1 Kings 21 (BOKCV2)
1 ಕೆಲವು ಕಾಲದ ನಂತರ, ಇಜ್ರೆಯೇಲ್ ಪಟ್ಟಣದಲ್ಲಿ ಸಮಾರ್ಯದ ಅರಸನಾದ ಅಹಾಬನ ಅರಮನೆಯ ಬಳಿಯಲ್ಲಿ ಇಜ್ರೆಯೇಲಿನವನಾದ ನಾಬೋತನಿಗೆ ಒಂದು ದ್ರಾಕ್ಷಿ ತೋಟವಿತ್ತು. 2 ಅಹಾಬನು ನಾಬೋತನಿಗೆ, “ತೋಟವು ನನ್ನ ಮನೆಯ ಬಳಿಯಲ್ಲಿ ಇರುವುದರಿಂದ ಅದು ನನಗೆ ಕಾಯಿಪಲ್ಯದ ತೋಟವಾಗುವ ಹಾಗೆ ಅದನ್ನು ನನಗೆ ಕೊಡು. ನಾನು ಅದಕ್ಕೆ ಬದಲಾಗಿ ಅದಕ್ಕಿಂತ ಒಳ್ಳೆಯ ದ್ರಾಕ್ಷಿತೋಟವನ್ನು ನಿನಗೆ ಕೊಡುವೆನು. ಇಲ್ಲವೆ ನಿನ್ನ ದೃಷ್ಟಿಗೆ ಒಳ್ಳೆಯದಾಗಿದ್ದರೆ, ಹಣದಲ್ಲಿ ಅದರ ಬೆಲೆಯನ್ನು ಕೊಡುವೆನು,” ಎಂದನು. 3 ಆದರೆ ನಾಬೋತನು ಅಹಾಬನಿಗೆ, “ನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡದಂತೆ ಯೆಹೋವ ದೇವರು ನನ್ನನ್ನು ತಡೆಯಲಿ,” ಎಂದನು. 4 “ನಾನು ನನ್ನ ಪಿತೃಗಳ ಬಾಧ್ಯತೆಯನ್ನು ನಿನಗೆ ಕೊಡುವುದಿಲ್ಲ,” ಎಂದು ಇಜ್ರೆಯೇಲಿನವನಾದ ನಾಬೋತನು ಹೇಳಿದ ಮಾತಿಗೋಸ್ಕರ, ಅಹಾಬನು ವ್ಯಸನದಿಂದಲೂ ಕೋಪದಿಂದಲೂ ತನ್ನ ಮನೆಗೆ ಬಂದು, ತನ್ನ ಮಂಚದ ಮೇಲೆ ಮಲಗಿ, ತನ್ನ ಮುಖವನ್ನು ತಿರುಗಿಸಿಕೊಂಡು ಊಟಮಾಡದೆ ಇದ್ದನು. 5 ಆಗ ಅವನ ಹೆಂಡತಿ ಈಜೆಬೆಲಳು ಅವನ ಬಳಿಗೆ ಬಂದು ಅವನಿಗೆ, “ನೀನು ವ್ಯಸನವಾಗಿರುವುದೇಕೆ? ಯಾಕೆ ಊಟಮಾಡುವುದಿಲ್ಲ?” ಎಂದಳು. 6 ಅವನು ಅವಳಿಗೆ, “ಏಕೆಂದರೆ ನಾನು ಇಜ್ರೆಯೇಲಿನವನಾದ ನಾಬೋತನ ಸಂಗಡ ಮಾತನಾಡಿ, ‘ನಿನ್ನ ದ್ರಾಕ್ಷಿತೋಟವನ್ನು ನನಗೆ ಕ್ರಯಕ್ಕೆ ಕೊಡು. ಇಲ್ಲವೆ ನಿನಗೆ ಮನಸ್ಸಿದ್ದರೆ ಅದಕ್ಕೆ ಬದಲಾಗಿ ಬೇರೆ ದ್ರಾಕ್ಷಿತೋಟವನ್ನು ಕೊಡುವೆನು,’ ಎಂದು ಅವನಿಗೆ ಹೇಳಿದೆನು. ಅದಕ್ಕವನು, ‘ನನ್ನ ದ್ರಾಕ್ಷಿತೋಟವನ್ನು ಕೊಡುವುದಿಲ್ಲ,’ ” ಎಂದು ಹೇಳಿದನು. 