Luke 11 (BOKCV2)
1 ಯೇಸು ಒಂದು ಸ್ಥಳದಲ್ಲಿ ಪ್ರಾರ್ಥನೆಮಾಡಿ ಮುಗಿಸಿದ ಮೇಲೆ, ಅವರ ಶಿಷ್ಯರಲ್ಲಿ ಒಬ್ಬನು ಅವರಿಗೆ, “ಕರ್ತದೇವರೇ, ಯೋಹಾನನು ತನ್ನ ಶಿಷ್ಯರಿಗೆ ಕಲಿಸಿದ ಹಾಗೆಯೇ ನಮಗೂ ಪ್ರಾರ್ಥನೆಮಾಡುವುದಕ್ಕೆ ಕಲಿಸಿರಿ,” ಎಂದು ಕೇಳಿದನು. 2 ಯೇಸು ಅವರಿಗೆ, “ನೀವು ಪ್ರಾರ್ಥನೆ ಮಾಡುವಾಗ ಈ ರೀತಿಯಾಗಿ ಪ್ರಾರ್ಥಿಸಿರಿ,“ಪರಲೋಕದಲ್ಲಿರುವ ನಮ್ಮ ತಂದೆಯೇ,ನಿಮ್ಮ ನಾಮವು ಪರಿಶುದ್ಧವೆಂದು ಎಣಿಕೆಯಾಗಿರಲಿ,ನಿಮ್ಮ ರಾಜ್ಯವು ಬರಲಿ.ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ. 3 ನಮ್ಮ ಅನುದಿನದ ಆಹಾರವನ್ನು ನಮಗೆ ಪ್ರತಿದಿನವೂ ದಯಪಾಲಿಸಿರಿ. 4 ನಮಗೆ ಪಾಪಮಾಡಿದವರನ್ನು, ನಾವು ಕ್ಷಮಿಸಿದಂತೆಯೇನಮ್ಮ ಪಾಪಗಳನ್ನು ಕ್ಷಮಿಸಿರಿ.ನಮ್ಮನ್ನು ಶೋಧನೆಯೊಳಗೆ ಸೇರಿಸದೆ, ಕೇಡಿನಿಂದ ನಮ್ಮನ್ನು ತಪ್ಪಿಸಿ.” 5 ಯೇಸು ಅವರಿಗೆ, “ನಿಮ್ಮಲ್ಲಿ ಯಾವನಿಗಾದರೂ ಒಬ್ಬ ಸ್ನೇಹಿತನಿರಲಾಗಿ, ಮಧ್ಯರಾತ್ರಿಯಲ್ಲಿ ಅವನ ಬಳಿಗೆ ಹೋಗಿ ಅವನಿಗೆ, ‘ಸ್ನೇಹಿತನೇ, ಮೂರು ರೊಟ್ಟಿಗಳನ್ನು ನನಗೆ ಸಾಲವಾಗಿ ಕೊಡು; 6 ಏಕೆಂದರೆ ನನ್ನ ಒಬ್ಬ ಸ್ನೇಹಿತನು ಪ್ರಯಾಣಮಾಡಿ ನನ್ನ ಬಳಿಗೆ ಬಂದಿದ್ದಾನೆ, ಅವನಿಗೆ ಬಡಿಸುವುದಕ್ಕೆ ನನ್ನಲ್ಲಿ ಏನೂ ಇಲ್ಲ,’ ಎಂದು ಕೇಳಲು 7 ಅವನು ಒಳಗಿನಿಂದಲೇ ಇವನಿಗೆ ಉತ್ತರವಾಗಿ, ‘ನನ್ನನ್ನು ತೊಂದರೆಪಡಿಸಬೇಡ. ಬಾಗಿಲು ಈಗ ಮುಚ್ಚಿದೆ, ಹಾಸಿಗೆಯಲ್ಲಿ ನನ್ನ ಮಕ್ಕಳು ನನ್ನ ಜೊತೆ ಮಲಗಿದ್ದಾರೆ. ನಾನೆದ್ದು ಕೊಡಲಾರೆನು,’ ಎಂದು ಹೇಳುವನು. 8 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಅವನು ಸ್ನೇಹಿತನಾಗಿರುವುದರಿಂದ ಎದ್ದು ಇವನಿಗೆ ಕೊಡದೆಹೋದರೂ ಮೇಲಿಂದ ಮೇಲೆ ನಾಚಿಕೆಪಡದೆ ಬೇಡುವುದರಿಂದ ಎದ್ದು ಇವನಿಗೆ ಬೇಕಾದಷ್ಟು ಕೊಡುವನು. 9 “ಕೇಳಿಕೊಳ್ಳಿರಿ ನಿಮಗೆ ಕೊಡಲಾಗುವುದು; ಹುಡುಕಿರಿ ನಿಮಗೆ ಸಿಗುವುದು; ತಟ್ಟಿರಿ ನಿಮಗೆ ಬಾಗಿಲು ತೆರೆಯಲಾಗುವುದು. 10 ಬೇಡಿಕೊಳ್ಳುವ ಪ್ರತಿಯೊಬ್ಬರು ಪಡೆದುಕೊಳ್ಳುವರು; ಹುಡುಕುವವರಿಗೆ ಸಿಗುವುದು; ತಟ್ಟುವವರಿಗೆ ಬಾಗಿಲು ತೆರೆಯಲಾಗುವುದು. 11 “ನಿಮ್ಮಲ್ಲಿ ತಂದೆಯಾಗಿರುವಾತನು, ತನ್ನ ಮಗನು ರೊಟ್ಟಿಯನ್ನು ಕೇಳಿದರೆ ಮಗನಿಗೆ ಕಲ್ಲನ್ನು ಕೊಡುವನೇ, ಮೀನನ್ನು ಕೇಳಿದರೆ, ಮೀನಿಗೆ ಬದಲಾಗಿ ಹಾವನ್ನು ಕೊಡುವನೇ? 12 ಇಲ್ಲವೆ ಮೊಟ್ಟೆಯನ್ನು ಕೇಳಿದರೆ, ಅವನಿಗೆ ಚೇಳನ್ನು ಕೊಡುವನೇ? 13 ಹಾಗಾದರೆ ಕೆಟ್ಟವರಾದ ನೀವೇ ನಿಮ್ಮ ಮಕ್ಕಳಿಗೆ ಒಳ್ಳೆಯವುಗಳನ್ನು ಕೊಡಬಲ್ಲವರಾದರೆ, ಪರಲೋಕದಲ್ಲಿರುವ ನಿಮ್ಮ ತಂದೆಯು ಎಷ್ಟೋ ಹೆಚ್ಚಾಗಿ ತಮ್ಮನ್ನು ಬೇಡಿಕೊಳ್ಳುವವರಿಗೆ ಪವಿತ್ರಾತ್ಮರನ್ನು ದಯಪಾಲಿಸುವರಲ್ಲವೇ!” ಎಂದು ನಾನು ನಿಮಗೆ ಹೇಳುತ್ತೇನೆ ಎಂದರು. 14 ಯೇಸು ಒಂದು ಮೂಕದೆವ್ವವನ್ನು ಹೊರಗೆ ಓಡಿಸುತ್ತಿದ್ದರು. ಆ ದೆವ್ವವು ಹೊರಟುಹೋದ ಮೇಲೆ, ಆ ಮೂಕನು ಮಾತನಾಡಿದನು. ಅದಕ್ಕೆ ಜನರು ಆಶ್ಚರ್ಯಪಟ್ಟರು. 15 ಆದರೆ ಅವರಲ್ಲಿ ಕೆಲವರು, “ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು. 16 ಇನ್ನು ಕೆಲವರು ಯೇಸುವನ್ನು ಪರೀಕ್ಷಿಸುವವರಾಗಿ ಪರಲೋಕದಿಂದ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಕೇಳಿದರು. 17 ಆದರೆ ಯೇಸು ಅವರ ಆಲೋಚನೆಗಳನ್ನು ತಿಳಿದು: “ತನಗೆ ತಾನೇ ವಿರೋಧವಾಗಿ ವಿಭಾಗಗೊಂಡರೆ ಪ್ರತಿಯೊಂದು ರಾಜ್ಯವು ನಾಶವಾಗುವುದು, ಒಂದು ಮನೆಯು ತನಗೆ ತಾನೇ ವಿರೋಧವಾಗಿ ವಿಭಾಗವಾದರೆ, ಅದು ಬಿದ್ದುಹೋಗುವುದು. 18 ಸೈತಾನನು ಸಹ ತನಗೆ ತಾನೇ ವಿರೋಧವಾಗಿ ತನ್ನಲ್ಲಿ ವಿಭಾಗವಾದರೆ, ಅವನ ರಾಜ್ಯವು ನಿಲ್ಲುವುದು ಹೇಗೆ? ಏಕೆಂದರೆ ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುತ್ತೇನೆಂದು ನೀವು ಹೇಳುತ್ತೀರಲ್ಲಾ. 19 ನಾನು ಬೆಲ್ಜೆಬೂಲನಿಂದ ದೆವ್ವಗಳನ್ನು ಓಡಿಸುವುದಾದರೆ, ನಿಮ್ಮ ಪುತ್ರರು ಯಾರಿಂದ ಅವುಗಳನ್ನು ಓಡಿಸುತ್ತಾರೆ? ಆದ್ದರಿಂದ, ನಿಮ್ಮವರೇ ನಿಮಗೆ ನ್ಯಾಯಾಧಿಪತಿಗಳಾಗಿರುವರು. 20 ನಾನು ದೇವರ ಬಲದಿಂದಲೇ ದೆವ್ವಗಳನ್ನು ಓಡಿಸುವುದಾದರೆ, ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ. 21 “ಆಯುಧಗಳನ್ನು ಧರಿಸಿಕೊಂಡು, ಬಲಿಷ್ಠನಾದವನೊಬ್ಬನು ತನ್ನ ಮನೆಯನ್ನು ಕಾಯುವುದಾದರೆ ಅವನ ಸೊತ್ತು ಸುರಕ್ಷಿತವಾಗಿರುವುದು. 22 ಆದರೆ ಅವನಿಗಿಂತ ಬಲಿಷ್ಠನು ಅವನ ಮೇಲೆ ಬಂದು ಅವನನ್ನು ಜಯಿಸಿ, ಅವನು ಭರವಸೆಯಿಟ್ಟಿದ್ದ ಆಯುಧಗಳನ್ನು ಅವನಿಂದ ತೆಗೆದುಕೊಂಡು ತನ್ನ ಸುಲಿಗೆಯನ್ನೆಲ್ಲಾ ಹಂಚುವನು. 23 “ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ. 24 “ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ, ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ಹುಡುಕಾಡಿದರೂ ಅದನ್ನು ಕಂಡುಕೊಳ್ಳದೆ ಅದು, ‘ನಾನು ಹೊರಟು ಬಂದ ನನ್ನ ಮನೆಗೆ ಹಿಂದಿರುಗುವೆನು,’ ಎಂದು ಹೇಳಿಕೊಂಡು ಬಂದು, 25 ಅದು ಬಂದು ಆ ಮನೆಯು ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ. 26 ಆ ಅಶುದ್ಧಾತ್ಮವು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ಅಶುದ್ಧಾತ್ಮಗಳನ್ನು ತನ್ನೊಂದಿಗೆ ಕರೆದುಕೊಂಡು ಅವನ ಒಳಗೆ ಸೇರಿ ಅಲ್ಲಿ ವಾಸಮಾಡುತ್ತವೆ. ಹೀಗೆ ಆ ಮನುಷ್ಯನ ಕಡೆಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು,” ಎಂದರು. 27 ಯೇಸು ಈ ಸಂಗತಿಗಳನ್ನು ಹೇಳುತ್ತಿದ್ದಾಗ, ಆ ಗುಂಪಿನಲ್ಲಿದ್ದ ಒಬ್ಬ ಸ್ತ್ರೀಯು ತನ್ನ ಸ್ವರವನ್ನೆತ್ತಿ ಅವರಿಗೆ, “ನಿಮ್ಮನ್ನು ಗರ್ಭದಲ್ಲಿ ಹೊತ್ತು, ನಿಮಗೆ ಹಾಲುಣಿಸಿದ ತಾಯಿ ಧನ್ಯಳು,” ಎಂದು ಹೇಳಿದಳು. 28 ಅದಕ್ಕೆ ಯೇಸು, “ಅದಕ್ಕಿಂತಲೂ ದೇವರ ವಾಕ್ಯವನ್ನು ಕೇಳಿ, ಅದನ್ನು ಅನುಸರಿಸುವವರು ಹೆಚ್ಚು ಭಾಗ್ಯವಂತರು,” ಎಂದರು. 29 ಜನರು ಗುಂಪುಗುಂಪಾಗಿ ಕೂಡಿಬಂದಿದ್ದಾಗ, ಯೇಸು, “ಇದು ದುಷ್ಟ ಸಂತತಿಯು. ಇದು ಸೂಚಕಕಾರ್ಯವನ್ನು ಹುಡುಕುತ್ತದೆ, ಪ್ರವಾದಿ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ದೊರಕದು. 30 ಏಕೆಂದರೆ ಯೋನನು ನಿನೆವೆ ಪಟ್ಟಣದವರಿಗೆ ಸೂಚನೆಯಾಗಿದ್ದಂತೆಯೇ, ಮನುಷ್ಯಪುತ್ರನಾದ ನಾನೇ ಈ ಸಂತತಿಗೆ ಸೂಚನೆಯಾಗಿರುವೆನು. 31 ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು ಇಲ್ಲಿದ್ದಾನೆ. 32 ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ,” ಎಂದು ಹೇಳಿದರು. 33 “ಯಾರೂ ದೀಪವನ್ನು ಹಚ್ಚಿ ಮರೆಯಾದ ಸ್ಥಳದಲ್ಲಾಗಲಿ ಬಟ್ಟಲ ಕೆಳಗಾಗಲಿ ಇಡುವುದಿಲ್ಲ. ಮನೆಯೊಳಕ್ಕೆ ಬರುವವರಿಗೆ, ಬೆಳಕು ಕಾಣಿಸುವಂತೆ ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರಷ್ಟೆ. 34 ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ. ಆದ್ದರಿಂದ ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವುದು. ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವು ಸಹ ಕತ್ತಲೆಯಾಗಿರುವುದು. 35 ಆದ್ದರಿಂದ, ನಿನ್ನಲ್ಲಿರುವ ಬೆಳಕು ಕತ್ತಲೆಯಾಗದಂತೆ ನೋಡಿಕೋ. 36 ದೇಹದ ಯಾವುದೊಂದು ಭಾಗದಲ್ಲಿಯೂ ಕತ್ತಲೆಯಾಗಿರದೆ, ನಿನ್ನ ದೇಹವೆಲ್ಲವೂ ಪೂರ್ಣವಾಗಿ ಬೆಳಕಾಗಿರುವುದಾದರೆ, ಪ್ರಕಾಶಮಾನವಾದ ದೀಪವು ನಿನಗೆ ಬೆಳಕುಕೊಡುವಂತೆ ಸಮಸ್ತವೂ ಬೆಳಕಾಗಿರುವುದು,” ಎಂದು ಹೇಳಿದರು. 37 ಯೇಸು ಮಾತನಾಡುವುದನ್ನು ಮುಗಿಸಿದಾಗ, ಒಬ್ಬ ಫರಿಸಾಯನು ತನ್ನೊಂದಿಗೆ ಊಟ ಮಾಡಬೇಕೆಂದು ಯೇಸುವನ್ನು ಬೇಡಿಕೊಂಡನು, ಆಗ ಅವರು ಒಳಗೆ ಹೋಗಿ ಊಟಕ್ಕೆ ಕೂತುಕೊಂಡರು. 38 ಆದರೆ ಊಟಕ್ಕೆ ಮೊದಲು ಯೇಸು ಕೈತೊಳೆಯದೆ ಇರುವುದನ್ನು ಫರಿಸಾಯನು ಕಂಡು ಆಶ್ಚರ್ಯಪಟ್ಟನು. 39 ಆಗ ಕರ್ತದೇವರು ಅವನಿಗೆ, “ಫರಿಸಾಯರಾದ ನೀವು, ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ. 40 ಮೂರ್ಖರೇ! ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಸಹ ಮಾಡಿದನಲ್ಲವೇ? 41 ನೀವು ನಿಮ್ಮೊಳಗೆ ಅಂಟಿಕೊಂಡಿರುವವುಗಳನ್ನು ಬಡವರಿಗೆ ದಾನ ಮಾಡಿಬಿಡಿರಿ, ಆಗ ನಿಮಗೆ ಎಲ್ಲವೂ ಶುದ್ಧವಾಗಿರುವುವು. 42 “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಪುದೀನ, ಸದಾಪು ಮತ್ತು ಸಕಲ ವಿಧವಾದ ಸೊಪ್ಪುಗಳಲ್ಲಿ ದಶಮಭಾಗವನ್ನು ಕೊಟ್ಟು, ನ್ಯಾಯವನ್ನೂ ದೇವರ ಪ್ರೀತಿಯನ್ನೂ ಲಕ್ಷಿಸದೆ ಹೋಗುತ್ತೀರಿ. ಅವುಗಳನ್ನು ಮಾಡಿದ ನೀವು ಇವುಗಳನ್ನೂ ಅವಶ್ಯವಾಗಿ ಮಾಡಬೇಕಾಗಿತ್ತು. 43 “ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಇಷ್ಟಪಡುತ್ತೀರಿ. 44 “ನಿಮಗೆ ಕಷ್ಟ, ಏಕೆಂದರೆ ನೀವು ನೆಲಸಮವಾದ ಸಮಾಧಿಗಳಂತೆ ಇದ್ದೀರಿ, ಅವುಗಳ ಮೇಲೆ ನಡೆದಾಡುವ ಮನುಷ್ಯರು ಅವುಗಳನ್ನು ಅರಿಯರು,” ಎಂದು ಹೇಳಿದರು. 45 ನಿಯಮ ಬೋಧಕ ಒಬ್ಬನು ಯೇಸುವಿಗೆ, “ಬೋಧಕರೇ, ನೀವು ಇವುಗಳನ್ನು ಹೇಳುವುದರಿಂದ ನಮ್ಮನ್ನು ಸಹ ಅವಮಾನಪಡಿಸುತ್ತೀರಿ,” ಎಂದನು. 46 ಅದಕ್ಕೆ ಯೇಸು, “ನಿಯಮ ಪಂಡಿತರೇ, ನಿಮಗೂ ಕಷ್ಟ, ಏಕೆಂದರೆ ಹೊರಲಾಗದ ಹೊರೆಗಳನ್ನು ಮನುಷ್ಯರ ಮೇಲೆ ಹೊರಿಸುತ್ತೀರಿ, ನೀವಾದರೋ ಈ ಹೊರೆಗಳನ್ನು ನಿಮ್ಮ ಬೆರಳುಗಳಲ್ಲಿ ಒಂದರಿಂದಾದರೂ ಮುಟ್ಟುವುದಿಲ್ಲ. 47 “ನಿಮಗೆ ಕಷ್ಟ, ಏಕೆಂದರೆ ನಿಮ್ಮ ಪಿತೃಗಳು ಪ್ರವಾದಿಗಳನ್ನು ಕೊಂದರು, ನೀವು ಅವರ ಸಮಾಧಿಗಳನ್ನು ಕಟ್ಟುತ್ತೀರಿ. 48 ಇದರಿಂದ ನಿಜವಾಗಿಯೂ ನಿಮ್ಮ ಪಿತೃಗಳ ಕೃತ್ಯಗಳನ್ನು ನೀವು ಒಪ್ಪಿಕೊಳ್ಳುವಂತೆ ಸಾಕ್ಷಿಕರಿಸುತ್ತೀರಿ; ಏಕೆಂದರೆ ಅವರು ನಿಜವಾಗಿಯೂ ಪ್ರವಾದಿಗಳನ್ನು ಕೊಂದರು, ನೀವೋ ಅವರ ಸಮಾಧಿಗಳನ್ನು ಕಟ್ಟುತ್ತೀರಿ. 49 ಈ ಕಾರಣದಿಂದ, ದೇವರ ಜ್ಞಾನವು ಸಹ ಹೇಳಿರುವುದೇನೆಂದರೆ, ‘ನಾನು ಅವರ ಬಳಿಗೆ ಪ್ರವಾದಿಗಳನ್ನೂ ಅಪೊಸ್ತಲರನ್ನೂ ಕಳುಹಿಸುವೆನು, ಅವರಲ್ಲಿ ಕೆಲವರನ್ನು ಅವರು ಕೊಲ್ಲುವರು ಮತ್ತು ಹಿಂಸೆಪಡಿಸುವರು.’ 50 ಹೀಗೆ ಲೋಕಾದಿಯಿಂದ ಸುರಿಸಲಾದ ಎಲ್ಲಾ ಪ್ರವಾದಿಗಳ ರಕ್ತಕ್ಕೆ ಈ ಸಂತತಿಯು ಲೆಕ್ಕ ಕೊಡಬೇಕಾಗಿರುವುದು, 51 ಹೇಬೆಲನ ರಕ್ತ ಮೊದಲುಗೊಂಡು ಬಲಿಪೀಠಕ್ಕೂ ದೇವಾಲಯಕ್ಕೂ ಮಧ್ಯದಲ್ಲಿ ಹತವಾದ ಜಕರೀಯನ ರಕ್ತದವರೆಗೂ ಈ ಸಂತತಿಯು ಉತ್ತರಕೊಡಬೇಕು. ಹೌದು, ಈ ಸಂತತಿಯವರೇ ಇದಕ್ಕೆಲ್ಲಾ ಉತ್ತರಕೊಡಬೇಕೆಂದು, ನಾನು ನಿಮಗೆ ನಿಜವಾಗಿ ಹೇಳುತ್ತೇನೆ. 52 “ನಿಯಮ ಪಂಡಿತರೇ, ನಿಮಗೆ ಕಷ್ಟ, ಏಕೆಂದರೆ ನೀವು ಜ್ಞಾನದ ಬೀಗದ ಕೈಯನ್ನು ತೆಗೆದುಕೊಂಡಿದ್ದೀರಿ. ನೀವಂತೂ ಒಳಗೆ ಪ್ರವೇಶಿಸಲಿಲ್ಲ; ಒಳಗೆ ಪ್ರವೇಶಿಸುತ್ತಿರುವವರಿಗೂ ನೀವು ತಡೆಗಟ್ಟುತ್ತೀರಿ,” ಎಂದು ಹೇಳಿದರು. 53 ಬಳಿಕ ಯೇಸು ಅಲ್ಲಿಂದ ಹೊರಗೆ ಬಂದಾಗ, ನಿಯಮ ಬೋಧಕರೂ ಫರಿಸಾಯರೂ ಕೋಪಾವೇಶವುಳ್ಳವರಾಗಿ, ಯೇಸು ಇನ್ನೂ ಹೆಚ್ಚು ವಿಷಯಗಳನ್ನು ಮಾತನಾಡುವಂತೆ ಅವರನ್ನು ಕೆಣಕಿದರು, 54 ಏಕೆಂದರೆ ಯೇಸುವಿನ ಮಾತಿನಲ್ಲಿ ಏನನ್ನಾದರೂ ಕಂಡುಹಿಡಿದು ಅವರ ಮೇಲೆ ತಪ್ಪು ಹೊರಿಸಬೇಕೆಂದು ಹೊಂಚಿನೋಡುತ್ತಿದ್ದರು.