Acts 21 (BOKCV2)
1 ನಾವು ಅವರನ್ನು ಅಗಲಿದ ನಂತರ, ಸಮುದ್ರ ಮಾರ್ಗವಾಗಿ ಪ್ರಯಾಣಮಾಡಿ ನೇರವಾಗಿ ಕೋಸ್ ದ್ವೀಪಕ್ಕೆ ಹೋದೆವು. ಮರುದಿನ ರೋದ ಎಂಬಲ್ಲಿಗೆ ಹೋಗಿ ಅಲ್ಲಿಂದ ಪತರಕ್ಕೆ ಬಂದೆವು. 2 ಅಲ್ಲಿ ಫೊಯಿನಿಕೆಗೆ ಹೋಗುವ ನೌಕೆಯನ್ನು ಕಂಡು, ಅದನ್ನೇರಿ ಪ್ರಯಾಣ ಮುಂದುವರಿಸಿದೆವು. 3 ಸೈಪ್ರಸ್ ಹತ್ತಿರ ಬಂದು ಅದರ ದಕ್ಷಿಣಕ್ಕೆ ಪ್ರಯಾಣಮಾಡಿ ಸಿರಿಯಕ್ಕೆ ಹೋದೆವು. ನಮ್ಮ ನೌಕೆಯಲ್ಲಿದ್ದ ಸರಕುಗಳನ್ನು ಇಳಿಸಬೇಕಾಗಿದ್ದ ಟೈರ್ ಎಂಬಲ್ಲಿ ಬಂದು ಇಳಿದೆವು. 4 ಅಲ್ಲಿ ಶಿಷ್ಯರನ್ನು ಹುಡುಕಿ, ಕಂಡು ಅವರೊಂದಿಗೆ ಏಳು ದಿನ ಇದ್ದೆವು. ಪೌಲನು ಯೆರೂಸಲೇಮಿಗೆ ಹೋಗಬಾರದೆಂದು ಅವರು ಪವಿತ್ರಾತ್ಮ ಪ್ರೇರಣೆಯಿಂದ ಹೇಳಿದರು. 5 ಆದರೆ ನಮ್ಮ ಸಮಯ ಮುಗಿದಾಗ, ನಮ್ಮ ಪ್ರಯಾಣವನ್ನು ಮುಂದುವರಿಸಬೇಕೆಂದಿದ್ದೆವು. ಶಿಷ್ಯರೆಲ್ಲರೂ ಅವರ ಮಡದಿ ಮಕ್ಕಳೂ ಪಟ್ಟಣದ ಹೊರಗಿನವರೆಗೆ ನಮ್ಮೊಂದಿಗೆ ಬಂದರು. ಸಮುದ್ರ ತೀರದಲ್ಲಿ ನಾವು ಮೊಣಕಾಲೂರಿ ಪ್ರಾರ್ಥನೆ ಮಾಡಿದೆವು. 6 ಪರಸ್ಪರ ಬೀಳ್ಕೊಡುಗೆಯಾದ ನಂತರ, ನಾವು ನೌಕೆಯನ್ನೇರಿದೆವು. ಅವರು ತಮ್ಮ ಮನೆಗೆ ಹೊರಟು ಹೋದರು. 7 ಟೈರ್ ಪಟ್ಟಣದಿಂದ ನಮ್ಮ ಪ್ರಯಾಣ ಮುಂದುವರಿಸಿ ಪ್ತೊಲೆಮಾಯ ಎಂಬಲ್ಲಿಗೆ ಬಂದಿಳಿದೆವು. ಅಲ್ಲಿಯ ಸಹೋದರರನ್ನು ವಂದಿಸಿ ಅವರೊಂದಿಗೆ ಒಂದು ದಿನ ಇದ್ದೆವು. 