2 Samuel 7 (IRVK)
1 ಯೆಹೋವನ ಅನುಗ್ರಹದಿಂದ ಸುತ್ತಣ ವೈರಿಗಳ ಭಯವೆಲ್ಲಾ ತಪ್ಪಿಹೋಗಿ ಅರಸನು ಅರಮನೆಯಲ್ಲಿ ಸಮಾಧಾನದಿಂದ ವಾಸಿಸುತ್ತಿದ್ದನು. 2 ಅರಸನು ಒಂದು ದಿನ ಪ್ರವಾದಿಯಾದ ನಾತಾನನಿಗೆ, “ನೋಡು, ನಾನು ದೇವದಾರು ಮನೆಯಲ್ಲಿ ವಾಸವಾಗಿದ್ದೇನೆ. ದೇವರ ಮಂಜೂಷವಾದರೂ ಬಟ್ಟೆಯ ಗುಡಾರದಲ್ಲಿ ಇರುತ್ತದೆ” ಎಂದು ಹೇಳಿದನು. 3 ನಾತಾನನು ಅರಸನಿಗೆ, “ಆಗಲಿ, ನಿನ್ನ ಹೃದಯದ ಆಲೋಚನೆಯಂತೆ ಮಾಡು. ಯೆಹೋವನು ನಿನ್ನ ಸಂಗಡ ಇರುತ್ತಾನೆ” ಅಂದನು. 4 ಅದೇ ರಾತ್ರಿಯಲ್ಲಿ ನಾತಾನನಿಗೆ ಯೆಹೋವನ ಮಾತು ಕೇಳಿ ಬಂತು. 5 ಯೆಹೋವನು, “ನೀನು ಹೋಗಿ ನನ್ನ ಸೇವಕನಾದ ದಾವೀದನಿಗೆ ‘ನೀನು ನನಗೋಸ್ಕರ ಮನೆಯನ್ನು ಕಟ್ಟಬೇಕೋ? 6 ನಾನು ಇಸ್ರಾಯೇಲರನ್ನು ಐಗುಪ್ತ ದೇಶದಿಂದ ಬರಮಾಡಿದಂದಿನಿಂದ ಇಂದಿನ ವರೆಗೂ ಮನೆಯಲ್ಲಿ ವಾಸಮಾಡಲಿಲ್ಲ. ಗುಡಾರದಲ್ಲೇ ವಾಸಿಸುತ್ತಾ ಅವರೊಡನೆ ಸಂಚರಿಸಿದೆನು. 7 ನಾನು ಇಸ್ರಾಯೇಲರ ಮಧ್ಯದಲ್ಲಿ ಸಂಚರಿಸುತ್ತಿದ್ದಾಗ ನನ್ನ ಜನರಾದ ಇಸ್ರಾಯೇಲರನ್ನು ಪಾಲಿಸುವುದಕ್ಕೊಸ್ಕರ ನನ್ನಿಂದ ನೇಮಿಸಲ್ಪಟ್ಟ ಯಾವ ಕುಲನಾಯಕನನ್ನಾದರೂ ನೀವು ನನಗೋಸ್ಕರ ದೇವದಾರು ಮರದ ಮನೆಯನ್ನೇಕೆ ಕಟ್ಟಲಿಲ್ಲವೆಂದು ಕೇಳಿದೆನೋ?’ ಎಂಬುದಾಗಿ ಯೆಹೋವನು ಅನ್ನುತ್ತಾನೆ” ಎಂದು ಹೇಳು. 8 ಇದಲ್ಲದೆ ನೀನು ನನ್ನ ಸೇವಕನಾದ ದಾವೀದನಿಗೆ ಹೇಳಬೇಕಾದದ್ದೇನೆಂದರೆ, “ಸೇನಾಧೀಶ್ವರನಾದ ಯೆಹೋವನು ಹೀಗೆನ್ನುತ್ತಾನೆ, ‘ಕುರಿಗಳ ಹಿಂದೆ ಹೋಗುತ್ತಿದ್ದ ನಿನ್ನನ್ನು ಅಡವಿಯಿಂದ ತೆಗೆದುಕೊಂಡು ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ನಾಯಕನನ್ನಾಗಿ ನೇಮಿಸಿದೆನು. 9 ನೀನು ಹೋದಲ್ಲೆಲ್ಲಾ ನಾನು ನಿನ್ನ ಸಂಗಡ ಇದ್ದೆನು. ನಿನ್ನ ಶತ್ರುಗಳನ್ನೆಲ್ಲಾ ನಿನ್ನೆದುರಿನಲ್ಲಿಯೇ ಸಂಹರಿಸಿಬಿಟ್ಟೆನು. ಲೋಕದ ಮಹಾ ಪುರುಷರ ಹೆಸರಿನಂತೆ ನಿನ್ನ ಹೆಸರನ್ನೂ ಉನ್ನತಿಗೆ ತರುವೆನು. 10 ನನ್ನ ಪ್ರಜೆಗಳಾದ ಇಸ್ರಾಯೇಲರಿಗೆ ಒಂದು ಸ್ಥಳವನ್ನು ಕೊಟ್ಟು, ಅದರಲ್ಲಿ ಅವರನ್ನು ನೆಲೆಗೊಳಿಸುವೆನು. ಅವರು ಇನ್ನು ಮೇಲೆ ಯಾವ ಭಯವು ಇಲ್ಲದೆ ಅಲ್ಲಿ ವಾಸಿಸುವರು. 11 ಪೂರ್ವಕಾಲದಲ್ಲೂ ನಾನು ನನ್ನ ಜನರಾದ ಇಸ್ರಾಯೇಲರಿಗಾಗಿ ನೇಮಿಸಿದ ನ್ಯಾಯಸ್ಥಾಪಕರ ಕಾಲದಿಂದ ಇಲ್ಲಿಯವರೆಗೂ ದುಷ್ಟರು ಅವರನ್ನು ಕುಗ್ಗಿಸಿದಂತೆ ಇನ್ನು ಕುಗ್ಗಿಸುವುದಿಲ್ಲ. ನೀನು ಶತ್ರುಭಯವಿಲ್ಲದೆ ನೆಮ್ಮದಿಯಿಂದಿರುವಂತೆ ಮಾಡುವೆನು. ಇದಲ್ಲದೆ ಯೆಹೋವನಾದ ನಾನು ನಿನಗೋಸ್ಕರ ಒಂದು ಮನೆಯನ್ನು ಕಟ್ಟುವೆನೆಂದು ಮಾತು ಕೊಡುತ್ತೇನೆ. 12 ನಿನ್ನ ಆಯುಷ್ಕಾಲವು ಮುಗಿದು, ನೀನು ಪೂರ್ವಿಕರ ಬಳಿಗೆ ಸೇರಿದ ಮೇಲೆ, ನಿನ್ನಿಂದ ಹುಟ್ಟುವ ಮಕ್ಕಳಲ್ಲಿ ಒಬ್ಬನನ್ನು ಎಬ್ಬಿಸಿ, ಅವನ ರಾಜ್ಯವನ್ನು ಸ್ಥಿರಪಡಿಸುವೆನು. 13 ಅವನು ನನ್ನ ಹೆಸರಿಗಾಗಿ ಒಂದು ಮನೆಯನ್ನು ಕಟ್ಟುವನು. ನಾನು ಅವನ ರಾಜ್ಯದ ಸಿಂಹಾಸನವನ್ನು ನಿರಂತರವಾಗಿ ಸ್ಥಿರಪಡಿಸುವೆನು. 14 ನಾನು ಅವನಿಗೆ ತಂದೆಯಾಗಿರುವೆನು. ಅವನು ನನಗೆ ಮಗನಾಗಿರುವನು. ಅವನು ತಪ್ಪು ಮಾಡಿದರೆ ತಂದೆ ಮಗನಿಗೆ ಬೆತ್ತದಿಂದ ಶಿಕ್ಷೆಯನ್ನು ಕೊಡುವೆನು ಮತ್ತು ನರಪುತ್ರರಂತೆ ಅವನನ್ನು ದಂಡಿಸುವೆನು. 