Genesis 49 (IRVK)
1 ಯಾಕೋಬನು ತನ್ನ ಮಕ್ಕಳನ್ನು ಕರೆಯಿಸಿ ಅವರಿಗೆ, ನೀವೆಲ್ಲರೂ ಕೂಡಿ ಬನ್ನಿರಿ. ಮುಂದಿನ ದಿನಗಳಲ್ಲಿ ನಿಮಗೆ ಸಂಭವಿಸುವುದನ್ನು ನಿಮಗೆ ತಿಳಿಸುತ್ತೇನೆ. 2 ಯಾಕೋಬನ ಮಕ್ಕಳೇ, ನೀವೆಲ್ಲರೂ ಕೂಡಿ ಬಂದು ಕೇಳಿರಿ.ನಿಮ್ಮ ತಂದೆಯಾದ ಇಸ್ರಾಯೇಲನ ಮಾತನ್ನು ಲಾಲಿಸಿರಿ. 3 ರೂಬೇನನೇ, ನೀನು ನನ್ನ ಚೊಚ್ಚಲಮಗನೂ, ನನ್ನ ಚೈತನ್ಯಸ್ವರೂಪನೂ, ನನ್ನ ಪ್ರಥಮಫಲವೂ,ಗೌರವದಲ್ಲಿಯೂ, ಅಧಿಕಾರದಲ್ಲಿಯೂ ಪ್ರಮುಖನೂ ಆಗಿದ್ದೀ. 4 ಆದರೆ ದಡಮೀರಿದ ಪ್ರವಾಹದಂತಿರುವ ನೀನು ಇನ್ನು ಶ್ರೇಷ್ಠನಾಗುವುದಿಲ್ಲ.ಏಕೆಂದರೆ ನೀನು ನಿನ್ನ ತಂದೆಯ ಹಾಸಿಗೆಯನ್ನು ಹತ್ತಿ,ಅದನ್ನು ಹೊಲೆ ಮಾಡಿದಿಯಲ್ಲಾ. ಇವನು ನನ್ನ ಮಂಚವನ್ನು ಹತ್ತಿದನು! 5 ಸಿಮೆಯೋನನು ಲೇವಿಯೂ ಅಣ್ಣತಮ್ಮಂದಿರು.ಇವರ ಕತ್ತಿಗಳು ಹಿಂಸಾಚಾರದ ಆಯುಧಗಳು. 6 ನನ್ನ ಪ್ರಾಣವೇ ಅವರ ಗುಪ್ತವಾದ ದುರಾಲೋಚನೆಗಳಿಗೆ ನೀನು ಒಳಪಡಬಾರದು.ನನ್ನ ಮನವೇ ಅವರ ಗುಂಪಿಗೆ ನೀನು ಸೇರಬೇಡ. ಆದುದರಿಂದ ನನ್ನ ಹೃದಯವು ಸಂತೋಷಿಸುತ್ತದೆ.ಅವರು ಕೋಪೋದ್ರೆಕದಿಂದ ಮನುಷ್ಯರನ್ನು ಸಂಹರಿಸಿದರು.ಮದದಿಂದ ಎತ್ತುಗಳನ್ನು ದುರ್ಬಲಗೊಳಿಸಿದರು. 7 ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದ್ದುಅದು ಶಾಪಗ್ರಸ್ಥವಾದುದಾಗಿದೆ.ಯಾಕೋಬನ ಕುಲದವರಲ್ಲಿ ಅವರನ್ನು ವಿಭಾಗಿಸುವೆನು.ಇಸ್ರಾಯೇಲರಲ್ಲಿ ಅವರನ್ನು ಚದುರಿಸುವೆನು. 8 ಯೆಹೂದನೇ, ನಿನ್ನ ಅಣ್ಣತಮ್ಮಂದಿರು ನಿನ್ನನ್ನೇ ಸ್ತುತಿಸುವರು.ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವುದು.ನಿನ್ನ ಸಹೋದರರು ನಿನಗೆ ಆಡ್ಡ ಬೀಳುವರು. 9 ಯೆಹೂದನು ಪ್ರಾಯದ ಸಿಂಹದಂತಿದ್ದಾನೆ.ನನ್ನ ಪುತ್ರನೇ, ನೀನು ಮೃಗವನ್ನು ಹಿಡಿದು ಕೊಂದು ಬೆಟ್ಟವನ್ನು ಸೇರಿದ ಸಿಂಹದೋಪಾದಿಯಲ್ಲಿದ್ದೀ.