Psalms 18 (IRVK)
undefined ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು. ಯೆಹೋವನ ಸೇವಕನಾದ ದಾವೀದನು ಸೌಲನಿಂದಲೂ, ಎಲ್ಲಾ ಶತ್ರುಗಳ ಕೈಯಿಂದಲೂ ತಪ್ಪಿಸಲ್ಪಟ್ಟಾಗ ಯೆಹೋವನ ಘನಕ್ಕಾಗಿ ಈ ಪದ್ಯವನ್ನು ರಚಿಸಿ ಹೇಳಿದನು. 1 ನನ್ನ ಬಲವಾಗಿರುವ ಯೆಹೋವನೇ,ನಿನ್ನಲ್ಲಿಯೇ ಮಮತೆಯಿಡುತ್ತೇನೆ. 2 ಯೆಹೋವನು ನನ್ನ ಬಂಡೆಯು, ನನ್ನ ಕೋಟೆಯು,ನನ್ನ ವಿಮೋಚಕನು, ನನ್ನ ದೇವರು, ನನ್ನ ಆಶ್ರಯಗಿರಿಯು,ನನ್ನ ಗುರಾಣಿಯು, ನನ್ನ ರಕ್ಷಣೆಯ ಕೊಂಬು ಮತ್ತು ನನ್ನ ದುರ್ಗವು ಆಗಿದ್ದಾನೆ. 3 ಯೆಹೋವನು ಸ್ತೋತ್ರಕ್ಕೆ ಅರ್ಹನು;ನಾನು ಆತನಿಗೆ ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ. 4 ಮೃತ್ಯುಪಾಶಗಳು ನನಗೆ ಸುತ್ತಿಕೊಂಡವು;ನಾಶಪ್ರವಾಹವು ನನ್ನನ್ನು ನಡುಗಿಸಿತು. 5 ಪಾತಾಳಪಾಶಗಳು ನನ್ನನ್ನು ಆವರಿಸಿಕೊಂಡವು;ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು. 6 ಅಂಥ ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು;ನನ್ನ ದೇವರನ್ನು ಪ್ರಾರ್ಥಿಸಿದೆನು.ಆತನು ತನ್ನ ಮಂದಿರದಲ್ಲಿ ನನ್ನ ಶಬ್ದವನ್ನು ಕೇಳಿದನು;ನನ್ನ ಕೂಗು ಆತನಿಗೆ ಕೇಳಿಸಿತು. 7 ಆಗ ಆತನಿಗೆ ಸಿಟ್ಟೇರಿದ್ದರಿಂದ,ಭೂಮಿಯು ಗಡಗಡನೆ ಕಂಪಿಸಿತು,ಪರ್ವತಗಳ ಬುಡಗಳು ನಡುಗಿ ಕದಲಿದವು. 8 ಆತನ ಮೂಗಿನಿಂದ ಹೊಗೆಯು ಎದ್ದು;ಆತನ ಬಾಯಿಂದ ಅಗ್ನಿಜ್ವಾಲೆ ಹೊರಟು,ಸಿಕ್ಕಿದ್ದೆಲ್ಲವನ್ನು ದಹಿಸಿ ಕೆಂಡವನ್ನಾಗಿ ಮಾಡಿತು. 9 ಆತನು ಆಕಾಶವನ್ನು ತಗ್ಗಿಸಿ ಇಳಿದು ಬಂದನು;ಆತನ ಪಾದಗಳ ಕೆಳಗೆ ಕಾರ್ಗತ್ತಲು ಇತ್ತು. 10 ಕೆರೂಬಿವಾಹನನಾಗಿ ಹಾರಿ,ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಆತನು ಇಳಿದು ಬಂದನು. 11 ಕತ್ತಲನ್ನು ತನ್ನ ಸುತ್ತಲು ಗುಡಾರದಂತೆ ಕವಿಸಿಕೊಂಡು,ಜಲಮಯವಾಗಿರುವ ನೀಲಮೇಘಗಳ ಮಧ್ಯದಲ್ಲಿ ಮರೆಯಾದನು. 12 ಆತನ ಸನ್ನಿಧಿಯ ಪ್ರಕಾಶದಿಂದ ಕಲ್ಮಳೆಯೂ, ಉರಿಗೆಂಡಗಳೂ ಹೊರಟು,ಆತನ ಸುತ್ತಲಿದ್ದ ಕಪ್ಪು ಮೋಡಗಳನ್ನು ದಾಟಿ ಸುರಿದವು. 13 ಯೆಹೋವನು ಆಕಾಶದಲ್ಲಿ ಗುಡುಗಿದನು;ಪರಾತ್ಪರನಾದ ದೇವರು ಧ್ವನಿಗೊಟ್ಟನು. ಕಲ್ಮಳೆಯೂ, ಉರಿಗೆಂಡಗಳೂ ಹೊರಟವು. 14 ಆತನು ಬಾಣಗಳನ್ನೆಸೆದು ಶತ್ರುಗಳನ್ನು ಚದರಿಸಿಬಿಟ್ಟನು;ಸಿಡಿಲುಗಳಿಂದ ಕಳವಳಗೊಳಿಸಿದನು. 15 ಆಗ ಯೆಹೋವನೇ, ನಿನ್ನ ಗದರಿಕೆಯಿಂದಲೂ,ನಿನ್ನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು.ಭೂಮಂಡಲದ ಅಸ್ತಿವಾರಗಳು ಕಂಡುಬಂದವು. 16 ಆತನು ಮೇಲಣ ಲೋಕದಿಂದ ಕೈಚಾಚಿ, ನನ್ನನ್ನು ಹಿಡಿದು,ಮಹಾಜಲರಾಶಿಗಳೊಳಗಿಂದ ಎಳೆದನು. 17 ನನಗಿಂತ ಬಲಿಷ್ಠರೂ, ಪುಷ್ಟರೂ ಆಗಿ ದ್ವೇಷಿಸುತ್ತಿದ್ದ ಶತ್ರುಗಳಿಂದನನ್ನನ್ನು ಬಿಡಿಸಿ ರಕ್ಷಿಸಿದನು. 18 ಅವರು ನನ್ನ ವಿಪತ್ಕಾಲದಲ್ಲಿ ನನ್ನ ಮೇಲೆ ಬಿದ್ದರು,ಆಗ ಯೆಹೋವನು ನನಗೆ ಉದ್ಧಾರಕನಾದನು. 19 ಆತನು ನನ್ನನ್ನು ಬಿಡಿಸಿ ವಿಶಾಲ ಸ್ಥಳದಲ್ಲಿ ಸೇರಿಸಿದನು;ನನ್ನನ್ನು ಮೆಚ್ಚಿ ರಕ್ಷಿಸಿದನು. 20 ಯೆಹೋವನು ನನ್ನ ನೀತಿಗೆ ಸರಿಯಾಗಿ ಮೇಲನ್ನು ಮಾಡಿದನು,ನನ್ನ ಕೈಗಳ ಶುದ್ಧತ್ವಕ್ಕೆ ತಕ್ಕಂತೆ ಪ್ರತಿಫಲವನ್ನು ಕೊಟ್ಟನು. 21 ನಾನು ಯೆಹೋವನ ಮಾರ್ಗವನ್ನೇ ಅನುಸರಿಸಿದೆನಲ್ಲಾ;ನನ್ನ ದೇವರನ್ನು ಬಿಟ್ಟು ದುಷ್ಟನಾಗಲಿಲ್ಲವಲ್ಲಾ. 22 ನಾನು ಆತನ ನೀತಿಯ ಆಜ್ಞೆಗಳನ್ನು ಯಾವಾಗಲೂ ನನ್ನ ಎದುರಿನಲ್ಲಿ ಇಟ್ಟುಕೊಂಡೆನು;ಆತನ ವಿಧಿಗಳನ್ನು ಅಲಕ್ಷ್ಯಮಾಡಲೇ ಇಲ್ಲ. 23 ನಾನು ಆತನ ದೃಷ್ಟಿಯಲ್ಲಿ ನಿರ್ದೋಷಿಯು;ಪಾಪದಲ್ಲಿ ಬೀಳದಂತೆ ಜಾಗರೂಕತೆಯಿಂದ ನಡೆದುಕೊಂಡೆನು. 24 ಆದುದರಿಂದ ನಾನು ನೀತಿವಂತನೂ, ನಿರಪರಾಧಿಯೂ ಎಂದು ನೋಡಿ,ಯೆಹೋವನು ತಕ್ಕ ಪ್ರತಿಫಲವನ್ನು ಕೊಟ್ಟನು. 25 ನೀನು ಕೃಪೆಯುಳ್ಳವನಿಗೆ ಕೃಪಾವಂತನೂ,ದೋಷವಿಲ್ಲದವನಿಗೆ ನಿರ್ದೋಷಿಯೂ, 26 ಶುದ್ಧನಿಗೆ ಪರಿಶುದ್ಧನೂ, ಮೂರ್ಖನಿಗೆ ವಕ್ರನೂ ಆಗಿರುವಿ. 27 ದೀನರನ್ನು ಉದ್ಧರಿಸುವವನೂ,ಗರ್ವದ ಕಣ್ಣುಳ್ಳವರನ್ನು ತಗ್ಗಿಸಿಬಿಡುವವನೂ ನೀನಲ್ಲವೋ? 28 ನೀನೇ ನನ್ನ ದೀಪವನ್ನು ಹೊತ್ತಿಸುವವನಲ್ಲವೇ;ನನ್ನ ದೇವರಾದ ಯೆಹೋವನು ನನಗೆ ಬೆಳಕನ್ನು ಕೊಟ್ಟು ಕತ್ತಲನ್ನು ಪರಿಹರಿಸುವವನು. 29 ನಿನ್ನ ಬಲದಿಂದ ದಂಡಿನ ಮೇಲೆ ಬೀಳುವೆನು;ನನ್ನ ದೇವರ ಸಹಾಯದಿಂದ ಗೋಡೆಯನ್ನು ಹಾರುವೆನು. 30 ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು;ಯೆಹೋವನ ವಚನವು ಶುದ್ಧವಾದದ್ದು.ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ. 31 ಯೆಹೋವನಲ್ಲದೆ ದೇವರು ಯಾರು?ನಮ್ಮ ದೇವರ ಹೊರತು ಶರಣನು ಎಲ್ಲಿ? 32 ನನಗೆ ಶೌರ್ಯವೆಂಬ ನಡುಕಟ್ಟನ್ನು ಬಿಗಿಯುವವನೂ,ನನ್ನ ಮಾರ್ಗವನ್ನು ಸರಾಗ ಮಾಡುವವನೂ ದೇವರೇ. 33 ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ;ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ. 34 ಆತನೇ ನನಗೆ ಯುದ್ಧವಿದ್ಯೆಯನ್ನು ಕಲಿಸಿದ್ದರಿಂದನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು. 35 ನೀನೇ ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ.ನಿನ್ನ ಬಲಗೈ ನನಗೆ ಆಧಾರ;ನಿನ್ನ ಕೃಪಾಕಟಾಕ್ಷವು ನನಗೆ ದೊಡ್ಡಸ್ತಿಕೆಯನ್ನು ಉಂಟುಮಾಡಿದೆ. 36 ನೀನು ನನ್ನ ಕಾಲುಗಳಿಗೆ ವಿಶಾಲ ಸ್ಥಳವನ್ನು ಕೊಟ್ಟಿದ್ದರಿಂದನನ್ನ ಪಾದಗಳು ಕದಲುವುದಿಲ್ಲ. 37 ನನ್ನ ಶತ್ರುಗಳನ್ನು ಹಿಂದಟ್ಟಿ ಹಿಡಿದುಕೊಳ್ಳುವೆನು;ಅವರನ್ನು ಇಲ್ಲದಂತೆ ಮಾಡುವವರೆಗೂ ಹಿಂದಿರುಗುವುದಿಲ್ಲ. 38 ಅವರನ್ನು ಹೊಡೆದು ಏಳಲಾರದಂತೆ ಮಾಡುವೆನು;ನನ್ನ ಪಾದದ ಕೆಳಗೆ ಬೀಳುವರು. 39 ನೀನು ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದೀ;ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನಮಾಡಿದ್ದೀ. 40 ನನ್ನ ಶತ್ರುಗಳು ನನಗೆ ಬೆನ್ನುಕೊಟ್ಟು ಓಡುವಂತೆ ಮಾಡಿದ್ದೀ;ನನ್ನ ಹಗೆಯವರನ್ನು ನಾನು ನಿರ್ಮೂಲಮಾಡುವೆನು. 41 ಅವರು ಕೂಗಿಕೊಂಡರೂ ರಕ್ಷಿಸುವವನಿಲ್ಲ;ಯೆಹೋವನಿಗೆ ಮೊರೆಯಿಟ್ಟರೂ ಆತನು ಉತ್ತರವನ್ನು ಕೊಡಲೇ ಇಲ್ಲ. 42 ಗಾಳಿಯಿಂದ ಬಡಿಸಿಕೊಂಡು ಹೋಗುವ ಧೂಳನ್ನೋ ಎಂಬಂತೆಅವರನ್ನು ಪುಡಿಪುಡಿಮಾಡಿದೆನು.ಬೀದಿಯಲ್ಲಿರುವ ಕೆಸರನ್ನೋ ಎಂಬಂತೆ ಅವರನ್ನು ಎಸೆದುಬಿಟ್ಟೆನು. 43 ಜನರ ಕಲಹಗಳಿಗೆ ನನ್ನನ್ನು ತಪ್ಪಿಸಿ ಜನಾಂಗಗಳಿಗೆ ದೊರೆಯಾಗುವಂತೆ ಮಾಡಿದ್ದೀ;ನಾನರಿಯದ ಜನಾಂಗದವರು ಸಹ ನನಗೆ ಅಧೀನರಾಗುವರು. 44 ನನ್ನ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ನನಗೆ ವಿಧೇಯರಾಗುವರು;ದೇಶಾಂತರದವರು ನನ್ನ ಮುಂದೆ ಅಂಜಿ ನಡುಗುವರು. 45 ಅವರು ಧೈರ್ಯಗುಂದಿದವರಾಗಿ ತಮ್ಮ ತಮ್ಮ ಕೋಟೆಗಳಿಂದ ನಡುಗುತ್ತಾ ಬರುವರು. 46 ಯೆಹೋವನು ಚೈತನ್ಯಸ್ವರೂಪನು;ನನ್ನ ಶರಣನಿಗೆ ಸ್ತೋತ್ರ; ನನ್ನನ್ನು ರಕ್ಷಿಸುವ ದೇವರಿಗೆ ಕೊಂಡಾಟವಾಗಲಿ. 47 ಆತನು ನನ್ನ ಶತ್ರುಗಳಿಗೆ ಪ್ರತಿದಂಡನೆಮಾಡುವ ದೇವರು;ಜನಾಂಗಗಳನ್ನು ನನಗೆ ಅಧೀನಪಡಿಸುತ್ತಾನೆ. 48 ಶತ್ರುಗಳಿಂದ ನನ್ನನ್ನು ಬಿಡಿಸುವಾತನೇ,ನೀನು ನನ್ನನ್ನು ನನ್ನ ಎದುರಾಳಿಗಳಿಗೆ ತಪ್ಪಿಸಿ ಉನ್ನತಪಡಿಸುತ್ತೀ;ಬಲಾತ್ಕಾರಿಗಳಿಂದ ನನ್ನನ್ನು ರಕ್ಷಿಸುತ್ತೀ. 49 ಈ ಕಾರಣದಿಂದ ಯೆಹೋವನೇ, ಅನ್ಯಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು;ನಿನ್ನ ನಾಮವನ್ನು ಸಂಕೀರ್ತಿಸುವೆನು. 50 ಆತನು ತಾನು ನೇಮಿಸಿದ ಅರಸನಿಗೋಸ್ಕರವಿಶೇಷ ರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ;ತಾನು ಅಭಿಷೇಕಿಸಿದ ದಾವೀದನಿಗೂ ಮತ್ತು ಅವನ ಸಂತತಿಯವರಿಗೂಸದಾಕಾಲ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ.