Job 1 (BOKCV2)
1 ಊಚ್ ದೇಶದಲ್ಲಿ ಯೋಬ ಎಂಬ ಮನುಷ್ಯನಿದ್ದನು. ಅವನು ನಿರ್ದೋಷಿಯೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೆಟ್ಟದ್ದನ್ನು ತೊರೆಯುವವನೂ ಆಗಿದ್ದನು. 2 ಅವನಿಗೆ ಏಳುಮಂದಿ ಪುತ್ರರೂ ಮೂರು ಮಂದಿ ಪುತ್ರಿಯರೂ ಇದ್ದರು. 3 ಅವನಿಗೆ ಏಳು ಸಾವಿರ ಕುರಿಗಳು, ಮೂರು ಸಾವಿರ ಒಂಟೆಗಳು, ಐನೂರು ಜೋಡಿ ಎತ್ತುಗಳು, ಐನೂರು ಕತ್ತೆಗಳು ಮತ್ತು ಅನೇಕ ಕೆಲಸಗಾರರಿದ್ದರು. ಅವನು ಪೂರ್ವದೇಶದ ಜನರೆಲ್ಲರಲ್ಲಿಯೇ ಹೆಚ್ಚು ಐಶ್ವರ್ಯವುಳ್ಳವನಾಗಿದ್ದನು. 4 ಅವನ ಪುತ್ರರು ಒಂದೊಂದು ದಿನ ಒಬ್ಬೊಬ್ಬನ ಮನೆಯಲ್ಲಿ ಔತಣವನ್ನು ಏರ್ಪಡಿಸಿ, ತಮ್ಮ ಸಂಗಡ ಊಟಮಾಡುವದಕ್ಕೆ ತಮ್ಮ ಮೂವರು ಸಹೋದರಿಯರನ್ನು ಆಹ್ವಾನಿಸುತ್ತಿದ್ದರು. 5 ಔತಣದ ದಿನಗಳು ಮುಗಿದ ಬಳಿಕ, ಯೋಬನು, “ಬಹುಶಃ ನನ್ನ ಮಕ್ಕಳು ಪಾಪಮಾಡಿ, ಮನದಲ್ಲೇ ದೇವರನ್ನು ದೂಷಿಸಿರಬಹುದು,” ಎಂದುಕೊಂಡು, ಅವರನ್ನು ಶುದ್ಧಿಗೊಳಿಸಲು ವ್ಯವಸ್ಥೆ ಮಾಡುತ್ತಿದ್ದನು. ಬೆಳಿಗ್ಗೆ ಎದ್ದು ಪ್ರತಿಯೊಬ್ಬರಿಗಾಗಿ ದಹನಬಲಿಗಳನ್ನು ಅರ್ಪಿಸುತ್ತಿದ್ದನು. ಇದು ಯೋಬನ ದೈನಂದಿನ ವಾಡಿಕೆಯಾಗಿತ್ತು. 6 ಒಂದು ದಿನ, ದೇವದೂತರು ಯೆಹೋವ ದೇವರ ಮುಂದೆ ಒಟ್ಟಾಗಿ ಸೇರಿಬಂದಾಗ, ಸೈತಾನನು ಸಹ ಅವರೊಂದಿಗೆ ಸೇರಿಬಂದನು. 7 ಯೆಹೋವ ದೇವರು ಸೈತಾನನಿಗೆ, “ನೀನು ಎಲ್ಲಿಂದ ಬಂದೆ?” ಎಂದು ಕೇಳಿದರು.ಸೈತಾನನು ಯೆಹೋವ ದೇವರಿಗೆ, “ಭೂಲೋಕದಲ್ಲಿ ಸಂಚರಿಸುತ್ತಾ, ಅಲ್ಲಲ್ಲಿ ತಿರುಗಾಡುತ್ತಾ ಇದ್ದು ಬಂದೆನು,” ಎಂದನು. 