Leviticus 20 (BOKCV2)
1 ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ, 2 “ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು: ‘ಇಸ್ರಾಯೇಲರಲ್ಲಿಯಾಗಲಿ, ಇಸ್ರಾಯೇಲಿನಲ್ಲಿ ಪ್ರವಾಸಿಯಾದ ಪರಕೀಯರಲ್ಲಿಯಾಗಲಿ ಯಾವನಾದರೂ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟರೆ, ನಿಶ್ಚಯವಾಗಿ ಅವನಿಗೆ ಮರಣವನ್ನು ವಿಧಿಸಬೇಕು. ದೇಶದ ಜನರು ಅವನಿಗೆ ಕಲ್ಲೆಸೆಯಬೇಕು. 3 ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು. ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. ಏಕೆಂದರೆ ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಅಶುದ್ಧಮಾಡುವಂತೆ ತನ್ನ ಮಕ್ಕಳನ್ನು ಮೋಲೆಕನಿಗೆ ಕೊಟ್ಟಿದ್ದಾನೆ. 4 ಆ ಮನುಷ್ಯನು ತನ್ನ ಸಂತತಿಯನ್ನು ಮೋಲೆಕನಿಗೆ ಕೊಡುವಾಗ, ಜನರು ತಮ್ಮ ಕಣ್ಣುಗಳನ್ನು ಮರೆಮಾಡಿ, ಅವನನ್ನು ಕೊಲ್ಲದೆ ಹೋದರೆ, 5 ಆಗ ನಾನು ಆ ಮನುಷ್ಯನಿಗೂ, ಅವನ ಕುಟುಂಬಕ್ಕೂ ವಿರೋಧವಾಗಿಯೂ, ವಿಮುಖವಾಗಿಯೂ ಇರುವೆನು. ಮೋಲೆಕನನ್ನು ಪೂಜೆ ಮಾಡಿದ್ದಕ್ಕಾಗಿ ಅವನನ್ನೂ, ದೇವದ್ರೋಹಿಗಳಾಗಿ ಅವನನ್ನು ಹಿಂಬಾಲಿಸುವವರೆಲ್ಲರನ್ನೂ ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. 6 “ ‘ಇದಲ್ಲದೆ ಮಾಟಗಾರರನ್ನು ಮತ್ತು ಭೂತಪ್ರೇತಗಳನ್ನು ವಿಚಾರಿಸುವವರ ಬಳಿಗೆ ಹೋಗಿ, ಅವರ ಆಲೋಚನೆ ಕೇಳಿಕೊಂಡು ದೇವದ್ರೋಹಿಯಾದರೆ ನಾನು ಅಂಥ ಮನುಷ್ಯನಿಗೆ ವಿಮುಖನಾಗಿರುವೆನು. ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು. 7 “ ‘ಆದ್ದರಿಂದ ನೀವು ನಿಮ್ಮನ್ನು ಶುದ್ಧಪಡಿಸಿಕೊಳ್ಳಿರಿ ಮತ್ತು ಪರಿಶುದ್ಧರಾಗಿರಿ. ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. 8 ಇದಲ್ಲದೆ ನೀವು ನನ್ನ ಆಜ್ಞೆಗಳನ್ನು ಕೈಗೊಂಡು ಅವುಗಳನ್ನು ಪಾಲಿಸಬೇಕು. ನಿಮ್ಮನ್ನು ಶುದ್ಧಪಡಿಸುವ ಯೆಹೋವ ದೇವರು ನಾನೇ. 9 “ ‘ತನ್ನ ತಂದೆಯಾನ್ನಾಗಲಿ, ತನ್ನ ತಾಯಿಯನ್ನಾಗಲಿ ಶಪಿಸುವವರಿಗೆ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು. ಯಾರು ತನ್ನ ತಂದೆಯಾನ್ನಾಗಲಿ, ತನ್ನ ತಾಯಿಯನ್ನಾಗಲಿ ಶಪಿಸುವರೋ, ಅವರ ಪಾಪವು ಸ್ವಯಂಕೃತವಾದುದು. 10 “ ‘ಇದಲ್ಲದೆ ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿಚಾರ ಮಾಡಿದರೆ, ವ್ಯಭಿಚಾರ ಮಾಡುವವನಿಗೂ ಮತ್ತು ವ್ಯಭಿಚಾರ ಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು. 11 “ ‘ತನ್ನ ತಂದೆಯ ಹೆಂಡತಿಯೊಡನೆ ಸಂಗಮಿಸುವವನು ತನ್ನ ತಂದೆಗೆ ಮಾನಭಂಗ ಮಾಡಿದಂತೆ. ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು. ಅವರ ರಕ್ತವು ಅವರ ಮೇಲೆ ಇರುವುದು. 12 “ ‘ಒಬ್ಬನು ತನ್ನ ಸೊಸೆಯೊಂದಿಗೆ ಸಂಗಮಿಸಿದರೆ, ಅವರಿಬ್ಬರಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು. ಅವರು ವಿಕೃತವನ್ನು ಮಾಡಿದ್ದಾರೆ, ಅವರ ಪಾಪವು ಅವರ ಮೇಲೆ ಇರುವುದು. 13 “ ‘ಒಬ್ಬ ಮನುಷ್ಯನು ಸ್ತ್ರೀಯೊಂದಿಗೆ ಮಲಗುವಂತೆ ಮತ್ತೊಬ್ಬ ಮನುಷ್ಯನೊಂದಿಗೆ ಮಲಗಿದರೆ, ಅವರಿಬ್ಬರೂ ಅಸಹ್ಯವಾದದ್ದನ್ನು ಮಾಡಿದವರಾಗಿದ್ದಾರೆ. ಅವರಿಗೆ ನಿಶ್ಚಯವಾಗಿಯೂ ಮರಣದಂಡನೆ ವಿಧಿಸಬೇಕು. ಅವರ ರಕ್ತವು ಅವರ ಮೇಲೆ ಇರುವುದು. 14 “ ‘ಒಬ್ಬ ಮನುಷ್ಯನು ಒಬ್ಬ ಸ್ತ್ರೀಯನ್ನೂ, ಅವಳ ತಾಯಿಯನ್ನೂ ಮದುವೆ ಮಾಡಿಕೊಂಡರೆ ಅದು ದುಷ್ಟತನವಾಗಿದೆ. ಆದ್ದರಿಂದ ನಿಮ್ಮಲ್ಲಿ ದುಷ್ಟತನವು ಇರದಂತೆ ಆ ಮೂರು ಜನರನ್ನು ಬೆಂಕಿಯಿಂದ ಸುಡಿಸಿಬಿಡಬೇಕು. 15 “ ‘ಒಬ್ಬನು ಪಶುವಿನೊಂದಿಗೆ ಸಂಗಮಿಸಿದರೆ ಅವನಿಗೆ ನಿಶ್ಚಯವಾಗಿ ಮರಣದಂಡನೆಯಾಗಬೇಕು ಮತ್ತು ನೀವು ಆ ಪಶುವನ್ನು ವಧಿಸಬೇಕು. 16 “ ‘ಇದಲ್ಲದೆ ಒಬ್ಬ ಸ್ತ್ರೀಯು ಒಂದು ಪಶುವಿನೊಂದಿಗೆ ಸಂಗಮಿಸುವುದಕ್ಕಾಗಿ ಮಲಗಿಕೊಂಡರೆ, ನೀವು ಆ ಸ್ತ್ರೀಯನ್ನೂ, ಆ ಪಶುವನ್ನೂ ಕೊಲ್ಲಬೇಕು. ಅವರಿಗೆ ನಿಶ್ಚಯವಾಗಿ ಮರಣದಂಡನೆಯಾಗಬೇಕು. ಅವರ ಪಾಪವು ಅವರ ಮೇಲೆ ಇರುವುದು. 17 “ ‘ಒಬ್ಬನು ತನ್ನ ತಂದೆಯ ಇಲ್ಲವೆ ತನ್ನ ತಾಯಿಯ ಮಗಳಾದ ತನ್ನ ಸಹೋದರಿಯ ಬೆತ್ತಲೆತನವನ್ನು ನೋಡಿದರೆ, ಇಲ್ಲವೆ ಅವಳು ಅವನ ಬೆತ್ತಲೆತನವನ್ನು ನೋಡಿದರೆ ಅದು ದುಷ್ಟತನವೇ. ಅವರನ್ನು ತಮ್ಮ ಜನರ ಮಧ್ಯದಿಂದ ತೆಗೆದುಹಾಕಬೇಕು. ಅವರ ರಕ್ತವು ಅವರ ಮೇಲೆ ಇರುವುದು. ಅವನು ತನ್ನ ಸಹೋದರಿಯನ್ನು ಸಂಗಮಿಸಿದ್ದರಿಂದ ತನ್ನ ಅಪರಾಧವನ್ನು ತಾನೇ ಹೊತ್ತುಕೊಳ್ಳುವನು. 18 “ ‘ಒಬ್ಬ ಮನುಷ್ಯನು ಮುಟ್ಟಾದ ಸ್ತ್ರೀಯೊಂದಿಗೆ ಮಲಗಿ, ಆಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದರೆ, ಅವನು ಆಕೆಯ ಮುಟ್ಟಿನ ಮೂಲವನ್ನು ಬಹಿರಂಗಪಡಿಸಿದ್ದಾನೆ. ಆಕೆ ಅದನ್ನು ಬಹಿರಂಗಪಡಿಸಿದ್ದಾಳೆ. ಅವರಿಬ್ಬರನ್ನೂ ಸ್ವಜನರಿಂದ ಬಹಿಷ್ಕರಿಸಬೇಕು. 19 “ ‘ನೀನು ನಿನ್ನ ತಾಯಿಯ ಸಹೋದರಿ ಇಲ್ಲವೆ ತಂದೆಯ ಸಹೋದರಿಯೊಂದಿಗೆ ಲೈಂಗಿಕ ಸಂಪರ್ಕ ಮಾಡಬೇಡ. ಅದು ಸಮೀಪ ಬಂಧುವನ್ನು ಅಗೌರವಿಸಿದ ಹಾಗೆ ಅದಕ್ಕೆ ನೀವಿಬ್ಬರೂ ಜವಾಬ್ದಾರರು. 20 “ ‘ಒಬ್ಬನು ತನ್ನ ಚಿಕ್ಕಪ್ಪನ ಹೆಂಡತಿಯೊಂದಿಗೆ ಸಂಗಮಿಸಿದರೆ, ಅವನು ತನ್ನ ಚಿಕ್ಕಪ್ಪನನ್ನು ಅಗೌರವಿಸಿದಂತೆ. ಅವರು ತಮ್ಮ ಪಾಪವನ್ನು ಹೊತ್ತುಕೊಳ್ಳಬೇಕು. ಅವರು ಮಕ್ಕಳಿಲ್ಲದೆ ಸಾಯುವರು. 21 “ ‘ಒಬ್ಬನು ತನ್ನ ಸಹೋದರನ ಹೆಂಡತಿಯನ್ನು ತೆಗೆದುಕೊಂಡರೆ, ಅದು ಅಶುದ್ಧವಾದದ್ದು. ಏಕೆಂದರೆ ಅವನು ತನ್ನ ಸಹೋದರನನ್ನು ಅಗೌರವಿಸಿದ್ದಾನೆ. ಅವರು ಮಕ್ಕಳಿಲ್ಲದವರಾಗುವರು. 22 “ ‘ನೀವು ನನ್ನ ಎಲ್ಲಾ ನಿಯಮಗಳನ್ನೂ, ನನ್ನ ಎಲ್ಲಾ ನ್ಯಾಯಗಳನ್ನೂ ಕೈಗೊಂಡು ಪಾಲಿಸಬೇಕು. ಹೀಗಿದ್ದರೆ ನೀವು ವಾಸಿಸುವುದಕ್ಕೆ ನಾನು ನಿಮ್ಮನ್ನು ತರುವ ಆ ದೇಶವು ನಿಮ್ಮನ್ನು ಕಾರಿಬಿಡುವುದಿಲ್ಲ. 23 ನಾನು ನಿಮ್ಮೆದುರಿನಲ್ಲಿಯೇ ಹೊರಗೆ ಹಾಕಿದ ಜನಾಂಗಗಳಂತೆ ನೀವು ನಡೆಯಬಾರದು. ಏಕೆಂದರೆ ಅವರು ಇಂಥವುಗಳನ್ನೆಲ್ಲಾ ಮಾಡಿದ್ದಾರೆ. ಆದಕಾರಣ ನಾನು ಅವರನ್ನು ಕಂಡು ಅಸಹ್ಯಗೊಂಡಿದ್ದೇನೆ. 24 ಆದರೆ, “ನೀವು ಅವರ ದೇಶವನ್ನು ಸ್ವಾಧೀನಪಡಿಸಿಕೊಳ್ಳುವಿರಿ. ಹಾಲೂ ಜೇನೂ ಹರಿಯುವ ಆ ದೇಶವನ್ನು ನೀವು ಸ್ವಾಧೀನಪಡಿಸಿಕೊಳ್ಳುವಂತೆ ನಾನು ಅದನ್ನು ನಿಮಗೆ ಕೊಡುತ್ತೇನೆ.” ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಪಡಿಸಿದಂಥ ನಿಮ್ಮ ದೇವರಾಗಿರುವ ಯೆಹೋವ ದೇವರು ನಾನೇ. 25 “ ‘ಆದ್ದರಿಂದ ನೀವು ಶುದ್ಧವಾದ ಮತ್ತು ಅಶುದ್ಧವಾದ ಪಶುಗಳ ಮಧ್ಯದಲ್ಲಿಯೂ, ಅಶುದ್ಧವಾದ ಮತ್ತು ಶುದ್ಧವಾದ ಪಕ್ಷಿಗಳ ಮಧ್ಯದಲ್ಲಿಯೂ ವ್ಯತ್ಯಾಸ ಮಾಡಬೇಕು. ಇದಲ್ಲದೆ ನಾನು ನಿಮ್ಮಿಂದ ಪ್ರತ್ಯೇಕಿಸಿದ ಅಶುದ್ಧವಾದ ಪಶುಗಳಿಂದಲೂ ಇಲ್ಲವೆ ಪಕ್ಷಿಗಳಿಂದಲೂ ಇಲ್ಲವೆ ಭೂಮಿಯ ಮೇಲೆ ಚಲಿಸುವ ಯಾವ ತರವಾದ ಜೀವಿಯಿಂದಲೂ ನೀವು ನಿಮ್ಮ ಪ್ರಾಣಗಳನ್ನು ಅಶುದ್ಧಮಾಡಿಕೊಳ್ಳಬಾರದು. 26 ನೀವು ನನ್ನವರಾಗಿರುವಂತೆ ನಿಮ್ಮನ್ನು ಬೇರೆ ಜನರಿಂದ ಪ್ರತ್ಯೇಕಿಸಿದ ಯೆಹೋವ ದೇವರಾದ ನಾನು ಪರಿಶುದ್ಧನಾಗಿರುವುದರಿಂದ, ನೀವು ನನಗೆ ಪರಿಶುದ್ಧರಾಗಿರಬೇಕು. 27 “ ‘ಪುರುಷನಾಗಲಿ, ಸ್ತ್ರೀಯಾಗಲಿ ಮಾಟಗಾರರಾಗಿದ್ದರೆ ಇಲ್ಲವೆ ಭೂತಪ್ರೇತಗಳನ್ನು ವಿಚಾರಿಸುವವರಾಗಿದ್ದರೆ, ಅವರನ್ನು ನಿಶ್ಚಯವಾಗಿ ಕೊಲ್ಲಬೇಕು. ಅವರ ಪಾಪವು ಅವರ ಮೇಲೆ ಇರುವುದು.’ ”