2 Kings 10 (BOKCV2)
1 ಆಗ ಸಮಾರ್ಯದಲ್ಲಿ ಅಹಾಬನಿಗೆ ಎಪ್ಪತ್ತು ಮಂದಿ ಮಕ್ಕಳು ಇದ್ದರು, ಯೇಹುವು ಸಮಾರ್ಯದಲ್ಲಿರುವ ಇಜ್ರೆಯೇಲ್ ಊರಿನ ಪ್ರಧಾನರಿಗೂ ಹಿರಿಯರಿಗೂ ಅಹಾಬನ ಮಕ್ಕಳನ್ನು ಪೋಷಿಸುವವರಿಗೂ ಪತ್ರಗಳನ್ನು ಬರೆದು, ಸಮಾರ್ಯಕ್ಕೆ ಕಳುಹಿಸಿದನು. ಅವನು, 2 “ನಿಮ್ಮ ಯಜಮಾನನ ಪುತ್ರರು ನಿಮ್ಮ ಬಳಿಯಲ್ಲಿ ಇದ್ದಾರೆ. ಇದಲ್ಲದೆ ರಥಗಳು, ಕುದುರೆಗಳು, ಕೋಟೆಗಳುಳ್ಳ ಪಟ್ಟಣ, ಆಯುಧಗಳು ನಿಮ್ಮ ಬಳಿಯಲ್ಲಿವೆ. ಆದ್ದರಿಂದ ಈ ಪತ್ರವು ನಿಮಗೆ ತಲುಪಿದ ತಕ್ಷಣ, 3 ನೀವು ನಿಮ್ಮ ಯಜಮಾನನ ಪುತ್ರರಲ್ಲಿ ಉತ್ತಮನಾಗಿರುವ ಮತ್ತು ಸಮರ್ಥನಾಗಿರುವವನನ್ನು ಆರಿಸಿಕೊಂಡು, ಅವನನ್ನು ಅವನ ತಂದೆಯ ಸಿಂಹಾಸನದ ಮೇಲೆ ಕೂರಿಸಿ, ನಿಮ್ಮ ಯಜಮಾನನ ಕುಟುಂಬದವರಿಗಾಗಿ ಯುದ್ಧಮಾಡಿರಿ,” ಎಂದು ತಿಳಿಸಿದನು. 4 ಆದರೆ ಅವರು ತುಂಬಾ ಭಯಪಟ್ಟು, “ಇಬ್ಬರೂ ಅರಸರು ಅವನ ಮುಂದೆ ನಿಲ್ಲಲು ಸಾಧ್ಯವಾಗದಿದ್ದಾಗ, ನಾವು ನಿಲ್ಲುವುದು ಹೇಗೆ?” ಎಂದರು. 5 ಆಗ ಅರಮನೆಯ ಆಡಳಿತಾಧಿಕಾರಿ, ಪಟ್ಟಣದ ರಾಜ್ಯಪಾಲರು, ಹಿರಿಯರು ಮತ್ತು ಪಾಲಕರು ಈ ಸಂದೇಶವನ್ನು ಯೇಹುವಿನ ಬಳಿಗೆ ಕಳುಹಿಸಿ, “ನಾವು ನಿಮ್ಮ ಸೇವಕರು ನೀವು ನಮಗೆ ಹೇಳುವುದನ್ನೆಲ್ಲಾ ಮಾಡುತ್ತೇವೆ. ನಾವು ಯಾರನ್ನೂ ಅರಸನನ್ನಾಗಿ ನೇಮಿಸುವುದಿಲ್ಲ. ನಿಮ್ಮ ದೃಷ್ಟಿಗೆ ಒಳ್ಳೆಯದಾಗಿರುವುದನ್ನು ನೀವು ಮಾಡಿರಿ,” ಎಂದರು. 6 ಆಗ ಯೇಹುವು ಅವರಿಗೆ ಎರಡನೆಯ ಸಾರಿ ಪತ್ರವನ್ನು ಬರೆದು, “ನೀವು ನನ್ನವರಾಗಿದ್ದು ನನ್ನ ಮಾತು ಕೇಳುವವರಾಗಿದ್ದರೆ, ನಾಳೆ ಇಷ್ಟು ಹೊತ್ತಿಗೆ ಇಜ್ರೆಯೇಲ್ ಪಟ್ಟಣಕ್ಕೆ ನಿಮ್ಮ ಯಜಮಾನನ ಪುತ್ರರ ತಲೆಗಳನ್ನು ತೆಗೆದುಕೊಂಡು ನನ್ನ ಬಳಿಗೆ ಬನ್ನಿರಿ,” ಎಂದು ಹೇಳಿದನು.ಆದರೆ ಅರಸನ ಮಕ್ಕಳಾದ ಎಪ್ಪತ್ತು ಮಂದಿ ಮನುಷ್ಯರು ಪಟ್ಟಣದ ಪ್ರಮುಖರ ಬಳಿಯಲ್ಲಿ ಇದ್ದರು. ಅವರು ಅವರನ್ನು ಪೋಷಿಸುತ್ತಿದ್ದರು. 7 ಈ ಪತ್ರವು ಅವರ ಬಳಿಗೆ ಬಂದಾಗ, ಅವರು ರಾಜಪುತ್ರರನ್ನು ಹಿಡಿದು, ಎಪ್ಪತ್ತು ಮಂದಿಯನ್ನು ಕೊಂದು, ಅವರ ತಲೆಗಳನ್ನು ಪುಟ್ಟಿಗಳಲ್ಲಿ ಹಾಕಿ ಇಜ್ರೆಯೇಲ್ ಪಟ್ಟಣದಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು. 8 ಆಗ ಆ ಸೇವಕನು ಬಂದು ಯೇಹುವಿಗೆ, “ರಾಜಪುತ್ರರ ತಲೆಗಳನ್ನು ತೆಗೆದುಕೊಂಡು ಬಂದಿದ್ದಾರೆ,” ಎಂದು ತಿಳಿಸಿದನು.ಅದಕ್ಕೆ ಯೇಹು, “ಉದಯಕಾಲದವರೆಗೂ ಅವುಗಳನ್ನು ಹೆಬ್ಬಾಗಿಲಿನಲ್ಲಿ ಎರಡು ರಾಶಿಗಳಾಗಿ ಹಾಕಿರಿ,” ಎಂದು ಆಜ್ಞಾಪಿಸಿದನು. 9 ಮರುದಿನ ಬೆಳಿಗ್ಗೆ ಯೇಹು ಹೊರಗೆ ಬಂದು, ಸಕಲ ಜನರ ಮುಂದೆ ನಿಂತು, “ನೀವು ನಿರಪರಾಧಿಗಳು. ನಾನು ನನ್ನ ಯಜಮಾನನ ಮೇಲೆ ಒಳಸಂಚುಮಾಡಿ, ಅವನನ್ನು ಕೊಂದುಹಾಕಿದೆನು. ಆದರೆ ಇವರೆಲ್ಲರನ್ನು ಸಂಹರಿಸಿದವರ‍್ಯಾರು? 10 ಯೆಹೋವ ದೇವರು ಅಹಾಬನ ಮನೆಯನ್ನು ಕುರಿತು ಹೇಳಿದ ಯೆಹೋವ ದೇವರ ಮಾತುಗಳಲ್ಲಿ ಒಂದೂ ವ್ಯರ್ಥವಾಗುವುದಿಲ್ಲವೆಂದು ನೀವು ತಿಳಿದುಕೊಳ್ಳಿರಿ. ಯೆಹೋವ ದೇವರು ತಮ್ಮ ಸೇವಕನಾದ ಎಲೀಯನ ಮುಖಾಂತರ ಹೇಳಿದ್ದನ್ನು ನೆರವೇರಿಸಿದ್ದಾರೆ,” ಎಂದನು. 11 ಈ ಪ್ರಕಾರ ಯೇಹುವು ಇಜ್ರೆಯೇಲ್ ಪಟ್ಟಣದಲ್ಲಿ ಉಳಿದ ಅಹಾಬನ ಕುಟುಂಬದವರನ್ನೂ ಅವನ ಸರದಾರರು, ಆಪ್ತಮಿತ್ರರು, ಪುರೋಹಿತರು ಇವರನ್ನೂ ಸಂಹರಿಸಿದನು; ಒಬ್ಬನನ್ನೂ ಉಳಿಸಲಿಲ್ಲ. 12 ಆಗ ಯೇಹುವು ಹೊರಟು ಸಮಾರ್ಯಕ್ಕೆ ಬಂದನು. ಅವನು ಕುರುಬರ ಬೇತ್ ಎಕೆದ್ ಬಳಿ ಬಂದಾಗ, 13 ಯೆಹೂದದ ಅರಸನಾದ ಅಹಜ್ಯನ ಸಹೋದರರನ್ನು ಕಂಡು ಅವರಿಗೆ, “ನೀವು ಯಾರು?” ಎಂದನು.ಅದಕ್ಕವರು, “ನಾವು ಅಹಜ್ಯನ ಸಹೋದರರು. ಅರಸನ ಮಕ್ಕಳನ್ನೂ, ರಾಣಿಯ ಮಕ್ಕಳನ್ನೂ ವಂದಿಸಲು ಹೋಗುತ್ತಿದ್ದೇವೆ,” ಎಂದರು. 14 ಆಗ ಅವನು, “ಅವರನ್ನು ಜೀವದಿಂದ ಹಿಡಿಯಿರಿ,” ಎಂದು ಹೇಳಿದ್ದರಿಂದ ಕುರುಬರು ಇವರನ್ನು ಜೀವದಿಂದ ಹಿಡಿದು, ಉಣ್ಣೆ ಕತ್ತರಿಸುವ ಮನೆಯ ಬಾವಿಯ ಬಳಿಯಲ್ಲಿ ಕೊಂದುಹಾಕಿದರು. ಅವರು ನಲವತ್ತೆರಡು ಮಂದಿ ಇದ್ದರು. ಅವರಲ್ಲಿ ಒಬ್ಬನನ್ನಾದರೂ ಉಳಿಸಲಿಲ್ಲ. 15 ಯೇಹುವು ಅಲ್ಲಿಂದ ಹೋಗಿ, ತನ್ನನ್ನು ಎದುರುಗೊಳ್ಳಲು ಬಂದ ರೇಕಾಬನ ಮಗ ಯೆಹೋನಾದಾಬನನ್ನು ಕಂಡು ಅವನನ್ನು ವಂದಿಸಿ ಅವನಿಗೆ, “ನನ್ನ ಹೃದಯವು ನಿನ್ನ ಹೃದಯದ ಸಂಗಡ ಇರುವ ಹಾಗೆ ನಿನ್ನ ಹೃದಯವು ಯಥಾರ್ಥವಾಗಿ ಇದೆಯೋ?” ಎಂದನು.ಯೆಹೋನಾದಾಬನು, “ಇದೆ,” ಎಂದನು.“ಹಾಗಾದರೆ ನಿನ್ನ ಕೈ ಕೊಡು,” ಎಂದನು. ಇವನು ತನ್ನ ಕೈ ಕೊಟ್ಟನು. ತನ್ನ ಬಳಿಗೆ ರಥದ ಮೇಲೆ ಹತ್ತಿಸಿಕೊಂಡು ಅವನಿಗೆ, 16 “ನೀನು ನನ್ನ ಸಂಗಡ ಬಂದು ಯೆಹೋವ ದೇವರಿಗೋಸ್ಕರ ನನಗುಂಟಾದ ಆಸಕ್ತಿಯನ್ನು ನೋಡು,” ಎಂದು ಹೇಳಿ ಅವನನ್ನು ತನ್ನ ರಥದಲ್ಲಿ ಕುಳ್ಳಿರಿಸಿಕೊಂಡನು. 17 ಯೇಹುವು ಸಮಾರ್ಯಕ್ಕೆ ಬಂದ ತರುವಾಯ ಸಮಾರ್ಯದಲ್ಲಿ ಅಹಾಬನಿಗೆ ಉಳಿದವರೆಲ್ಲರನ್ನು ಎಲೀಯನಿಗೆ ಹೇಳಿದ ಯೆಹೋವ ದೇವರ ವಾಕ್ಯದ ಪ್ರಕಾರ ಅವರನ್ನು ಸಂಹರಿಸಿದನು. 18 ಯೇಹುವು ಜನರೆಲ್ಲರನ್ನು ಕೂಡಿಸಿ ಅವರಿಗೆ, “ಅಹಾಬನು ಸ್ವಲ್ಪವಾಗಿ ಬಾಳನನ್ನು ಸೇವಿಸಿದನು. ಆದರೆ ಯೇಹುವು ಅವನನ್ನು ಬಹಳವಾಗಿ ಸೇವಿಸುವನು. 19 ಆದ್ದರಿಂದ ಬಾಳನ ಸಮಸ್ತ ಪ್ರವಾದಿಗಳನ್ನೂ, ಅವನ ಸಮಸ್ತ ಸೇವಕರನ್ನೂ, ಅವನ ಸಮಸ್ತ ಯಾಜಕರನ್ನೂ ನನ್ನ ಬಳಿಗೆ ಕರೆಯಿರಿ. ಒಬ್ಬನೂ ಬಾರದೆ ಇರಕೂಡದು. ನಾನು ಬಾಳನಿಗೆ ಮಹಾಬಲಿ ಕೊಡಬೇಕಾಗಿದೆ. ಯಾವನಾದರೂ ಬಾರದೆ ಹೋದರೆ ಅವನು ಬದುಕನು,” ಎಂದನು. ಏಕೆಂದರೆ ಯೇಹುವು ಬಾಳನನ್ನು ಸೇವಿಸುವವರನ್ನು ನಾಶಮಾಡುವಂತೆ ಇದನ್ನು ತಂತ್ರದಿಂದ ಮಾಡಿದನು. 20 ಆಗ ಯೇಹುವು, “ಬಾಳನಿಗೋಸ್ಕರ ಪವಿತ್ರ ಸಮಾರಂಭವನ್ನು ಮಾಡಿರಿ,” ಎಂದನು. ಅವರು ಅದನ್ನು ಸಾರಿದರು. 21 ಯೇಹುವು ಇಸ್ರಾಯೇಲಿನಲ್ಲೆಲ್ಲಾ ಕಳುಹಿಸಿದ್ದರಿಂದ ಬಾಳನನ್ನು ಸೇವಿಸುವವರೆಲ್ಲರೂ ಬಂದರು. ಬಾರದೆ ಇದ್ದವನು ಒಬ್ಬನೂ ಇರಲಿಲ್ಲ. ಅವರು ಬಾಳನ ಮನೆಯಲ್ಲಿ ಪ್ರವೇಶಿಸಿದಾಗ, ಒಂದು ಕಡೆಯಿಂದ ಇನ್ನೊಂದು ಕಡೆಯವರೆಗೆ ಬಾಳನ ದೇವಸ್ಥಾನ ಪೂರ್ಣವಾಗಿ ತುಂಬಿತ್ತು. 22 ಆಗ ಅವನು ವಸ್ತ್ರಗಳ ಮನೆಯ ಮೇಲಧಿಕಾರಿಗೆ, “ಬಾಳನನ್ನು ಸೇವಿಸುವ ಸಮಸ್ತರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಾ,” ಎಂದು ಹೇಳಿದ್ದರಿಂದ, ಅವನು ಅವರಿಗೋಸ್ಕರ ವಸ್ತ್ರಗಳನ್ನು ತೆಗೆದುಕೊಂಡು ಬಂದನು. 23 ಆಗ ಯೇಹುವೂ, ರೇಕಾಬನ ಮಗ ಯೆಹೋನಾದಾಬನೂ ಬಾಳನ ದೇವಸ್ಥಾನದಲ್ಲಿ ಪ್ರವೇಶಿಸಿದರು. ಯೇಹುವು, “ಬಾಳನನ್ನು ಸೇವಿಸುವವರ ಹೊರತು ಅವರ ಸಂಗಡ ಯೆಹೋವ ದೇವರ ಸೇವಕರಲ್ಲಿ ಒಬ್ಬನೂ ಇರದ ಹಾಗೆ ಪರಿಶೋಧಿಸಿ ನೋಡಿರಿ,” ಎಂದು ಬಾಳನನ್ನು ಸೇವಿಸುವವರಿಗೆ ಹೇಳಿದನು. 