2 Kings 23 (IRVK)
1 ಅನಂತರ ಅರಸನು ದೂತರ ಮುಖಾಂತರವಾಗಿ ಯೆರೂಸಲೇಮಿನ ಮತ್ತು ಯೆಹೂದ ಪ್ರಾಂತ್ಯಗಳಲ್ಲಿರುವ ಎಲ್ಲಾ ಊರುಗಳ ಹಿರಿಯರನ್ನು ತನ್ನ ಬಳಿಗೆ ಕರೆಯಿಸಿದನು. 2 ಅರಸನು ಯೆರೂಸಲೇಮಿನವರನ್ನೂ, ಎಲ್ಲಾ ಯೆಹೂದ್ಯರನ್ನೂ, ಯಾಜಕರನ್ನೂ, ಪ್ರವಾದಿಗಳನ್ನೂ ಕರೆದುಕೊಂಡು ಯೆಹೋವನ ಆಲಯಕ್ಕೆ ಹೋದನು. ಚಿಕ್ಕವರು ಮೊದಲುಗೊಂಡು ದೊಡ್ಡವರವರೆಗೆ ಎಲ್ಲರೂ ಅವನನ್ನು ಹಿಂಬಾಲಿಸಿದರು. ಅಲ್ಲಿ ಅವನು ಎಲ್ಲರಿಗೂ ಕೇಳಿಸುವಂತೆ ಯೆಹೋವನ ಆಲಯದಲ್ಲಿ ಸಿಕ್ಕಿದ ಒಡಂಬಡಿಕೆಯ ನಿಬಂಧನ ಗ್ರಂಥವನ್ನು ಸಂಪೂರ್ಣವಾಗಿ ಓದಿಸಿದನು. 3 ಅರಸನು ಕಂಬದ ಬಳಿಯಲ್ಲಿ ನಿಂತು, ತಾನು ಯೆಹೋವನ ಮಾರ್ಗದಲ್ಲಿ ನಡೆಯುವುದಾಗಿಯೂ, ಆತನ ಆಜ್ಞಾನಿಯಮ, ವಿಧಿಗಳನ್ನು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ, ಕೈಕೊಳ್ಳುವುದಾಗಿಯೂ ಆ ಒಡಂಬಡಿಕೆಯ ನಿಬಂಧನ ಗ್ರಂಥದಲ್ಲಿ ಬರೆದಿರುವ ಎಲ್ಲಾ ವಾಕ್ಯಗಳನ್ನು ನೆರವೇರಿಸುವುದಾಗಿಯೂ ಯೆಹೋವನಿಗೆ ಎಲ್ಲಾ ಜನರ ಎದುರು ಪ್ರಮಾಣ ಮಾಡಿದನು. 4 ತರುವಾಯ ಅರಸನು ಮಹಾಯಾಜಕನಾದ ಹಿಲ್ಕೀಯನಿಗೆ, ಅವನ ಕೈಕೆಳಗಿರುವ ಯಾಜಕರ ಮತ್ತು ದ್ವಾರಪಾಲಕರ ಮುಖಾಂತರವಾಗಿ ಬಾಳ್, ಅಶೇರ್ ಎಂಬ ದೇವತೆಗಳಿಗಾಗಿಯೂ, ಆಕಾಶಸೈನ್ಯಗಳಿಗಾಗಿಯೂ, ಉಪಯೋಗಿಸುತ್ತಿದ್ದ ಎಲ್ಲಾ ಸಾಮಾನುಗಳನ್ನು ಯೆಹೋವನ ಆಲಯದಿಂದ ತರಿಸಿ ಯೆರೂಸಲೇಮಿನ ಹೊರಗಿರುವ ಕಿದ್ರೋನ್ ಬಯಲಿನಲ್ಲಿ ಅವುಗಳನ್ನು ಸುಟ್ಟು ಬೂದಿಯನ್ನು ಬೇತೇಲಿಗೆ ಕಳುಹಿಸಿದನು. 5 ಇದಲ್ಲದೆ, ಯೆಹೂದ ಪ್ರಾಂತ್ಯದ ಪಟ್ಟಣಗಳಲ್ಲಿಯೂ, ಯೆರೂಸಲೇಮಿನ ಸುತ್ತಣ ಪ್ರದೇಶಗಳಲ್ಲಿಯೂ ಇದ್ದ ಪೂಜಾಸ್ಥಳಗಳ ವಿಗ್ರಹಗಳಿಗೂ, ಬಾಳನಿಗೂ, ಸೂರ್ಯ, ಚಂದ್ರ ಹಾಗೂ ನಕ್ಷತ್ರಗಳು ಎನಿಸಿಕೊಳ್ಳುವ ಆಕಾಶಸೈನ್ಯಕ್ಕೂ, ಧೂಪಹಾಕುವುದಕ್ಕಾಗಿ ಯೆಹೂದ ರಾಜರಿಂದ ನೇಮಿಸಲ್ಪಟ್ಟ ಎಲ್ಲಾ ಪೂಜಾರಿಗಳನ್ನು ತೆಗೆದುಹಾಕಿದನು. 