8 ಮರುದಿನ ಹೊರಟು ಕೈಸರೈಯ ಪಟ್ಟಣವನ್ನು ತಲುಪಿದೆವು. ಅಲ್ಲಿ ಏಳು ಜನರಲ್ಲಿ ಒಬ್ಬನಾದ, ಫಿಲಿಪ್ಪನೆಂಬ ಸುವಾರ್ತಿಕನ ಮನೆಯಲ್ಲಿ ತಂಗಿದೆವು. 9 ಅವನಿಗೆ ಅವಿವಾಹಿತರಾದ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದರು. ಅವರು ಪ್ರವಾದಿಸುವವರಾಗಿದ್ದರು. 10 ನಾವು ಅಲ್ಲಿ ಕೆಲವು ದಿನ ಇದ್ದ ತರುವಾಯ, ಅಗಬ ಎಂಬ ಹೆಸರಿನ ಪ್ರವಾದಿ ಯೂದಾಯದಿಂದ ಬಂದನು. 11 ಅವನು ನಮ್ಮ ಬಳಿಗೆ ಬಂದು ಪೌಲನ ನಡುಪಟ್ಟಿಯನ್ನು ತೆಗೆದುಕೊಂಡು ತನ್ನ ಕೈಕಾಲುಗಳಿಗೆ ಅದನ್ನು ಕಟ್ಟಿಕೊಂಡು, “ಪವಿತ್ರಾತ್ಮರು ಇಂತೆನ್ನುತ್ತಾರೆ, ‘ಈ ನಡುಪಟ್ಟಿ ಯಾರದೋ ಆ ಮನುಷ್ಯನನ್ನು ಯೆರೂಸಲೇಮಿನ ಯೆಹೂದ್ಯರು ಈ ರೀತಿಯಲ್ಲಿ ಬಂಧಿಸಿ, ಯೆಹೂದ್ಯರಲ್ಲದವರ ಕೈಗೆ ಒಪ್ಪಿಸುವರು,’ ” ಎಂದನು. 12 ಇದನ್ನು ನಾವು ಕೇಳಿದಾಗ, ನಾವೂ ಅಲ್ಲಿಯ ಜನರೂ ಯೆರೂಸಲೇಮಿಗೆ ಹೋಗಬಾರದೆಂದು ಪೌಲನನ್ನು ಬೇಡಿಕೊಂಡೆವು. 13 ಆಗ ಪೌಲನು, “ನೀವೇಕೆ ಅತ್ತು ನನ್ನ ಹೃದಯ ಒಡೆಯುತ್ತೀರಿ? ಬಂಧಿತನಾಗಲಷ್ಟೇ ಅಲ್ಲ, ನಮ್ಮ ಕರ್ತ ಯೇಸುವಿನ ಹೆಸರಿನ ನಿಮಿತ್ತ ಯೆರೂಸಲೇಮಿನಲ್ಲಿ ನಾನು ಸಾಯಲಿಕ್ಕೂ ಸಿದ್ಧನಾಗಿದ್ದೇನೆ,” ಎಂದನು. 14 ಪೌಲನು ಸಮ್ಮತಿಸದೆ ಇದ್ದ ಕಾರಣ, “ಕರ್ತ ಯೇಸುವಿನ ಚಿತ್ತ ನೆರವೇರಲಿ,” ಎಂದು ಹೇಳಿ ನಾವು ಸುಮ್ಮನಾದೆವು. 15 ಇದಾದನಂತರ ನಾವು ಸಿದ್ಧರಾಗಿ ಯೆರೂಸಲೇಮಿಗೆ ಹೋದೆವು. 