24 ಅವರು ಬಲಿಗಳನ್ನೂ, ದಹನಬಲಿಗಳನ್ನೂ ಅರ್ಪಿಸಲು ಒಳಗೆ ಪ್ರವೇಶಿಸಿದ ತರುವಾಯ, ಯೇಹುವು ಹೊರಗೆ ಎಂಬತ್ತು ಮಂದಿಯನ್ನು ಇರಿಸಿಕೊಂಡು ಅವರಿಗೆ, “ನಾನು ನಿಮ್ಮ ಕೈಗೆ ಒಪ್ಪಿಸಿದ ಮನುಷ್ಯರಲ್ಲಿ ಯಾವನಾದರೂ ತಪ್ಪಿಸಿಕೊಂಡುಹೋದರೆ, ಅವನ ಪ್ರಾಣಕ್ಕೆ ನಿಮ್ಮ ಪ್ರಾಣ ಈಡಾಗಿರುವುದು,” ಎಂದನು. 25 ಅವನು ದಹನಬಲಿಯನ್ನು ಅರ್ಪಿಸಿ ತೀರಿಸಿದ ತರುವಾಯ, ಯೇಹುವು ಕಾವಲುಗಾರರಿಗೂ, ಅಧಿಪತಿಗಳಿಗೂ, “ನೀವು ಒಳಗೆ ಹೋಗಿ ಯಾವನೂ ಹೊರಗೆ ಬಾರದ ಹಾಗೆ ಅವರನ್ನು ಸಂಹರಿಸಿರಿ,” ಎಂದನು. ಹಾಗೆಯೇ ಅವರು ಒಳಗೆ ಹೋಗಿ ಅವರನ್ನು ಖಡ್ಗದಿಂದ ಸಂಹರಿಸಿ ಅವರ ಶವಗಳನ್ನು ಹೊರಗೆ ಹಾಕಿದ ತರುವಾಯ, ಬಾಳನ ಗರ್ಭಗುಡಿಯನ್ನು ಪ್ರವೇಶಿಸಿ, 26 ಬಾಳನ ದೇವಸ್ಥಾನದಿಂದ ವಿಗ್ರಹಗಳನ್ನು ತಂದು ಅವುಗಳನ್ನು ಸುಟ್ಟುಬಿಟ್ಟರು. 27 ಇದಲ್ಲದೆ ಅವರು ಬಾಳನ ವಿಗ್ರಹವನ್ನು ಒಡೆದುಹಾಕಿ, ಬಾಳನ ದೇವಸ್ಥಾನವನ್ನು ಕೆಡವಿಬಿಟ್ಟು, ಆ ಸ್ಥಳವನ್ನು ಇಂದಿನವರೆಗೂ ಶೌಚಕ್ಕಾಗಿ ಉಪಯೋಗಿಸುತ್ತಾರೆ. 28 ಹೀಗೆಯೇ ಯೇಹುವು ಬಾಳನ ಪೂಜೆಯನ್ನು ಇಸ್ರಾಯೇಲಿನಲ್ಲಿಂದ ನಾಶಮಾಡಿಬಿಟ್ಟನು. 29 ಆದರೆ ಬೇತೇಲಿನಲ್ಲಿಯೂ, ದಾನಿನಲ್ಲಿಯೂ ಇರುವ ಬಂಗಾರದ ಕರುಗಳಿಂದ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನ ಪಾಪಗಳನ್ನು ಯೇಹುವು ತೊರೆದುಬಿಡಲಿಲ್ಲ. 30 ಯೆಹೋವ ದೇವರು ಯೇಹುವಿಗೆ, “ನೀನು ನನ್ನ ದೃಷ್ಟಿಯಲ್ಲಿ ಸರಿಯಾದದ್ದನ್ನು ನಡೆಸಿ ನನ್ನ ಮೆಚ್ಚಿಗೆಯನ್ನು ಪಡೆದೆ; ಅಹಾಬನ ಮನೆಯವರನ್ನು ಕುರಿತು ನನ್ನ ಹೃದಯದಲ್ಲಿದ್ದ ಎಲ್ಲದರ ಪ್ರಕಾರ ಮಾಡಿದ್ದರಿಂದ, ನಿನ್ನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು,” ಎಂದರು. 31 ಯೇಹುವು ತನ್ನ ಪೂರ್ಣಹೃದಯದಿಂದ ಇಸ್ರಾಯೇಲಿನ ದೇವರಾದ ಯೆಹೋವ ದೇವರ ನಿಯಮದಲ್ಲಿ ನಡೆಯಲು ಪ್ರಯತ್ನಿಸಲಿಲ್ಲ. ಇಸ್ರಾಯೇಲರನ್ನು ಪಾಪಮಾಡಲು ಪ್ರೇರೇಪಿಸಿದ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. 32 ಆ ದಿವಸಗಳಲ್ಲಿ ಯೆಹೋವ ದೇವರು ಇಸ್ರಾಯೇಲನ್ನು ತಗ್ಗಿಸಲು ಆರಂಭಿಸಿದರು. ಹಜಾಯೇಲನು ಬಂದು ಇಸ್ರಾಯೇಲಿನ ಸಮಸ್ತ ಮೇರೆಗಳಲ್ಲಿ ಅವರನ್ನು ಸಂಹರಿಸಿದನು. 33 ಪೂರ್ವದಲ್ಲಿ ಯೊರ್ದನ್ ಮೊದಲುಗೊಂಡು ಗಾದ್ಯರೂ, ರೂಬೇನ್ಯರೂ ನಿವಾಸವಾಗಿದ್ದ ಗಿಲ್ಯಾದಿನ ಸಮಸ್ತ ದೇಶವನ್ನೂ, ಅರ್ನೋನ್ ನದಿಯ ಬಳಿಯಲ್ಲಿರುವ ಅರೋಯೇರ್ ಮೊದಲುಗೊಂಡು ಮನಸ್ಸೆಯವರು ನಿವಾಸವಾಗಿದ್ದ ಗಿಲ್ಯಾದ್ ಬಾಷಾನಿನಲ್ಲಿರುವವರನ್ನೂ ಹಜಾಯೇಲನು ಸಂಹರಿಸಿದನು. 34 ಯೇಹುವಿನ ಇತರ ಕ್ರಿಯೆಗಳೂ, ಅವನು ಮಾಡಿದ್ದೆಲ್ಲವೂ, ಅವನ ಪರಾಕ್ರಮವೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 35 ಯೇಹು ತನ್ನ ಪಿತೃಗಳ ಜೊತೆಯಲ್ಲಿ ವಿಶ್ರಾಂತಿ ಹೊಂದಿದ್ದರಿಂದ ಅವನನ್ನು ಸಮಾರ್ಯದಲ್ಲಿ ಹೂಳಿಟ್ಟರು. ಅವನ ಮಗ ಯೆಹೋವಾಹಾಜನು ಅವನಿಗೆ ಬದಲಾಗಿ ಅರಸನಾದನು. 36 ಯೇಹುವು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಿದ ಸಮಯ ಇಪ್ಪತ್ತೆಂಟು ವರ್ಷಗಳು.