Jeremiah 52 (BOKCV2)
1 ಚಿದ್ಕೀಯನು ಅರಸನಾದಾಗ ಇಪ್ಪತ್ತೊಂದು ವರ್ಷದವನಾಗಿದ್ದು; ಅವನು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷ ಆಳಿದನು. ಅವನ ತಾಯಿ ಲಿಬ್ನದ ಯೆರೆಮೀಯನ ಮಗಳಾದ ಹಮೂಟಲ್. 2 ಅವನು ಯೆಹೋಯಾಕೀಮನು ಮಾಡಿದಂತೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. 3 ಯೆಹೋವ ದೇವರ ಕೋಪದಿಂದ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಇವೆಲ್ಲ ಉಂಟಾದವು. ಹೀಗೆ ಯೆಹೋವ ದೇವರು ಅವರನ್ನು ತಮ್ಮ ಸಮ್ಮುಖದಿಂದ ತಳ್ಳಿಬಿಟ್ಟರು.ಚಿದ್ಕೀಯನು ಬಾಬಿಲೋನಿನ ಅರಸನಿಗೆ ವಿರೋಧವಾಗಿ ತಿರುಗಿಬಿದ್ದನು. 4 ಅವನ ಆಳ್ವಿಕೆಯ ಒಂಬತ್ತನೆಯ ವರ್ಷದ ಹತ್ತನೆಯ ತಿಂಗಳಿನ, ಹತ್ತನೆಯ ದಿವಸದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ತನ್ನ ಸಮಸ್ತ ಸೈನ್ಯ ಸಮೇತ ಯೆರೂಸಲೇಮಿಗೆ ವಿರೋಧವಾಗಿ ಬಂದು, ಅದಕ್ಕೆ ಎದುರಾಗಿ ದಂಡಿಳಿದು ಅದರ ಸುತ್ತಲೂ ಮಣ್ಣಿನ ದಿಬ್ಬಗಳನ್ನು ಮಾಡಿಸಿದನು. 5 ಈ ಪ್ರಕಾರ ಅರಸನಾದ ಚಿದ್ಕೀಯನ ಹನ್ನೊಂದನೆಯ ವರ್ಷದವರೆಗೆ ಪಟ್ಟಣಕ್ಕೆ ಮುತ್ತಿಗೆಹಾಕಿದನು. 6 ನಾಲ್ಕನೆಯ ತಿಂಗಳಿನ ಒಂಬತ್ತನೆಯ ದಿವಸದಲ್ಲಿ ಪಟ್ಟಣದಲ್ಲಿ ಕ್ಷಾಮವು ಬಲವಾದದ್ದರಿಂದ ದೇಶದ ಜನರಿಗೆ ರೊಟ್ಟಿಯಿಲ್ಲದೆ ಹೋಯಿತು. 7 ಆಗ ಪಟ್ಟಣದ ಗೋಡೆ ಮುರಿಯಲಾಯಿತು. ಸೈನಿಕರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದಲ್ಲಿ ಇದ್ದ ಬಾಗಿಲಿನ ಮಾರ್ಗವಾಗಿ ಹೊರಟು, ಬಾಬಿಲೋನಿನವರು ಪಟ್ಟಣದ ಬಳಿಯಲ್ಲಿ ಇದ್ದದ್ದರಿಂದ ಅವರು ಅರಾಬಾ ಎಂಬ ಕಣಿವೆ ಪ್ರದೇಶದ ಕಡೆಗೆ ಪಲಾಯನ ಮಾಡಿದರು. 8 ಆಗ ಬಾಬಿಲೋನಿಯರ ದಂಡು ಅರಸನಾದ ಚಿದ್ಕೀಯನನ್ನು ಯೆರಿಕೋವಿನ ಬಯಲಿನಲ್ಲಿ ಹಿಂದಟ್ಟಿದರು; ಅಷ್ಟರಲ್ಲಿ ಅವನ ಸೈನಿಕರೆಲ್ಲ ಅವನನ್ನು ಬಿಟ್ಟು ಚದರಿಹೋಗಿದ್ದರು. 9 ಅನಂತರ ಬಾಬಿಲೋನಿಯರು ಚಿದ್ಕೀಯನನ್ನು ಹಿಡಿದರು.