ಅವನು ಸಿಂಹದಂತೆ ಕಾಲು ಮುದುರಿ ಹೊಂಚುಹಾಕಿಕೊಂಡಿದ್ದಾನೆ.ಮೃಗ ರಾಜನಿಗೆ ಸಮನಾದ ಇವನನ್ನು ಕೆಣಕುವುದು ಯಾರಿಂದಾದೀತು? 10 ರಾಜದಂಡವನ್ನು ಹಿಡಿಯತಕ್ಕವನು ಶಿಲೋವಿನಿಂದ ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವುದಿಲ್ಲ.ಮುದ್ರೆ ಕೋಲು ಅವನ ಪಾದಗಳ ಬಳಿಯಿಂದ ಕದಲುವುದಿಲ್ಲ.ಅನ್ಯಜನಾಂಗಗಳೂ ಅವನಿಗೆ ವಿಧೇಯರಾಗಿರುವರು. 11 ಅವನು ತನ್ನ ವಾಹನ ಮೃಗವನ್ನು ವಿಶಿಷ್ಟವಾದ ದ್ರಾಕ್ಷಾಲತೆಗೆ ಕಟ್ಟುವನು.ದ್ರಾಕ್ಷಿಯ ಬಳ್ಳಿಗೆ ತನ್ನ ಕತ್ತೆಮರಿಯನ್ನು ಬಿಗಿಯುವನು;ದ್ರಾಕ್ಷಾರಸದಲ್ಲಿ ತನ್ನ ಅಂಗಿಗಳನ್ನು ಒಗೆಯುವನು;ದ್ರಾಕ್ಷಾರಸದಲ್ಲಿಯೇ ತನ್ನ ವಸ್ತ್ರಗಳನ್ನು ಅದ್ದಿ ತೊಳೆಯುವನು. 12 ದ್ರಾಕ್ಷಾರಸದ ಸಮೃದ್ಧಿಯಿಂದ ಅವನ ಕಣ್ಣುಗಳು ಕೆಂಪಾಗಿ ಇರುವವು.ಹಾಲಿನ ಸಮೃದ್ಧಿಯಿಂದ ಅವನ ಹಲ್ಲುಗಳು ಬೆಳ್ಳಗಾಗಿ ಇರುವವು. 13 ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಮಾಡುವನು.ಅವನಿಗೆ ಹಡಗುಗಳು ಸೇರುವ ಬಂದರು ಇರುವುದು.ಅವನ ಸೀಮೆಯ ಒಂದು ಮೇರೆ ಚೀದೋನಿಗೆ ಮುಟ್ಟುವುದು. 14 ಇಸ್ಸಾಕಾರನು ಕುರಿಯ ಹಟ್ಟಿಗಳ ನಡುವೆ ಮಲಗಿಕೊಂಡಿರುವ ಬಲವುಳ್ಳ ಕತ್ತೆಯಂತಿರುವನು. 15 ತಾನು ಸೇರಿದ ಪ್ರದೇಶವು ವಿಶ್ರಾಂತಿಗೆ ಅನುಕೂಲವೂಸುಖಾಸ್ಪದವೂ ಆಗಿರುವುದನ್ನು ಕಂಡನು.ಅವನು ಹೊರೆಯನ್ನು ಹೊರುವುದಕ್ಕೆ ಬೆನ್ನು ಬಗ್ಗಿಸಿಕೊಂಡುಬಿಟ್ಟೀ ಸೇವೆಮಾಡುವನು. 16 ದಾನನು ಇಸ್ರಾಯೇಲರ ಕುಲಗಳಲ್ಲಿ ಒಂದರಂತೆತನ್ನ ಜನರಿಗೆ ನ್ಯಾಯತೀರಿಸುವನು. 17 ದಾನನು ಮಾರ್ಗದ ಮಧ್ಯದಲ್ಲಿರುವ ವಿಷಸರ್ಪದಂತೆ ಇರುವನುಅದು ಕುದುರೆಯ ಹಿಮ್ಮಡಿಯನ್ನು ಕಚ್ಚುವುದು.ಸವಾರನು ಕೆಳಗೆ ಅಂಗಾತವಾಗಿ ಬೀಳುವನು. 18 ಯೆಹೋವನೇ, ನಾನು ನಿನ್ನ ರಕ್ಷಣೆಯ ಮಾರ್ಗವನ್ನು ನಿರೀಕ್ಷಿಸಿಕೊಂಡಿದ್ದೇನೆ. 19 ಗಾದನ ಮೇಲೆ ಸುಲಿಗೆ ಮಾಡುವವರು ಬೀಳಲು,ಇವನು ಅವರನ್ನು ಹಿಮ್ಮಟ್ಟಿಕೊಂಡು ಹೋಗುವನು. 20 ಆಶೇರನಿಗೆ ಧಾನ್ಯ ಸಮೃದ್ಧಿಯಾಗುವುದು.ಅವನಲ್ಲಿ ರಾಜಭೋಗ ಪದಾರ್ಥಗಳು ದೊರಕುವವು. 21 ನಫ್ತಾಲಿಯು ಸ್ವತಂತ್ರವಾಗಿ ಜಿಂಕೆಯಂತಿದ್ದಾನೆ.ಅವನಿಂದ ಇಂಪಾದ ಮಾತುಗಳುಂಟಾಗುವವು. 22 ಯೋಸೇಫನು ಫಲಭರಿತವಾದ ವೃಕ್ಷವು,ಒರತೆಯ ಬಳಿಯಲ್ಲಿರುವ ಫಲವತ್ತಾದ ವೃಕ್ಷವೇ ಆಗಿದ್ದಾನೆ.ಗೋಡೆಯ ಆಚೆಗೆ ಅದರ ರೆಂಬೆಗಳು ಹರಡಿವೆ. 23 ಬಿಲ್ಲುಗಾರರು ಅವನನ್ನು ಆಕ್ರಮಿಸುವರು,ಹಗೆತನದಿಂದ ಬಾಣವನ್ನು ಅವನ ಮೇಲೆ ಪ್ರಯೋಗಿಸುವರು. 24 ಆದರೂ ಯಾಕೋಬನ ವಂಶಸ್ಥರನ್ನು ರಕ್ಷಿಸುವ ಪರಾಕ್ರಮಿಯ ಭುಜಬಲದಿಂದಲೂ,ಇಸ್ರಾಯೇಲನಿಗೆ ಪಾಲಕನೂ ಬಂಡೆಯೂ ಆಗಿರುವಾತನಿಂದಲೂಅವನ ಕೈಗಳ ಬಿಲ್ಲು ಸ್ಥಿರವಾಗಿ ನಿಂತಿರುವುದು.ಅವನ ಕೈಗಳು ಯಾಕೋಬನ ಒಡೆಯನಿಂದ ಬಲಗೊಂಡಿವೆ. 25 ನಿನ್ನ ತಂದೆಯ ದೇವರು ನಿನಗೆ ಸಹಾಯ ಹಸ್ತವಾಗಿದ್ದಾನೆ.ನಿನ್ನ ತಂದೆಯ ದೇವರು ನಿನ್ನನ್ನು ಆಶೀರ್ವದಿಸುವನು. ಸರ್ವಶಕ್ತನಾದ ದೇವರು,ಆತನು ಮೇಲಣ ಆಕಾಶದಿಂದಲೂ,ಕೆಳಗಣ ಸಾಗರದ ಸೆಲೆಗಳಿಂದಲೂ,ಸ್ತನದಿಂದಲೂ, ಗರ್ಭಫಲದಿಂದಲೂ ಉಂಟಾಗುವ ಸೌಭಾಗ್ಯಗಳನ್ನು ಕೊಟ್ಟು ನಿನ್ನನ್ನು ಆಶೀರ್ವದಿಸಲಿ. 26 ನಿನ್ನ ತಂದೆಯ ಆಶೀರ್ವಾದಗಳು ನಿನ್ನ ಪೂರ್ವಿಕರ ಆಶೀರ್ವಾದಕ್ಕಿಂತಲೂ ಮೀಗಿಲಾಗಿರುತ್ತದೆ. ಆದಿಯಿಂದಲೂ ಪರ್ವತಗಳಿಂದ ಉಂಟಾಗುವ ಎಲ್ಲಾ ಮೇಲುಗಳಿಗಿಂತಲೂ, ಸದಾಕಾಲ ಪ್ರಕೃತಿಯಿಂದ ಉಂಟಾಗುವ ಎಲ್ಲಾ ಸುಫಲಗಳು ಕೊನೆಯವರೆಗೂ ಯೋಸೇಫನಿಗೂ ಅವನ ಅಣ್ಣತಮ್ಮಂದಿರಿಗೂ ಸಮೃದ್ಧಿಯಾಗಿ ದೊರೆಯುವುದು. 27 “ಬೆನ್ಯಾಮೀನನು ಕುರಿಗಳನ್ನು ಹಿಡಿದುಕೊಳ್ಳುವ ತೋಳದಂತಿದ್ದಾನೆ.ರಾತ್ರಿ ಹಿಡಿದುಕೊಂಡದ್ದನ್ನು ಬೆಳಿಗ್ಗೆ ತಿನ್ನುತ್ತಾನೆ.ಕೊಳ್ಳೆಮಾಡಿದ್ದನ್ನು ಸಂಜೆಯಲ್ಲಿ ಹಂಚಿಕೊಳ್ಳುವನು” ಎಂದನು. 28 ಇವರೆಲ್ಲರೂ ಇಸ್ರಾಯೇಲನಿಂದುಂಟಾದ ಹನ್ನೆರಡು ಕುಲಗಳು. ಅವರ ತಂದೆ ಅವರನ್ನು ಆಶೀರ್ವದಿಸಿ ಹೇಳಿದ ನುಡಿಗಳು ಇವುಗಳೇ. ಅವನು ಪ್ರತಿಯೊಬ್ಬನಿಗೂ ಅವನವನಿಗೆ ತಕ್ಕ ಆಶೀರ್ವಾದದ ಪ್ರಕಾರ ಆಶೀರ್ವಚನಗಳನ್ನು ನುಡಿದನು. 29 ಇಸ್ರಾಯೇಲನು ತನ್ನ ಮಕ್ಕಳಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ, “ನಾನು ನನ್ನ ಪೂರ್ವಿಕರ ಬಳಿಗೆ ಸೇರಬೇಕಾದ ಕಾಲವು ಸಮೀಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ ನನ್ನನ್ನು ನನ್ನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಬೇಕು. 30 ಆ ಗವಿಯು ಕಾನಾನ್ ದೇಶದ ಮಮ್ರೆಗೆದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿ ಇದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿ ಸಹಿತವಾಗಿ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡುಕೊಂಡನು. 31 ಅಲ್ಲಿ ಅಬ್ರಹಾಮನಿಗೂ ಅವನ ಪತ್ನಿಯಾದ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಹೆಂಡತಿಯಾದ ರೆಬೆಕ್ಕಳಿಗೂ ಸಮಾಧಿಯಾಯಿತು. ಅಲ್ಲಿ ನಾನು ಲೇಯಳನ್ನು ಸಮಾಧಿಮಾಡಿದ್ದೇನೆ. 32 ಹೊಲದೊಂದಿಗೆ ಹಿತ್ತಿಯರಿಂದ ಕ್ರಯಕ್ಕೆ ತೆಗೆದುಕೊಂಡ ಆ ಗುಹೆಯೊಳಗೆ ನನಗೂ ಸಮಾಧಿಮಾಡಬೇಕು” ಎಂದನು. 33 ಯಾಕೋಬನು ತನ್ನ ಮಕ್ಕಳಿಗೆ ಅಪ್ಪಣೆ ಕೊಡುವುದನ್ನು ಮುಗಿಸಿದ ನಂತರ ಹಾಸಿಗೆಯ ಮೇಲೆ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು ಪೂರ್ವಿಕರ ಬಳಿಗೆ ಸೇರಿದನು.