John 8 (BOKCV2)
1 ಯೇಸುವಾದರೋ ಓಲಿವ್ ಮರಗಳ ಗುಡ್ಡಕ್ಕೆ ಹೋದರು. 2 ಬೆಳಿಗ್ಗೆ ಯೇಸು ತಿರುಗಿ ದೇವಾಲಯಕ್ಕೆ ಬಂದಾಗ ಎಲ್ಲಾ ಜನರು ಅವರ ಬಳಿಗೆ ಬಂದರು. ಯೇಸು ಕುಳಿತುಕೊಂಡು ಅವರಿಗೆ ಬೋಧಿಸಿದರು. 3 ಆಗ ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಸ್ತ್ರೀಯನ್ನು ನಿಯಮ ಬೋಧಕರು ಮತ್ತು ಫರಿಸಾಯರು ಹಿಡಿದು ಯೇಸುವಿನ ಬಳಿಗೆ ತಂದು ಆಕೆಯನ್ನು ನಡುವೆ ನಿಲ್ಲಿಸಿದರು. 4 ಅವರು ಯೇಸುವಿಗೆ, “ಬೋಧಕರೇ, ಈ ಸ್ತ್ರೀ ವ್ಯಭಿಚಾರ ಮಾಡುವಾಗಲೇ ಸಿಕ್ಕಿಬಿದ್ದಳು. 5 ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ನಿಯಮದಲ್ಲಿ ನಮಗೆ ಆಜ್ಞಾಪಿಸಿದ್ದಾನೆ. ಆದ್ದರಿಂದ ನೀವು ಏನು ಹೇಳುತ್ತೀರಿ?” ಎಂದು ಕೇಳಿದರು. 6 ಅವರು ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ತಪ್ಪು ಹೊರಿಸಬೇಕೆಂದೇ ಹೀಗೆ ಕೇಳಿದರು. ಆದರೆ ಯೇಸು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದರು. 7 ಅವರು ಬಿಡದೆ ಪ್ರಶ್ನೆಗಳನ್ನು ಕೇಳುತ್ತಿರಲು ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪವಿಲ್ಲದವನು ಯಾರಿದ್ದಾನೋ ಅವನೇ ಮೊದಲು ಇವಳ ಮೇಲೆ ಕಲ್ಲು ಎಸೆಯಲಿ,” ಎಂದು ಅವರಿಗೆ ಹೇಳಿದರು. 8 ತಿರುಗಿ ಯೇಸು ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು. 9 ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಕಿರಿಯರವರೆಗೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬರೇ ಉಳಿದರು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು. 10 ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಅಮ್ಮಾ ಅವರು ಎಲ್ಲಿದ್ದಾರೆ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೋ?” ಎಂದರು. 