16 ಕೈಸರೈಯದಿಂದ ಕೆಲವು ಶಿಷ್ಯರು ನಮ್ಮೊಂದಿಗೆ ಬಂದು, ಮ್ನಾಸೋನ ಎಂಬುವನ ಮನೆಗೆ ನಾವು ಇಳಿದುಕೊಳ್ಳುವಂತೆ ಕರೆದುಕೊಂಡು ಹೋದರು. ಅವನು ಸೈಪ್ರಸ್ ದಿಂದ ಬಂದ ಪ್ರಥಮ ಶಿಷ್ಯರಲ್ಲಿ ಒಬ್ಬನಾಗಿದ್ದನು. 17 ನಾವು ಯೆರೂಸಲೇಮನ್ನು ತಲುಪಿದಾಗ, ಸಹೋದರರು ನಮ್ಮನ್ನು ಸಂತೋಷದಿಂದ ಸ್ವೀಕರಿಸಿದರು. 18 ಮರುದಿನ ನಾವೆಲ್ಲರೂ ಪೌಲನೊಂದಿಗೆ ಯಾಕೋಬನನ್ನು ನೋಡಲು ಹೋದೆವು. ಅಲ್ಲಿ ಎಲ್ಲಾ ಸಭೆಹಿರಿಯರೂ ಇದ್ದರು. 19 ಪೌಲನು ಅವರನ್ನು ವಂದಿಸಿ, ತನ್ನ ಸೇವೆಯ ಮೂಲಕ ದೇವರು ಯೆಹೂದ್ಯರಲ್ಲದವರ ಮಧ್ಯದಲ್ಲಿ ಮಾಡಿದ ಕಾರ್ಯಗಳನ್ನು ವಿವರಿಸಿದನು. 20 ಅವರು ಅದನ್ನು ಕೇಳಿ, ದೇವರನ್ನು ಕೊಂಡಾಡಿದರು. ಅನಂತರ ಪೌಲನಿಗೆ, “ಸಹೋದರನೇ, ಸಾವಿರಾರು ಜನ ಯೆಹೂದ್ಯರು ನಂಬಿರುವುದನ್ನು ಕಾಣುತ್ತೀಯಲ್ಲಾ, ಅವರೆಲ್ಲರೂ ಮೋಶೆಯ ನಿಯಮದ ಅಭಿಮಾನಿಗಳಾಗಿದ್ದರು. 21 ನೀನು ಯೆಹೂದ್ಯರಲ್ಲದವರ ಮಧ್ಯದಲ್ಲಿ ವಾಸಿಸುತ್ತಿರುವ ಯೆಹೂದ್ಯರಿಗೆ, ‘ನೀವು ಮೋಶೆಯ ನಿಯಮವನ್ನು ಅನುಸರಿಸಬೇಡಿರಿ, ನಿಮ್ಮ ಮಕ್ಕಳಿಗೆ ಸುನ್ನತಿ ಮಾಡಿಸಬೇಡಿರಿ, ನಿಮ್ಮ ಆಚಾರಗಳನ್ನು ಅನುಸರಿಸಬೇಡಿರಿ,’ ಎಂದು ಬೋಧಿಸುವುದಾಗಿ ನಿನ್ನ ವಿಷಯದಲ್ಲಿ ಅವರಿಗೆ ತಿಳಿದು ಬಂದಿದೆ. 22 ಹೀಗಿರುವಲ್ಲಿ ನಾವೇನು ಮಾಡೋಣ? ನೀನು ಇಲ್ಲಿಗೆ ಬಂದಿರುವ ವಿಷಯವೂ ಅವರಿಗೆ ಗೊತ್ತಾಗುವುದು. 23 ಆದ್ದರಿಂದ ನಾವು ನಿನಗೆ ಹೇಳುವಂತೆ ಮಾಡು, ಹರಕೆ ಹೊತ್ತ ನಾಲ್ವರು ನಮ್ಮಲ್ಲಿ ಇದ್ದಾರೆ. 24 ನೀನು ಇವರನ್ನು ಕರೆದುಕೊಂಡು ಹೋಗಿ, ಅವರೊಂದಿಗೆ ನಿನ್ನನ್ನು ಶುದ್ಧಿಮಾಡಿಕೊಂಡು, ಅವರು ತಮ್ಮ ಕ್ಷೌರ ಮಾಡಿಸಿಕೊಳ್ಳುವ ಖರ್ಚನ್ನು ನೀನೇ ಪೂರೈಸು. ಆಗ ನಿನ್ನ ವಿಷಯದಲ್ಲಿ ಕೇಳಿರುವ ಸಂಗತಿಗಳು ನಿಜವಲ್ಲ ಮತ್ತು ನೀನು ಮೋಶೆಯ ನಿಯಮಕ್ಕನುಸಾರವಾಗಿ ನಡೆದುಕೊಳ್ಳುತ್ತೀ ಎಂದು ಎಲ್ಲರಿಗೂ ತಿಳಿದುಬರುವುದು. 25 ಯೆಹೂದ್ಯರಲ್ಲದವರಿಂದ ಬಂದ ವಿಶ್ವಾಸಿಗಳಿಗಾದರೋ, ಅವರು ದೇವರಲ್ಲದವುಗಳಿಗೆ ಅರ್ಪಿತವಾದ ಮಲಿನ ಆಹಾರದಿಂದಲೂ ರಕ್ತದಿಂದಲೂ ಕುತ್ತಿಗೆ ಹಿಸುಕಿ ಕೊಂದ ಪ್ರಾಣಿಯ ಮಾಂಸದಿಂದಲೂ ಅನೈತಿಕತೆಯಿಂದಲೂ ದೂರವಿರಬೇಕೆಂದು ನಾವು ಬರೆದ ನಮ್ಮ ತೀರ್ಮಾನವನ್ನು ತಿಳಿಸಿದ್ದೇವೆ,” ಎಂದರು. 26 ಮರುದಿನ ಪೌಲನು ಆ ನಾಲ್ವರೊಂದಿಗೆ ತನ್ನನ್ನು ಶುದ್ಧೀಕರಿಸಿಕೊಂಡನು. ಅನಂತರ ಶುದ್ಧಾಚಾರ ಮುಗಿಯುವ ದಿನಗಳ ಬಗ್ಗೆ ತಿಳಿಸುವುದಕ್ಕಾಗಿ ದೇವಾಲಯಕ್ಕೆ ಹೋದನು. ಅವರಲ್ಲಿ ಪ್ರತಿಯೊಬ್ಬನಿಗಾಗಿ ಯಾವಾಗ ಅರ್ಪಣೆಯು ಆಗಬೇಕೆಂಬುದರ ಬಗ್ಗೆಯೂ ಸೂಚಿಸಿದನು. 27 ಏಳು ದಿನಗಳ ಅವಧಿ ಮುಗಿಯುತ್ತಿದ್ದಾಗ, ಏಷ್ಯಾ ಪ್ರಾಂತದ ಕೆಲವು ಯೆಹೂದ್ಯ ಜನರು ದೇವಾಲಯದಲ್ಲಿ ಪೌಲನನ್ನು ಕಂಡರು. ಅವರು ಇಡೀ ಜನಸಮೂಹವನ್ನು ಉದ್ರೇಕಿಸಿ ಪೌಲನನ್ನು ಹಿಡಿದರು. 28 “ಇಸ್ರಾಯೇಲರೇ, ನಮಗೆ ಸಹಾಯಮಾಡಿರಿ! ನಮ್ಮ ಜನರಿಗೂ ನಮ್ಮ ನಿಯಮಕ್ಕೂ ಈ ಸ್ಥಳಕ್ಕೂ ವಿರೋಧವಾಗಿ ಎಲ್ಲಾ ಜನರಿಗೆ ಬೋಧಿಸುತ್ತಿರುವ ಮನುಷ್ಯನು ಇವನೇ. ಅಷ್ಟೇ ಅಲ್ಲ, ಗ್ರೀಕರನ್ನು ದೇವಾಲಯದೊಳಗೆ ಕರೆದುಕೊಂಡು ಬಂದು ಈ ಪವಿತ್ರ ಸ್ಥಳವನ್ನು ಭ್ರಷ್ಟಗೊಳಿಸಿದ್ದಾನೆ,” ಎಂದು ಕೂಗಿ ಹೇಳಿದರು. 