6 ಯೆಹೋವನ ಆಲಯದಲ್ಲಿದ್ದ ಅಶೇರ್ ವಿಗ್ರಹಸ್ತಂಭವನ್ನು ತರಿಸಿ ಯೆರೂಸಲೇಮಿನ ಹೊರಗಿರುವ ಕಿದ್ರೋನ್ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಅಲ್ಲಿ ಅದನ್ನು ಸುಟ್ಟು ಪುಡಿಪುಡಿ ಮಾಡಿಸಿ ಆ ಪುಡಿಯನ್ನು ಸಾಮಾನ್ಯ ಜನರ ಸ್ಮಶಾನದಲ್ಲಿ ಹಾಕಿಬಿಟ್ಟನು. 7 ಯೆಹೋವನ ಆಲಯದ ಪ್ರಾಕಾರದೊಳಗಿದ್ದ ದೇವದಾಸ, ವೇಶ್ಯವೃತ್ತಿಯವರ ಮನೆಗಳನ್ನು ಕೆಡವಿಹಾಕಿಸಿದನು. ಆ ಮನೆಗಳಲ್ಲಿ ಸ್ತ್ರೀಯರು ಅಶೇರ್ ದೇವತೆಗಳಿಗಾಗಿ ಗುಡಾರದ ಬಟ್ಟೆಗಳನ್ನು ನೇಯುತ್ತಿದ್ದರು. 8 ಅನಂತರ ಗೆಬದಿಂದ ಬೇರ್ಷೆಬದವರೆಗಿರುವ ಯೆಹೂದ ಪಟ್ಟಣಗಳ ಎಲ್ಲಾ ಯಾಜಕರನ್ನು ಕರೆಯಿಸಿಕೊಂಡು ಅವರು ಧೂಪಹಾಕುತ್ತಿದ್ದ ಪೂಜಾಸ್ಥಳಗಳನ್ನು ನಾಶಮಾಡಿಸಿದನು. ಪುರಾಧಿಕಾರಿಯಾದ ಯೆಹೋಶುವನ ಬಾಗಿಲಿನ ಎಡಗಡೆಯಲ್ಲಿದ್ದ ದ್ವಾರಗಳ ದೇವತೆಯ ಪೂಜಾಸ್ಥಳಗಳನ್ನು ಕೆಡವಿ ಹಾಕಿಸಿದನು. 9 ಪೂಜಾಸ್ಥಳಗಳಿಂದ ಬಂದ ಯಾಜಕರಿಗೆ ಇತರ ಯಾಜಕರೊಡನೆ ಹುಳಿಯಿಲ್ಲದ ರೊಟ್ಟಿಗಳಲ್ಲಿ ಪಾಲುಸಿಕ್ಕಿದರೂ, ಅವರಿಗೆ ಯೆರೂಸಲೇಮಿನಲ್ಲಿದ್ದ ಯೆಹೋವನ ಯಜ್ಞವೇದಿಯ ಸಮೀಪಕ್ಕೆ ಹೋಗುವುದಕ್ಕೆ ಅಪ್ಪಣೆಯಿರಲಿಲ್ಲ. 10 ತಮ್ಮ ಗಂಡುಹೆಣ್ಣು ಮಕ್ಕಳನ್ನು ಮೋಲೆಕನಿಗೋಸ್ಕರ ಆಹುತಿ ಕೊಡದಂತೆ ಬೆನ್ ಹಿನ್ನೋಮ್ ತಗ್ಗಿನಲ್ಲಿದ್ದ “ತೋಫೆತ್” ಎಂಬ ಯಜ್ಞವೇದಿಯ ಸ್ಥಳವನ್ನು ಹೊಲೆಮಾಡಿದನು. 11 ಯೆಹೂದ ರಾಜರು ಸೂರ್ಯದೇವತೆಗೋಸ್ಕರ ಪ್ರತಿಷ್ಠಿಸಿದ ಕುದುರೆಗಳನ್ನು ತೆಗೆದುಹಾಕಿ ರಥಗಳನ್ನು ಸುಟ್ಟುಬಿಟ್ಟನು. ಅವು ಯೆಹೋವನ ಆಲಯದ ಹೆಬ್ಬಾಗಿಲಿನ ಹೊರಗೆ “ಪರ್ವರೀಮ್” ಎಂಬ ಸ್ಥಳದಲ್ಲಿ ಕಂಚುಕಿಯಾದ ನಾತಾನ್ ಮೆಲೆಕನ ಕೋಣೆಯ ಹತ್ತಿರ ಇಡಲ್ಪಟ್ಟಿದ್ದವು. 