11 ಅದಕ್ಕೆ ಆಕೆಯು, “ಸ್ವಾಮಿ, ಯಾರೂ ಶಿಕ್ಷೆ ವಿಧಿಸಲಿಲ್ಲ,” ಎಂದಳು. ಯೇಸು ಆಕೆಗೆ, “ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪ ಮಾಡಬೇಡ,” ಎಂದರು. 12 ಯೇಸು ಪುನಃ ಜನರೊಂದಿಗೆ ಮಾತನಾಡುತ್ತಾ, “ನಾನೇ ಲೋಕದ ಬೆಳಕಾಗಿದ್ದೇನೆ. ನನ್ನನ್ನು ಹಿಂಬಾಲಿಸುವವರು ಎಂದಿಗೂ ಕತ್ತಲೆಯಲ್ಲಿ ನಡೆಯುವುದಿಲ್ಲ. ಅವರು ಜೀವದ ಬೆಳಕನ್ನು ಹೊಂದಿರುವರು,” ಎಂದು ಹೇಳಿದರು. 13 ಫರಿಸಾಯರು ಯೇಸುವಿಗೆ, “ನಿನ್ನ ವಿಷಯವಾಗಿ ನೀನೇ ಸಾಕ್ಷಿ ನೀಡುತ್ತಿರುವೆ, ನಿನ್ನ ಸಾಕ್ಷಿಯು ಸತ್ಯವಾದುದ್ದಲ್ಲ,” ಎಂದು ಹೇಳಿದರು. 14 ಯೇಸು ಅವರಿಗೆ, “ನಾನೇ ನನ್ನ ವಿಷಯವಾಗಿ ನಾನು ಸಾಕ್ಷಿ ನೀಡಿದರೂ ನನ್ನ ಸಾಕ್ಷಿ ಸತ್ಯವಾದದ್ದು. ಏಕೆಂದರೆ ನಾನು ಎಲ್ಲಿಂದ ಬಂದೆ ಮತ್ತು ಎಲ್ಲಿಗೆ ಹೋಗುತ್ತೇನೆಂದು ನನಗೆ ತಿಳಿದಿದೆ. ಆದರೆ ನಾನು ಎಲ್ಲಿಂದ ಬಂದೆ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ನಿಮಗೆ ತಿಳಿಯದು. 15 ನೀವು ಮಾನವ ರೀತಿಯಲ್ಲಿ ತೀರ್ಪು ಮಾಡುತ್ತೀರಿ. ನಾನು ಯಾರಿಗೂ ತೀರ್ಪು ಮಾಡುವುದಿಲ್ಲ. 16 ನಾನು ತೀರ್ಪು ಮಾಡಿದರೂ ನನ್ನ ತೀರ್ಪು ಸತ್ಯವಾದದ್ದೇ. ಏಕೆಂದರೆ ನಾನು ಒಂಟಿಗನಲ್ಲ. ನಾನೂ ನನ್ನನ್ನು ಕಳುಹಿಸಿದ ತಂದೆಯೂ ಇದ್ದೇವೆ. 17 ‘ಇಬ್ಬರ ಸಾಕ್ಷಿಯು ಸತ್ಯವಾದದ್ದು’ ಎಂದು ನಿಮ್ಮ ನಿಯಮದಲ್ಲಿಯೇ ಬರೆದಿದೆ. 18 ನನ್ನ ವಿಷಯವಾಗಿ ಸಾಕ್ಷಿ ನೀಡುವವನು ನಾನೇ ಮತ್ತು ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿ ನೀಡುತ್ತಾರೆ,” ಎಂದರು. 19 ಆಗ ಅವರು, “ನಿನ್ನ ತಂದೆ ಎಲ್ಲಿ?” ಎಂದರು.ಅದಕ್ಕೆ ಯೇಸು ಅವರಿಗೆ, “ನೀವು ನನ್ನನ್ನಾಗಲಿ ನನ್ನ ತಂದೆಯನ್ನಾಗಲಿ ತಿಳಿದಿಲ್ಲ, ನೀವು ನನ್ನನ್ನು ತಿಳಿದಿದ್ದರೆ ನನ್ನ ತಂದೆಯನ್ನು ಸಹ ತಿಳಿಯುತ್ತಿದ್ದೀರಿ,” ಎಂದು ಉತ್ತರಕೊಟ್ಟರು. 