8 ಆಗ ಯೆಹೋವ ದೇವರು ಸೈತಾನನಿಗೆ, “ನನ್ನ ಸೇವಕ ಯೋಬನನ್ನು ಗಮನಿಸಿದೆಯಾ? ಅವನು ನಿರ್ದೋಷಿಯೂ ಯಥಾರ್ಥನೂ ದೇವರಿಗೆ ಭಯಪಡುವವನೂ ಕೇಡನ್ನು ತೊರೆಯುವವನೂ ಆಗಿದ್ದಾನೆ. ಅವನ ಹಾಗೆ ಭೂಲೋಕದಲ್ಲಿ ಒಬ್ಬರೂ ಇಲ್ಲ,” ಎಂದರು. 9 ಆಗ ಸೈತಾನನು ಉತ್ತರವಾಗಿ ಯೆಹೋವ ದೇವರಿಗೆ, “ಲಾಭವಿಲ್ಲದೆ ಯೋಬನು ದೇವರಲ್ಲಿ ಭಯಭಕ್ತಿಯಿಟ್ಟಿದ್ದಾನೋ? 10 ನೀವು ಅವನಿಗೂ ಅವನ ಮನೆಗೂ ಅವನಲ್ಲಿ ಇರುವ ಎಲ್ಲವುಗಳ ಸುತ್ತಲು ಬೇಲಿ ಹಾಕಿದ್ದೀರಲ್ಲಾ? ಅವನು ಕೈಹಾಕಿದ ಕೆಲಸವನ್ನು ನೀವು ಆಶೀರ್ವದಿಸಿದ್ದೀರಿ, ಆದ್ದರಿಂದ ಅವನ ಕುರಿದನಗಳ ಹಿಂಡುಗಳು ಭೂಮಿಯ ಮೇಲೆಲ್ಲಾ ಹರಡುತ್ತಾ ಬಂದಿದೆ. 11 ಆದರೆ ನಿಮ್ಮ ಕೈಚಾಚಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡಿರಿ, ಆಗ ಅವನು ನಿಮ್ಮನ್ನು ಮುಖಾಮುಖಿಯಾಗಿ ಶಪಿಸುವನು,” ಎಂದನು. 12 ಯೆಹೋವ ದೇವರು ಸೈತಾನನಿಗೆ, “ಅವನಲ್ಲಿರುವ ಎಲ್ಲವೂ ನಿನ್ನ ಅಧಿಕಾರದಲ್ಲಿ ಇವೆ. ಆದರೆ ಅವನ ಮೇಲೆ ಮಾತ್ರ ನಿನ್ನ ಕೈ ಹಾಕಬೇಡ,” ಎಂದರು.ಆಗ ಸೈತಾನನು ಯೆಹೋವ ದೇವರ ಸನ್ನಿಧಾನದಿಂದ ಹೊರಟುಹೋದನು. 13 ಒಂದು ದಿನ ಯೋಬನ ಪುತ್ರಪುತ್ರಿಯರು ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ದ್ರಾಕ್ಷಾರಸವನ್ನು ಕುಡಿಯುತ್ತಾ ಔತಣಮಾಡುತ್ತಿದ್ದರು. 14 ಒಬ್ಬ ದೂತನು ಯೋಬನ ಬಳಿಗೆ ಬಂದು, “ಎತ್ತುಗಳು ಉಳುಮೆ ಮಾಡುತ್ತಾ ಇದ್ದವು. ಹೆಣ್ಣು ಕತ್ತೆಗಳು ಹತ್ತಿರದಲ್ಲೆ ಮೇಯುತ್ತಾ ಇದ್ದವು. 15 ಶೆಬದವರು ಅವುಗಳ ಮೇಲೆ ದಾಳಿಮಾಡಿ, ಅವುಗಳನ್ನು ತೆಗೆದುಕೊಂಡು ಹೋದರು. ಸೇವಕರನ್ನು ಸಹ ಖಡ್ಗದಿಂದ ಸಂಹರಿಸಿದರು. ನಾನೊಬ್ಬನು ಮಾತ್ರ ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ,” ಎಂದನು. 