29 ಅವರು ಮೊದಲು ಪಟ್ಟಣದಲ್ಲಿ ಪೌಲನೊಂದಿಗೆ ಎಫೆಸದ ತ್ರೊಫಿಮ ಎಂಬವನು ಇದ್ದುದನ್ನು ಕಂಡಿದ್ದರಿಂದ, ಪೌಲನು ಈಗ ಅವನನ್ನು ದೇವಾಲಯದೊಳಗೆ ಕರೆದುಕೊಂಡು ಬಂದಿರಬಹುದೆಂದು ಅವರು ಭಾವಿಸಿದರು. 30 ಇಡೀ ಪಟ್ಟಣದಲ್ಲೇ ಕೋಲಾಹಲವೆದ್ದಿತು. ಜನರು ಎಲ್ಲಾ ದಿಕ್ಕುಗಳಿಂದ ಓಡೋಡುತ್ತಾ ಬಂದು. ಪೌಲನನ್ನು ಹಿಡಿದುಕೊಂಡು ದೇವಾಲಯದೊಳಗಿಂದ ಹೊರಗೆಳೆದುಕೊಂಡು ಹೋದರು. ಕೂಡಲೇ ದ್ವಾರಗಳನ್ನು ಮುಚ್ಚಿಬಿಟ್ಟರು. 31 ಅವರು ಪೌಲನನ್ನು ಕೊಲ್ಲುವುದಕ್ಕೆ ಪ್ರಯತ್ನಿಸುತ್ತಿದ್ದಾಗ, ಯೆರೂಸಲೇಮ ಪಟ್ಟಣದಲ್ಲೆಲ್ಲಾ ಗೊಂದಲವೆದ್ದಿದೆ ಎಂಬ ಸುದ್ದಿ ಅಲ್ಲಿದ್ದ ರೋಮ್ ಸಹಸ್ರಾಧಿಪತಿಗೆ ತಲುಪಿತು. 32 ಅವನು ತಕ್ಷಣವೇ ಸೈನಿಕರನ್ನೂ ಶತಾಧಿಪತಿಗಳನ್ನೂ ಕರೆದುಕೊಂಡು ಜನಸಮೂಹದ ಬಳಿಗೆ ಓಡಿಬಂದನು. ಅವರು ಸಹಸ್ರಾಧಿಪತಿಯನ್ನೂ ಅವನ ಸೈನಿಕರನ್ನೂ ಕಂಡಾಗ ಪೌಲನನ್ನು ಹೊಡೆಯುವುದನ್ನು ನಿಲ್ಲಿಸಿದರು. 33 ಸಹಸ್ರಾಧಿಪತಿ ಅಲ್ಲಿಗೆ ಬಂದು ಪೌಲನನ್ನು ಬಂಧಿಸಿ, ಅವನನ್ನು ಎರಡು ಸರಪಣಿಗಳಿಂದ ಕಟ್ಟಬೇಕೆಂದು ಆಜ್ಞಾಪಿಸಿದನು. ಅನಂತರ “ಇವನು ಯಾರು? ಇವನು ಮಾಡಿದ್ದೇನು?” ಎಂದು ವಿಚಾರಿಸಿದನು. 