20 ಯೇಸು ದೇವಾಲಯದ ಕಾಣಿಕೆ ಪೆಟ್ಟಿಗೆಗಳನ್ನಿಟ್ಟ ಸ್ಥಳದಲ್ಲಿ ಬೋಧಿಸುತ್ತಿದ್ದಾಗ ಈ ಮಾತುಗಳನ್ನು ಹೇಳಿದರು. ಆದರೆ ಯೇಸುವಿನ ಸಮಯ ಇನ್ನೂ ಬಾರದಿದ್ದ ಕಾರಣ ಯಾರೂ ಅವರನ್ನು ಬಂಧಿಸಲಿಲ್ಲ. 21 ಯೇಸು ತಿರುಗಿ ಅವರಿಗೆ, “ನಾನು ಹೊರಟುಹೋಗುತ್ತೇನೆ. ನೀವು ನನ್ನನ್ನು ಹುಡುಕುವಿರಿ ಮತ್ತು ನಿಮ್ಮ ಪಾಪದಲ್ಲೇ ನೀವು ಸಾಯುವಿರಿ. ನಾನು ಹೋಗುವಲ್ಲಿಗೆ ನೀವು ಬರಲಾರಿರಿ,” ಎಂದರು. 22 ಅದಕ್ಕೆ ಯೆಹೂದ್ಯರು, “ಈತನು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದಾನೋ? ಏಕೆಂದರೆ, ‘ನಾನು ಹೋಗುವಲ್ಲಿಗೆ ನೀವು ಬರಲಾರಿರಿ,’ ಎಂದು ಹೇಳುತ್ತಾನಲ್ಲಾ?” ಎಂದರು. 23 ಯೇಸು ಅವರಿಗೆ, “ನೀವು ಕೆಳಗಿನವರು, ನಾನು ಮೇಲಿನವನು. ನೀವು ಈ ಲೋಕದವರು, ನಾನು ಈ ಲೋಕದವನಲ್ಲ. 24 ಆದ್ದರಿಂದ, ‘ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ,’ ಎಂದು ನಾನು ನಿಮಗೆ ಹೇಳಿದೆನು. ಏಕೆಂದರೆ ನೀವು ನನ್ನನ್ನು ನಂಬದೆ ಹೋದರೆ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ,” ಎಂದು ಹೇಳಿದರು. 25 ಅವರು ಯೇಸುವಿಗೆ, “ನೀನು ಯಾರು?” ಎಂದರು.ಅದಕ್ಕೆ ಯೇಸು ಅವರಿಗೆ, “ಮೊದಲಿನಿಂದ ನಾನು ನಿಮಗೆ ಹೇಳಿದಂತವನೇ. 26 ನಿಮ್ಮ ವಿಷಯವಾಗಿ ಮಾತನಾಡುವುದಕ್ಕೂ ತೀರ್ಪುಮಾಡುವುದಕ್ಕೂ ನನಗೆ ಅನೇಕ ವಿಷಯಗಳಿವೆ. ಆದರೆ ನನ್ನನ್ನು ಕಳುಹಿಸಿದ ತಂದೆಯು ಸತ್ಯವಂತರು. ನಾನು ಅವರಿಂದ ಕೇಳಿದವುಗಳನ್ನು ಮಾತ್ರವೇ ಲೋಕಕ್ಕೆ ಹೇಳುತ್ತೇನೆ,” ಎಂದರು. 27 ಯೇಸು ತಂದೆಯ ವಿಷಯವಾಗಿ ಅವರೊಂದಿಗೆ ಮಾತನಾಡಿದರೆಂದು ಅವರು ತಿಳಿಯಲಿಲ್ಲ. 28 ಯೇಸು ಅವರಿಗೆ, “ಮನುಷ್ಯಪುತ್ರನಾದ ನನ್ನನ್ನು ನೀವು ಮೇಲಕ್ಕೇರಿಸಿದಾಗ ‘ನಾನೇ ಆತನು’ ಎಂದು ನಿಮಗೆ ತಿಳಿಯುವುದು. ನನ್ನಷ್ಟಕ್ಕೆ ನಾನೇ ಏನೂ ಮಾಡದೆ ನನ್ನ ತಂದೆಯು ನನಗೆ ಬೋಧಿಸಿದಂತೆ ನಾನು ಈ ಸಂಗತಿಗಳನ್ನು ಮಾತನಾಡುತ್ತೇನೆ ಎಂದೂ ನೀವು ತಿಳಿದುಕೊಳ್ಳುವಿರಿ. 29 ನನ್ನನ್ನು ಕಳುಹಿಸಿದ ತಂದೆ ನನ್ನ ಸಂಗಡ ಇದ್ದಾರೆ. ಅವರು ನನ್ನನ್ನು ಒಬ್ಬಂಟಿಗನನ್ನಾಗಿ ಬಿಡಲಿಲ್ಲ, ಏಕೆಂದರೆ ಅವರಿಗೆ ಮೆಚ್ಚಿದವುಗಳನ್ನೇ ನಾನು ಯಾವಾಗಲೂ ಮಾಡುತ್ತೇನೆ,” ಎಂದರು. 30 ಯೇಸು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಅವರಲ್ಲಿ ನಂಬಿಕೆಯಿಟ್ಟರು. 31 ಯೇಸು ತಮ್ಮನ್ನು ನಂಬಿದ್ದ ಯೆಹೂದ್ಯರಿಗೆ ಹೇಳಿದ್ದೇನೆಂದರೆ, “ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿದ್ದರೆ ನಿಜವಾಗಿಯೂ ನೀವು ನನ್ನ ಶಿಷ್ಯರಾಗುವಿರಿ. 32 ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಸತ್ಯವು ನಿಮ್ಮನ್ನು ಸ್ವತಂತ್ರರಾಗಿ ಮಾಡುವುದು,” ಎಂದು ಹೇಳಿದರು. 33 ಅದಕ್ಕೆ ಅವರು ಯೇಸುವಿಗೆ, “ನಾವು ಅಬ್ರಹಾಮನ ಸಂತತಿಯವರು, ನಾವು ಯಾರಿಗೂ ಎಂದೂ ಗುಲಾಮರಾಗಿರಲಿಲ್ಲ. ನೀವು ಸ್ವತಂತ್ರರಾಗುವಿರಿ ಎಂದು ನೀನು ಹೇಳುವುದು ಹೇಗೆ?” ಎಂದು ಕೇಳಿದರು. 34 ಅದಕ್ಕೆ ಯೇಸು ಉತ್ತರವಾಗಿ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಪಾಪ ಮಾಡುವವರು ಪಾಪಕ್ಕೆ ಗುಲಾಮರಾಗಿದ್ದಾರೆ. 35 ಗುಲಾಮರು ಕುಟುಂಬದಲ್ಲಿ ಶಾಶ್ವತವಾಗಿ ಇರುವುದಿಲ್ಲ. ಆದರೆ ಪುತ್ರನು ಶಾಶ್ವತವಾಗಿ ಇರುತ್ತಾನೆ. 36 ಆದ್ದರಿಂದ ದೇವಪುತ್ರನು ನಿಮ್ಮನ್ನು ಬಿಡುಗಡೆ ಮಾಡಿದರೆ, ನಿಜವಾಗಿ ನೀವು ಬಿಡುಗಡೆಯಾಗುವಿರಿ. 37 ನೀವು ಅಬ್ರಹಾಮನ ಸಂತತಿಯವರೆಂದು ನಾನು ಬಲ್ಲೆನು. ಆದರೆ ನಿಮ್ಮಲ್ಲಿ ನನ್ನ ವಾಕ್ಯಕ್ಕೆ ಸ್ಥಳವಿಲ್ಲದ ಕಾರಣ ನೀವು ನನ್ನನ್ನು ಕೊಲ್ಲಲು ಹುಡುಕುತ್ತೀರಿ. 38 ನಾನು ತಂದೆಯ ಬಳಿಯಲ್ಲಿ ಕಂಡದ್ದನ್ನೇ ಮಾತನಾಡುತ್ತೇನೆ. ನೀವಾದರೋ ನಿಮ್ಮ ತಂದೆಯಿಂದ ಕೇಳಿದ್ದನ್ನು ಮಾಡುತ್ತೀರಿ,” ಎಂದರು. 39 ಯೆಹೂದ್ಯರು ಯೇಸುವಿಗೆ, “ಅಬ್ರಹಾಮನು ನಮ್ಮ ತಂದೆ,” ಎಂದರು.ಅದಕ್ಕೆ ಯೇಸು ಅವರಿಗೆ, “ನೀವು ಅಬ್ರಹಾಮನ ಮಕ್ಕಳಾಗಿದ್ದರೆ ಅಬ್ರಹಾಮನು ಮಾಡಿದ ಕ್ರಿಯೆಗಳನ್ನೇ ಮಾಡುತ್ತಿದ್ದಿರಿ. 40 ಆದರೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದ ನನ್ನನ್ನು ಈಗ ಕೊಲ್ಲಲು ಪ್ರಯತ್ನಿಸುತ್ತೀರಿ. ಇಂತಹ ಕ್ರಿಯೆಗಳನ್ನು ಅಬ್ರಹಾಮನು ಮಾಡಲಿಲ್ಲ. 41 ನೀವು ನಿಮ್ಮ ತಂದೆಯ ಕ್ರಿಯೆಗಳನ್ನು ಮಾಡುತ್ತೀರಿ,” ಎಂದರು.ಅದಕ್ಕವರು, “ನಾವು ಅನೈತಿಕತೆಯಿಂದ ಹುಟ್ಟಿದವರಲ್ಲ. ನಮಗೆ ದೇವರೇ ತಂದೆ,” ಎಂದು ಪ್ರತಿಭಟಿಸಿದರು. 42 ಯೇಸು ಅವರಿಗೆ, “ದೇವರು ನಿಮ್ಮ ತಂದೆಯಾಗಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ. ಏಕೆಂದರೆ ನಾನು ದೇವರಿಂದ ಹೊರಟು ಬಂದಿದ್ದೇನೆ. ನಾನು ನನ್ನಷ್ಟಕ್ಕೆ ಬರಲಿಲ್ಲ. ಆದರೆ ದೇವರೇ ನನ್ನನ್ನು ಕಳುಹಿಸಿದ್ದು. 43 ನೀವು ನನ್ನ ಮಾತನ್ನು ಅರ್ಥಮಾಡಿಕೊಳ್ಳದಿರುವುದು ಯಾಕೆ? ನಾನು ಹೇಳುವುದನ್ನು ನೀವು ಕೇಳದೇ ಇರುವುದೇ ಇದಕ್ಕೆ ಕಾರಣ. 44 ನೀವು ನಿಮ್ಮ ತಂದೆಯಾದ ಪಿಶಾಚನಿಗೆ ಸೇರಿದವರಾಗಿದ್ದೀರಿ. ನಿಮ್ಮ ತಂದೆಯ ಆಶೆಗಳನ್ನೇ ನೀವು ಮಾಡಬಯಸುತ್ತೀರಿ. ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯದಲ್ಲಿ ನಿಲ್ಲಲಿಲ್ಲ. ಏಕೆಂದರೆ ಅವನಲ್ಲಿ ಸತ್ಯವೇ ಇಲ್ಲ. ಅವನು ಸುಳ್ಳಾಡುವಾಗ ತನ್ನ ಸ್ವಭಾವಾನುಸಾರವಾಗಿ ಆಡುತ್ತಾನೆ. ಅವನು ಸುಳ್ಳುಗಾರನೂ ಸುಳ್ಳಿನ ತಂದೆಯೂ ಆಗಿದ್ದಾನೆ. 45 ಆದರೆ ನಾನು ಸತ್ಯವನ್ನು ಹೇಳುವವನಾದ್ದರಿಂದ ನೀವು ನನ್ನನ್ನು ನಂಬುವುದಿಲ್ಲ. 46 ನನ್ನಲ್ಲಿ ಪಾಪವಿದೆಯೆಂದು ರುಜುವಾತು ಪಡಿಸುವವರು ನಿಮ್ಮಲ್ಲಿ ಯಾರಿದ್ದಾರೆ? ನಾನು ಸತ್ಯವನ್ನೇ ಹೇಳುವುದಾದರೆ ನೀವು ನನ್ನನ್ನು ಏಕೆ ನಂಬುವುದಿಲ್ಲ? 47 ದೇವರಿಗೆ ಸೇರಿದವನು ದೇವರ ವಾಕ್ಯಕ್ಕೆ ಕಿವಿಗೊಡುತ್ತಾನೆ. ನೀವು ದೇವರಿಗೆ ಸೇರಿದವರಲ್ಲ. ಆದ್ದರಿಂದ ನೀವು ಕಿವಿಗೊಡುವುದಿಲ್ಲ,” ಎಂದು ಹೇಳಿದರು. 48 ಅದಕ್ಕೆ ಯೆಹೂದಿ ನಾಯಕರು ಯೇಸುವಿಗೆ, “ನೀನು ಸಮಾರ್ಯದವನು ಮತ್ತು ನಿನಗೆ ದೆವ್ವ ಹಿಡಿದಿದೆ ಎಂದು ನಾವು ಹೇಳುವುದು ಸರಿಯಲ್ಲವೇ?” ಎಂದು ಕೇಳಿದರು. 49 ಅದಕ್ಕೆ ಯೇಸು, “ನನಗೆ ದೆವ್ವ ಹಿಡಿದಿಲ್ಲ. ಆದರೆ ನನ್ನ ತಂದೆಯನ್ನು ಸನ್ಮಾನಿಸುತ್ತೇನೆ. ನೀವು ನನ್ನನ್ನು ಅವಮಾನಪಡಿಸುತ್ತೀರಿ. 50 ನಾನು ನನ್ನ ಮಹಿಮೆಯನ್ನು ಹುಡುಕುವುದಿಲ್ಲ. ನನಗೆ ಮಹಿಮೆಯನ್ನು ಹುಡುಕುವವರು ಒಬ್ಬರಿದ್ದಾರೆ ಅವರೇ ನ್ಯಾಯತೀರಿಸುವವರು. 