16 ಅವನು ಇನ್ನೂ ಮಾತನಾಡುತ್ತಿರಲು ಮತ್ತೊಬ್ಬ ದೂತನು ಬಂದು, “ದೇವರ ಬೆಂಕಿ ಆಕಾಶದಿಂದ ಬಿದ್ದು ಕುರಿಗಳನ್ನೂ ಸೇವಕರನ್ನೂ ಸುಟ್ಟುಹಾಕಿತು. ನಾನೊಬ್ಬನು ಮಾತ್ರ ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ,” ಎಂದನು. 17 ಇವನು ಇನ್ನೂ ಮಾತನಾಡುತ್ತಿರಲು, ಇನ್ನೊಬ್ಬ ದೂತನು ಬಂದು, “ಕಸ್ದೀಯರು ಮೂರು ಗುಂಪುಗಳಾಗಿ ಬಂದು, ಒಂಟೆಗಳ ಮೇಲೆ ದಾಳಿಮಾಡಿ, ಅವುಗಳನ್ನು ತೆಗೆದುಕೊಂಡು ಹೋದರು. ಆಳುಗಳನ್ನು ಖಡ್ಗದಿಂದ ಸಂಹರಿಸಿದರು. ನಾನೊಬ್ಬನು ಮಾತ್ರ ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ,” ಎಂದನು. 18 ಇವನು ಇನ್ನೂ ಮಾತನಾಡುತ್ತಿರಲು, ಮತ್ತೊಬ್ಬ ದೂತನು ಬಂದು, “ನಿನ್ನ ಪುತ್ರ ಪುತ್ರಿಯರೂ ತಮ್ಮ ಹಿರಿಯ ಅಣ್ಣನ ಮನೆಯಲ್ಲಿ ದ್ರಾಕ್ಷಾರಸ ಕಡಿಯುತ್ತಾ ಔತಣ ಮಾಡುತ್ತಿರುವಾಗ, 19 ಇದ್ದಕ್ಕಿದ್ದಂತೆ ಮರುಭೂಮಿ ಕಡೆಯಿಂದ ದೊಡ್ಡ ಗಾಳಿ ಬೀಸಿ, ಮನೆಯ ನಾಲ್ಕು ಮೂಲೆಗಳಿಗೆ ಬಡಿಯಿತು. ಮನೆಯು ಯೌವನಸ್ಥರ ಮೇಲೆ ಬಿತ್ತು, ಅವರು ಸತ್ತುಹೋದರು. ನಾನೊಬ್ಬನು ಮಾತ್ರ, ನಿನಗೆ ತಿಳಿಸಲು ತಪ್ಪಿಸಿಕೊಂಡು ಬಂದಿದ್ದೇನೆ,” ಎಂದನು. 20 ಆಗ ಯೋಬನು ಎದ್ದು ತನ್ನ ಮೇಲಂಗಿಯನ್ನು ಹರಿದುಕೊಂಡನು. ನಂತರ ತನ್ನ ತಲೆ ಬೋಳಿಸಿಕೊಂಡು, ನೆಲಕ್ಕೆ ಬಿದ್ದು ಸಾಷ್ಟಾಂಗವೆರಗಿ, 21 ಹೀಗೆ ಹೇಳಿದನು: “ಬೆತ್ತಲೆಯಾಗಿ ನನ್ನ ತಾಯಿಯ ಗರ್ಭದಿಂದ ಬಂದೆನು,ಬೆತ್ತಲೆಯಾಗಿ ಗತಿಸಿ ಹೋಗುವೆನು.ಯೆಹೋವ ದೇವರು ಕೊಟ್ಟರು, ಯೆಹೋವ ದೇವರು ತೆಗೆದುಕೊಂಡರು;ಯೆಹೋವ ದೇವರ ನಾಮಕ್ಕೆ ಸ್ತೋತ್ರವಾಗಲಿ.” 22 ಇದೆಲ್ಲದರಲ್ಲಿಯೂ ಯೋಬನು ಪಾಪಮಾಡಲಿಲ್ಲ. ದೇವರ ಮೇಲೆ ತಪ್ಪು ಹೊರಿಸಲಿಲ್ಲ.