Numbers 5 (BOKCV2)
1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ, 2 “ಚರ್ಮರೋಗವಿರುವವರೆಲ್ಲರನ್ನು, ಮೇಹಸ್ರಾವವುಳ್ಳವರೆಲ್ಲರನ್ನು ಮತ್ತು ಹೆಣದ ಸೋಂಕಿನಿಂದ ಅಶುದ್ಧರಾದವರೆಲ್ಲರನ್ನು ಪಾಳೆಯದೊಳಗಿಂದ ಹೊರಗೆ ಕಳುಹಿಸಬೇಕೆಂದು ಇಸ್ರಾಯೇಲರಿಗೆ ಆಜ್ಞಾಪಿಸು. 3 ಸ್ತ್ರೀ ಪುರುಷವೆಂಬ ವ್ಯತ್ಯಾಸವಿಲ್ಲದೆ ಎಲ್ಲರನ್ನು ಹೊರಹಾಕಬೇಕು. ನಾನು ಅವರ ಮಧ್ಯದಲ್ಲಿ ವಾಸಮಾಡುವ ಪಾಳೆಯವನ್ನು ಅವರು ಅಶುದ್ಧ ಮಾಡದ ಹಾಗೆ ನೀವು ಅವರನ್ನು ಪಾಳೆಯದ ಹೊರಗೆ ಕಳುಹಿಸಬೇಕು,” ಎಂಬುದೆ. 4 ಆಗ ಇಸ್ರಾಯೇಲರು ಹಾಗೆ ಮಾಡಿ, ಅವರನ್ನು ಪಾಳೆಯದ ಹೊರಗೆ ಕಳುಹಿಸಿದರು. ಯೆಹೋವ ದೇವರು ಮೋಶೆಗೆ ಹೇಳಿದ ಪ್ರಕಾರ ಇಸ್ರಾಯೇಲರು ಮಾಡಿದರು. 5 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 6 “ಇಸ್ರಾಯೇಲರಿಗೆ ಹೀಗೆ ಹೇಳು: ‘ಪುರುಷನಾದರೂ ಸ್ತ್ರೀಯಾದರೂ ಮತ್ತೊಬ್ಬರಿಗೆ ಮೋಸಮಾಡಿ ಯೆಹೋವ ದೇವರಿಗೆ ಅಪನಂಬಿಗಸ್ತರಾದರೆ, ಆ ವ್ಯಕ್ತಿ ಅಪರಾಧಿ. 7 ಅವನು ಮಾಡಿದ ಪಾಪವನ್ನು ಅರಿಕೆ ಮಾಡಬೇಕು. ಅವನ ಅಪರಾಧದ ಬದಲುಕೊಟ್ಟು, ಅದರ ಸಂಗಡ ಅದರ ಐದನೆಯ ಪಾಲನ್ನು ಕೂಡಿಸಿ, ಯಾರಿಗೆ ಅಪರಾಧ ಮಾಡಿದರೋ, ಅವರಿಗೆ ಕೊಡಬೇಕು. 8 ಆದರೆ ಅಪರಾಧಕ್ಕೆ ಬದಲು ಕೊಡುವುದಕ್ಕೆ ಆ ಮನುಷ್ಯನಿಗೆ ಸಂಬಂಧಿಕನು ಇಲ್ಲದಿದ್ದರೆ ಅದು ಯೆಹೋವ ದೇವರಿಗೆ ಸೇರಬೇಕು. ಅದು ದೋಷಪರಿಹಾರಕ್ಕಾಗಿ ಅರ್ಪಿಸಲಾಗುವ ಪ್ರಾಯಶ್ಚಿತ್ತದ ಟಗರು, ಇವೆರಡೂ ಯಾಜಕನಿಗೆ ಸೇರಬೇಕು. 9 ಇಸ್ರಾಯೇಲರು ತರುವ ಸಕಲ ಪರಿಶುದ್ಧವಾದ ಕಾಣಿಕೆಗಳೆಲ್ಲಾ ಯಾಜಕನಿಗೇ ಸಲ್ಲಬೇಕು. 10 ಪ್ರತಿ ಮನುಷ್ಯನ ಪರಿಶುದ್ಧವಾದ ಕಾಣಿಕೆಗಳು ಅವನದಾಗಿಯೇ ಆಗಿರುತ್ತವೆ. ಆದರೆ ಯಾಜಕನಿಗೆ ಕೊಟ್ಟದ್ದು ಯಾಜಕರದಾಗುತ್ತದೆ,’ ” ಎಂದು ಹೇಳಿದರು. 11 ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 12 “ಇಸ್ರಾಯೇಲರಿಗೆ ಹೀಗೆ ಹೇಳು, ‘ಯಾವನ ಹೆಂಡತಿಯಾದರೂ ದಾರಿತಪ್ಪಿ ಅವನಿಗೆ ಅಪನಂಬಿಗಸ್ತಳಾಗಿದ್ದರೆ, 13 ಇಲ್ಲವೆ ಒಬ್ಬನು ಅವಳ ಸಂಗಡ ಮಲಗಿ ಸಂಗಮ ಮಾಡಿದ್ದು, ಅವಳ ಗಂಡನ ಕಣ್ಣುಗಳಿಗೆ ಮರೆಯಾಗಿದ್ದರೆ, ಅವಳು ಅಶುದ್ಧಳೆಂಬುದು ಗುಪ್ತವಾಗಿದ್ದರೆ, ಅವಳಿಗೆ ವಿರೋಧವಾಗಿ ಸಾಕ್ಷಿ ಇಲ್ಲದೆ, ಅವಳನ್ನು ಹಿಡಿಯದೇ ಇದ್ದರೆ, 14 ಆಕೆ ಅಶುದ್ಧಳಾಗಿದ್ದಾಳೆಂದು ಆಕೆಯ ಮೇಲೆ ಅಸೂಯೆಗೊಂಡು ಸಂಶಯಪಟ್ಟರೆ, ಆಕೆ ಅಶುದ್ಧಳಾಗದಿದ್ದರೂ, ಆಕೆಯೊಡನೆ ಅಸೂಯೆ ಸಂಶಯ ಹೊಂದಿದರೆ, ಆಗ 15 ಆ ಮನುಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತರಬೇಕು. ಅವಳಿಗೋಸ್ಕರ ಕಾಣಿಕೆಯಾಗಿ ಒಂದು ಓಮರ್ ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕಬಾರದು. ಏಕೆಂದರೆ ಅದು ಸಂಶಯವನ್ನು ಸೂಚಿಸುವುದಕ್ಕೂ ಅಪರಾಧವನ್ನು ಹೊರಪಡಿಸುವುದಕ್ಕೂ ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ. 16 “ ‘ಯಾಜಕನು ಅವಳನ್ನು ಸಮೀಪಕ್ಕೆ ಕರೆದು, ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಬೇಕು. 17 ಆಗ ಯಾಜಕನು ಪವಿತ್ರ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದುಕೊಳ್ಳಬೇಕು. ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತೆಗೆದುಕೊಂಡು, ಆ ನೀರಿನೊಳಗೆ ಹಾಕಬೇಕು. 18 ಯಾಜಕನು ಆ ಸ್ತ್ರೀಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಿ, ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು, ಅವಳ ಕೈಗಳಲ್ಲಿ ಸಂಶಯ ಸೂಚಿಸುವ ಕಾಣಿಕೆಯಾದ ನೈವೇದ್ಯದ ಹಿಟ್ಟನ್ನು ಇಡಬೇಕು. ಯಾಜಕನ ಕೈಯಲ್ಲಿ ಶಾಪತರುವ ಕಹಿಯಾದ ನೀರು ಇರಬೇಕು. 19 ಯಾಜಕನು ಅವಳನ್ನು ಪ್ರಮಾಣ ಮಾಡಿಸಿ, ಸ್ತ್ರೀಗೆ ಹೇಳಬೇಕಾದದ್ದು, “ಮದುವೆಯಾಗಿ ಗಂಡನೊಂದಿಗೆ ಸಂಸಾರ ನಡೆಸುವಾಗ, ಒಬ್ಬ ಪರಪುರುಷನು ನಿನ್ನ ಸಂಗಡ ಮಲಗಿರದಿದ್ದರೆ, ನಿನ್ನ ಗಂಡನನ್ನು ಬಿಟ್ಟು ನೀನು ಜಾರತ್ವ ಮಾಡದೆ ಇದ್ದರೆ, ಶಾಪವನ್ನು ಉಂಟುಮಾಡುವ ಈ ನೀರು ನಿನಗೆ ಯಾವ ಹಾನಿಮಾಡುವುದಿಲ್ಲ. 20 ಆದರೆ ನೀನು ನಿನ್ನ ಗಂಡನನ್ನು ಬಿಟ್ಟು, ಜಾರತ್ವ ಮಾಡಿ ಅಶುದ್ಧಳಾಗಿದ್ದರೆ, ನಿನ್ನ ಗಂಡನನ್ನು ಬಿಟ್ಟು, ಮತ್ತೊಬ್ಬನು ನಿನ್ನ ಸಂಗಡ ಮಲಗಿದ್ದರೆ, 21 ಯೆಹೋವ ದೇವರು ನಿನ್ನ ತೊಡೆಯನ್ನು ಕ್ಷೀಣವಾಗುವಂತೆಯೂ ನಿನ್ನ ಹೊಟ್ಟೆಯನ್ನು ಉಬ್ಬುವಂತೆಯೂ ಮಾಡುವನು. ನಿನ್ನ ಜನರು ನಿನ್ನನ್ನು ಶಪಿಸುವರು, ತಿರಸ್ಕರಿಸುವರು. 22 ಶಪಿಸುವಂಥ ಈ ನೀರು ನಿನ್ನೊಳಗೆ ಸೇರಿ ನಿನ್ನ ಹೊಟ್ಟೆ ಉಬ್ಬುವಂತೆ, ತೊಡೆಯನ್ನು ಕ್ಷೀಣವಾಗಿ ಹೋಗುವಂತೆ ನಿನ್ನ ಜನನೇಂದ್ರಿಯಗಳು ಬತ್ತಿಹೋಗುವಂತೆ ಮಾಡಲಿ ಎಂದು ಹೇಳಬೇಕು, ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣ ಮಾಡಿಸಬೇಕು.”“ ‘ಅದಕ್ಕೆ ಆ ಸ್ತ್ರೀಯು, “ಆಮೆನ್, ಆಮೆನ್,” ಎಂದು ಹೇಳಬೇಕು. 23 “ ‘ಇದಲ್ಲದೆ ಯಾಜಕನು ಈ ಶಾಪವನ್ನು ಪುಸ್ತಕದಲ್ಲಿ ಬರೆದು, ಕಹಿಯಾದ ನೀರಿನಿಂದ ತೊಳೆದು, 24 ಆ ಸ್ತ್ರೀಗೆ ಶಪಿಸುವಂಥಹ ಕಹಿಯಾದ ನೀರನ್ನು ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ಕಹಿಯಾಗುವುದು. 25 ಬಳಿಕ ಯಾಜಕನು ಆ ಸ್ತ್ರೀಯ ಕೈಯಿಂದ ಸಂಶಯ ಸೂಚಕ ಕಾಣಿಕೆಯನ್ನು ತೆಗೆದುಕೊಂಡು, ಆ ಕಾಣಿಕೆಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನೈವೇದ್ಯ ಮಾಡಿ, ಬಲಿಪೀಠದ ಸಮೀಪಕ್ಕೆ ತರಬೇಕು. 26 ಆಗ ಯಾಜಕನು ಜ್ಞಾಪಕಾರ್ಥವಾಗಿ ಕಾಣಿಕೆಯಿಂದ ಒಂದು ಹಿಡಿ ತೆಗೆದುಕೊಂಡು, ಬಲಿಪೀಠದ ಮೇಲೆ ಸುಟ್ಟು, ಸ್ತ್ರೀಗೆ ಆ ನೀರನ್ನು ಕುಡಿಸಬೇಕು. 27 ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ, ಶಪಿಸುವ ನೀರು ಆಕೆಯೊಳಗೆ ಸೇರಿ ಕಹಿಯಾಗುವುದು. ಅವಳ ಹೊಟ್ಟೆ ಉಬ್ಬಿ, ಅವಳ ತೊಡೆ ಕ್ಷೀಣವಾಗುವುದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪಗ್ರಸ್ತಳಾಗಿರುವಳು. 28 ಆದರೆ ಆ ಸ್ತ್ರೀ ಅಶುದ್ಧಳಲ್ಲದೆ ಶುದ್ಧಳಾಗಿದ್ದರೆ, ಅವಳು ನಿರಪರಾಧಿಯಾಗಿದ್ದು ಸಂತಾನವನ್ನು ಪಡೆಯುವಳು. 29 “ ‘ಸಂಶಯ ಪರಿಹಾರದ ನಿಯಮವು ಇದೇ. ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವ ಮಾಡಿ, ಅಶುದ್ಧಳಾಗಿದ್ದರೆ, 30 ಅಥವಾ ಪುರುಷನು ಸಂಶಯಗೊಂಡು ಅವನು ತನ್ನ ಹೆಂಡತಿ ಮೇಲೆ ರೋಷಗೊಂಡಿದ್ದರೆ, ಅವನು ತನ್ನ ಹೆಂಡತಿಯನ್ನು ಯೆಹೋವ ದೇವರ ಸಮ್ಮುಖದಲ್ಲಿ ನಿಲ್ಲಿಸಲಿ. ಆಗ ಯಾಜಕನು ಅವಳಿಗೆ ಈ ಸಮಸ್ತ ಆಜ್ಞೆಗಳ ಪ್ರಕಾರ ಮಾಡುವನು. 31 ಆಗ ಗಂಡನು ನಿರಪರಾಧಿಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು.’ ”