51 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಯಾರು ನನ್ನ ಮಾತನ್ನು ಪಾಲಿಸುತ್ತಾರೋ ಅವರು ಎಂದೆಂದಿಗೂ ಮರಣವನ್ನು ಕಾಣುವುದಿಲ್ಲ,” ಎಂದರು. 52 ಆಗ ಯೆಹೂದಿ ನಾಯಕರು ಯೇಸುವಿಗೆ, “ನಿನಗೆ ದೆವ್ವ ಹಿಡಿದಿದೆ ಎಂದು ನಮಗೆ ಈಗ ತಿಳಿಯಿತು. ಅಬ್ರಹಾಮನು ಮತ್ತು ಪ್ರವಾದಿಗಳು ಸತ್ತರು. ಆದರೆ, ‘ಯಾರಾದರೂ ನನ್ನ ಮಾತನ್ನು ಪಾಲಿಸಿದರೆ ಅವರು ಎಂದೆಂದಿಗೂ ಮರಣ ಹೊಂದುವುದಿಲ್ಲ,’ ಎಂದು ನೀನು ಹೇಳುತ್ತೀಯಲ್ಲಾ? 53 ಸತ್ತು ಹೋದ ನಮ್ಮ ತಂದೆ ಅಬ್ರಹಾಮನಿಗಿಂತಲೂ ನೀನು ದೊಡ್ಡವನೋ? ಪ್ರವಾದಿಗಳೂ ಸತ್ತುಹೋದರು. ನೀನು ನಿನ್ನನ್ನು ಯಾರನ್ನಾಗಿ ಮಾಡಿಕೊಂಡಿರುವೆ?” ಎಂದು ಕೇಳಿದರು. 54 ಯೇಸು, “ನನ್ನನ್ನು ನಾನೇ ಮಹಿಮೆಪಡಿಸಿಕೊಂಡರೆ ನನ್ನ ಮಹಿಮೆಯು ಏನೂ ಅಲ್ಲ. ನೀವು ಯಾರನ್ನು, ‘ಅವರೇ ನಮ್ಮ ದೇವರು’ ಎಂದು ಹೇಳುತ್ತೀರೋ ಆ ನನ್ನ ತಂದೆಯೇ ನನ್ನನ್ನು ಮಹಿಮೆ ಪಡಿಸುವವರು. 55 ನೀವು ಅವರನ್ನು ಅರಿತುಕೊಂಡಿಲ್ಲ; ಆದರೆ ನಾನು ಅವರನ್ನು ಅರಿತಿದ್ದೇನೆ. ನಾನು ಅವರನ್ನು ಅರಿಯಲಿಲ್ಲವೆಂದು ಹೇಳಿದರೆ ನಿಮ್ಮ ಹಾಗೆ ನಾನೂ ಸುಳ್ಳುಗಾರನಾಗುವೆನು. ಆದರೆ ನಾನು ಅವರನ್ನು ಅರಿತಿದ್ದೇನೆ. ಅವರ ಮಾತನ್ನು ಪಾಲಿಸುತ್ತೇನೆ. 56 ನಿಮ್ಮ ತಂದೆ ಅಬ್ರಹಾಮನು ನನ್ನ ದಿನವನ್ನು ಕಾಣುವನೆಂದು ಆನಂದಿಸಿದನು ಮತ್ತು ಅದನ್ನು ಕಂಡು ಉಲ್ಲಾಸಪಟ್ಟನು,” ಎಂದು ಹೇಳಿದರು. 57 ಆಗ ಯೆಹೂದಿ ನಾಯಕರು ಯೇಸುವಿಗೆ, “ನಿನಗೆ ಇನ್ನೂ ಐವತ್ತು ವರ್ಷವಾಗಿಲ್ಲ, ನೀನು ಅಬ್ರಹಾಮನನ್ನು ಕಂಡಿದ್ದೀಯಾ?” ಎಂದರು. 58 ಯೇಸು ಅವರಿಗೆ, “ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನು ಹುಟ್ಟುವುದಕ್ಕಿಂತ ಮುಂಚೆಯೇ ನಾನು ಇದ್ದೇನೆ,” ಎಂದರು. 59 ಆಗ ಅವರು ಯೇಸುವಿನ ಮೇಲೆ ಎಸೆಯಲು ಕಲ್ಲುಗಳನ್ನು ಎತ್ತಿಕೊಂಡರು. ಆದರೆ ಯೇಸು ಅಡಗಿಕೊಂಡು ದೇವಾಲಯದೊಳಗಿಂದ ಹೊರಟು ಹೋದರು.