12 ಇದಲ್ಲದೆ, ಯೆಹೂದ್ಯರ ಅರಸರು ದೇವಸ್ಥಾನದ ಮಾಳಿಗೆಯ ಮೇಲೆ ಆಹಾಜನ ಉಪ್ಪರಿಗೆಯ ಹತ್ತಿರ ಕಟ್ಟಿಸಿದ್ದ ಯಜ್ಞವೇದಿಗಳನ್ನೂ, ಮನಸ್ಸೆಯು ಯೆಹೋವನ ಆಲಯದ ಎರಡು ಪ್ರಾಕಾರಗಳಲ್ಲಿ ಕಟ್ಟಿಸಿದ ಯಜ್ಞವೇದಿಗಳನ್ನೂ ಕೆಡವಿ ಪುಡಿಪುಡಿ ಮಾಡಿ ಅವುಗಳ ಧೂಳನ್ನು ಕಿದ್ರೋನ್ ಹಳ್ಳದಲ್ಲಿ ಹಾಕಿಸಿದನು. 13 ಇಸ್ರಾಯೇಲರ ಅರಸನಾದ ಸೊಲೊಮೋನನು ಚೀದೋನ್ಯರ ಅಷ್ಟೋರೆತ್ ದೇವತೆ, ಮೋವಾಬ್ಯರ ಕೆಮೋಷ್, ಅಮ್ಮೋನಿಯರ ಮಿಲ್ಕೋಮ್ ಎಂಬ ಅಸಹ್ಯ ವಿಗ್ರಹಗಳಿಗಾಗಿ ಯೆರೂಸಲೇಮಿನ ಎದುರಿನಲ್ಲಿಯೂ, ವಿಘ್ನಪರ್ವತದ ದಕ್ಷಿಣದಿಕ್ಕಿನಲ್ಲಿಯೂ ಸ್ಥಾಪಿಸಿದ್ದ ಪೂಜಾಸ್ಥಳಗಳನ್ನು ಅರಸನು ಹೊಲೆ ಮಾಡಿದನು. 14 ಕಲ್ಲು ಕಂಬಗಳನ್ನು ಒಡೆದುಹಾಕಿ ಅಶೇರ ವಿಗ್ರಹ ಸ್ತಂಭಗಳನ್ನು ಕಡಿದುಬಿಟ್ಟು ಅವುಗಳಲ್ಲಿದ್ದ ಸ್ಥಳಗಳನ್ನು ಮನುಷ್ಯರ ಎಲುಬುಗಳಿಂದ ತುಂಬಿಸಿದನು. 15 ಇದಲ್ಲದೆ, ಅವನು ಇಸ್ರಾಯೇಲರನ್ನು ಪಾಪಕ್ಕೆ ಪ್ರೇರೇಪಿಸಿದ ನೆಬಾಟನ ಮಗನಾದ ಯಾರೊಬ್ಬಾಮನು ಬೇತೇಲಿನಲ್ಲಿ ನಿರ್ಮಿಸಿದ್ದ ಪೂಜಾಸ್ಥಳವನ್ನೂ, ಅದರಲ್ಲಿದ್ದ ಯಜ್ಞವೇದಿಯನ್ನೂ ಕೆಡವಿಬಿಟ್ಟನು. ಪೂಜಾಸ್ಥಳವನ್ನೂ ಅದರಲ್ಲಿದ್ದ ಅಶೇರ ವಿಗ್ರಹಸ್ತಂಭವನ್ನೂ ಸುಟ್ಟು ಬೂದಿಮಾಡಿನು. 16 ಯೋಷೀಯನು ಹಿಂದಿರುಗಿ ನೋಡಿದಾಗ ಅಲ್ಲಿನ ಗುಡ್ಡಗಳಲ್ಲಿ ಸಮಾಧಿಗಳನ್ನು ಕಂಡು, ಅವುಗಳಲ್ಲಿದ್ದ ಎಲುಬುಗಳನ್ನು ತರಿಸಿ ಆ ಯಜ್ಞವೇದಿಯ ಮೇಲೆ ಸುಟ್ಟು ಅವುಗಳನ್ನು ನಾಶಮಾಡಿದನು. ಹೀಗೆ ದೇವರ ಮನುಷ್ಯನೊಬ್ಬನು ಪ್ರಕಟಿಸಿದ ಯೆಹೋವನ ವಾಕ್ಯವು ನೆರವೇರಿತು. 