ಅವನನ್ನು ಹಮಾತ್ ನಾಡಿನ ರಿಬ್ಲದಲ್ಲಿರುವ ತಮ್ಮ ಅರಸನಾದ ನೆಬೂಕದ್ನೆಚ್ಚರನ ಬಳಿಗೆ ತೆಗೆದುಕೊಂಡು ಬಂದು, ಅವನ ಮೇಲೆ ನ್ಯಾಯವನ್ನು ನಿರ್ಣಯಿಸಿದರು. 10 ಆ ಬಾಬಿಲೋನಿಯದ ಅರಸನು ಅಲ್ಲೇ ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ, ಅವನ ಮಕ್ಕಳನ್ನು ಅವನ ಕಣ್ಣೆದುರಿಗೇ ವಧಿಸಿದನು. ಯೆಹೂದದ ಎಲ್ಲಾ ಪದಾಧಿಕಾರಿಗಳನ್ನು ರಿಬ್ಲದಲ್ಲಿ ಕೊಲ್ಲಿಸಿದನು. 11 ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ, ಅವನಿಗೆ ಬೇಡಿಹಾಕಿಸಿ, ಬಾಬಿಲೋನಿಗೆ ತೆಗೆದುಕೊಂಡುಹೋಗಿ, ಜೀವನಾವಧಿಯವರೆಗೆ ಅವನನ್ನು ಸೆರೆಯಲ್ಲಿಟ್ಟನು. 12 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಆಳ್ವಿಕೆಯ ಹತ್ತೊಂಬತ್ತನೆಯ ವರ್ಷದ ಐದನೆಯ ತಿಂಗಳಿನ, ಹತ್ತನೆಯ ದಿನದಲ್ಲಿ ಬಾಬಿಲೋನಿನ ಅರಸನ ಸೇವಕನೂ, ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂಸಲೇಮಿಗೆ ಬಂದು, 13 ಯೆಹೋವ ದೇವರ ಆಲಯವನ್ನೂ, ಅರಮನೆಯನ್ನೂ, ಯೆರೂಸಲೇಮಿನಲ್ಲಿರುವ ಸಮಸ್ತ ಮನೆಗಳನ್ನೂ, ಪ್ರತಿ ದೊಡ್ಡಮನುಷ್ಯರ ಮನೆಗಳನ್ನೂ ಬೆಂಕಿಯಿಂದ ಸುಟ್ಟುಬಿಟ್ಟನು. 14 ಕಾವಲುಗಾರರ ಅಧಿಪತಿಯ ಸಂಗಡದಲ್ಲಿದ್ದ ಬಾಬಿಲೋನಿಯರ ಸೈನ್ಯದವರೆಲ್ಲರೂ ಯೆರೂಸಲೇಮಿನ ಸುತ್ತಲೂ ಇರುವ ಗೋಡೆಗಳನ್ನು ಕೆಡವಿಬಿಟ್ಟರು. 15 ಕಾವಲಿನ ಅಧಿಪತಿಯಾದ ನೆಬೂಜರದಾನನು ಜನರಲ್ಲಿ ಬಡವರಾದ ಕೆಲವರನ್ನೂ, ಪಟ್ಟಣದಲ್ಲಿ ಉಳಿದ ಜನರನ್ನೂ, ಬಾಬಿಲೋನಿನ ಅರಸನಿಗೆ ಮರೆಹೊಕ್ಕವರನ್ನೂ, ಬೇರೆ ಎಲ್ಲಾ ಜನರನ್ನೂ ಸೆರೆಯಾಗಿ ಒಯ್ದನು. 16 ಆದರೆ ನೆಬೂಜರದಾನನು ಹೊಲಗಳನ್ನು ಮತ್ತು ದ್ರಾಕ್ಷಿತೋಟಗಳನ್ನು ಬೇಸಾಯ ಮಾಡುವದಕ್ಕಾಗಿ ದೇಶದ ಜನರಲ್ಲಿ ಕೇವಲ ಬಡವರನ್ನು ಮಾತ್ರ ಬಿಟ್ಟುಹೋದನು. 17 ಯೆಹೋವ ದೇವರ ಆಲಯದಲ್ಲಿದ್ದ ಕಂಚಿನ ಸ್ತಂಭಗಳನ್ನೂ, ಪೀಠಗಳನ್ನೂ, ಕಂಚಿನ ಸಮುದ್ರವೆಂಬ ಪಾತ್ರೆಯನ್ನೂ ಬಾಬಿಲೋನಿಯರು ಒಡೆದುಹಾಕಿ, ಅದರ ಎಲ್ಲಾ ಕಂಚನ್ನು ಬಾಬಿಲೋನಿಗೆ ತೆಗೆದುಕೊಂಡು ಹೋದರು. 