2 Corinthians 1 (IRVK)
1 ದೇವರ ಚಿತ್ತಾನುಸಾರ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೂ ಸಹೋದರನಾದ ತಿಮೊಥೆಯನೂ ಕೊರಿಂಥದಲ್ಲಿರುವ ದೇವರ ಸಭೆಯವರಿಗೂ ಅಖಾಯ ಸೀಮೆಯಲ್ಲಿ ಇರುವ ದೇವಜನರೆಲ್ಲರಿಗೂ ಬರೆಯುವುದೇನಂದರೆ, 2 ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಕೃಪೆಯು, ಶಾಂತಿಯು ಉಂಟಾಗಲಿ. 3 ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಕನಿಕರವುಳ್ಳ ತಂದೆಯೂ ಸಕಲ ವಿಧವಾಗಿ ಸಂತೈಸುವ ದೇವರೂ ಆಗಿದ್ದು, 4 ನಮಗೆ ಸಂಭವಿಸುವ ಎಲ್ಲಾ ಸಂಕಟಗಳಲ್ಲಿ ನಮ್ಮನ್ನು ಸಂತೈಸುವವನಾಗಿದ್ದಾನೆ. ಹೀಗೆ ದೇವರಿಂದ ನಮಗಾಗುವ ಆದರಣೆಯ ಮೂಲಕ ನಾವು ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸುವುದಕ್ಕೆ ಶಕ್ತರಾಗುತ್ತೇವೆ. 5 ಏಕೆಂದರೆ ಕ್ರಿಸ್ತನ ನಿಮಿತ್ತ ನಮಗೆ ಬಾಧೆಗಳು ಹೇಗೆ ಹೇರಳವಾಗಿ ಉಂಟಾಗುತ್ತವೆಯೋ ಹಾಗೆಯೇ ಕ್ರಿಸ್ತನ ಮೂಲಕವಾಗಿ ಹೆಚ್ಚಾದ ಆದರಣೆಯೂ ನಮಗೆ ದೊರೆಯುತ್ತದೆ. 6 ನಾವು ಕಷ್ಟಗಳನ್ನನುಭವಿಸುವುದರಿಂದ ನಿಮಗೆ ಆದರಣೆಯೂ, ರಕ್ಷಣೆಯೂ ಉಂಟಾಗುತ್ತದೆ. ನಾವು ಸಮಾಧಾನದಿಂದಿರುವುದಾದರೆ ಅದರಿಂದ ನಿಮಗೆ ಆದರಣೆ ಆಗುತ್ತದೆ. ನಾವು ಅನುಭವಿಸುವಂಥ ಬಾಧೆಗಳನ್ನು ನೀವೂ ತಾಳ್ಮೆಯಿಂದ ಸಹಿಸಿಕೊಳ್ಳುವಂತೆ ಅದು ನಿಮ್ಮನ್ನು ಧೈರ್ಯಗೊಳಿಸುತ್ತದೆ. 7 ನೀವು ಬಾಧೆಗಳಲ್ಲಿ ನಮ್ಮೊಂದಿಗೆ ಪಾಲುಗಾರರಾಗಿರುವ ಪ್ರಕಾರವೇ ಆದರಣೆಯೂ ಪಾಲುಗಾರರಾಗಿದ್ದೀರೆಂದು ತಿಳಿದಿರುವುದರಿಂದ ನಿಮ್ಮ ವಿಷಯದಲ್ಲಿ ನಮಗಿರುವ ನಿರೀಕ್ಷೆಯು ದೃಢವಾಗಿದೆ. 8 ಸಹೋದರರೇ, ಆಸ್ಯ ಸೀಮೆಯಲ್ಲಿ ನಾವು ಅನುಭವಿಸಿದ ಕಷ್ಟ-ಸಂಕಟಗಳು ನಿಮಗೆ ತಿಳಿದಿರಲಿ ಎಂದು ನಾನು ಬಯಸುತ್ತೇನೆ. ಅಲ್ಲಿ ನಮ್ಮ ಶಕ್ತಿಗೆ ಮೀರಿದಂಥ ತೊಂದರೆಗಳನ್ನು ಅನುಭವಿಸಿ ನಾವು ಕುಗ್ಗಿಹೋಗಿ ಬದುಕುವ ನಿರೀಕ್ಷೆಯೇ ಇಲ್ಲವಾದವು. 