Ezekiel 3 (BOKCV2)
1 ಇದಾದ ಮೇಲೆ ದೇವರು ನನಗೆ, “ಮನುಷ್ಯಪುತ್ರನೇ, ನಿನಗೆ ಸಿಕ್ಕಿದ್ದ ಈ ಸುರುಳಿಯನ್ನು ತಿಂದು, ಹೋಗಿ ಇಸ್ರಾಯೇಲಿನ ಜನರ ಸಂಗಡ ಮಾತನಾಡು,” ಎಂದರು. 2 ಆಗ ನಾನು ನನ್ನ ಬಾಯನ್ನು ತೆರೆದೆನು, ಅವರು ನನಗೆ ತಿನ್ನುವುದಕ್ಕೆ ಸುರುಳಿಯನ್ನು ಕೊಟ್ಟರು. 3 ಆಗ ಅವರು ನನಗೆ ಹೇಳಿದ್ದೇನೆಂದರೆ, “ಮನುಷ್ಯಪುತ್ರನೇ, ನಾನು ಕೊಡುವ ಈ ಸುರುಳಿಯನ್ನು ತಿಂದು, ಹೊಟ್ಟೆಯನ್ನು ತುಂಬಿಸಿಕೋ,” ಎಂದರು. ಆಗ ನಾನು ಅದನ್ನು ತಿಂದೆನು. ಅದು ನನ್ನ ಬಾಯಲ್ಲಿ ಜೇನಿನ ಹಾಗೆ ಸಿಹಿಯಾಗಿತ್ತು. 4 ನನಗೆ ಅವರು, “ಮನುಷ್ಯಪುತ್ರನೇ, ಹೋಗು; ಇಸ್ರಾಯೇಲಿನ ಜನರ ಬಳಿಗೆ ಹೋಗಿ, ನನ್ನ ಮಾತುಗಳನ್ನು ಅವರಿಗೆ ಹೇಳು. 5 ನಿನ್ನನ್ನು ಅಸ್ಪಷ್ಟ ಭಾಷೆಯ ಮತ್ತು ಅನ್ಯಭಾಷೆಯ ಜನರ ಬಳಿಗೆ ಕಳುಹಿಸದೆ, ಇಸ್ರಾಯೇಲಿನ ಜನರ ಬಳಿಗೆ ಕಳುಹಿಸುತ್ತಿದ್ದೇನೆ. 6 ನಾನು ನಿನ್ನನ್ನು ಅಸ್ಪಷ್ಟ ಮಾತು ಮತ್ತು ಅನ್ಯಭಾಷೆ ಹೊಂದಿರುವ ಅನೇಕ ಜನರ ಬಳಿ ಕಳುಹಿಸುತ್ತಿಲ್ಲ. ಏಕೆಂದರೆ ಅವರ ಪದಗಳು ನಿಮಗೆ ಅರ್ಥವಾಗುವುದಿಲ್ಲ. ಇಂಥವರ ಕಡೆಗೆ ನಾನು ನಿನ್ನನ್ನು ಕಳುಹಿಸಿದ ಪಕ್ಷದಲ್ಲಿ, ನಿಶ್ಚಯವಾಗಿ ಅವರು ನಿನ್ನ ಮಾತಿಗೆ ಕಿವಿಗೊಡುತ್ತಿದ್ದರು. 7 ಆದರೆ ಇಸ್ರಾಯೇಲಿನ ಜನರೋ ನಿನ್ನ ಮಾತನ್ನು ಕೇಳಲು ಸಿದ್ಧರಿಲ್ಲ. ಏಕೆಂದರೆ ಅವರು ನನ್ನ ಮಾತನ್ನು ಕೇಳಲು ಸಿದ್ಧರಿಲ್ಲ. ಅವರೆಲ್ಲರು ಗರ್ವಿಗಳು ಹಾಗೂ ಹಟಮಾರಿಗಳು. 8 ಆದರೆ ನಾನು ನಿನ್ನ ಮುಖವನ್ನು ಅವರ ಮುಖಗಳ ಎದುರಿಗೆ ಕಠಿಣ ಮಾಡಿದ್ದೇನೆ. ಅವರ ಹಟಮಾರಿತನಕ್ಕೆ ಪ್ರತಿಯಾಗಿ, ನಿನ್ನನ್ನು ಹಟವಾದಿಯನ್ನಾಗಿಸುವೆನು. 9 ನಾನು ನಿನ್ನ ಹಣೆಯನ್ನು ಅತ್ಯಂತ ಕಠಿಣವಾದ ಕಲ್ಲಿನಂತೆಯೂ ವಜ್ರದಂತೆಯೂ ಮಾಡುವೆನು. ಅವರು ತಿರುಗಿಬೀಳುವ ಜನರಾದರೂ ನೀನು ಅವರಿಗೆ ಭಯಪಡಬೇಡ ಅಥವಾ ಗಾಬರಿಯಾಗಬೇಡ,” ಎಂದರು. 10 ಇದಲ್ಲದೆ ಅವರು ನನಗೆ, “ಮನುಷ್ಯಪುತ್ರನೇ, ನಾನು ನಿನ್ನ ಸಂಗಡ ಆಡುವ ಈ ನನ್ನ ಮಾತುಗಳನ್ನೆಲ್ಲಾ ಕೇಳಿ ಹೃದಯದಲ್ಲಿ ಅಂಗೀಕರಿಸಿಕೋ. 