Leviticus 19 (BOKCV2)
1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ, 2 “ಇಸ್ರಾಯೇಲರ ಸಭೆಯವರೆಲ್ಲರ ಸಂಗಡ ಮಾತನಾಡಿ, ಅವರಿಗೆ ಹೀಗೆ ಹೇಳಬೇಕು: ‘ನೀವು ಪರಿಶುದ್ಧರಾಗಿರಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರಾದ ನಾನು ಪರಿಶುದ್ಧನಾಗಿದ್ದೇನೆ. 3 “ ‘ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ತಾಯಿಗೂ ತನ್ನ ತಂದೆಗೂ ಭಯಪಟ್ಟು, ನನ್ನ ವಿಶ್ರಾಂತಿಯ ದಿನಗಳನ್ನು ಕೈಗೊಳ್ಳಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. 4 “ ‘ನೀವು ವಿಗ್ರಹಗಳ ಕಡೆಗೆ ತಿರುಗಿಕೊಳ್ಳಬೇಡಿರಿ. ಇಲ್ಲವೆ ನಿಮಗೋಸ್ಕರವಾಗಿ ಎರಕದ ದೇವರುಗಳನ್ನು ಮಾಡಿಕೊಳ್ಳಬೇಡಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. 5 “ ‘ನೀವು ನಿಮ್ಮ ಯೆಹೋವ ದೇವರಿಗೆ ಸಮಾಧಾನದ ಬಲಿಯನ್ನು ಸಮರ್ಪಿಸುವುದಾದರೆ, ನೀವು ಆತನಿಗೆ ಮೆಚ್ಚಿಗೆಯಾಗುವ ರೀತಿಯಲ್ಲಿಯೇ ಅರ್ಪಿಸಬೇಕು. 6 ಅದನ್ನು ನೀವು ಸಮರ್ಪಿಸಿದ ದಿನದಲ್ಲಿಯೂ ಮಾರನೆಯ ದಿನದಲ್ಲಿಯೂ ತಿನ್ನಬೇಕು. ಆದರೆ ಅದು ಮೂರನೆಯ ದಿನದವರೆಗೆ ಉಳಿದರೆ ಅದನ್ನು ಬೆಂಕಿಯಲ್ಲಿ ಸುಡಬೇಕು. 7 ಅದನ್ನು ಮೂರನೆಯ ದಿನದಲ್ಲಿ ತಿಂದದ್ದೇ ಆದರೆ, ಅದು ಅಸಹ್ಯವಾದದ್ದು, ಅದು ಅಂಗೀಕೃತವಾಗುವುದಿಲ್ಲ. 8 ಆದ್ದರಿಂದ ಅದನ್ನು ತಿನ್ನುವ ಪ್ರತಿಯೊಬ್ಬರೂ ತಮ್ಮ ಅಪರಾಧವನ್ನು ಹೊತ್ತುಕೊಳ್ಳಬೇಕು. ಏಕೆಂದರೆ ಯೆಹೋವ ದೇವರಿಗೆ ಪವಿತ್ರವಾದದ್ದನ್ನು ಅವರು ಅಶುದ್ಧಮಾಡಿದ್ದಾನೆ. ಅಂಥವರನ್ನು ತಮ್ಮ ಜನರ ಮಧ್ಯದೊಳಗಿಂದ ತೆಗೆದುಹಾಕಬೇಕು. 9 “ ‘ನೀವು ನಿಮ್ಮ ಭೂಮಿಯ ಪೈರನ್ನು ಕೊಯ್ಯುವಾಗ, ನಿಮ್ಮ ಹೊಲದ ಮೂಲೆಗಳಲ್ಲಿ ಸಂಪೂರ್ಣವಾಗಿ ಕೊಯ್ಯಬಾರದು. ಇಲ್ಲವೆ ನಿಮ್ಮ ಸುಗ್ಗಿಯ ಹಕ್ಕಲುಗಳನ್ನು ಕೂಡಿಸಬಾರದು. 10 ನಿಮ್ಮ ದ್ರಾಕ್ಷಿತೋಟದಲ್ಲಿ ಹಕ್ಕಲಾಯಬಾರದು. ಇಲ್ಲವೆ ಪ್ರತಿಯೊಂದು ದ್ರಾಕ್ಷಿಯನ್ನೂ ಕೂಡಿಸಬಾರದು. ನೀವು ಅವುಗಳನ್ನು ಬಡವರಿಗಾಗಿಯೂ ಪರಕೀಯರಿಗಾಗಿಯೂ ಬಿಟ್ಟುಬಿಡಬೇಕು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. 11 “ ‘ಕದಿಯಬಾರದು.“ ‘ಸುಳ್ಳಾಡಬಾರದು.“ ‘ಒಬ್ಬರಿಗೊಬ್ಬರು ಮೋಸಮಾಡಬಾರದು. 12 “ ‘ನನ್ನ ಹೆಸರಿನಲ್ಲಿ ಸುಳ್ಳು ಪ್ರಮಾಣ ಮಾಡಬಾರದು. ನಿಮ್ಮ ದೇವರ ಹೆಸರನ್ನು ಅಗೌರವಿಸಬಾರದು. ನಾನೇ ಯೆಹೋವ ದೇವರು. 13 “ ‘ನಿಮ್ಮ ನೆರೆಯವನನ್ನು ವಂಚಿಸಬಾರದು.“ ‘ಇಲ್ಲವೆ ಅವನನ್ನು ಸುಲಿದುಕೊಳ್ಳಬಾರದು. ಕೂಲಿಯಾಳಿನ ಕೂಲಿಯು ನಿಮ್ಮ ಬಳಿಯಲ್ಲಿ ರಾತ್ರಿಯೆಲ್ಲಾ ಮತ್ತು ಮುಂಜಾನೆಯವರೆಗೆ ಇರಬಾರದು. 14 “ ‘ಕಿವುಡನನ್ನು ಶಪಿಸಬಾರದು. ಇಲ್ಲವೆ ಕಣ್ಣು ಕಾಣದವನನ್ನು ಮುಗ್ಗರಿಸುವಂತೆ ಮಾಡಬಾರದು. ನಿಮ್ಮ ದೇವರಿಗೆ ಭಯಪಡಬೇಕು. ನಾನೇ ಯೆಹೋವ ದೇವರು. 15 “ ‘ವ್ಯಾಜ್ಯ ತೀರಿಸುವಾಗ ನೀನು ಅನ್ಯಾಯ ಮಾಡದಿರು. ಬಡವನ ಮುಖ ದಾಕ್ಷಿಣ್ಯವನ್ನಾಗಲಿ, ಬಲಿಷ್ಠನ ಘನತೆಯನ್ನಾಗಲಿ ಲಕ್ಷಿಸದೆ ನಿಷ್ಪಕ್ಷಪಾತವಾಗಿ ತೀರ್ಪುಕೊಡು. ನಿನ್ನ ನೆರೆಯವನಿಗೆ ನೀತಿಯಲ್ಲಿ ನ್ಯಾಯವಾಗಿ ತೀರ್ಪುಮಾಡು. 16 “ ‘ನಿನ್ನ ಜನರ ಮಧ್ಯದಲ್ಲಿ ಚಾಡಿಗಾರನಾಗಿ ತಿರುಗಾಡಬೇಡ.“ ‘ನಿನ್ನ ನೆರೆಯವನ ರಕ್ತಾಪರಾಧಕ್ಕೆ ಕಾರಣನಾಗಬೇಡ. ನಾನೇ ಯೆಹೋವ ದೇವರು. 17 “ ‘ನಿನ್ನ ಹೃದಯದಲ್ಲಿ ನಿನ್ನ ಸಹೋದರನನ್ನು ದ್ವೇಷಿಸಬೇಡ, ನಿನ್ನ ನೆರೆಯವನ ಪಾಪವು ನಿನ್ನ ಮೇಲೆ ಬಾರದಂತೆ ಅವನನ್ನು ತಪ್ಪದೆ ಗದರಿಸು. 18 “ ‘ನಿನ್ನ ಜನರ ಮಕ್ಕಳ ಮೇಲೆ ಮುಯ್ಯಿಗೆ ಮುಯ್ಯಿ ತೀರಿಸದವನಾಗಿಯೂ, ಸೇಡು ತೀರಿಸದೆಯೂ ಇರು. ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು. ನಾನೇ ಯೆಹೋವ ದೇವರು. 19 “ ‘ನೀನು ನನ್ನ ಆಜ್ಞೆಗಳನ್ನು ಕೈಗೊಳ್ಳಬೇಕು.“ ‘ನಿನ್ನ ಪಶುಗಳನ್ನು ಬೇರೆ ಜಾತಿಯೊಂದಿಗೆ ಕೂಡಗೊಡಿಸಬೇಡ.“ ‘ನಿನ್ನ ಹೊಲದಲ್ಲಿ ಮಿಶ್ರವಾದ ಬೀಜಗಳನ್ನು ಬಿತ್ತಬೇಡ.“ ‘ಇದಲ್ಲದೆ ನಾರು ಮತ್ತು ಉಣ್ಣೆ ಕೂಡಿಸಿದ ಬಟ್ಟೆ ನಿನ್ನ ಮೇಲೆ ಇರಬಾರದು. 20 “ ‘ಒಬ್ಬ ಪುರುಷನಿಗೆ ನಿಶ್ಚಿತವಾಗಿರುವ ದಾಸಿಯಾದ ಒಬ್ಬ ಸ್ತ್ರೀಯೊಂದಿಗೆ ಒಬ್ಬ ಮನುಷ್ಯನು ಸಂಗಮಿಸುವುದಕ್ಕಾಗಿ ಮಲಗಿದರೆ ಅವಳು ಬಿಡುಗಡೆಯನ್ನು ಹೊಂದಿರದಿದ್ದರೆ, ಇಲ್ಲವೆ ಅವಳಿಗೆ ಸ್ವಾತಂತ್ರ್ಯವನ್ನು ಕೊಡದಿರದಿದ್ದರೆ, ತಕ್ಕ ಶಿಕ್ಷೆಯಾಗಬೇಕು. ಅವಳು ಸ್ವತಂತ್ರಳಲ್ಲದ ಕಾರಣ ಅವಳಿಗೆ ಮರಣದಂಡನೆಯನ್ನು ವಿಧಿಸಬಾರದು. 21 ಅವನು ಪ್ರಾಯಶ್ಚಿತ್ತ ಬಲಿಯ ಟಗರಾದ ತನ್ನ ಪ್ರಾಯಶ್ಚಿತ್ತ ಬಲಿಯನ್ನು ದೇವದರ್ಶನದ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಎದುರಿನಲ್ಲಿ ತರಬೇಕು. 22 ಅವನು ಮಾಡಿದ ಪಾಪಕ್ಕಾಗಿ ಪ್ರಾಯಶ್ಚಿತ್ತ ಬಲಿಯಾಗಿರುವ ಟಗರಿನಿಂದ ಯಾಜಕನು ಯೆಹೋವ ದೇವರ ಎದುರಿನಲ್ಲಿ ಪ್ರಾಯಶ್ಚಿತ್ತ ಮಾಡಬೇಕು. ಆಗ ಅವನು ಮಾಡಿದ ಪಾಪವನ್ನು ಅವನಿಗೆ ಕ್ಷಮಿಸಲಾಗುವುದು. 23 “ ‘ನೀವು ದೇಶದೊಳಗೆ ಬಂದು ಎಲ್ಲಾ ತರಹದ ಮರಗಳನ್ನು ಆಹಾರಕ್ಕೋಸ್ಕರ ನೆಟ್ಟಾಗ, ಅದರ ಫಲವನ್ನು ಮೂರು ವರುಷಗಳವರೆಗೆ ಅಶುದ್ಧವೆಂದೆಣಿಸಿ ಅದನ್ನು ತಿನ್ನಬಾರದು. 24 ಆದರೆ ನಾಲ್ಕನೆಯ ವರುಷದಲ್ಲಿ ಅದರ ಎಲ್ಲಾ ಫಲವು ಯೆಹೋವ ದೇವರ ಸ್ತೋತ್ರಕ್ಕಾಗಿ ಪರಿಶುದ್ಧವಾಗಿರುವುದು. 25 ಐದನೆಯ ವರುಷದಲ್ಲಿ ಅದರ ಫಲವನ್ನು ನೀವು ತಿನ್ನಬೇಕು. ಆಗ ಅದು ನಿಮಗೆ ಇನ್ನೂ ಸಮೃದ್ಧಿಯಾಗಿ ಫಲಿಸುವುದು. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. 26 “ ‘ರಕ್ತದೊಂದಿಗೆ ಯಾವುದನ್ನೂ ನೀವು ತಿನ್ನಬಾರದು.“ ‘ಇದಲ್ಲದೆ ಮಂತ್ರವನ್ನು ಮಾಡಬಾರದು. ಇಲ್ಲವೆ ಶಕುನಗಳನ್ನು ನೋಡಬಾರದು. 27 “ ‘ನಿಮ್ಮ ತಲೆಯ ಮೂಲೆಗಳನ್ನು ದುಂಡಗೆ ಕತ್ತರಿಸಬಾರದು. ಇದಲ್ಲದೆ ನಿಮ್ಮ ಗಡ್ಡದ ಮೂಲೆಯನ್ನು ಕೆಡಿಸಬಾರದು. 28 “ ‘ಸತ್ತವರಿಗಾಗಿ ನಿಮ್ಮ ಶರೀರವನ್ನು ಕೊಯ್ದುಕೊಳ್ಳಬಾರದು. ನಿಮ್ಮ ಮೇಲೆ ಯಾವ ಹಚ್ಚೆಗಳನ್ನೂ ಹಚ್ಚಿಸಿಕೊಳ್ಳಬಾರದು. ನಾನೇ ಯೆಹೋವ ದೇವರು. 29 “ ‘ನಿನ್ನ ಮಗಳು ವೇಶ್ಯೆಯಾಗುವಂತೆ ವ್ಯಭಿಚಾರಕ್ಕೆ ಬಿಡಬಾರದು. ಹಾಗೆ ಮಾಡಿದರೆ, ದೇಶವು ವೇಶ್ಯೆತನಕ್ಕೆ ಒಳಪಡುವುದು ಮತ್ತು ಕೆಟ್ಟತನದಿಂದ ತುಂಬಿಹೋಗುವುದು. 30 “ ‘ನನ್ನ ವಿಶ್ರಾಂತಿಯ ದಿನಗಳನ್ನು ನೀವು ಆಚರಿಸಬೇಕು. ನನ್ನ ಪರಿಶುದ್ಧಸ್ಥಳದ ವಿಷಯದಲ್ಲಿ ಭಯಭಕ್ತಿಯುಳ್ಳವರಾಗಿರಬೇಕು. ನಾನೇ ಯೆಹೋವ ದೇವರು. 31 “ ‘ಮಾಟಗಾರರನ್ನು ಲಕ್ಷಿಸಬೇಡ, ಅಲ್ಲದೆ ಅವರಿಂದ ಅಶುದ್ಧವಾಗದಂತೆ ಭೂತಪ್ರೇತಗಳನ್ನು ವಿಚಾರಿಸುವವರನ್ನು ಅನುಸರಿಸಬೇಡ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. 32 “ ‘ತಲೆ ನೆರೆತ ವೃದ್ಧರ ಮುಂದೆ ಎದ್ದು ನಿಂತುಕೊಳ್ಳಬೇಕು, ಅವರ ಸಮ್ಮುಖವನ್ನು ಗೌರವಿಸು. ನಿನ್ನ ದೇವರಿಗೆ ಭಯಪಡಬೇಕು. ನಾನೇ ಯೆಹೋವ ದೇವರು. 33 “ ‘ಒಬ್ಬ ಪರಕೀಯನು ನಿಮ್ಮ ದೇಶದಲ್ಲಿ ನಿನ್ನೊಂದಿಗೆ ಪ್ರವಾಸಿಯಾಗಿದ್ದರೆ, ಅವನನ್ನು ಉಪದ್ರವ ಪಡಿಸಬೇಡಿರಿ. 34 ಆದರೆ ನಿಮ್ಮಲ್ಲಿ ವಾಸವಾಗಿರುವ ಪರಕೀಯನು ನಿಮ್ಮೊಳಗೇ ಸ್ವದೇಶದವನಂತಿರಲಿ. ನೀವು ಅವನನ್ನು ನಿಮ್ಮಂತೆಯೇ ಪ್ರೀತಿಸಬೇಕು. ಏಕೆಂದರೆ ನೀವು ಸಹ ಈಜಿಪ್ಟ್ ದೇಶದಲ್ಲಿ ಪರಕೀಯರಾಗಿದ್ದಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. 35 “ ‘ನಿಮ್ಮ ನಿರ್ಣಯದಲ್ಲಿಯೂ, ಅಳೆಯುವುದರಲ್ಲಿಯೂ, ತೂಕದಲ್ಲಿಯೂ, ಅಳತೆಯಲ್ಲಿಯೂ ನೀವು ಅನ್ಯಾಯ ಮಾಡಬೇಡಿರಿ. 36 ತಕ್ಕಡಿ, ತೂಕದ ಕಲ್ಲುಗಳು, ಕಿಲೋಗ್ರಾಂ ಮತ್ತು ಲೀಟರ್ ನ್ಯಾಯಯುತವಾಗಿರಲಿ. ಈಜಿಪ್ಟ್ ದೇಶದೊಳಗಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಯೆಹೋವ ದೇವರು ನಾನೇ. 37 “ ‘ಆದ್ದರಿಂದ ನನ್ನ ಎಲ್ಲಾ ಆಜ್ಞೆಗಳನ್ನೂ, ನನ್ನ ಎಲ್ಲಾ ನ್ಯಾಯಗಳನ್ನೂ ನೀವು ಅನುಸರಿಸಿ ನಡೆಯಬೇಕು. ನಾನೇ ಯೆಹೋವ ದೇವರು,’ ” ಎಂದು ಹೇಳಿದರು.