9 ಸಾಯುವುದು ನಿಶ್ಚಯವೆಂದೆನಿಸಿದಾಗ ನಾವು ನಮ್ಮ ಮೇಲೆ ಭರವಸವನ್ನಿಟ್ಟುಕೊಳ್ಳದೆ ಸತ್ತವರನ್ನು ಎಬ್ಬಿಸುವ ದೇವರ ಮೇಲೆಯೇ ಭರವಸವಿಡುವವರಾಗಬೇಕೆಂದು ಇದೆಲ್ಲಾ ಸಂಭವಿಸಿತು. 10 10-11 ಆತನು ನಮ್ಮನ್ನು ಅಂಥ ಭಯಂಕರ ಮರಣದಿಂದ ತಪ್ಪಿಸಿದನು. ಮುಂದೆಯೂ ತಪ್ಪಿಸುವನು. ನೀವು ನಮಗೋಸ್ಕರ ಪ್ರಾರ್ಥನೆ ಮಾಡುವುದರ ನಿಮಿತ್ತವಾಗಿ ಇನ್ನು ಮುಂದೆಯೂ ತಪ್ಪಿಸುವನೆಂದು ಆತನಲ್ಲಿ ನಿರೀಕ್ಷೆಯಿಟ್ಟವರಾಗಿದ್ದೇವೆ. ಹೀಗೆ ಅನೇಕರ ವಿಜ್ಞಾಪನೆಗಳಿಂದ ನಮಗೆ ದೊರಕುವ ಉಪಕಾರಕ್ಕಾಗಿ ನಮ್ಮ ನಿಮಿತ್ತ ಅನೇಕರಿಂದ ದೇವರಿಗೆ ಕೃತಜ್ಞತಾಸ್ತುತಿ ಉಂಟಾಗುವುದು. 12 ನಾವು ಕೇವಲ ಮನುಷ್ಯಜ್ಞಾನವನ್ನು ಬಳಸದೇ ದೇವರ ಕೃಪೆಯನ್ನು ಆಶ್ರಯಿಸಿ ಪರಿಶುದ್ಧರಾಗಿಯೂ, ಪ್ರಾಮಾಣಿಕರಾಗಿಯೂ ಈ ಲೋಕದಲ್ಲಿ ಮುಖ್ಯವಾಗಿ ನಿಮ್ಮ ವಿಷಯದಲ್ಲಿ ನಡೆದುಕೊಂಡೆವೆಂದು ನಮ್ಮ ಮನಸ್ಸಾಕ್ಷಿ ಹೇಳುತ್ತದೆ. ಇದೇ ನಮಗಿರುವ ಹೆಮ್ಮೆ. 13 ನೀವು ನಮ್ಮ ಪತ್ರಿಕೆಗಳಲ್ಲಿ ಓದಿ ಅರ್ಥಮಾಡಿಕೊಂಡ ಸಂಗತಿಗಳನ್ನೇ ಹೊರತು ಬೇರೆ ಯಾವುದನ್ನು ನಾವು ನಿಮಗೆ ಬರೆಯಲಿಲ್ಲ. 14 ನೀವು ನಮ್ಮನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದೀರಿ ಕಡೆ ವರೆಗೂ ಒಪ್ಪಿಕೊಳ್ಳುವಿರಿ ಎಂಬುದಾಗಿಯೂ, ನಮ್ಮ ಕರ್ತನಾದ ಯೇಸುವಿನ ಪ್ರತ್ಯಕ್ಷತೆಯ ದಿನದಲ್ಲಿ ನೀವು ನಮ್ಮ ಅಭಿಮಾನಕ್ಕೆ ಕಾರಣವಾದಂತೆ ನಾವು ನಿಮ್ಮ ಅಭಿಮಾನಕ್ಕೆ ಕಾರಣರಾಗಿರುವೆವು ಎಂದು ನೀವು ಒಪ್ಪಿಕೊಳ್ಳುತ್ತೀರಿ. 15 ನಾನು ಇಂಥ ಭರವಸವುಳ್ಳವನಾಗಿದ್ದರಿಂದ ನೀವು ಎರಡನೆಯ ಸಾರಿ ಕೃಪಾರ್ಶೀವಾದವನ್ನು ಪಡೆದುಕೊಳ್ಳುವಂತೆ ನಿಮ್ಮ ಬಳಿಗೆ ಮೊದಲೇ ಬರಬೇಕೆಂದಿದ್ದೆನು. 16 ಮೊದಲು ನಿಮ್ಮ ಬಳಿಗೆ ಬಂದು ನಿಮ್ಮ ಮಾರ್ಗವಾಗಿ ಮಕೆದೋನ್ಯಕ್ಕೆ ಹೋಗಿ ಅನಂತರ ಮಕೆದೋನ್ಯವನ್ನು ಬಿಟ್ಟು ತಿರುಗಿ ನಿಮ್ಮ ಬಳಿಗೆ ಬಂದು ನೀವು ನನ್ನನ್ನು ಯೂದಾಯಕ್ಕೆ ಕಳುಹಿಸಿ ಕೊಡಬೇಕೆಂದು ಯೋಚಿಸಿದ್ದೆನು. 