Numbers 32 (BOKCV2)
1 ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಅಧಿಕ ಸಂಖೆಯಲ್ಲಿ ಪಶುಗಳು ಇದ್ದವು. ಅವರು ಯಜ್ಜೇರ್, ಗಿಲ್ಯಾದ್ ಎಂಬ ದೇಶಗಳನ್ನು ನೋಡಿದಾಗ, ಅದು ಪಶುಗಳಿಗೆ ತಕ್ಕ ಸ್ಥಳವೆಂದು ತಿಳಿದುಕೊಂಡರು. 2 ಆದ್ದರಿಂದ ಗಾದನ ಮಕ್ಕಳೂ ರೂಬೇನನ ಮಕ್ಕಳೂ ಮೋಶೆ ಮತ್ತು ಯಾಜಕನಾದ ಎಲಿಯಾಜರನ ಬಳಿಗೂ ಸಭೆಯ ಪ್ರಧಾನರಿಗೂ ಬಳಿಗೂ ಬಂದು ಮಾತನಾಡಿ: 3 “ಅಟಾರೋತ್, ದೀಬೋನ್, ಯಜ್ಜೇರ್, ನಿಮ್ರಾ, ಹೆಷ್ಬೋನ್, ಎಲೆಯಾಲೆ, ಸೆಬಾಮ್, ನೆಬೋ, ಬೆಯೋನ್ ಎಂಬವುಗಳು, 4 ಯೆಹೋವ ದೇವರು ಇಸ್ರಾಯೇಲರ ಸಮೂಹಕ್ಕೆ ಅಧೀನಪಡಿಸಿದ ಪ್ರದೇಶವು ಪಶುಗಳ ಮೇವಿಗೆ ಸೂಕ್ತವಾಗಿದೆ. ನಿಮ್ಮ ಸೇವಕರಿಗೂ ಪಶುಗಳು ಉಂಟು. 5 ಆದ್ದರಿಂದ ನಮಗೆ ನಿಮ್ಮ ದೃಷ್ಟಿಯಲ್ಲಿ ದಯೆಯು ಸಿಕ್ಕಿದ್ದಾದರೆ, ಈ ದೇಶವನ್ನು ನಿಮ್ಮ ಸೇವಕರಿಗೆ ಸ್ವಾಸ್ತ್ಯಕ್ಕಾಗಿ ಕೊಡಬೇಕು. ನಮ್ಮನ್ನು ಯೊರ್ದನ್ ನದಿಯ ಆಚೆಗೆ ತೆಗೆದುಕೊಂಡು ಹೋಗಬೇಡಿರಿ,” ಎಂದರು. 6 ಆಗ ಮೋಶೆಯು ಗಾದನ ಮಕ್ಕಳಿಗೂ, ರೂಬೇನನ ಮಕ್ಕಳಿಗೂ, “ನಿಮ್ಮ ಸಹೋದರರು ಯುದ್ಧಕ್ಕೆ ಹೋಗುವಾಗ ನೀವು ಇಲ್ಲಿ ಕುಳಿತಿರಬೇಕೋ? 7 ಯೆಹೋವ ದೇವರು ಅವರಿಗೆ ಕೊಟ್ಟ ದೇಶಕ್ಕೆ ಹೋಗುವುದಕ್ಕೆ ನೀವು ಇಸ್ರಾಯೇಲರ ಹೃದಯಗಳನ್ನು ಅಧೈರ್ಯಪಡಿಸುವುದು ಏಕೆ? 8 ನಾನು ದೇಶವನ್ನು ನೋಡುವುದಕ್ಕೆ ಕಾದೇಶ್ ಬರ್ನೇಯದಿಂದ ಅವರನ್ನು ಕಳುಹಿಸಿದಾಗ, ನಿಮ್ಮ ಪಿತೃಗಳು ಹಾಗೆಯೇ ಮಾಡಿದರು. 9 ಹೇಗೆಂದರೆ ಅವರು ಎಷ್ಕೋಲೆಂಬ ಹಳ್ಳದವರೆಗೆ ಬಂದು, ದೇಶವನ್ನು ನೋಡಿದಾಗ, ಇಸ್ರಾಯೇಲರ ಹೃದಯವನ್ನು ಯೆಹೋವ ದೇವರು ಅವರಿಗೆ ಕೊಟ್ಟ ದೇಶದ ಒಳಗೆ ಹೋಗದ ಹಾಗೆ ಅಧೈರ್ಯಪಡಿಸಿದನು. 10 ಯೆಹೋವ ದೇವರು ಅದೇ ಸಮಯದಲ್ಲಿ ಕೋಪೋದ್ರೇಕವುಳ್ಳವರಾಗಿ ಪ್ರಮಾಣಮಾಡಿ, 11 ಅವರು ನನ್ನನ್ನು ಪೂರ್ಣಮನಸ್ಸಿನಿಂದ ಹಿಂಬಾಲಿಸದೆ ಇರುವುದರಿಂದ, ನಾನು ಅಬ್ರಹಾಮ್, ಇಸಾಕ್, ಯಾಕೋಬರಿಗೆ ಪ್ರಮಾಣ ಮಾಡಿದ ದೇಶವನ್ನು ಈಜಿಪ್ಟಿನೊಳಗಿಂದ ಹೊರಬಂದ ಇಪ್ಪತ್ತು ವರ್ಷವೂ ಅದಕ್ಕಿಂತ ಅಧಿಕವಾದ ಪ್ರಾಯವುಳ್ಳ ಜನರಲ್ಲಿ 12 ಯೆಹೋವ ದೇವರನ್ನು ಪೂರ್ಣಮನಸ್ಸಿನಿಂದ ಹಿಂಬಾಲಿಸಿದ ಕೆನಿಜ್ಜೀಯನಾದ ಯೆಫುನ್ನೆಯ ಮಗನಾಗಿರುವ ಕಾಲೇಬ್ ಮತ್ತು ನೂನನ ಮಗನಾದ ಯೆಹೋಶುವನ ಹೊರತು ಬೇರಾರೂ ನೋಡುವುದಿಲ್ಲ. 13 ಯೆಹೋವ ದೇವರು ಇಸ್ರಾಯೇಲರ ಮೇಲೆ ಕೋಪೋದ್ರೇಕಗೊಂಡದ್ದರಿಂದ, ಅವರ ದೃಷ್ಟಿಯಲ್ಲಿ ಕೆಟ್ಟತನವನ್ನು ಮಾಡಿದ ಸಂತತಿಯು ದಹಿಸುವವರೆಗೆ ಅವರನ್ನು ಮರುಭೂಮಿಯಲ್ಲಿ ನಲವತ್ತು ವರ್ಷ ಅಲೆದಾಡುವಂತೆ ಮಾಡಿದರು. 14 “ನಿಮ್ಮ ಪಿತೃಗಳ ಬದಲಾಗಿ ಬಂದಿರುವ ನೀವು, ಪಾಪಿಗಳಾಗಿ ಇಸ್ರಾಯೇಲ್ ಕುರಿತು ಯೆಹೋವ ದೇವರ ಕೋಪವನ್ನೂ ಮತ್ತಷ್ಟು ಹೆಚ್ಚಿಸುತ್ತಿದ್ದೀರಲ್ಲಾ. 15 ಏಕೆಂದರೆ ನೀವು ದೇವರ ಕಡೆಯಿಂದ ತೊಲಗಿದರೆ, ದೇವರು ಅವರನ್ನು ಮರುಭೂಮಿಯಲ್ಲಿಯೇ ಇರಿಸಿಬಿಡುವನು. ನೀವು ಈ ಸಮಸ್ತ ಜನರ ನಾಶಕ್ಕೆ ನೀವೇ ಕಾರಣರಾಗುವಿರಿ,” ಎಂದು ಹೇಳಿದನು. 16 ಆಗ ಅವರು ಮೋಶೆಯ ಬಳಿಗೆ ಬಂದು, “ನಾವು ಇಲ್ಲಿ ನಮ್ಮ ಪಶುಗಳಿಗೋಸ್ಕರ ಹಟ್ಟಿಗಳನ್ನೂ, ನಮ್ಮ ಸ್ತ್ರಿಯರಿಗೋಸ್ಕರ ಮತ್ತು ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟುವೆವು. 17 ಆದರೆ ನಾವು ಇಸ್ರಾಯೇಲರ ಮುಂದೆ ಅವರನ್ನು ಅವರ ಸ್ಥಳದೊಳಗೆ ಸೇರಿಸುವವರೆಗೆ ಯುದ್ಧಕ್ಕೆ ಸಿದ್ಧರಾಗಿ ಓಡುವೆವು. ನಮ್ಮ ಸ್ತ್ರೀಯರು ಮತ್ತು ಮಕ್ಕಳು ಮಾತ್ರ ಈ ದೇಶದ ನಿವಾಸಿಗಳ ದೆಸೆಯಿಂದ ಭದ್ರವಾದ ಊರುಗಳಲ್ಲಿ ವಾಸವಾಗಿರಬೇಕು. 18 ಇಸ್ರಾಯೇಲರಲ್ಲಿ ಒಬ್ಬೊಬ್ಬನು ತನ್ನ ಸೊತ್ತನ್ನು ಹೊಂದಿಕೊಳ್ಳುವವರೆಗೆ, ನಾವು ನಮ್ಮ ಮನೆಗಳಿಗೆ ತಿರುಗುವುದಿಲ್ಲ. 19 ನಾವು ಯೊರ್ದನ್ ನದಿಯ ಆಚೆಯಲ್ಲಿ ಅವರ ಸಂಗಡ ಸೊತ್ತನ್ನು ತೆಗೆದುಕೊಳ್ಳುವುದಿಲ್ಲ. ಏಕೆಂದರೆ ನಮ್ಮ ಸೊತ್ತು ನಮಗೆ ಯೊರ್ದನ್ ನದಿಯ ಈಚೆ ಪೂರ್ವದಿಕ್ಕಿನಲ್ಲಿ ಬಂತು,” ಎಂದನು. 20 ಮೋಶೆಯು ಅವರಿಗೆ, “ನೀವು ಈ ಕಾರ್ಯವನ್ನು ಮಾಡಿದರೆ, ನೀವು ಯೆಹೋವ ದೇವರ ಮುಂದೆ ಯುದ್ಧಕ್ಕೆ ಸಿದ್ಧವಾಗಿದ್ದರೆ, 21 ನಿಮ್ಮಲ್ಲಿ ಸಿದ್ಧವಾದವರೆಲ್ಲರೂ ಯೆಹೋವ ದೇವರು ತಮ್ಮ ಶತ್ರುಗಳನ್ನು ತಮ್ಮ ಸನ್ನಿಧಿಯಿಂದ ಹೊರಡಿಸುವವರೆಗೆ, ಯೆಹೋವ ದೇವರ ಮುಂದೆ ಯೊರ್ದನ್ ನದಿಯನ್ನು ದಾಟಿದರೆ, 22 ದೇಶವು ಯೆಹೋವ ದೇವರ ಮುಂದೆ ವಶವಾದ ತರುವಾಯ, ನೀವು ಯೆಹೋವ ದೇವರ ಮತ್ತು ಇಸ್ರಾಯೇಲರ ದೃಷಿಯಲ್ಲಿ ನಿರಪರಾಧಿಗಳಾಗಿದ್ದು, ಈ ದೇಶವು ಯೆಹೋವ ದೇವರ ಮುಂದೆ ನಿಮ್ಮ ಸೊತ್ತಾಗುವುದು. 23 “ಆದರೆ ನೀವು ಈ ಪ್ರಕಾರ ಮಾಡದಿದ್ದರೆ ಇಗೋ, ಯೆಹೋವ ದೇವರ ವಿರೋಧವಾಗಿ ಪಾಪಮಾಡಿದವರಾಗುವಿರಿ, ನಿಮ್ಮ ಪಾಪ ನಿಮ್ಮನ್ನು ಹಿಡಿದುಕೊಳ್ಳುವುದೆಂದು ತಿಳಿದುಕೊಳ್ಳಿರಿ. 24 ನಿಮ್ಮ ಸ್ತ್ರಿಯರಿಗೋಸ್ಕರ ಮತ್ತು ಮಕ್ಕಳಿಗೋಸ್ಕರ ಪಟ್ಟಣಗಳನ್ನೂ ಕಟ್ಟಿ, ನಿಮ್ಮ ಬಾಯಿಂದ ಹೊರಟದ್ದನ್ನು ಮಾಡಿರಿ,” ಎಂದು ಹೇಳಿದನು. 25 ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಮೋಶೆಯ ಸಂಗಡ ಮಾತನಾಡಿ, “ನಮ್ಮ ಒಡೆಯನು ಆಜ್ಞಾಪಿಸಿದ ಪ್ರಕಾರ ನಿನ್ನ ಸೇವಕರು ಮಾಡುವರು. 26 ನಮ್ಮ ಮಕ್ಕಳೂ, ನಮ್ಮ ಹೆಂಡತಿಯರೂ, ನಮ್ಮ ಸಂಪತ್ತೂ ನಮ್ಮ ಪಶುಗಳೆಲ್ಲಾ ಅಲ್ಲಿ ಗಿಲ್ಯಾದಿನ ಪಟ್ಟಣಗಳಲ್ಲಿ ಇರಲಿ. 27 ಆದರೆ ನಿನ್ನ ಸೇವಕರು ಯುದ್ಧಕ್ಕೆ ಸಿದ್ಧವಾದವರೆಲ್ಲರೂ ನಮ್ಮ ಒಡೆಯನು ಹೇಳಿದ ಪ್ರಕಾರ ಯೆಹೋವ ದೇವರ ಮುಂದೆ ಯುದ್ಧಕ್ಕೆ ದಾಟಿಹೋಗುವರು,” ಎಂದರು. 28 ಆಗ ಮೋಶೆಯು ಅವರ ವಿಷಯವಾಗಿ ಯಾಜಕನಾದ ಎಲಿಯಾಜರನಿಗೂ, ನೂನನ ಮಗ ಯೆಹೋಶುವನಿಗೂ, ಇಸ್ರಾಯೇಲರ ಗೋತ್ರಗಳ ಮುಖ್ಯ ಯಜಮಾನರಿಗೂ ಆಜ್ಞೆಮಾಡಿದರು. 29 ಮೋಶೆಯು ಅವರಿಗೆ, “ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಎಲ್ಲರೂ ಯುದ್ಧಕ್ಕೆ ಸಿದ್ಧವಾಗಿದ್ದು, ನಿಮ್ಮ ಸಂಗಡ ಯೊರ್ದನ್ ನದಿಯನ್ನು ಯೆಹೋವ ದೇವರ ಮುಂದೆ ದಾಟಿದರೆ, ದೇಶವು ನಿಮ್ಮ ಮುಂದೆ ವಶವಾಗಿದ್ದಾಗ ನೀವು ಅವರಿಗೆ ಗಿಲ್ಯಾದ್ ದೇಶವನ್ನು ಸೊತ್ತಾಗಿ ಕೊಡಬೇಕು. 30 ಆದರೆ ಅವರು ಯುದ್ಧಕ್ಕೆ ಸಿದ್ಧವಾಗಿ ನಿಮ್ಮ ಸಂಗಡ ದಾಟಿ ಬಾರದಿದ್ದರೆ, ಅವರು ನಿಮ್ಮೊಂದಿಗೆ ಕಾನಾನ್ ದೇಶದಲ್ಲಿಯೇ ಸೊತ್ತನ್ನು ಹೊಂದಿಕೊಳ್ಳಬೇಕು,” ಎಂದನು. 31 ಆಗ ಗಾದನ ಮಕ್ಕಳೂ, ರೂಬೇನನ ಮಕ್ಕಳೂ ಉತ್ತರವಾಗಿ, “ಯೆಹೋವ ದೇವರು ನಿನ್ನ ಸೇವಕರಿಗೆ ಹೇಳಿದ್ದಂತೆಯೇ ನಾವು ಮಾಡುವೆವು. 32 ನಾವು ಯುದ್ಧಕ್ಕೆ ಸಿದ್ಧವಾಗಿ ಯೆಹೋವ ದೇವರ ಮುಂದೆ ಕಾನಾನ್ ದೇಶಕ್ಕೆ ದಾಟಿ ಹೋಗುವೆವು. ಆದರೆ ಯೊರ್ದನ್ ನದಿಯ ಈಚೆಯಲ್ಲಿರುವ ನಮ್ಮ ಸೊತ್ತಿನ ಭಾಗವೇ ನಮಗಿರಲಿ,” ಎಂದು ಹೇಳಿದರು. 33 ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ, ರೂಬೇನನ ಮಕ್ಕಳಿಗೂ, ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ, ಅಮೋರಿಯರ ಅರಸನಾದ ಸೀಹೋನನ ರಾಜ್ಯವನ್ನೂ, ಅರಸನಾದ ಓಗನ ರಾಜ್ಯವನ್ನೂ, ಬಾಷಾನಿನ ಅರಸನಾದ ಓಗನ ರಾಜ್ಯವನ್ನೂ, ಅದರ ಭೂಮಿಯನ್ನೂ, ಅದರ ಮೇರೆಗಳಲ್ಲಿ ಸುತ್ತಮುತ್ತಲ ಪಟ್ಟಣಗಳನ್ನೂ ಕೊಟ್ಟನು. 34 ಗಾದನ ಮಕ್ಕಳು ದೀಬೋನ್, ಅಟಾರೋತ್, ಅರೋಯೇರ್, 35 ಅಟ್ರೋತ್ಷೋಫಾನ್, ಯಜ್ಜೇರ್, ಯೊಗ್ಬೆಹಾ, 36 ಬೇತ್ ನಿಮ್ರಾ ಮತ್ತು ಬೇತ್ ಹಾರಾನ್ ಎಂಬ ಭದ್ರವಾದ ಪಟ್ಟಣಗಳನ್ನೂ, ಕುರಿಗಳಿಗೆ ಹಟ್ಟಿಗಳನ್ನೂ ಕಟ್ಟಿದರು. 37 ರೂಬೇನನ ಮಕ್ಕಳು ಹೆಷ್ಬೋನ್, ಎಲೆಯಾಲೆ, ಕಿರ್ಯಾತಯಿಮ್, 38 ನೆಬೋ, ಬಾಳ್ ಮೆಯೋನ್ ಎಂದು ಬೇರೆ ಈ ಹೆಸರು ಹೊಂದಿದ ಈ ಪಟ್ಟಣಗಳನ್ನೂ ಸಿಬ್ಮಾವನ್ನೂ ಕಟ್ಟಿ, ತಾವು ಕಟ್ಟಿದ ಪಟ್ಟಣಗಳಿಗೆ ಬೇರೆ ಹೆಸರುಗಳನ್ನು ಇಟ್ಟರು. 39 ಮನಸ್ಸೆಯ ಮಗ ಮಾಕೀರನ ಮಕ್ಕಳು ಗಿಲ್ಯಾದ್ ದೇಶಕ್ಕೆ ಹೋಗಿ, ಅದನ್ನು ತೆಗೆದುಕೊಂಡು, ಅದರಲ್ಲಿದ್ದ ಅಮೋರಿಯರನ್ನು ಹೊರಡಿಸಿದರು. 40 ಮೋಶೆಯು ಗಿಲ್ಯಾದನ್ನು ಮನಸ್ಸೆಯ ಮಗ ಮಾಕೀರನಿಗೆ ಕೊಟ್ಟಿದ್ದರಿಂದ, ಅವನು ಅದರಲ್ಲಿ ವಾಸಿಸಿದನು. 41 ಆದರೆ ಮನಸ್ಸೆಯ ಮಗ ಯಾಯೀರನು ಹೋಗಿ, ಅವರ ನಗರಗಳನ್ನು ತೆಗೆದುಕೊಂಡು, ಅವುಗಳಿಗೆ ಯಾಯೀರನ ಹಳ್ಳಿಗಳೆಂದು ಹೆಸರಿಟ್ಟನು. 42 ನೋಬಹನು ಹೋಗಿ ಕೆನಾತ್ ಎಂಬ ಪಟ್ಟಣವನ್ನೂ, ಅದರ ಗ್ರಾಮಗಳನ್ನೂ ತೆಗೆದುಕೊಂಡು, ಅದಕ್ಕೆ ತನ್ನ ಹೆಸರಿನ ಹಾಗೆ ನೋಬಹ ಎಂಬ ಹೆಸರಿಟ್ಟನು.