Romans 1 (BOKCV2)
1 ಕ್ರಿಸ್ತ ಯೇಸುವಿನ ದಾಸನೂ ಅಪೊಸ್ತಲನಾಗುವುದಕ್ಕೆ ಕರೆಹೊಂದಿದವನೂ ದೇವರ ಸುವಾರ್ತೆಯನ್ನು ಸಾರುವುದಕ್ಕೆ ಪ್ರತ್ಯೇಕಗೊಂಡವನೂ ಆಗಿರುವ ಪೌಲನು ಬರೆಯುವ ಪತ್ರ. 2 ದೇವರು ಮುಂಚಿತವಾಗಿ ಪವಿತ್ರ ವೇದಗಳಲ್ಲಿ ತಮ್ಮ ಪ್ರವಾದಿಗಳ ಮೂಲಕ ವಾಗ್ದಾನಮಾಡಿದ, 3 ಈ ಸುವಾರ್ತೆಯು ದೇವಪುತ್ರನ ವಿಷಯವಾದದ್ದು. ಯೇಸು ಮನುಷ್ಯತ್ವದ ಪ್ರಕಾರ ದಾವೀದನ ಸಂತಾನದವರೂ 4 ಸತ್ತವರೊಳಗಿಂದ ಪುನರುತ್ಥಾನಗೊಂಡು ಪರಿಶುದ್ಧತೆಯ ಆತ್ಮದ ಪ್ರಕಾರ ದೇವಪುತ್ರರೆಂದು ಪ್ರಬಲವಾಗಿ ನಿರ್ಣಯಿಸಲಾದವರೂ ಆಗಿದ್ದಾರೆ. ಇವರೇ ನಮ್ಮ ಕರ್ತ ಯೇಸು ಕ್ರಿಸ್ತ. 5 ಯೇಸುವಿನ ನಾಮದ ಮಹಿಮೆಗಾಗಿ ಯೆಹೂದ್ಯರಲ್ಲದವರಲ್ಲಿಯೂ ನಂಬಿಕೆಯ ವಿಧೇಯತೆ ಉಂಟಾಗುವುದಕ್ಕಾಗಿ ನಾವು ಯೇಸುವಿನ ಮೂಲಕವಾಗಿ ಕೃಪೆಯನ್ನೂ ಅಪೊಸ್ತಲರಾಗಿರುವುದನ್ನೂ ಹೊಂದಿದೆವು. 6 ಯೇಸು ಕ್ರಿಸ್ತನವರಾಗಲು ಕರೆಯಲಾದವರಲ್ಲಿ ಯೆಹೂದ್ಯರಲ್ಲದವರಲ್ಲಿ ನೀವೂ ಸಹ ಸೇರಿದ್ದೀರಿ. 7 ರೋಮ್ ನಗರದಲ್ಲಿ ದೇವರಿಗೆ ಪ್ರಿಯರೂ ದೇವರ ಪವಿತ್ರ ಜನರಾಗುವುದಕ್ಕೆ ಕರೆಯಲಾದವರೂ ಆಗಿರುವವರೆಲ್ಲರಿಗೂ: ನಮ್ಮ ತಂದೆಯಾದ ದೇವರಿಂದಲೂ ಕರ್ತ ಯೇಸು ಕ್ರಿಸ್ತರಿಂದಲೂ ಕೃಪೆಯೂ ಶಾಂತಿಯೂ ಆಗಲಿ. 8 ಮೊದಲನೆಯದಾಗಿ, ನಿಮ್ಮ ನಂಬಿಕೆಯು ಲೋಕದಲ್ಲೆಲ್ಲಾ ಪ್ರಸಿದ್ಧಿಗೆ ಬಂದದ್ದರಿಂದ ನಿಮ್ಮೆಲ್ಲರ ವಿಷಯವಾಗಿ ಕ್ರಿಸ್ತ ಯೇಸುವಿನ ಮೂಲಕ ನನ್ನ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 9 ದೇವಪುತ್ರನ ಸುವಾರ್ತೆಯನ್ನು ಸಾರುವುದರಿಂದ ದೇವರನ್ನೇ ನನ್ನ ಆತ್ಮದಲ್ಲಿ ಸೇವೆ ಮಾಡುವವನಾಗಿದ್ದೇನೆ. ಇದಕ್ಕೆ ದೇವರೇ ನನ್ನ ಸಾಕ್ಷಿ. 