34 ಜನಸಮೂಹದಲ್ಲಿದ್ದ ಇತರರು ವಿವಿಧ ರೀತಿಯಿಂದ ಕೂಗುತ್ತಿರಲು ಗಲಭೆಯ ನಿಮಿತ್ತ ಸಹಸ್ರಾಧಿಪತಿಗೆ ಸತ್ಯಾಂಶ ತಿಳಿಯಲಾಗಲಿಲ್ಲ. ಆದ್ದರಿಂದ ಪೌಲನನ್ನು ಸೈನಿಕ ಪಾಳ್ಯದೊಳಗೆ ತೆಗೆದುಕೊಂಡು ಹೋಗಲು ಆಜ್ಞಾಪಿಸಿದನು. 35 ಪೌಲನನ್ನು ಮೆಟ್ಟಲುಗಳವರೆಗೆ ತೆಗೆದುಕೊಂಡು ಹೋದಾಗ ಜನರ ರೋಷ ಇನ್ನೂ ಬಲವಾದುದ್ದರಿಂದ ಸೈನಿಕರು ಅವನನ್ನು ಹೊತ್ತುಕೊಂಡು ಹೋಗಬೇಕಾಯಿತು. 36 ಏಕೆಂದರೆ ಮುನ್ನುಗ್ಗುತ್ತಿದ್ದ ಜನರ ಗುಂಪು, “ಅವನನ್ನು ಕೊಲ್ಲಿರಿ!” ಎಂದು ಆರ್ಭಟಿಸುತ್ತಿತ್ತು. 37 ಸೈನಿಕರು ಪೌಲನನ್ನು ಅವರ ಪಾಳ್ಯದೊಳಗೆ ಒಯ್ಯುತ್ತಿದ್ದಾಗ, ಅವನು ಸಹಸ್ರಾಧಿಪತಿಗೆ, “ನಾನು ನಿನ್ನೊಡನೆ ಸ್ವಲ್ಪ ಮಾತನಾಡುವುದಕ್ಕೆ ಅಪ್ಪಣೆಯಾದೀತೇ?” ಎಂದು ಕೇಳಲು, ಅದಕ್ಕೆ ಅವನು,“ನಿನಗೆ ಗ್ರೀಕ್ ಭಾಷೆಯೂ ಗೊತ್ತಿದೆಯೋ?” 38 “ಹಾಗಾದರೆ ಕೆಲವು ಸಮಯದ ಹಿಂದೆ ದಂಗೆಯೆಬ್ಬಿಸಿ ನಾಲ್ಕು ಸಾವಿರ ಉಗ್ರಗಾಮಿಗಳನ್ನು ಅರಣ್ಯಕ್ಕೆ ಕರೆದುಕೊಂಡುಹೋದ ಈಜಿಪ್ಟಿನವನು ನೀನಲ್ಲವೋ?” ಎಂದನು. 39 ಅದಕ್ಕೆ ಪೌಲನು, “ನಾನೊಬ್ಬ ಯೆಹೂದ್ಯನು, ಕಿಲಿಕ್ಯದ ತಾರ್ಸದವನು, ಪ್ರಸಿದ್ಧ ಪಟ್ಟಣದ ನಾಗರಿಕನು. ದಯವಿಟ್ಟು ಜನರೊಂದಿಗೆ ಮಾತನಾಡಲು ನನಗೆ ಅವಕಾಶ ಕೊಡಬೇಕು,” ಎಂದು ಸಹಸ್ರಾಧಿಪತಿಯನ್ನು ಬೇಡಿಕೊಂಡನು. 40 ಸಹಸ್ರಾಧಿಪತಿಯ ಅಪ್ಪಣೆ ಪಡೆದುಕೊಂಡು, ಪೌಲನು ಮೆಟ್ಟಲುಗಳ ಮೇಲೆ ನಿಂತುಕೊಂಡು ಜನಸಮೂಹಕ್ಕೆ ಸುಮ್ಮನಿರುವಂತೆ ಸನ್ನೆಮಾಡಲು, ಅವರು ಬಹು ನಿಶ್ಶಬ್ದರಾದಾಗ ಅವನು ಹೀಬ್ರೂ ಭಾಷೆಯಲ್ಲಿ ಅವರಿಗೆ ಹೀಗೆಂದನು: