ್ಪಿಕೊಂಡರೆ, ನಾನು ಕಿರಿಯ ಮಗಳನ್ನು ನಿನಗೆ ಕೊಡುತ್ತೇನೆ,” ಎಂದನು. 28 ಯಾಕೋಬನು ಅದರಂತೆ ಮಾಡಿ, ವಾರವನ್ನು ಪೂರೈಸಿದನು. ಆಗ ಲಾಬಾನನು ತನ್ನ ಮಗಳಾದ ರಾಹೇಲಳನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. 29 ಲಾಬಾನನು ತನ್ನ ಮಗಳಾದ ರಾಹೇಲಳಿಗೆ, ತನ್ನ ದಾಸಿಯಾದ ಬಿಲ್ಹಳನ್ನು ದಾಸಿಯಾಗಿ ಕೊಟ್ಟನು. 30 ಯಾಕೋಬನು ರಾಹೇಲಳೊಂದಿಗೆ ಕೂಡಿ, ಲೇಯಳಿಗಿಂತ ರಾಹೇಲಳನ್ನು ಹೆಚ್ಚು ಪ್ರೀತಿಸಿದನು. ಇನ್ನೂ ಏಳು ವರ್ಷ ಲಾಬಾನನ ಬಳಿಯಲ್ಲಿ ಸೇವೆ ಮಾಡಿದನು. 31 ಲೇಯಳು ತಾತ್ಸಾರಕ್ಕೆ ತುತ್ತಾಗುವಳೆಂದು ಯೆಹೋವ ದೇವರು ಕಂಡು, ಅವಳು ಗರ್ಭಿಣಿಯಾಗುವಂತೆ ಅನುಗ್ರಹಮಾಡಿದರು. ಆದರೆ ರಾಹೇಲಳು ಬಂಜೆಯಾಗಿದ್ದಳು. 32 ಲೇಯಳು ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಿಜವಾಗಿ ಯೆಹೋವ ದೇವರು ನನ್ನ ಬಾಧೆಯನ್ನು ನೋಡಿದ್ದಾರೆ. ಆದ್ದರಿಂದ ನನ್ನ ಗಂಡನು ನನ್ನನ್ನು ಪ್ರೀತಿ ಮಾಡುವನು,” ಎಂದು ಹೇಳಿ ಮಗುವಿಗೆ ರೂಬೇನ್ ಎಂದು ಹೆಸರಿಟ್ಟಳು. 33 ಲೇಯಳು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು, “ನಾನು ತಾತ್ಸಾರವಾಗಿದ್ದೆ ಎಂದು ಯೆಹೋವ ದೇವರು ಕೇಳಿ, ಇವನನ್ನು ನನಗೆ ಕೊಟ್ಟಿದ್ದಾರೆ,” ಎಂದು ಹೇಳಿ ಅವನಿಗೆ ಸಿಮೆಯೋನ ಎಂದು ಹೆಸರಿಟ್ಟಳು. 34 ಮತ್ತೊಮ್ಮೆ ಲೇಯಳು ಮಗನನ್ನು ಹೆತ್ತು, “ಈಗಲಾದರೂ ನನ್ನ ಗಂಡನು ನನ್ನೊಂದಿಗೆ ಒಂದಾಗುವನು. ಏಕೆಂದರೆ ನಾನು ಅವನಿಗೆ ಮೂರು ಪುತ್ರರನ್ನು ಹೆತ್ತಿದ್ದೇನೆ,” ಎಂದು ಹೇಳಿ, ಆ ಮಗುವಿಗೆ ಲೇವಿ ಎಂದು ಹೆಸರಿಟ್ಟಳು. 35 ಆಕೆಯು ಮತ್ತೆ ಗರ್ಭಿಣಿಯಾಗಿ ಮಗನನ್ನು ಹೆತ್ತು, “ಈಗ ನಾನು ಯೆಹೋವ ದೇವರನ್ನು ಸ್ತುತಿಸುವೆನು,” ಎಂದು ಹೇಳಿ, ಅವನಿಗೆ ಯೆಹೂದ ಎಂದು ಹೆಸರಿಟ್ಟಳು. ಆಮೇಲೆ ಆಕೆಗೆ ಮಕ್ಕಳಾಗಲಿಲ್ಲ.