10 ನಾನು ಪ್ರಾರ್ಥನೆ ಮಾಡುವಾಗಲೆಲ್ಲಾ ತಪ್ಪದೆ ನಿಮಗೋಸ್ಕರ ವಿಜ್ಞಾಪನೆ ಮಾಡುತ್ತಾ ಇನ್ನು ಮೇಲಾದರೂ ನಿಮ್ಮ ಬಳಿಗೆ ಬರುವುದಕ್ಕೆ ದೇವರ ಚಿತ್ತದಿಂದ ನನಗೆ ಯಾವ ರೀತಿಯಲ್ಲಾದರೂ ಅನುಕೂಲವಾಗಬೇಕೆಂದು ಬೇಡಿಕೊಳ್ಳುತ್ತೇನೆ. 11 ನಿಮ್ಮನ್ನು ದೃಢಪಡಿಸುವುದಕ್ಕಾಗಿ ನಾನು ನಿಮಗೆ ಕೆಲವು ಆತ್ಮಿಕ ವರಗಳನ್ನು ಕೊಡಲು ನಿಮ್ಮನ್ನು ನೋಡಬೇಕೆಂದು ಅಪೇಕ್ಷಿಸುತ್ತೇನೆ. 12 ಹೀಗೆ ನಾವು ಒಬ್ಬರಿಂದೊಬ್ಬರ ನಂಬಿಕೆಯಿಂದ ಪರಸ್ಪರ ಪ್ರೋತ್ಸಾಹಗೊಳ್ಳಬೇಕು. 13 ಪ್ರಿಯರೇ, ನನ್ನ ಸೇವೆಯು ಯೆಹೂದ್ಯರಲ್ಲದವರಲ್ಲಿ ಫಲಉಂಟಾದಂತೆ ನಿಮ್ಮಲ್ಲಿಯೂ ಫಲಉಂಟಾಗಬೇಕೆಂದು ನಿಮ್ಮ ಬಳಿಗೆ ಬರುವುದಕ್ಕೆ ಅನೇಕಾವರ್ತಿ ಉದ್ದೇಶಿಸಿದೆನು. ಆದರೆ ಅದಕ್ಕೆ ಇಂದಿನವರೆಗೂ ಅಡ್ಡಿಯಾಯಿತೆಂದು ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ. 14 ಗ್ರೀಕರಿಗೂ ಗ್ರೀಕರಲ್ಲದವರಿಗೂ ಜ್ಞಾನಿಗಳಿಗೂ ಮೂಢರಿಗೂ ನಾನು ಸಾಲಗಾರನಾಗಿದ್ದೇನೆ. 15 ಹೀಗಿರುವುದರಿಂದ ರೋಮ್ ನಗರದಲ್ಲಿರುವ ನಿಮಗೂ ಸಹ ಸುವಾರ್ತೆಯನ್ನು ಸಾರುವುದಕ್ಕೆ ನಾನು ಉತ್ಸುಕನಾಗಿದ್ದೇನೆ. 16 ನಾನು ಸುವಾರ್ತೆಯ ವಿಷಯದಲ್ಲಿ ನಾಚಿಕೊಳ್ಳುವವನಲ್ಲ. ಏಕೆಂದರೆ ಅದು ಮೊದಲು ಯೆಹೂದ್ಯರಿಗೆ ಆಮೇಲೆ ಯೆಹೂದ್ಯರಲ್ಲದವರಿಗೆ, ಹೀಗೆ ನಂಬುವವರೆಲ್ಲರಿಗೂ ರಕ್ಷಣೆಯನ್ನು ಉಂಟುಮಾಡುವ ದೇವರ ಶಕ್ತಿಯಾಗಿದೆ. 17 ದೇವರಿಂದ ದೊರಕುವ ನೀತಿಯು ಸುವಾರ್ತೆಯಲ್ಲಿ ಪ್ರಕಟವಾಗಿದೆ. “ನೀತಿವಂತನು ನಂಬಿಕೆಯಿಂದಲೇ ಬದುಕುವನು,” ಎಂದು ಬರೆದಿರುವ ಪ್ರಕಾರ, ಆ ನೀತಿಯು ಪ್ರಾರಂಭದಿಂದ ಕೊನೆಯವರೆಗೆ ನಂಬಿಕೆಯಿಂದಲೇ ಆದದ್ದು. 18 ದುಷ್ಟತನದಿಂದ ಸತ್ಯವನ್ನು ಅಡಗಿಸುವವರಾದ ಮನುಷ್ಯರ ಎಲ್ಲಾ ವಿಧವಾದ ಭಕ್ತಿಹೀನತೆ ಹಾಗೂ ದುಷ್ಟತನದ ಮೇಲೆ ದೇವರ ರೌದ್ರವು ಪರಲೋಕದಿಂದ ಪ್ರಕಟವಾಗುತ್ತಿದೆ. 19 ದೇವರ ವಿಷಯವಾಗಿ ತಿಳಿಯಬಹುದಾದದ್ದನ್ನು ಅವರಿಗೆ ಸ್ಪಷ್ಟಪಡಿಸಲಾಗಿದೆ. ಏಕೆಂದರೆ ಅದನ್ನು ಅವರಿಗೆ ದೇವರೇ ಪ್ರಕಟಿಸಿದರು. 20 ಹೇಗೆಂದರೆ ಕಣ್ಣಿಗೆ ಕಾಣದ ಗುಣಲಕ್ಷಣಗಳಾಗಿರುವ ದೇವರ ಗುಣವೂ ನಿತ್ಯಶಕ್ತಿಯೂ ದೈವಸ್ವಭಾವವೂ ಜಗದ ಸೃಷ್ಟಿ ದಿನದಿಂದ ಅವರು ಸೃಷ್ಟಿಸಿದವುಗಳ ಮೂಲಕ ಸ್ಪಷ್ಟವಾಗಿ ಕಂಡುಬರುತ್ತಿವೆ. ಹೀಗಿರುವುದರಿಂದ ಜನರಿಗೆ ತಪ್ಪಿಸಿಕೊಳ್ಳಲು ನೆಪ ಇಲ್ಲವಾಗಿದೆ. 21 ಏಕೆಂದರೆ ದೇವರನ್ನು ಅವರು ತಿಳಿದಿದ್ದರೂ ದೇವರೆಂದು ಮಹಿಮೆ ಪಡಿಸಲಿಲ್ಲ, ದೇವರ ಉಪಕಾರ ಸ್ಮರಿಸಲಿಲ್ಲ. ಆದರೆ ಅವರು ತಮ್ಮ ವಿಚಾರಗಳಲ್ಲಿ ವ್ಯರ್ಥರಾದರು. ವಿವೇಕವಿಲ್ಲದ ಅವರ ಹೃದಯವು ಕತ್ತಲಾಯಿತು. 22 ತಾವು ಜ್ಞಾನಿಗಳೆಂದು ಹೇಳಿಕೊಂಡರೂ ಮೂಢರಾಗಿದ್ದಾರೆ. 23 ಲಯವಿಲ್ಲದ ದೇವರ ಮಹಿಮೆಯನ್ನು ಲಯವಾಗುವ ಮನುಷ್ಯ, ಪಶು, ಪಕ್ಷಿ, ಸರ್ಪಾದಿಗಳ ಮೂರ್ತಿಗಳೊಂದಿಗೆ ಬದಲಿಸಿಕೊಂಡರು. 24 ಆದಕಾರಣ ಅವರು ತಮ್ಮ ಹೃದಯದ ದುರಾಶೆಗಳಂತೆ ನಡೆದು ತಮ್ಮ ದೇಹಗಳನ್ನು ಮಲಿನ ಮಾಡಿಕೊಳ್ಳಲಿ ಎಂದು ದೇವರು ಅವರನ್ನು ಅಶುದ್ಧತೆಗೆ ಒಪ್ಪಿಸಿಬಿಟ್ಟರು. 25 ಅವರು ದೇವರ ಸತ್ಯವನ್ನು ಸುಳ್ಳನ್ನಾಗಿ ಬದಲಿಸಿಕೊಂಡು, ಸೃಷ್ಟಿಕರ್ತನನ್ನು ಆರಾಧಿಸದೆ ಸೃಷ್ಟಿವಸ್ತುಗಳನ್ನೇ ಪೂಜಿಸಿ ಸೇವೆ ಸಲ್ಲಿಸುವವರಾದರು. ಸೃಷ್ಟಿ ಕರ್ತನೇ ನಿರಂತರವಾಗಿ ಸ್ತುತಿ ಹೊಂದತಕ್ಕವರು. ಆಮೆನ್. 26 ಅವರು ಇಂಥದ್ದನ್ನು ಮಾಡಿದ್ದರಿಂದ ದೇವರು ಅವರನ್ನು ಕೇವಲ ಲಜ್ಜಾಸ್ಪದವಾದ ಕಾಮಾಭಿಲಾಷೆಗೆ ಒಪ್ಪಿಸಿಬಿಟ್ಟರು. ಹೇಗೆಂದರೆ ಅವರ ಸ್ತ್ರೀಯರು ಸಹ ಸ್ವಾಭಾವಿಕವಾದ ಭೋಗವನ್ನು ಬಿಟ್ಟು, ಅಸ್ವಾಭಾವಿಕವಾದದ್ದನ್ನು ಅನುಸರಿಸಿದರು. 27 ಅದರಂತೆ ಗಂಡಸರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರೊಂದಿಗೊಬ್ಬರು ಕಾಮಾತುರದಿಂದ ತಾಪಗೊಂಡರು. ಗಂಡಸರ ಸಂಗಡ ಗಂಡಸರು ಕೇವಲ ಅವಲಕ್ಷಣ ಕೃತ್ಯಗಳನ್ನು ನಡೆಸಿ ತಮ್ಮ ತಪ್ಪಿಗೆ ತಕ್ಕ ದಂಡನೆಯನ್ನು ಹೊಂದುವವರಾದರು. 28 ಇದಲ್ಲದೆ, ದೇವರನ್ನು ಒಪ್ಪಿಕೊಳ್ಳಲು ಅವರಿಗೆ ಇಷ್ಟವಿಲ್ಲದ್ದರಿಂದ ಅಲ್ಲದ ಕೃತ್ಯಗಳನ್ನು ನಡೆಸುವವರಾಗುವಂತೆ ದೇವರು ಅನಾಚಾರದ ಮನಸ್ಸಿಗೆ ಅವರನ್ನು ಒಪ್ಪಿಸಿದರು. 29 ಅವರು ಸಕಲ ವಿಧವಾದ ಅನ್ಯಾಯ, ದುರ್ಮಾರ್ಗತನ, ಲೋಭ, ದುಷ್ಟತ್ವ, ಹೊಟ್ಟೆಕಿಚ್ಚು, ಕೊಲೆ, ಜಗಳ, ಕಪಟ, ಹಗೆತನಗಳಿಂದಲೂ ತುಂಬಿದವರಾದರು. 30 ಅವರು ಕಿವಿ ಊದುವವರೂ ಚಾಡಿಹೇಳುವವರೂ ದೇವರನ್ನು ದ್ವೇಷಿಸುವವರೂ ಸೊಕ್ಕಿನವರೂ ಅಹಂಕಾರಿಗಳೂ ಬಡಾಯಿ ಕೊಚ್ಚುವವರೂ ಕೇಡನ್ನು ಕಲ್ಪಿಸುವವರೂ ತಂದೆತಾಯಿಗಳ ಮಾತನ್ನು ಕೇಳದವರೂ 31 ವಿವೇಚನೆಯಿಲ್ಲದವರೂ ನಂಬಿಕೆಯಿಲ್ಲದವರೂ ಮಮತೆಯಿಲ್ಲದವರೂ ಕರುಣೆಯಿಲ್ಲದವರೂ ಆದರು. 32 ಇಂಥವುಗಳನ್ನು ನಡೆಸುವವರು ಮರಣಕ್ಕೆ ಪಾತ್ರರಾಗಿದ್ದಾರೆಂಬ ದೈವವಿಧಿಯನ್ನು ತಿಳಿದಿದ್ದರೂ ಅವರು ತಾವೇ ಅವುಗಳನ್ನು ಮಾಡುವುದಲ್ಲದೆ ಹಾಗೆ ಮಾಡುವವರನ್ನು ಮೆಚ್ಚುತ್ತಾರೆ.