15 ಆದರೂ ನನ್ನ ನಿಷ್ಠೆಯ ಒಡಂಬಡಿಕೆಯು ಸೌಲನನ್ನು ಬಿಟ್ಟು ಹೋದ ಹಾಗೆ ಅವನನ್ನು ಬಿಟ್ಟು ಹೋಗುವುದಿಲ್ಲ. ನಾನು ಸೌಲನನ್ನು ನಿನ್ನೆದುರಿನಿಂದ ಹೊರಡಿಸಿಬಿಟ್ಟೆನಲ್ಲಾ 16 ನಿನ್ನ ಮನೆಯೂ ಅರಸುತನವೂ ಸದಾಕಾಲ ಸ್ಥಿರವಾಗಿರುವುದು. ನಿನ್ನ ಸಿಂಹಾಸನವು ಶಾಶ್ವತವಾಗಿರುವುದು’” ಎಂದು 17 ನಾತಾನನು ತನಗುಂಟಾದ ದರ್ಶನದ ಈ ಎಲ್ಲಾ ಮಾತುಗಳನ್ನು ದಾವೀದನಿಗೆ ಹೇಳಿದನು. 18 ಅನಂತರ ದಾವೀದನು ಹೋಗಿ ಯೆಹೋವನ ಸನ್ನಿಧಿಯಲ್ಲಿ ಕುಳಿತುಕೊಂಡು, “ಕರ್ತನಾದ, ಯೆಹೋವನೇ, ನಾನೆಷ್ಟರವನು? ನನ್ನ ಮನೆ ಎಷ್ಟರದು? ನೀನು ನನ್ನನ್ನು ಇಲ್ಲಿಯವರೆಗೂ ತಂದಿದ್ದಿಯಲ್ಲಾ. 19 ಕರ್ತನೇ, ಯೆಹೋವನೇ! ಇದು ನಿನ್ನ ದೃಷ್ಟಿಯಲ್ಲಿ ಅಲ್ಪವೆಂದು ಕಾಣಿಸಿದರೂ ನನ್ನ ಮುಂದಿನ ಸಂತಾನದ ವಿಷಯದಲ್ಲಿಯೂ ವಾಗ್ದಾನ ಮಾಡಿರುವೆ. ಕರ್ತನೇ, ಯೆಹೋವನೇ! ನೀನು ಮಾನವರಾದ ನಮ್ಮೊಂದಿಗೆ ಹೀಗೆ ವರ್ತಿಸುವುದು ಎಂಥಾ ಭಾಗ್ಯ. 20 ಕರ್ತನೇ ಯೆಹೋವನೇ, ನೀನು ನಿನ್ನ ಸೇವಕನಾದ ದಾವೀದನನ್ನು ಬಲ್ಲೆ. ನಾನು ಇನ್ನೇನು ಹೇಳಲಿ? 21 ನೀನು ನಿನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೋಸ್ಕರ, ನಿನ್ನ ಇಷ್ಟಾನುಸಾರವಾಗಿ ಈ ಎಲ್ಲಾ ಮಹತ್ಕಾರ್ಯಗಳನ್ನು ನಡಿಸಿ, ಅವುಗಳ ಅನುಭವಗಳನ್ನು ನಿನ್ನ ಸೇವಕನಿಗೆ ಉಂಟುಮಾಡದ್ದೀ. 22 ದೇವರೇ, ಯೆಹೋವನೇ! ನೀನೇ ಮಹೋನ್ನತನು. ನಿನ್ನ ಸಮಾನರು ಯಾರೂ ಇಲ್ಲ. ನಾವು ಕೇಳಿದವುಗಳನ್ನೆಲ್ಲಾ ನೀನು ನಮಗೆ ನೀಡಿದ್ದೆಲ್ಲವನ್ನು ಆಲೋಚಿಸಿ ನೋಡಿದರೆ ನಿನ್ನ ಹೊರತು ದೇವರೇ ಇಲ್ಲವೆಂಬುದು ನಿಶ್ಚಯ. 23 ನಿನ್ನ ಇಸ್ರಾಯೇಲಿನ ಪ್ರಜೆಗೆ ಸಮಾನವಾದ ಜನಾಂಗವು ಲೋಕದಲ್ಲಿ ಯಾವುದಿದೆ? ನೀನೇ ಹೋಗಿ ಅದನ್ನು ವಿಮೋಚಿಸಿ, ಸ್ವಪ್ರಜೆಯನ್ನಾಗಿ ಮಾಡಿಕೊಂಡು, ನಿನ್ನ ಹೆಸರನ್ನು ಪ್ರಸಿದ್ಧಪಡಿಸಿಕೊಂಡಿದ್ದಿ, ಐಗುಪ್ತರು ಮೊದಲಾದ ಅನ್ಯಜನರ ಕೈಗೂ ಅವರ ದೇವತೆಗಳ ಕೈಗೂ ಸಿಕ್ಕದಂತೆ ತಪ್ಪಿಸಿ, ರಕ್ಷಿಸಿ, ಅವರ ಎದುರಿನಲ್ಲೇ ನಿನ್ನ ದೇಶಕ್ಕೋಸ್ಕರ ಭಯಂಕರವಾದ ಮಹತ್ಕಾರ್ಯಗಳನ್ನು ನಡಿಸಿದಿ. 24 ಇಸ್ರಾಯೇಲರು ಸದಾಕಾಲವೂ ನಿನ್ನ ಪ್ರಜೆಯಾಗಿರಬೇಕೆಂದು ನಿರ್ಣಯಿಸಿದ ಯೆಹೋವನೇ, ನೀನು ಅವರಿಗೆ ದೇವರಾದಿ. 25 ದೇವರೇ, ಯೆಹೋವನೇ! ನೀನು ನಿನ್ನ ಸೇವಕನನ್ನೂ ಅವನ ಮನೆಯನ್ನು ಕುರಿತು ಮಾಡಿದ ವಾಗ್ದಾನವನ್ನು ನೆರವೇರಿಸು. ಅದು ಸದಾ ಸ್ಥಿರವಾಗಿರಲಿ. 26 ಸೇನಾಧೀಶ್ವರನಾದ ಯೆಹೋವನು ಇಸ್ರಾಯೇಲರ ದೇವರು ಎಂಬ ನಿನ್ನ ನಾಮಧೇಯಗಳಿಗೆ ಸದಾಕಾಲವೂ ಮಹಿಮೆಯುಂಟಾಗಲಿ. ನಿನ್ನ ಸೇವಕನಾದ ದಾವೀದನ ಮನೆಯು ನಿನ್ನ ಸನ್ನಿಧಿಯಲ್ಲಿ ಸ್ಥಿರವಾಗಿರಲಿ. 27 ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲರ ದೇವರೇ, ನೀನು ನಿನ್ನ ಸೇವಕನಾದ ನನಗೆ ‘ನಾನು ನಿನಗೋಸ್ಕರ ಮನೆ ಕಟ್ಟುವೆನು’ ಎಂದು ವಾಗ್ದಾನ ಮಾಡಿದ್ದರಿಂದ ಅವನು ಈ ಪ್ರಕಾರ ನಿನ್ನನ್ನು ಪ್ರಾರ್ಥಿಸುವುದಕ್ಕೆ ಧೈರ್ಯಗೊಂಡನು. 28 ಕರ್ತನೇ, ಯೆಹೋವನೇ! ನಿನ್ನ ಸೇವಕನಿಗೆ ಈ ಶ್ರೇಷ್ಠ ವಾಗ್ದಾನಗಳನ್ನು ಮಾಡಿದ ನೀನು ದೇವರಾಗಿರುತ್ತೀ. ನಿನ್ನ ವಾಕ್ಯವು ಸತ್ಯವಾದದ್ದು. 29 ಆದುದರಿಂದ ನೀನು ನಿನ್ನ ಸೇವಕನ ಮನೆಯನ್ನು ಆಶೀರ್ವದಿಸು. ಸದಾಕಾಲವೂ ಅದರ ಮೇಲೆ ನಿನ್ನ ಕಟಾಕ್ಷವಿರಲಿ. ಕರ್ತನೇ, ಯೆಹೋವನೇ! ವಾಗ್ದಾನ ಮಾಡಿದವನು ನೀನೇ. ನಿನ್ನ ಆಶೀರ್ವಾದದಿಂದ ನಿನ್ನ ಸೇವಕನ ಮನೆಯಲ್ಲಿ ನಿತ್ಯ ಸೌಭಾಗ್ಯವಿರಲಿ” ಎಂದು ವಿಜ್ಞಾಪಿಸಿದನು.