11 ಸೆರೆಯಾಗಿರುವ ನಿನ್ನ ಜನರ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು. ಅವರು ಕೇಳಿದರೂ ಕೇಳದಿದ್ದರೂ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ,’ ಎಂದು ಅವರಿಗೆ ಹೇಳು,” ಎಂದನು. 12 ಆಮೇಲೆ ದೇವರಾತ್ಮರು ನನ್ನನ್ನು ಎತ್ತಿಕೊಂಡು ಹೋದರು. ಮಹಿಮೆಯಿಂದ ಕೂಡಿದ ಯೆಹೋವ ದೇವರ ಮಹಿಮೆಯು ಅವರ ವಾಸಸ್ಥಾನದಲ್ಲಿ ಸ್ತೋತ್ರವಾಗಲಿ ಎಂಬ ಮಹಾಶಬ್ದವು ನನ್ನ ಹಿಂದೆ ಕೇಳಿಸಿತು. 13 ನಾನು ಒಂದಕ್ಕೊಂದು ತಗಲುವ ಆ ಜೀವಿಗಳ ರೆಕ್ಕೆಗಳ ಶಬ್ದವನ್ನೂ, ಅವುಗಳ ಬಳಿಯಲ್ಲಿದ್ದ ಚಕ್ರಗಳ ಶಬ್ದವನ್ನೂ, ಮಹಾ ಘೋಷದ ಶಬ್ದವು ನುಗ್ಗಿ ಬರುತ್ತಿರುವುದನ್ನೂ ಕೇಳಿದೆನು. 14 ಹೀಗೆ ದೇವರಾತ್ಮರು ನನ್ನನ್ನು ಎತ್ತಿಕೊಂಡು ಹೋದರು. ನಾನು ಕಹಿತನ ಮತ್ತು ಕೋಪದ ಆತ್ಮದಿಂದ ಮುನ್ನಡೆದೆನು. ಆದರೆ ಯೆಹೋವ ದೇವರ ಕೈ ನನ್ನ ಮೇಲೆ ಬಲವಾಗಿತ್ತು. 15 ಆಮೇಲೆ ನಾನು ಕೆಬಾರ್ ನದಿಯ ದಡದಲ್ಲಿ ವಾಸಿಸುತ್ತಿದ್ದ ತೆಲ್ ಅಬೀಬಿನ ಸೆರೆಯವರ ಬಳಿಗೆ ಬಂದೆನು. ನಾನು ಬಹು ದುಃಖಿತನಾಗಿ ಅವರು ಕುಳಿತಿದ್ದ ಕಡೆಗೆ ನಾನು ಏಳು ದಿನಗಳ ಕಾಲ ಅವರ ಜೊತೆಗೆ ಕುಳಿತುಕೊಂಡೆನು. 16 ಏಳು ದಿವಸಗಳಾದ ಮೇಲೆ ಯೆಹೋವ ದೇವರ ವಾಕ್ಯವು ನನಗೆ ಬಂದು, 17 “ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇಲಿನ ಮನೆತನದವರಿಗೆ ಕಾವಲುಗಾರನನ್ನಾಗಿ ನೇಮಿಸಿದ್ದೇನೆ. ಆದ್ದರಿಂದ ನೀನು ನನ್ನ ಬಾಯಿಂದ ಹೊರಡುವ ವಾಕ್ಯವನ್ನು ಕೇಳಿ, ನನ್ನ ಪರವಾಗಿ ಅವರನ್ನು ಎಚ್ಚರಿಸು. 18 ನಾನು ದುಷ್ಟನಿಗೆ, ‘ನೀನು ನಿಶ್ಚಯವಾಗಿ ಸಾಯುವೆ,’ ಎಂದು ಹೇಳುವಾಗ, ನೀನು ಅವನನ್ನು ಎಚ್ಚರಿಸದೆ, ಅವನು ತನ್ನ ದುರ್ಮಾರ್ಗಗಳನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳುವಂತೆ ನೀನು ಅವನಿಗೆ ಬುದ್ಧಿಹೇಳದೆ ಹೋದರೆ, ಆ ದುಷ್ಟ ಮನುಷ್ಯನು ತನ್ನ ಪಾಪಗಳಿಂದಲೇ ಸಾಯಬೇಕಾಗುವದು; ಆದರೆ ಅವನ ಸಾವಿಗೆ ನಿನ್ನನ್ನೇ ಹೊಣೆಮಾಡುವೆನು. 19 ಆದರೆ ನೀನು ದುಷ್ಟನನ್ನು ಎಚ್ಚರಿಸಿದರೂ ಅವನು ತನ್ನ ದುಷ್ಟತನವನ್ನೂ, ದುರ್ಮಾರ್ಗವನ್ನೂ ಬಿಟ್ಟು ತಿರುಗಿಕೊಳ್ಳದೆ ಹೋದರೆ, ಅವನು ತನ್ನ ಪಾಪಗಳಿಂದಲೇ ಸಾಯುವನು. ಆದರೆ ನೀನು ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ. 20 “ಯಾವಾಗ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡುವನೋ, ಆಗ ನಾನು ಅವನ ಮುಂದೆ ಅಡತಡೆಯನ್ನು ಇಡುವೆನು, ಅವನು ಸಾಯುವನು. ನೀನು ಅವನನ್ನು ಎಚ್ಚರಿಸದೆ ಇದ್ದುದರಿಂದಲೇ ಅವನು ತನ್ನ ಪಾಪದಲ್ಲಿ ಸಾಯುವನು. ಅವನು ಮಾಡಿರುವ ಸುಕೃತ್ಯಗಳು ಲೆಕ್ಕಕ್ಕೆ ಬರುವುದಿಲ್ಲ. ಆದರೆ ಅವನ ಸಾವಿಗೆ ನೀನೇ ಹೊಣೆಯಾಗುವೆ. 21 ಆದರೂ ನೀತಿವಂತನು ಪಾಪಮಾಡದಂತೆ ಎಚ್ಚರಿಸಿದ ಮೇಲೆ ಅವನು ಪಾಪಮಾಡದೆ ಎಚ್ಚರಗೊಂಡರೆ, ಈ ಕಾರಣ ಜೀವದಿಂದ ಉಳಿಯುವನು; ನೀನೂ ನಿನ್ನ ಪ್ರಾಣವನ್ನು ಉಳಿಸಿಕೊಳ್ಳುವೆ.” 22 ಆಗ ಅಲ್ಲಿ ಯೆಹೋವ ದೇವರ ಹಸ್ತವು ನನ್ನ ಮೇಲಿತ್ತು. ನನಗೆ ಅವರು ಹೇಳಿದ್ದೇನೆಂದರೆ, “ಎದ್ದೇಳು, ಬಯಲು ಸೀಮೆಗೆ ಹೋಗು ಮತ್ತು ಅಲ್ಲಿ ನಾನು ನಿನ್ನ ಸಂಗಡ ಮಾತನಾಡುವೆನು.” 23 ಆಮೇಲೆ ನಾನು ಎದ್ದು ಬಯಲುಸೀಮೆಯ ಕಡೆಗೆ ಹೋದೆನು. ಯೆಹೋವ ದೇವರ ಮಹಿಮೆಯು ಅಲ್ಲಿ ನಿಂತಿತ್ತು. ಅದು ಕೆಬಾರ್ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿತ್ತು. ಅದನ್ನು ಕಂಡು ನಾನು ಅಡ್ಡ ಬಿದ್ದೆನು. 24 ಆಮೇಲೆ ದೇವರಾತ್ಮ ನನ್ನೊಳಗೆ ಪ್ರವೇಶಿಸಿ, ನನ್ನನ್ನು ನನ್ನ ಪಾದದ ಮೇಲೆ ನಿಲ್ಲಿಸಿ ಮಾತನಾಡಿ, ನನಗೆ ಹೇಳಿದ್ದೇನೆಂದರೆ, “ಹೋಗು, ನಿನ್ನ ಮನೆಯಲ್ಲಿ ನೀನು ಅಡಗಿಕೋ. 25 ಮನುಷ್ಯಪುತ್ರನೇ, ಇಗೋ, ಅವರು ನಿನ್ನನ್ನು ಹಗ್ಗಗಳಿಂದ ಕಟ್ಟುವರು. ನೀನು ಅವರಿಂದ ಹೊರಗೆ ಹೋಗಲು ಆಗುವುದಿಲ್ಲ. 26 ಇದಲ್ಲದೆ ನಾನು ನಿನ್ನ ನಾಲಿಗೆ ಸೇದಿ ಹೋಗುವಹಾಗೆ ಮಾಡುವೆನು. ಆಗ ನೀನು ಮೂಕನಾಗಿ ಅವರನ್ನು ಗದರಿಸುವವನಾಗಲಾರೆ. ಅವರು ತಿರುಗಿಬೀಳುವ ಜನರಾಗಿದ್ದಾರೆ. 27 ಆದರೆ ನಾನು ನಿನ್ನ ಸಂಗಡ ಮಾತನಾಡುವಾಗ ನಾನು ನಿನ್ನ ಬಾಯನ್ನು ತೆರೆಯುವೆನು. ಆಗ ನೀನು ಅವರಿಗೆ, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ.’ ಕೇಳುವವನು ಕೇಳಲಿ, ಕೇಳದವನು ಕೇಳದೇ ಇರಲಿ. ಏಕೆಂದರೆ ಅವರು ತಿರುಗಿಬೀಳುವ ಜನರಾಗಿದ್ದಾರೆಂದು ಹೇಳಬೇಕು.