17 ಇದಲ್ಲದೆ, ಅವನು ಒಂದು ಸಮಾಧಿಶಿಲೆಯನ್ನು ಕಂಡು, ಅದು ಏನು? ಎಂದು ವಿಚಾರಿಸಲು ಆ ಊರಿನವರು, “ನೀನು ಈಗ ಬೇತೇಲಿನ ಯಜ್ಞವೇದಿಗೆ ಮಾಡಿದ್ದನ್ನು ಮುಂತಿಳಿಸಿದ ಯೆಹೂದ ದೇಶದವನಾದ ದೇವರ ಮನುಷ್ಯನ ಸಮಾಧಿ” ಎಂದು ಉತ್ತರಕೊಟ್ಟರು. 18 ಆಗ ಯೋಷೀಯನು, “ಬಿಡಿರಿ, ಆ ಮನುಷ್ಯನ ಎಲುಬುಗಳನ್ನು ಯಾರೂ ಮುಟ್ಟಬಾರದು” ಎಂದು ಹೇಳಿದನು. ಆದುದರಿಂದ ಅವರು ಅವನ ಮತ್ತು ಸಮಾರ್ಯದೇಶದ ಪ್ರವಾದಿಯ ಎಲುಬುಗಳನ್ನು ಮುಟ್ಟಲಿಲ್ಲ. 19 ಇಸ್ರಾಯೇಲ್ ರಾಜರು ಸಮಾರ್ಯದ ಪಟ್ಟಣಗಳಲ್ಲಿ ಪೂಜಾಸ್ಥಳಗಳನ್ನು ಗುಡಿಗಳನ್ನು ಕಟ್ಟಿಸಿ, ಯೆಹೋವನ ಕೋಪಕ್ಕೆ ಕಾರಣವಾದಂಥವುಗಳನ್ನು ಯೋಷೀಯನು ತೆಗೆದುಕೊಂಡು, ಬೇತೇಲಿನಲ್ಲಿ ನಾಶಮಾಡಿದ ಹಾಗೆ ಅವೆಲ್ಲವನ್ನು ನಾಶಮಾಡಿದನು. 20 ಯೋಷೀಯನು ಅವುಗಳನ್ನು ಕೆಡವಿಬಿಟ್ಟು ಅವುಗಳ ಪೂಜಾರಿಗಳನ್ನು ಯಜ್ಞವೇದಿಯ ಮೇಲೆ ವಧಿಸಿ ಆ ಮನುಷ್ಯರ ಎಲುಬುಗಳನ್ನು ಸುಟ್ಟು ಯೆರೂಸಲೇಮಿಗೆ ಹಿಂದಿರುಗಿ ಹೋದನು. 21 ಅನಂತರ ಅರಸನು ಎಲ್ಲಾ ಜನರಿಗೆ, “ಈ ಒಡಂಬಡಿಕೆಯ ಗ್ರಂಥದಲ್ಲಿ ಬರೆದಿರುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನಿಗಾಗಿ ಪಸ್ಕಹಬ್ಬವನ್ನು ಆಚರಿಸಬೇಕು” ಎಂದು ಆಜ್ಞಾಪಿಸಿದನು. 22 ಇಂಥ ಪಸ್ಕಹಬ್ಬವು ಇಸ್ರಾಯೇಲರನ್ನು ಪಾಲಿಸಿದ ನ್ಯಾಯಸ್ಥಾಪಕರ ಕಾಲದಲ್ಲಾಗಲಿ, ಇಸ್ರಾಯೇಲರ ಮತ್ತು ಯೆಹೂದ್ಯರ ಅರಸರ ಕಾಲದಲ್ಲಾಗಲಿ ನಡೆಯಲೇ ಇಲ್ಲ. 23 ಈ ಪಸ್ಕಹಬ್ಬವು ಅರಸನಾದ ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ ಯೆರೂಸಲೇಮಿನಲ್ಲಿ ಯೆಹೋವನಿಗಾಗಿ ಆಚರಿಸಲ್ಪಟ್ಟಿತು. 24 ಇದಲ್ಲದೆ, ಯೋಷೀಯನು ಸತ್ತವರಲ್ಲಿ ವಿಚಾರಿಸುವವರನ್ನೂ, ಭೂತ ಪ್ರೇತ ಆರಾಧಕರನ್ನೂ, ಯೆರೂಸಲೇಮ್, ಯೆಹೂದ ಪ್ರಾಂತ್ಯ ಇವುಗಳಲ್ಲಿದ್ದ ಎಲ್ಲಾ ತೆರಾಫೀಮ್ ಎಂಬ ಬೊಂಬೆಗಳನ್ನೂ, ಮೂರ್ತಿಗಳನ್ನೂ ಎಲ್ಲಾ ಅಸಹ್ಯ ವಿಗ್ರಹಗಳನ್ನೂ ತೆಗೆದುಹಾಕಿ ಯಾಜಕನಾದ ಹಿಲ್ಕೀಯನಿಗೆ ಯೆಹೋವನ ಆಲಯದಲ್ಲಿ ಸಿಕ್ಕಿದ್ದ ಧರ್ಮೋಪದೇಶಗ್ರಂಥದಲ್ಲಿದ್ದ ಆಜ್ಞೆಗಳನ್ನು ನೆರವೇರಿಸಿದನು. 