18 ಇದಲ್ಲದೆ ಅವರು ಆಲಯದ ಸೇವೆಗಾಗಿ ಉಪಯೋಗಿಸುತ್ತಿದ್ದ ಬೋಗುಣಿ, ಸಲಿಕೆ, ಕತ್ತರಿ, ಸಾಂಬ್ರಾಣಿಕಳಸ ಮತ್ತು ಸಮಸ್ತ ಕಂಚಿನ ಸಲಕರಣೆಗಳನ್ನೂ ತೆಗೆದುಕೊಂಡು ಹೋದರು. 19 ಕಾವಲುಗಾರರ ಅಧಿಪತಿಯು ಬೋಗುಣಿಗಳನ್ನೂ, ಅಗ್ನಿ ಪಾತ್ರೆಗಳನ್ನೂ, ಬಟ್ಟಲುಗಳನ್ನೂ ಬೋಗುಣಿಗಳನ್ನೂ, ದೀಪಸ್ತಂಭಗಳನ್ನೂ, ಸೌಟುಗಳನ್ನೂ, ಪಾನಾರ್ಪಣೆಯ ಪಾತ್ರೆ ಬಂಗಾರ ಬೆಳ್ಳಿಗಳಿಂದ ಮಾಡಿದ ಎಲ್ಲವನ್ನೂ ತೆಗೆದುಕೊಂಡನು. 20 ಅರಸನಾದ ಸೊಲೊಮೋನನು ಯೆಹೋವ ದೇವರ ಆಲಯಕ್ಕಾಗಿ ಮಾಡಿಸಿದ್ದ ಎರಡು ಕಂಬಗಳು, ನೀರನ್ನು ಸಂಗ್ರಹಿಸಲು ಮಾಡಿದ ದೊಡ್ಡ ಕಂಚಿನ ಪಾತ್ರೆ, ಪೀಠಗಳನ್ನು ಹೊರುವ ಹನ್ನೆರಡು ಕಂಚಿನ ಹೋರಿಗಳು, ಇವುಗಳನ್ನು ಮಾಡುವುದಕ್ಕೆ ತೂಕ ಮಾಡಲಾರದಷ್ಟು ಕಂಚು ಹಿಡಿದಿತ್ತು. 21 ಕಂಬಗಳಲ್ಲಿ ಮೊದಲನೆಯ ಕಂಬ ಎಂಟು ಮೀಟರ್ ಎತ್ತರವಿತ್ತು, ಅದರ ಸುತ್ತಳತೆ ಸುಮಾರು ಐದು ಮೀಟರ್. 22 ಕಂಬದ ಮೇಲೆ ಎತ್ತರವಾದ ಒಂದು ಕಂಚಿನ ಕುಂಭವಿತ್ತು, ಆ ಕುಂಭದ ಮೇಲೆ ಸುತ್ತಲೂ ಕಂಚಿನ ಜಾಲರಿ ಹಾಗೂ ದಾಳಿಂಬೆ ಹಣ್ಣುಗಳು ಇದ್ದವು. ಎರಡನೆಯ ಕಂಬವು ದಾಳಿಂಬೆ ಹಣ್ಣುಗಳಿಂದ ಹಾಗೆಯೇ ಅಲಂಕಾರವಾಗಿತ್ತು. 23 ನಾಲ್ಕು ಪಕ್ಕಗಳಲ್ಲಿ ತೊಂಬತ್ತಾರು ದಾಳಿಂಬೆ ಹಣ್ಣುಗಳಿದ್ದವು. ಜಾಲರಿಯ ಮೇಲೆ ಸುತ್ತಲೂ ಒಟ್ಟಿಗೆ ನೂರು ದಾಳಿಂಬೆ ಹಣ್ಣುಗಳಿದ್ದವು. 24 ಕಾವಲುಗಾರರ ಅಧಿಪತಿಯು ಮುಖ್ಯಯಾಜಕನಾದ ಸೆರಾಯನನ್ನೂ, ಎರಡನೆಯ ಯಾಜಕನಾದ ಚೆಫನ್ಯನನ್ನೂ, ಮೂವರು ದ್ವಾರಪಾಲಕರನ್ನೂ ಹಿಡಿದುಕೊಂಡು ಹೋದನು. 25 ಇದಲ್ಲದೆ ಪಟ್ಟಣದೊಳಗಿಂದ ಸೈನಿಕರ ಮೇಲಿದ್ದ ಒಬ್ಬ ಅಧಿಕಾರಿಯನ್ನೂ, ಅರಸನ ಏಳುಮಂದಿ ಸಲಹೆಗಾರರನ್ನೂ, ಯುದ್ಧಕ್ಕೆ ಹೋಗತಕ್ಕವರ ಪಟ್ಟಿಮಾಡುವ ಸೇನಾಧಿಪತಿಯ ಲೇಖಕನನ್ನೂ, ಪಟ್ಟಣದ ಮಧ್ಯದಲ್ಲಿ ಸಿಕ್ಕಿದ ದೇಶದ ಜನರಲ್ಲಿ ಅರವತ್ತು ಮಂದಿಯನ್ನೂ ತೆಗೆದುಕೊಂಡನು. 26 ಇವರನ್ನೆಲ್ಲಾ ಕಾವಲಿನ ಅಧಿಪತಿಯಾದ ನೆಬೂಜರದಾನನು ಹಿಡಿದುಕೊಂಡುಹೋಗಿ, ರಿಬ್ಲದಲ್ಲಿದ್ದ ಬಾಬಿಲೋನಿನ ಅರಸನಿಗೆ ಒಪ್ಪಿಸಿದನು. 27 ಬಾಬಿಲೋನಿನ ಅರಸನು ಹಮಾತಿನ ರಿಬ್ಲದಲ್ಲಿ ಅವರನ್ನು ಕೊಂದುಹಾಕಿಸಿದನು.ಈ ಪ್ರಕಾರ ಯೆಹೂದ್ಯರು ಸೆರೆಯಾಳುಗಳಾಗಿ ತಮ್ಮ ದೇಶವನ್ನು ಬಿಟ್ಟುಹೋಗಬೇಕಾಯಿತು. 28 ನೆಬೂಕದ್ನೆಚ್ಚರನು ಸೆರೆಯಾಗಿ ಒಯ್ದ ಜನರ ಪಟ್ಟಿ ಹೀಗಿದೆ: ಅವನು ತನ್ನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಸೆರೆಗೊಯ್ದದ್ದು3,023 ಮಂದಿ ಯೆಹೂದ್ಯರನ್ನು; 29 ನೆಬೂಕದ್ನೆಚ್ಚರನ ಹದಿನೆಂಟನೆಯ ವರ್ಷದಲ್ಲಿ832 ಮಂದಿಯನ್ನು ಅವನು ಯೆರೂಸಲೇಮಿನಿಂದ ಸೆರೆಗೊಯ್ದನು; 30 ನೆಬೂಕದ್ನೆಚ್ಚರನು ಇಪ್ಪತ್ತು ಮೂರನೆಯ ವರ್ಷದಲ್ಲಿಕಾವಲಿನ ಅಧಿಪತಿಯಾದ ನೆಬೂಜರದಾನನು 745 ಮಂದಿ ಯೆಹೂದ್ಯರನ್ನು ಸೆರೆಗೊಯ್ದನು. ಹೀಗೆ ಸೆರೆಯಾದವರ ಮೊತ್ತ 4,600 ಮಂದಿ. 31 ಯೆಹೂದದ ಅರಸನಾದ ಯೆಹೋಯಾಖೀನನ ಸೆರೆಯ ಮೂವತ್ತೇಳನೆಯ ವರ್ಷದ ಹನ್ನೆರಡನೆಯ ತಿಂಗಳಿನ ಇಪ್ಪತ್ತೈದನೆಯ ದಿವಸದಲ್ಲಿ ಆದದ್ದೇನೆಂದರೆ, ಬಾಬಿಲೋನಿನ ಅರಸನಾದ ಎವೀಲ್ಮೆರೋದಕನು ತನ್ನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಅವನು ಯೆಹೂದದ ಅರಸನಾದ ಯೆಹೋಯಾಖೀನನನ್ನು ಸೆರೆಮನೆಯಿಂದ ಬಿಡಿಸಿದನು. 32 ಇದಲ್ಲದೆ ಅವನ ಸಂಗಡ ಪ್ರೀತಿಯಿಂದ ಮಾತನಾಡಿ, ತನ್ನ ಸಂಗಡ ಬಾಬೆಲಿನಲ್ಲಿದ್ದ ಎಲ್ಲಾ ಅರಸರಿಗಿಂತ ಅವನಿಗೆ ಉನ್ನತಸ್ಥಾನವನ್ನು ಕೊಟ್ಟನು. 33 ಅವನ ಸೆರೆಯ ವಸ್ತ್ರಗಳನ್ನು ತೆಗೆದು ರಾಜವಸ್ತ್ರ ತೊಡಿಸಿದನು. ಹೀಗೆ ಯೆಹೋಯಾಖೀನನು ಬದುಕಿದ ಸಕಲ ದಿವಸಗಳಲ್ಲಿ ಅರಸನ ಪಂಕ್ತಿಯಲ್ಲಿಯೇ ಊಟಮಾಡುತ್ತಿದ್ದನು. 34 ಅವನ ಜೀವಿತ ಕಾಲವೆಲ್ಲಾ ಸಾಯುವ ತನಕ, ಅವನಿಗೆ ಬೇಕಾಗಿದ್ದ ಎಲ್ಲಾ ಪದಾರ್ಥಗಳು ಬಾಬಿಲೋನಿನ ಅರಸನಿಂದಲೇ ಪ್ರತಿನಿತ್ಯವೂ ದೊರಕುತ್ತಿದ್ದವು.