Genesis 18 (BOKCV2)
1 ಯೆಹೋವ ದೇವರು ಮಮ್ರೆಯ ಮೈದಾನಗಳಲ್ಲಿ ಅಬ್ರಹಾಮನಿಗೆ ಕಾಣಿಸಿಕೊಂಡರು. ಹಗಲಿನ ಬಿಸಿಲಿನಲ್ಲಿ ಅವನು ಡೇರೆಯ ಬಾಗಿಲಿನಲ್ಲಿ ಕುಳಿತುಕೊಂಡಿದ್ದನು. 2 ಆಗ ತನ್ನ ಕಣ್ಣುಗಳನ್ನೆತ್ತಿ ನೋಡಲು, ಮೂವರು ಪುರುಷರು ಹತ್ತಿರದಲ್ಲಿ ನಿಂತಿದ್ದರು. ಅವನು ಅವರನ್ನು ಕಂಡು ಅವರಿಗೆ ಎದುರಾಗಿ ಡೇರೆಯ ಬಾಗಿಲಿನಿಂದ ಓಡಿಬಂದು ನೆಲದವರೆಗೂ ಬಗ್ಗಿ ನಮಸ್ಕರಿಸಿದನು. 3 ಅಬ್ರಹಾಮನು ಅವರಿಗೆ, “ನನ್ನ ಸ್ವಾಮಿ, ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆತಿದ್ದರೆ, ನಿಮ್ಮ ದಾಸನ ಬಳಿಯಿಂದ ಹೊರಟು ಹೋಗಬೇಡಿ. 4 ಸ್ವಲ್ಪ ನೀರು ತೆಗೆದುಕೊಂಡು ಬರುತ್ತೇನೆ, ನಿಮ್ಮ ಕಾಲುಗಳನ್ನು ತೊಳೆದುಕೊಳ್ಳಿರಿ, ಮರದ ಕೆಳಗೆ ವಿಶ್ರಮಿಸಿಕೊಳ್ಳಿರಿ. 5 ನಾನು ಸ್ವಲ್ಪ ಆಹಾರವನ್ನು ತರುತ್ತೇನೆ. ತರುವಾಯ ನೀವು ಮುಂದೆ ಹೊರಟು ಹೋಗಬಹುದು. ನೀವು ನಿಮ್ಮ ದಾಸನ ಬಳಿಗೆ ಬಂದಿದ್ದೀರಿ,” ಎಂದು ಬೇಡಿಕೊಂಡನು.ಅದಕ್ಕೆ ಅವರು, “ನೀನು ಹೇಳಿದಂತೆಯೇ ಮಾಡು,” ಎಂದರು. 6 ಆಗ ಅಬ್ರಹಾಮನು ತ್ವರೆಯಾಗಿ ಗುಡಾರದಲ್ಲಿದ್ದ ಸಾರಳ ಬಳಿಗೆ ಹೋಗಿ, “ಬೇಗನೇ ಮೂರು ಸೇರು ನಯವಾದ ಹಿಟ್ಟು ನಾದಿ, ಒಲೆಯ ಮೇಲೆ ರೊಟ್ಟಿಗಳನ್ನು ಮಾಡು,” ಎಂದನು. 7 ಅಬ್ರಹಾಮನು ದನದ ಮಂದೆಯ ಬಳಿಗೆ ಓಡಿಹೋಗಿ, ಒಳ್ಳೆಯ ಕರುವನ್ನು ತೆಗೆದುಕೊಂಡು ಒಬ್ಬ ಸೇವಕನಿಗೆ ಕೊಟ್ಟನು. ಆ ಸೇವಕನು ಬೇಗನೆ ಅಡಿಗೆಯನ್ನು ಸಿದ್ಧಪಡಿಸಿದನು. 8 ತರುವಾಯ ಮೊಸರನ್ನೂ, ಹಾಲನ್ನೂ, ಪಕ್ವಮಾಡಿದ ಮಾಂಸವನ್ನೂ ತೆಗೆದುಕೊಂಡು ಅವರ ಮುಂದೆ ಇಟ್ಟನು. ಅವನಾದರೋ ಮರದ ಕೆಳಗೆ ಅವರ ಹತ್ತರ ನಿಂತುಕೊಂಡನು. ಅವರು ಊಟಮಾಡಿದರು. 9 ಅವರು ಅಬ್ರಹಾಮನಿಗೆ, “ನಿನ್ನ ಹೆಂಡತಿ ಸಾರಳು ಎಲ್ಲಿ?” ಎಂದು ಕೇಳಲು,ಅವನು, “ಇಗೋ, ಡೇರೆಯಲ್ಲಿದ್ದಾಳೆ,” ಎಂದನು. 10 ಆಗ ಆ ಮೂವರಲ್ಲಿ ಒಬ್ಬರು, “ಬರುವ ವರ್ಷ ಇದೇ ಸಮಯದಲ್ಲಿ ನಾನು ನಿಶ್ಚಯವಾಗಿ ತಿರುಗಿ ನಿನ್ನ ಬಳಿಗೆ ಬರುವೆನು. ಆಗ ನಿನ್ನ ಹೆಂಡತಿ ಸಾರಳಿಗೆ ಒಬ್ಬ ಮಗನಿರುವನು,” ಎಂದನು.ಸಾರಳು ಅವರ ಹಿಂದೆ ಇದ್ದ ಡೇರೆಯ ಬಾಗಿಲಲ್ಲಿದ್ದು ಅದನ್ನು ಕೇಳಿಸಿಕೊಂಡಳು. 11 ಅಬ್ರಹಾಮನೂ ಸಾರಳೂ ವಯಸ್ಸಾಗಿ, ಮುದುಕರಾಗಿದ್ದರು. ಸಾರಳಿಗೆ ಮಗುವನ್ನು ಹೆರುವ ಕಾಲ ಮುಗಿದು ಹೋಗಿತ್ತು. 12 ಆದ್ದರಿಂದ ಸಾರಳು ತನ್ನೊಳಗೆ ನಕ್ಕು, “ನಾನು ವೃದ್ಧಳಾಗಿದ್ದೇನೆ, ನನ್ನ ಯಜಮಾನನು ಸಹ ಮುದುಕನಾಗಿದ್ದಾನೆ. ಹೀಗಿರುವಲ್ಲಿ ನನ್ನಿಂದ ಮಗುವನ್ನು ಹೆರುವದಾದೀತೇ?” ಎಂದುಕೊಂಡಳು. 13 ಆಗ ಯೆಹೋವ ದೇವರು ಅಬ್ರಹಾಮನಿಗೆ, “ನಾನು ಮುದಿಪ್ರಾಯದವಳಾಗಿ ಮಗುವನ್ನು ಹೆರುವುದು ನಿಜವೋ? ಎಂದುಕೊಂಡು ಸಾರಳು ಏಕೆ ನಕ್ಕಳು? 14 ಯೆಹೋವ ದೇವರಿಗೆ ಅಸಾಧ್ಯವಾದದ್ದು ಯಾವುದಾದರೂ ಇದೆಯೋ? ಬರುವ ವರ್ಷ ಇದೇ ಸಮಯದಲ್ಲಿ ನಾನು ತಿರುಗಿ ನಿನ್ನ ಬಳಿಗೆ ಬರುವೆನು. ಆಗ ಸಾರಳಿಗೆ ಒಬ್ಬ ಮಗನಿರುವನು,” ಎಂದರು. 15 ಆದರೆ ಸಾರಳು ಭಯಪಟ್ಟು, “ನಾನು ನಗಲಿಲ್ಲ,” ಎಂದು ಹೇಳಿ ಸುಳ್ಳಾಡಿದಾಗ,ದೇವರು, “ನೀನು ನಕ್ಕದ್ದು ನಿಜ,” ಎಂದರು. 16 ತರುವಾಯ ಆ ಮನುಷ್ಯರು ಎದ್ದು ಅಲ್ಲಿಂದ ಸೊದೋಮಿನ ಕಡೆಗೆ ನೋಡಿದರು. ಅಬ್ರಹಾಮನು ಅವರನ್ನು ಕಳುಹಿಸಿಕೊಡುವುದಕ್ಕೆ ಅವರ ಸಂಗಡ ಹೋದನು. 17 ಆಗ ಯೆಹೋವ ದೇವರು, “ನಾನು ಮಾಡುವುದನ್ನು ಅಬ್ರಹಾಮನಿಗೆ ಮರೆಮಾಡಲೋ? 18 ಅಬ್ರಹಾಮನು ನಿಶ್ಚಯವಾಗಿ ಬಲವಾದ ದೊಡ್ಡ ಜನಾಂಗವಾಗುವನು, ಅವನ ಮೂಲಕ ಭೂಲೋಕದ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು. 19 ಏಕೆಂದರೆ, ಅವನು ತನ್ನ ಮಕ್ಕಳಿಗೂ ಅವನ ತರುವಾಯ ಅವನ ಮನೆಯವರಿಗೂ ಯೆಹೋವ ದೇವರ ಮಾರ್ಗವನ್ನು ಕೈಗೊಂಡು, ನೀತಿ ನ್ಯಾಯಗಳನ್ನು ಅನುಸರಿಸಬೇಕೆಂದು ಆಜ್ಞಾಪಿಸುವನು. ಆಗ ಯೆಹೋವ ದೇವರಾದ ನಾನು ಅಬ್ರಹಾಮನಿಗೆ ಹೇಳಿದ್ದು ನೆರವೇರುವದು,” ಎಂದುಕೊಂಡರು. 20 ಇದಲ್ಲದೆ ಯೆಹೋವ ದೇವರು, “ಸೊದೋಮ್ ಗೊಮೋರಗಳ ಕೂಗು ದೊಡ್ಡದಾಗಿದೆ. ಅವರ ಪಾಪವೂ ಘೋರವಾಗಿದೆ. 21 ನಾನು ಇಳಿದು ಹೋಗಿ ನನ್ನ ಬಳಿಗೆ ಬಂದ ಆ ಊರಿನವರ ಕೂಗಿನ ಪ್ರಕಾರವೇ, ಅವರು ಮಾಡಿದ್ದಾರೋ, ಇಲ್ಲವೋ, ಎಂದು ನೋಡಿ ತಿಳಿದುಕೊಳ್ಳುವೆನು,” ಎಂದುಕೊಂಡರು. 22 ಆ ಮನುಷ್ಯರು ಅಲ್ಲಿಂದ ತಮ್ಮ ಮುಖಗಳನ್ನು ತಿರುಗಿಸಿಕೊಂಡು, ಸೊದೋಮಿನ ಕಡೆಗೆ ಹೋದರು. ಆದರೆ ಅಬ್ರಹಾಮನು ಇನ್ನೂ ಯೆಹೋವ ದೇವರ ಮುಂದೆ ನಿಂತುಕೊಂಡಿದ್ದನು. 23 ಆಗ ಅಬ್ರಹಾಮನು ಹತ್ತಿರ ಬಂದು, “ದುಷ್ಟರ ಜೊತೆ ನೀತಿವಂತರನ್ನೂ ನಾಶಮಾಡುವಿರೋ? 24 ಒಂದು ವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ, ಅದರೊಳಗಿರುವ ಆ ಐವತ್ತು ನೀತಿವಂತರಿಗೋಸ್ಕರ ಆ ಸ್ಥಳವನ್ನು ಉಳಿಸದೆ ನಾಶಮಾಡುವಿರೋ? 25 ಈ ರೀತಿಯಾಗಿ ನೀತಿವಂತರಿಗೂ ದುಷ್ಟರಿಗೂ ಭೇದ ಮಾಡದೆ, ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವುದು ನಿಮ್ಮಿಂದ ಎಂದಿಗೂ ಆಗಬಾರದು. ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿರುವ ತಾವು ನ್ಯಾಯವಾದದ್ದನ್ನೇ ಮಾಡಬೇಕಲ್ಲವೇ?” ಎಂದನು. 26 ಅದಕ್ಕೆ ಯೆಹೋವ ದೇವರು, “ನನಗೆ ಸೊದೋಮ್ ಪಟ್ಟಣದೊಳಗೆ ಐವತ್ತು ಮಂದಿ ನೀತಿವಂತರು ಸಿಕ್ಕಿದರೆ, ಅವರಿಗೋಸ್ಕರ ಆ ಸ್ಥಳವನ್ನೆಲ್ಲಾ ಉಳಿಸುವೆನು,” ಎಂದರು. 27 ಆಗ ಅಬ್ರಹಾಮನು, “ಇಗೋ, ಮಣ್ಣೂ, ಬೂದಿಯೂ ಆಗಿರುವ ನಾನು ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ಧೈರ್ಯಗೊಂಡಿದ್ದೇನೆ. 28 ಒಂದು ವೇಳೆ ಐವತ್ತು ನೀತಿವಂತರಲ್ಲಿ ಐದು ಮಂದಿ ಕಡಿಮೆ ಇದ್ದರೆ, ಆ ಐದು ಮಂದಿ ಇಲ್ಲದ್ದರಿಂದ ಪಟ್ಟಣವನ್ನು ನಾಶಮಾಡುವಿರೋ?” ಎಂದು ಕೇಳಿದನು.ಅದಕ್ಕೆ ದೇವರು, “ನಲವತ್ತೈದು ಮಂದಿ ಅಲ್ಲಿ ಸಿಕ್ಕಿದರೆ ನಾನು ನಾಶಮಾಡುವುದಿಲ್ಲ,” ಎಂದರು. 29 ಅಬ್ರಹಾಮನು ದೇವರ ಸಂಗಡ ಇನ್ನೂ ಮಾತನಾಡಿ, “ಅಲ್ಲಿ ನಲವತ್ತು ಮಂದಿ ದೊರೆತರೆ, ಏನು ಮಾಡುವಿರಿ?” ಎನ್ನಲು,ಅದಕ್ಕೆ ದೇವರು, “ನಲವತ್ತು ಮಂದಿಗೋಸ್ಕರ ಅದನ್ನು ನಾನು ನಾಶಮಾಡುವುದಿಲ್ಲ,” ಎಂದರು. 30 ಅವನು, “ಯೆಹೋವ ದೇವರಿಗೆ ಕೋಪಬಾರದೆ ಇರಲಿ, ನಾನು ಮಾತನಾಡುತ್ತೇನೆ. ಒಂದು ವೇಳೆ ಅಲ್ಲಿ ಮೂವತ್ತು ಮಂದಿ ಇದ್ದರೆ,” ಎಂದಾಗ,ದೇವರು, “ನನಗೆ ಅಲ್ಲಿ ಮೂವತ್ತು ಮಂದಿ ಸಿಕ್ಕಿದರೆ, ನಾಶಮಾಡುವುದಿಲ್ಲ,” ಎಂದರು. 31 ಅವನು, “ಯೆಹೋವ ದೇವರ ಸಂಗಡ ಮಾತನಾಡುವುದಕ್ಕೆ ಬಂದಿದ್ದೇನೆ. ಒಂದು ವೇಳೆ ಇಪ್ಪತ್ತು ಮಂದಿ ಸಿಕ್ಕಿದರೆ ಏನು ಮಾಡುವಿರಿ?” ಎಂದನು.ಅದಕ್ಕೆ ದೇವರು, “ಇಪ್ಪತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವುದಿಲ್ಲ,” ಎಂದರು. 32 ಆಗ ಅವನು, “ಯೆಹೋವ ದೇವರೇ, ನಿಮಗೆ ಕೋಪಬಾರದೆ ಇರಲಿ. ಇನ್ನು ಒಂದೇ ಸಾರಿ ಮಾತನಾಡುತ್ತೇನೆ. ಒಂದು ವೇಳೆ ಅಲ್ಲಿ ಹತ್ತು ಮಂದಿ ಸಿಕ್ಕಿದರೆ,” ಎಂದಾಗ,ದೇವರು, “ಹತ್ತು ಮಂದಿಗೋಸ್ಕರ ನಾನು ಅದನ್ನು ನಾಶಮಾಡುವುದಿಲ್ಲ,” ಎಂದರು. 33 ಯೆಹೋವ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿದ ಕೂಡಲೆ ಹೊರಟು ಹೋದರು. ಅಬ್ರಹಾಮನು ತನ್ನ ಮನೆಗೆ ಹಿಂದಿರುಗಿದನು.