17 ಹೀಗೆ ಯೋಚಿಸಿದ್ದರಿಂದ ನಾನು ಚಂಚಲಚಿತ್ತನಾಗಿದ್ದೇನೋ? ಕೇವಲ ಪ್ರಾಪಂಚಿಕ ಗುಣಮಟ್ಟಕ್ಕೆ ಯೋಚಿಸಿ ಈ ಕ್ಷಣ “ಹೌದು” ಮರು ಕ್ಷಣ “ಇಲ್ಲ” ಎಂದು ಹೇಳುವವನಂತಿದ್ದೇನೋ? ಎಂದಿಗೂ ಇಲ್ಲ. 18 ದೇವರು ನಂಬಿಗಸ್ತನಾಗಿರುವಂತೆ ನಾವು ನಿಮಗೆ ಹೇಳುವ ಮಾತು ಒಂದು ಸಾರಿ “ಹೌದೆಂದು” ಮತ್ತೊಂದು ಸಾರಿ “ಇಲ್ಲವೆಂದು” ಆಗಿರಲು ಸಾಧ್ಯವಿಲ್ಲ. ಅದಕ್ಕೆ ನಂಬಿಗಸ್ತನಾದ ದೇವರೇ ಸಾಕ್ಷಿಯಾಗಿದ್ದಾನೆ. 19 ನಾನೂ, ಸಿಲ್ವಾನನೂ, ತಿಮೊಥೆಯನೂ ನಿಮ್ಮಲ್ಲಿ ಪ್ರಸಿದ್ಧಿಪಡಿಸಿದ ದೇವರ ಮಗನಾದ ಯೇಸು ಕ್ರಿಸ್ತನು ಈ ಕ್ಷಣ “ಹೌದು” ಮರುಕ್ಷಣ “ಇಲ್ಲ” ಎಂದು ಹೇಳುವವನಲ್ಲ. ಆತನಲ್ಲಿ ಹೌದೆಂಬುದೇ ನೆಲೆಗೊಂಡಿದೆ. 20 ಆದ್ದರಿಂದ ದೇವರ ಕೊಟ್ಟಿರುವ ವಾಗ್ದಾನಗಳೆಲ್ಲವೂ ಕ್ರಿಸ್ತನಲ್ಲಿ “ಹೌದು” ಎಂಬುದೇ ಆಗಿದೆ. ನಮ್ಮ ಮೂಲಕ ದೇವರಿಗೆ ಮಹಿಮೆಯುಂಟಾಗುವಂತೆ ಆತನ ಮೂಲಕವಾಗಿ ನಾವು “ಆಮೆನ್” ಎಂದು ಹೇಳುತ್ತೇವೆ. 21 ನಮ್ಮನ್ನು ಅಭಿಷೇಕಿಸಿ ಕ್ರಿಸ್ತನ ಅನ್ಯೋನ್ಯತೆಯಲ್ಲಿ ಸೇರಿಸಿ ನಮ್ಮನ್ನು ನಿಮ್ಮೊಂದಿಗೆ ಸ್ಥಿರಪಡಿಸುವವನು ದೇವರೇ. 22 ಆತನು ನಮ್ಮ ಮೇಲೆ ತನ್ನ ಮುದ್ರೆಯನ್ನೊತ್ತಿ ನಮ್ಮ ಹೃದಯಗಳಲ್ಲಿ ಪವಿತ್ರಾತ್ಮನನ್ನು ಖಾತರಿಯಾಗಿ ಅನುಗ್ರಹಿಸಿದ್ದಾನೆ. 23 ನಿಮಗೆ ತೊಂದರೆ ಆಗಬಾರದೆಂದೇ ನಾನು ಇದುವರೆಗೆ ಕೊರಿಂಥಕ್ಕೆ ಬರಲಿಲ್ಲ. ಇದನ್ನು ಹೃದಯ ಪೂರ್ವಕವಾಗಿ ಹೇಳುತ್ತಿದ್ದೇನೆ. ಇದಕ್ಕೆ ದೇವರೇ ಸಾಕ್ಷಿ. 24 ನಿಮ್ಮ ನಂಬಿಕೆಯ ವಿಷಯದಲ್ಲಿಯೂ ನಾವು ನಿಮ್ಮ ಮೇಲೆ ದೊರೆತನಮಾಡುವವರೆಂಬುದಾಗಿ ಅಲ್ಲ. ನೀವು ನಂಬಿಕೆಯಲ್ಲಿ ದೃಢವಾಗಿರುವಂತೆ ನಿಮ್ಮ ಸಂತೋಷಕ್ಕೆ ನಾವು ಸಹಾಭಾಗಿಗಳಾಗಿದೇವಷ್ಟೇ.
In Other Versions
2 Corinthians 1 in the ANTPNG2D
2 Corinthians 1 in the BNTABOOT
2 Corinthians 1 in the BOATCB2
2 Corinthians 1 in the BOGWICC
2 Corinthians 1 in the BOHNTLTAL
2 Corinthians 1 in the BOILNTAP
2 Corinthians 1 in the BOKHWOG
2 Corinthians 1 in the KBT1ETNIK
2 Corinthians 1 in the TBIAOTANT