7 ಆಗ ಅವನ ಹೆಂಡತಿ ಈಜೆಬೆಲಳು ಅವನಿಗೆ, “ನೀನು ಈಗ ಇಸ್ರಾಯೇಲಿನ ರಾಜ್ಯವನ್ನು ಆಳುತ್ತಾ ಇದ್ದೀಯೋ? ಎದ್ದು ಊಟಮಾಡು. ನಿನ್ನ ಹೃದಯ ಸಂತೋಷವಾಗಿರಲಿ. ನಾನೇ ಇಜ್ರೆಯೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ನಿನಗೆ ಕೊಡಿಸುತ್ತೇನೆ,” ಎಂದಳು. 8 ಹೀಗೆ ಅವಳು ಅಹಾಬನ ಹೆಸರಿನಲ್ಲಿ ಪತ್ರಗಳನ್ನು ಬರೆದು, ಅವುಗಳಿಗೆ ಅವನ ಮುದ್ರೆಹಾಕಿ, ಆ ಪತ್ರಗಳನ್ನು ನಾಬೋತನ ಸಂಗಡ ಅವನ ಪಟ್ಟಣದಲ್ಲಿ ವಾಸವಾಗಿರುವ ಹಿರಿಯರಿಗೂ, ಗೌರವಸ್ಥರಿಗೂ ಕಳುಹಿಸಿದಳು. 9 ಅವಳು ಪತ್ರಗಳಲ್ಲಿ,“ನೀವು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರದ ಸ್ಥಳದಲ್ಲಿ ಕೂರಿಸಿ, 10 ‘ನೀನು ದೇವರನ್ನೂ, ಅರಸನನ್ನೂ ದೂಷಿಸಿದಿ,’ ಎಂದು ಅವನಿಗೆ ವಿರೋಧವಾಗಿ ಸಾಕ್ಷಿ ಹೇಳಲು ಅವನ ಮುಂದೆ ದುಷ್ಟರಾದ ಇಬ್ಬರು ಮನುಷ್ಯರನ್ನು ಕೂರಿಸಿರಿ. ತರುವಾಯ ಅವನನ್ನು ಹೊರಗೆ ತೆಗೆದುಕೊಂಡುಹೋಗಿ ಅವನು ಸಾಯುವ ಹಾಗೆ ಕಲ್ಲೆಸೆಯಿರಿ,” ಎಂದು ಬರೆದಿತ್ತು. 11 ಆಗ ಅವನ ಪಟ್ಟಣದ ಮನುಷ್ಯರೂ, ಅವನ ಪಟ್ಟಣದ ನಿವಾಸಿಗಳೂ ಆದ ಹಿರಿಯರೂ, ಗೌರವಸ್ಥರೂ, ಈಜೆಬೆಲಳು ಅವರಿಗೆ ಕಳುಹಿಸಿದ ಪ್ರಕಾರವೂ, ಅವಳು ಅವರ ಬಳಿಗೆ ಕಳುಹಿಸಿದ ಪತ್ರಗಳಲ್ಲಿ ಬರೆದ ಪ್ರಕಾರವೂ ಮಾಡಿದರು. 12 ಅವರು ಉಪವಾಸವನ್ನು ಪ್ರಕಟಮಾಡಿ, ನಾಬೋತನನ್ನು ಜನರೊಳಗೆ ಎತ್ತರ ಸ್ಥಳದಲ್ಲಿ ಕೂರಿಸಿದರು. 13 ಆಗ ದುಷ್ಟರಾದ ಇಬ್ಬರು ಮನುಷ್ಯರು ಬಂದು ಅವನಿಗೆದುರಾಗಿ ಕುಳಿತುಕೊಂಡರು. ಈ ದುಷ್ಟಜನರ ಸಮ್ಮುಖದಲ್ಲಿ ನಾಬೋತನಿಗೆ ವಿರೋಧವಾಗಿ, “ಈ ನಾಬೋತನು ದೇವರನ್ನೂ, ಅರಸನನ್ನೂ ದೂಷಿಸಿದನು,” ಎಂದು ಸಾಕ್ಷಿ ಹೇಳಿದರು. ಆಗ ನಾಬೋತನನ್ನು ಪಟ್ಟಣದ ಹೊರಗೆ ಕರೆದುಕೊಂಡು ಹೋಗಿ, ಅವನು ಸಾಯುವ ಹಾಗೆ ಅವರು ಅವನಿಗೆ ಕಲ್ಲೆಸೆದರು. 14 ಅವನು ಸತ್ತನು. ಅವರು ಈಜೆಬೆಲಳಿಗೆ, “ನಾಬೋತನು ಕಲ್ಲೆಸೆತದಿಂದ ಸತ್ತನು,” ಎಂದು ಹೇಳಿ ಕಳುಹಿಸಿದರು. 15 ನಾಬೋತನು ಕಲ್ಲೆಸೆತದಿಂದ ಸತ್ತಿದ್ದಾನೆಂದು ಈಜೆಬೆಲಳು ಕೇಳಿದಾಗ, ಅವಳು ಅಹಾಬನಿಗೆ, “ನೀನೆದ್ದು ಇಜ್ರೆಯೇಲಿನವನಾದ ನಾಬೋತನು ಕ್ರಯಕ್ಕೆ ಕೊಡಲು ಸಮ್ಮತಿಸದಿದ್ದ ದ್ರಾಕ್ಷಿತೋಟವನ್ನು ಸ್ವಾಧೀನ ಮಾಡಿಕೋ. ಏಕೆಂದರೆ ನಾಬೋತನು ಜೀವದಿಂದಿಲ್ಲ, ಸತ್ತಿದ್ದಾನೆ,” ಎಂದಳು. 16 ನಾಬೋತನು ಸತ್ತನೆಂದು ಅಹಾಬನು ಕೇಳಿದಾಗ, ಅವನೆದ್ದು ಇಜ್ರೆಯೇಲಿನವನಾದ ನಾಬೋತನ ದ್ರಾಕ್ಷಿತೋಟವನ್ನು ಸ್ವಾಧೀನಮಾಡಿಕೊಳ್ಳಲು ಹೋದನು. 17 ಆಗ ಯೆಹೋವ ದೇವರ ವಾಕ್ಯವು ತಿಷ್ಬೀಯನಾದ ಎಲೀಯನಿಗೆ ಉಂಟಾಗಿ, 18 “ನೀನೆದ್ದು ಸಮಾರ್ಯದಲ್ಲಿರುವ ಇಸ್ರಾಯೇಲಿನ ಅರಸನಾದ ಅಹಾಬನಿಗೆ ಎದುರಾಗಿ ಹೋಗು. ಅವನು ನಾಬೋತನ ದ್ರಾಕ್ಷಿ ತೋಟದಲ್ಲಿದ್ದಾನೆ. ಅದನ್ನು ಸ್ವಾಧೀನಮಾಡಿಕೊಳ್ಳಲು ಅಲ್ಲಿಗೆ ಹೋಗಿದ್ದಾನೆ. 19 ನೀನು ಅವನಿಗೆ, ‘ನೀನು ಕೊಂದುಹಾಕಿ ಸ್ವಾಧೀನ ಮಾಡಿಕೊಂಡಿಯಲ್ಲಾ. ಆದ್ದರಿಂದ ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲಿಯೇ ನಿನ್ನ ರಕ್ತವನ್ನು ನಿಶ್ಚಯವಾಗಿ ನೆಕ್ಕುವುವು,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದನು. 20 ಆಗ ಅಹಾಬನು ಎಲೀಯನಿಗೆ, “ನನ್ನ ಶತ್ರುವೇ, ನೀನು ನನ್ನನ್ನು ಕಂಡುಹಿಡಿದೆಯಾ,” ಎಂದನು.ಅದಕ್ಕೆ ಎಲೀಯನು, “ಕಂಡುಕೊಂಡೆನು, ನೀನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡುವಂತೆ ನಿನ್ನನ್ನು ಮಾರಿಕೊಂಡದ್ದರಿಂದ, 21 ‘ನಾನು ನಿನ್ನ ಮೇಲೆ ಕೇಡನ್ನು ಬರಮಾಡಿ, ನಿನ್ನ ಸಂತತಿಯನ್ನು ತೆಗೆದುಹಾಕಿ, ಅಹಾಬನಿಗೆ ಒಬ್ಬ ಗಂಡು ಮಗುವನ್ನಾದರೂ ಉಳಿಸದೆ ಇಸ್ರಾಯೇಲಿನಲ್ಲಿ ಎಲ್ಲರನ್ನು ತೆಗೆದುಹಾಕಿಬಿಡುವೆನು. 22 ನೀನು ನನಗೆ ಎಬ್ಬಿಸಿದ ಕೋಪದ ನಿಮಿತ್ತವೂ, ಇಸ್ರಾಯೇಲನ್ನು ಪಾಪ ಮಾಡುವಂತೆ ಮಾಡಿದ್ದರ ನಿಮಿತ್ತವೂ, ನಾನು ನಿನ್ನ ಮನೆಯನ್ನು ನೆಬಾಟನ ಮಗನಾದ ಯಾರೊಬ್ಬಾಮನ ಮನೆಯ ಹಾಗೆಯೂ, ಅಹೀಯನ ಮಗ ಬಾಷನ ಮನೆಯ ಹಾಗೆಯೂ ಮಾಡುವೆನು, ಎಂದನು.’ 23 “ಈಜೆಬೆಲಳನ್ನು ಕುರಿತು ಯೆಹೋವ ದೇವರು, ‘ನಾಯಿಗಳು ಈಜೆಬೆಲಳನ್ನು ಇಜ್ರೆಯೇಲ್ ಗೋಡೆಯ ಬಳಿಯಲ್ಲಿ ತಿನ್ನುವುವು.’ 24 “ಅಹಾಬನ ಕುಟುಂಬದವರಲ್ಲಿ ಪಟ್ಟಣದೊಳಗೆ ಯಾವನು ಸಾಯುವನೋ, ಅವನನ್ನು ನಾಯಿಗಳು ತಿನ್ನುವುವು. ಹೊಲದಲ್ಲಿ ಸಾಯುವವನನ್ನು ಆಕಾಶದ ಪಕ್ಷಿಗಳು ತಿನ್ನುವುವು, ಎಂದು ಹೇಳುತ್ತಾರೆ,” ಎಂದನು. 25 ತನ್ನ ಹೆಂಡತಿ ಈಜೆಬೆಲಳಿಂದ ಪ್ರೇರೇಪಿತನಾಗಿ, ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟತನವನ್ನು ಮಾಡಲು ತನ್ನನ್ನು ಮಾರಿ ಬಿಟ್ಟ ಅಹಾಬನ ಹಾಗೆ ದುಷ್ಟನು ಇನ್ನೊಬ್ಬನು ಇರಲಿಲ್ಲ. 26 ಇದಲ್ಲದೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಅಮೋರಿಯರು ಮಾಡಿದ ಎಲ್ಲಾ ವಿಗ್ರಹಗಳನ್ನು ಹಿಂಬಾಲಿಸಿ ಅಸಹ್ಯವಾಗಿ ನಡೆದನು. 27 ಆದರೆ ಅಹಾಬನು ಆ ಮಾತುಗಳನ್ನು ಕೇಳಿದಾಗ, ಅವನು ತನ್ನ ವಸ್ತ್ರಗಳನ್ನು ಹರಿದು, ತನ್ನ ಶರೀರದ ಮೇಲೆ ಗೋಣಿಯನ್ನು ಹಾಕಿಕೊಂಡು, ಉಪವಾಸಮಾಡುತ್ತಾ ದೀನತೆಯಿಂದ ನಡೆದನು. 28 ಆಗ ಯೆಹೋವ ದೇವರ ವಾಕ್ಯವು ತಿಷ್ಬೀಯನಾದ ಎಲೀಯನಿಗೆ ಉಂಟಾಗಿ, 29 “ಅಹಾಬನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದನ್ನು ನೋಡಿದಿಯಲ್ಲವೇ? ಅವನು ನನ್ನ ಮುಂದೆ ತನ್ನನ್ನು ತಗ್ಗಿಸಿಕೊಂಡದ್ದರಿಂದ ನಾನು ಅವನ ಜೀವಮಾನದಲ್ಲಿ ಆ ಕೇಡನ್ನು ಬರಮಾಡದೆ, ಅವನ ಮಗನ ಕಾಲದಲ್ಲಿ ಅವನ ಮನೆಯ ಮೇಲೆ ಬರಮಾಡುವೆನು,” ಎಂದನು.