25 ಯೆಹೋವನ ಕಡೆಗೆ ತಿರುಗಿಕೊಂಡು ಪೂರ್ಣಮನಸ್ಸಿನಿಂದಲೂ, ಪೂರ್ಣಪ್ರಾಣದಿಂದಲೂ, ಪೂರ್ಣಬಲದಿಂದಲೂ ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಿದ ಯೋಷೀಯನಿಗೆ ಸಮಾನನಾದ ಅರಸನು ಹಿಂದಿನ ಕಾಲದಲ್ಲೂ ಆ ನಂತರದ ಕಾಲದಲ್ಲೂ ಇರಲಿಲ್ಲ. 26 ಆದರೂ ಮನಸ್ಸೆಯ ದುಷ್ಕೃತ್ಯಗಳ ದೆಸೆಯಿಂದ ಯೆಹೂದ್ಯರ ಮೇಲಿದ್ದ ಯೆಹೋವನ ಉಗ್ರಕೋಪವು ಇಳಿಯಲಿಲ್ಲ. 27 ಯೆಹೋವನು, “ಇಸ್ರಾಯೇಲರನ್ನು ತೆಗೆದುಹಾಕಿದಂತೆ, ಯೆಹೂದ್ಯರನ್ನೂ ನನ್ನ ಸನ್ನಿಧಿಯಿಂದ ತೆಗೆದುಹಾಕುವೆನು, ನಾನು ಆರಿಸಿಕೊಂಡ ಯೆರೂಸಲೇಮ್ ಪಟ್ಟಣವನ್ನೂ ನನ್ನ ನಾಮದ ಮಹಿಮೆಗಾಗಿ ಸ್ವೀಕರಿಸಿಕೊಂಡ ದೇವಾಲಯವನ್ನೂ ತಿರಸ್ಕರಿಸುವೆನು” ಎಂದು ಹೇಳಿದನು. 28 ಯೋಷೀಯನ ಉಳಿದ ಚರಿತ್ರೆಯೂ, ಅವನ ಎಲ್ಲಾ ಕೃತ್ಯಗಳೂ ಯೆಹೂದ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆಯಲಾಗಿದೆ. 29 ಅವನ ಕಾಲದಲ್ಲಿ, ಐಗುಪ್ತದ ಅರಸನಾದ ಫರೋಹ ನೆಕೋ ಎಂಬುವವನು ಅಶ್ಶೂರದ ಅರಸನಿಗೆ ವಿರುದ್ಧವಾಗಿ ಎದ್ದು ಯುದ್ಧಮಾಡುವುದಕ್ಕಾಗಿ ಯೂಫ್ರೆಟಿಸ್ ನದಿಯ ಬಳಿಗೆ ಹೋದನು. ಅವನು ಅಲ್ಲಿಗೆ ಹೋಗುತ್ತಿರುವಾಗ ಯೋಷೀಯನು ಮೆಗಿದ್ದೋವಿನಲ್ಲಿ ಅವನನ್ನು ಎದುರುಗೊಂಡು ಅಲ್ಲಿ ಅವನಿಂದ ಹತನಾದನು. 30 ಯೋಷೀಯನ ಸೇವಕರು ಅವನ ಶವವನ್ನು ರಥದಲ್ಲಿ ಹಾಕಿಕೊಂಡು ಮೆಗಿದ್ದೋವಿನಿಂದ ಯೆರೂಸಲೇಮಿಗೆ ತಂದು ಅವನ ಸ್ವಂತ ಸಮಾಧಿಯಲ್ಲಿ ಇಟ್ಟರು. ಜನರು ಅವನ ನಂತರ ಅವನ ಮಗನಾದ ಯೆಹೋವಾಹಾಜನನ್ನು ಅಭಿಷೇಕಿಸಿ ಅರಸನನ್ನಾಗಿ ಮಾಡಿದರು. 31 ಯೆಹೋವಾಹಾಜನು ಅರಸನಾದಾಗ ಅವನು ಇಪ್ಪತ್ತಮೂರು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳುಗಳ ಕಾಲ ಆಳಿದನು. ಲಿಬ್ನದವನಾದ ಯೆರೆಮೀಯನ ಮಗಳಾದ ಹಮೂಟಲ್ ಎಂಬಾಕೆಯು ಇವನ ತಾಯಿ. 32 ಯೆಹೋವಾಹಾಜನು ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾದನು. 33 ಫರೋಹ ನೆಕೋವನು ಇವನನ್ನು ಯೆರೂಸಲೇಮಿನಲ್ಲಿ ಬಹು ದಿನಗಳವರೆಗೆ ಆಳಗೊಡಲಿಲ್ಲ. ಅವನು ಹಮಾತ ದೇಶದ ರಿಬ್ಲಾ ಎಂಬ ಊರಲ್ಲಿ ಇವನನ್ನು ಸೆರೆಯಲ್ಲಿಟ್ಟದ್ದಲ್ಲದೆ ಯೆಹೂದ್ಯರು ಅವನಿಗೆ ನೂರು ತಲಾಂತು ಬೆಳ್ಳಿಯನ್ನೂ, ಒಂದು ತಲಾಂತು ಬಂಗಾರವನ್ನೂ ದಂಡ ತೆರಬೇಕಾಯಿತು. 34 ಫರೋಹ ನೆಕೋವನು ಯೋಷೀಯನಿಗೆ ಬದಲಾಗಿ ಅವನ ಮಗನಾದ ಎಲ್ಯಾಕೀಮನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ಯೆಹೋಯಾಕೀಮನೆಂಬ ಹೊಸ ಹೆಸರನ್ನಿಟ್ಟು ಯೆಹೋವಾಹಾಜನನ್ನು ಐಗುಪ್ತ ದೇಶಕ್ಕೆ ಕರೆದುಕೊಂಡು ಹೋದನು. ಯೆಹೋವಾಹಾಜನು ಅಲ್ಲಿ ಮರಣ ಹೊಂದಿದನು. 35 ಫರೋಹನು ಗೊತ್ತುಮಾಡಿದಷ್ಟು ಬೆಳ್ಳಿ ಬಂಗಾರವನ್ನು ಕೊಡುವುದಕ್ಕಾಗಿ ಯೆಹೋಯಾಕೀಮನು ತನ್ನ ದೇಶದಲ್ಲಿ ತೆರಿಗೆಯನ್ನು ವಿಧಿಸಿದನು. ತೆರಿಗೆಕೊಡಬೇಕಾದ ಪ್ರತಿಯೊಬ್ಬನು ತನಗೆ ನೇಮಕವಾದಷ್ಟು ಬೆಳ್ಳಿ ಬಂಗಾರವನ್ನು ದೇಶದ ಜನರಿಂದ ವಸೂಲಿಮಾಡಿಕೊಂಡು ಫರೋಹ ನೆಕೋವನಿಗೆ ತಂದೊಪ್ಪಿಸಿದನು. 36 ಯೆಹೋಯಾಕೀಮನು ಅರಸನಾದಾಗ ಅವನು ಇಪ್ಪತ್ತೈದು ವರ್ಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರ್ಷಗಳ ಕಾಲ ಆಳಿದನು. ರೂಮನ ಪೆದಾಯನ ಮಗಳಾದ ಜೆಬೂದಾ ಎಂಬಾಕೆಯು ಅವನ ತಾಯಿ. 37 ಯೆಹೋಯಾಕೀಮನು ತನ್ನ ಪೂರ್ವಿಕರಂತೆ ಯೆಹೋವನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು.