John 18 (BOKCV2)
1 ಯೇಸು ಪ್ರಾರ್ಥನೆಯನ್ನು ಮುಗಿಸಿದ ಮೇಲೆ ತಮ್ಮ ಶಿಷ್ಯರೊಂದಿಗೆ ಕೆದ್ರೋನ್ ಹಳ್ಳದ ಆಚೆಗೆ ಹೋದರು. ಮತ್ತೊಂದು ಕಡೆ ಇರುವ ತೋಟದೊಳಗೆ ಯೇಸು ಮತ್ತು ಅವರ ಶಿಷ್ಯರು ಪ್ರವೇಶಿಸಿದರು. 2 ಅವರನ್ನು ಹಿಡಿದುಕೊಡಲಿದ್ದ ಯೂದನಿಗೂ ಆ ಸ್ಥಳವು ಗೊತ್ತಿತ್ತು. ಏಕೆಂದರೆ ಅನೇಕ ಸಾರಿ ಯೇಸು ತಮ್ಮ ಶಿಷ್ಯರೊಂದಿಗೆ ಅಲ್ಲಿ ಸೇರುತ್ತಿದ್ದರು. 3 ಯೂದನು ಸೈನಿಕರ ತಂಡವನ್ನೂ ಮುಖ್ಯಯಾಜಕರಿಂದ ಮತ್ತು ಫರಿಸಾಯರಿಂದ ಕಾವಲಾಳುಗಳನ್ನೂ ಕರೆದುಕೊಂಡು ತೋಟಕ್ಕೆ ಬಂದನು. ಸೈನಿಕರು ಮತ್ತು ಕಾವಲಾಳುಗಳು ದೀಪಗಳನ್ನು, ಪಂಜುಗಳನ್ನು ಮತ್ತು ಆಯುಧಗಳನ್ನು ಹಿಡಿದುಕೊಂಡಿದ್ದರು. 4 ಆಗ ಯೇಸು ತಮಗೆ ಸಂಭವಿಸುವುದನ್ನೆಲ್ಲಾ ತಿಳಿದುಕೊಂಡು ಮುಂದಕ್ಕೆ ಹೋಗಿ ಅವರಿಗೆ, “ನೀವು ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು, 5 ಅವರು ಯೇಸುವಿಗೆ, “ನಜರೇತಿನ ಯೇಸುವನ್ನು,” ಎಂದರು.ಅದಕ್ಕೆ ಯೇಸು ಅವರಿಗೆ, “ನಾನೇ ಆತನು,” ಎಂದರು. ಅವರನ್ನು ಹಿಡಿದುಕೊಡಲಿದ್ದ ಯೂದನು ಸಹ ಅವರೊಂದಿಗೆ ನಿಂತಿದ್ದನು. 6 ಯೇಸು ಅವರಿಗೆ, “ನಾನೇ ಆತನು,” ಎಂದು ಹೇಳಿದಾಗ ಅವರು ಹಿಂದಕ್ಕೆ ಸರಿದು ನೆಲಕ್ಕೆ ಬಿದ್ದರು. 7 ಆಗ ಯೇಸು ಅವರಿಗೆ ತಿರುಗಿ, “ನೀವು, ಯಾರನ್ನು ಹುಡುಕುತ್ತೀರಿ?” ಎಂದು ಕೇಳಲು,ಅವರು, “ನಜರೇತಿನ ಯೇಸುವನ್ನು,” ಎಂದರು. 8 ಅದಕ್ಕೆ ಯೇಸು, “ನಾನೇ ಆತನು ಎಂದು ನಿಮಗೆ ಹೇಳಿದೆನಲ್ಲಾ, ನೀವು ನನ್ನನ್ನೇ ಹುಡುಕುವುದಾದರೆ ಇವರನ್ನು ಬಿಟ್ಟುಬಿಡಿರಿ,” ಎಂದರು. 9 ಹೀಗೆ, “ನೀನು ನನಗೆ ಕೊಟ್ಟವರಲ್ಲಿ ಯಾರನ್ನೂ ನಾನು ಕಳೆದುಕೊಳ್ಳಲಿಲ್ಲ,” ಎಂದು ತಾವೇ ಹೇಳಿದ ಮಾತು ನೆರವೇರಿತು. 10 ಆಗ ಸೀಮೋನ ಪೇತ್ರನು ತನ್ನಲ್ಲಿದ್ದ ಕತ್ತಿಯನ್ನು ತೆಗೆದು ಮಹಾಯಾಜಕನ ಆಳನ್ನು ಹೊಡೆದು ಅವನ ಬಲಗಿವಿಯನ್ನು ಕತ್ತರಿಸಿದನು. ಆ ಸೇವಕನ ಹೆಸರು ಮಲ್ಕ. 11 ಆಗ ಯೇಸು ಪೇತ್ರನಿಗೆ, “ನಿನ್ನ ಕತ್ತಿಯನ್ನು ಒರೆಯಲ್ಲಿ ಹಾಕು! ನನ್ನ ತಂದೆಯು ನನಗೆ ಕೊಟ್ಟ ಪಾತ್ರೆಯಿಂದ ನಾನು ಕುಡಿಯಬಾರದೋ?” ಎಂದು ಹೇಳಿದರು. 12 ತರುವಾಯ ಸೈನಿಕರೂ ಸೈನ್ಯಾಧಿಕಾರಿಯೂ ಯೆಹೂದ್ಯರ ಕಾವಲಾಳುಗಳೂ ಯೇಸುವನ್ನು ಹಿಡಿದು ಕಟ್ಟಿದರು. 13 ಅವರನ್ನು ಮೊದಲು ಅನ್ನನ ಬಳಿಗೆ ಕರೆದುಕೊಂಡು ಹೋದರು. ಅವನು ಆ ವರ್ಷದ ಮಹಾಯಾಜಕನಾಗಿದ್ದ ಕಾಯಫನ ಮಾವನಾಗಿದ್ದನು. 14 “ಜನರಿಗೋಸ್ಕರ ಒಬ್ಬ ಮನುಷ್ಯನು ಸಾಯುವುದು ಹಿತ,” ಎಂದು ಯೆಹೂದ್ಯರಿಗೆ ಸಲಹೆ ಕೊಟ್ಟ ಕಾಯಫನು ಇವನೇ. 15 ಸೀಮೋನ ಪೇತ್ರನು ಮತ್ತು ಇನ್ನೊಬ್ಬ ಶಿಷ್ಯನು ಯೇಸುವನ್ನು ಹಿಂಬಾಲಿಸಿದರು. ಆ ಶಿಷ್ಯನು ಮಹಾಯಾಜಕನಿಗೆ ಪರಿಚಯವಿದ್ದುದರಿಂದ ಯೇಸುವಿನ ಸಂಗಡ ಮಹಾಯಾಜಕನ ಅಂಗಳದೊಳಗೆ ಹೋದನು. 16 ಆದರೆ ಪೇತ್ರನು ಬಾಗಿಲಿನ ಬಳಿಯಲ್ಲಿ ಹೊರಗೆ ನಿಂತಿದ್ದನು. ಮಹಾಯಾಜಕನಿಗೆ ಪರಿಚಯವಿದ್ದ ಆ ಇನ್ನೊಬ್ಬ ಶಿಷ್ಯನು ಹೊರಗೆ ಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಗೆ ಕರೆದುಕೊಂಡು ಬಂದನು. 17 ಆಗ ದ್ವಾರಪಾಲಕಿಯು ಪೇತ್ರನಿಗೆ, “ನೀನು ಸಹ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ?” ಎಂದು ಕೇಳಲು,ಅದಕ್ಕವನು, “ನಾನಲ್ಲ,” ಎಂದನು. 18 ಆಗ ಚಳಿಯಿದ್ದುದರಿಂದ ಸೇವಕರೂ ಕಾವಲುಗಾರರೂ ಬೆಂಕಿಮಾಡಿ ಚಳಿ ಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರೊಂದಿಗೆ ನಿಂತು ಚಳಿ ಕಾಯಿಸಿಕೊಳ್ಳುತ್ತಿದ್ದನು. 19 ಆಗ ಮಹಾಯಾಜಕನು ಯೇಸುವನ್ನು ಅವರ ಶಿಷ್ಯರ ವಿಷಯವಾಗಿಯೂ ಅವರ ಬೋಧನೆಯ ವಿಷಯವಾಗಿಯೂ ಪ್ರಶ್ನಿಸಿದನು. 20 ಯೇಸು ಅವನಿಗೆ, “ನಾನು ಬಹಿರಂಗವಾಗಿ ಲೋಕದ ಮುಂದೆ ಮಾತನಾಡಿದ್ದೇನೆ. ಯೆಹೂದ್ಯರೆಲ್ಲರು ಕೂಡಿಬರುವ ಸಭಾಮಂದಿರದಲ್ಲಿಯೂ ದೇವಾಲಯದಲ್ಲಿಯೂ ನಾನು ಯಾವಾಗಲೂ ಉಪದೇಶಿಸುತ್ತಿದ್ದೆನು. ನಾನು ಮುಚ್ಚುಮರೆಯಾಗಿ ಏನೂ ಮಾತನಾಡಲಿಲ್ಲ. 21 ನೀನು ನನ್ನನ್ನು ಪ್ರಶ್ನಿಸುವುದೇಕೆ? ನಾನು ಅವರಿಗೆ ಏನು ಮಾತನಾಡಿದ್ದೇನೆಂದು ಕೇಳಿದವರನ್ನೇ ಪ್ರಶ್ನಿಸು, ನಾನು ಹೇಳಿದ್ದನ್ನು ಅವರು ತಿಳಿದಿದ್ದಾರೆ,” ಎಂದರು. 22 ಯೇಸು ಇವುಗಳನ್ನು ಹೇಳಿದಾಗ, ಹತ್ತಿರ ನಿಂತಿದ್ದ ಕಾವಲಾಳುಗಳಲ್ಲಿ ಒಬ್ಬನು ಯೇಸುವಿನ ಕೆನ್ನೆಗೆ ಹೊಡೆದು, “ನೀನು ಮಹಾಯಾಜಕನಿಗೆ ಹೀಗೆ ಉತ್ತರ ಕೊಡುತ್ತೀಯೋ?” ಎಂದನು. 23 ಯೇಸು ಅವನಿಗೆ, “ನಾನು ಕೆಟ್ಟದ್ದನ್ನು ಮಾತನಾಡಿದ್ದರೆ ಕೆಟ್ಟದ್ದರ ವಿಷಯವಾಗಿ ಸಾಕ್ಷಿಕೊಡು; ಒಳ್ಳೆಯದನ್ನು ಮಾತನಾಡಿದ್ದರೆ ನೀನು ನನ್ನನ್ನು ಹೊಡೆಯುವುದೇಕೆ?” ಎಂದರು. 24 ಆಗ ಅನ್ನನು ಯೇಸುವನ್ನು ಕಟ್ಟಿಸಿ ಮಹಾಯಾಜಕನಾದ ಕಾಯಫನ ಬಳಿಗೆ ಕಳುಹಿಸಿದನು. 25 ಇತ್ತ ಸೀಮೋನ ಪೇತ್ರನು ಚಳಿಕಾಯಿಸಿಕೊಳ್ಳುತ್ತಾ ನಿಂತಿರುವಾಗ, ಒಬ್ಬನು ಅವನಿಗೆ, “ನೀನು ಸಹ ಆತನ ಶಿಷ್ಯನಲ್ಲವೇ?” ಎಂದು ಕೇಳಿದರು.ಅದಕ್ಕೆ ಅವನು ಅದನ್ನು ನಿರಾಕರಿಸಿ, “ನಾನಲ್ಲ,” ಎಂದನು. 26 ಮಹಾಯಾಜಕನ ಸೇವಕರಲ್ಲಿ ಕಿವಿ ಕತ್ತರಿಸಿದವನ ಬಂಧುವಾಗಿದ್ದ ಒಬ್ಬನು ಪೇತ್ರನಿಗೆ, “ನಾನು ನಿನ್ನನ್ನು ತೋಟದಲ್ಲಿ ಆತನ ಸಂಗಡ ಕಾಣಲಿಲ್ಲವೋ?” ಎಂದು ಕೇಳಿದ್ದಕ್ಕೆ, 27 ಪೇತ್ರನು ತಿರುಗಿ ನಿರಾಕರಿಸಿದನು. ಆಗ ಕೂಡಲೇ ಹುಂಜ ಕೂಗತೊಡಗಿತು. 28 ಆಮೇಲೆ ಅವರು ಯೇಸುವನ್ನು ಕಾಯಫನ ಬಳಿಯಿಂದ ರೋಮನ್ ರಾಜ್ಯಪಾಲನ ನಿವಾಸಕ್ಕೆ ಸಾಗಿಸಿಕೊಂಡು ಹೋದರು. ಆಗ ಮುಂಜಾನೆಯಾಗಿತ್ತು. ತಾವು ಅಶುದ್ಧವಾಗದಂತೆ ಪಸ್ಕದ ಊಟಮಾಡುವುದಕ್ಕೆ ಅಡ್ಡಿಯಾದೀತೆಂದು ಅವರು ರಾಜ್ಯಪಾಲನ ನಿವಾಸದ ಒಳಗೆ ಹೋಗಲಿಲ್ಲ. 29 ಆಗ ಪಿಲಾತನೇ ಹೊರಗೆ ಅವರ ಬಳಿಗೆ ಬಂದು, “ನೀವು ಈತನ ಮೇಲೆ ಏನು ದೂರು ತಂದಿದ್ದೀರಿ?” ಎಂದು ಕೇಳಿದ್ದಕ್ಕೆ, 30 ಯೆಹೂದಿ ನಾಯಕರು, “ಈತನು ದುಷ್ಕರ್ಮಿಯಲ್ಲದಿದ್ದರೆ ನಾವು ಈತನನ್ನು ನಿನಗೆ ಒಪ್ಪಿಸಿಕೊಡುತ್ತಿರಲಿಲ್ಲ,” ಎಂದು ಹೇಳಿದರು. 31 ಆಗ ಪಿಲಾತನು ಅವರಿಗೆ, “ನೀವೇ ಆತನನ್ನು ತೆಗೆದುಕೊಂಡುಹೋಗಿ ನಿಮ್ಮ ನಿಯಮದ ಪ್ರಕಾರ ಆತನಿಗೆ ತೀರ್ಪು ಮಾಡಿರಿ,” ಎಂದನು. ಅದಕ್ಕೆ ಯೆಹೂದ್ಯರು ಅವನಿಗೆ,“ಮರಣದಂಡನೆ ವಿಧಿಸುವ ಅಧಿಕಾರ ನಮಗೆ ಇಲ್ಲ,” ಎಂದು ಹೇಳಿದರು. 32 ಹೀಗೆ ಯೇಸು ತಾನು ಎಂಥಾ ಮರಣದಿಂದ ಸಾಯಲಿದ್ದೇನೆಂಬುದನ್ನು ಸೂಚಿಸಿ ಹೇಳಿದ ಮಾತು ನೆರವೇರಿತು. 33 ಆದ್ದರಿಂದ ಪಿಲಾತನು ತಿರುಗಿ ತನ್ನ ನಿವಾಸದೊಳಗೆ ಪ್ರವೇಶಿಸಿ ಯೇಸುವನ್ನು ಕರೆದು ಅವರಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. 34 ಅದಕ್ಕೆ ಯೇಸು ಅವನಿಗೆ, “ನಿನ್ನಷ್ಟಕ್ಕೆ ನೀನೇ ಇದನ್ನು ಹೇಳುತ್ತೀಯೋ ಇಲ್ಲವೆ ಬೇರೆಯವರು ನನ್ನನ್ನು ಕುರಿತು ನಿನಗೆ ಹೇಳಿದ್ದಾರೋ?” ಎಂದರು. 35 ಪಿಲಾತನು, “ನಾನೇನು ಯೆಹೂದ್ಯನೋ? ನಿನ್ನ ಜನಾಂಗವೂ ಮುಖ್ಯಯಾಜಕರೂ ನಿನ್ನನ್ನು ನನಗೆ ಒಪ್ಪಿಸಿದ್ದಾರೆ. ನೀನು ಏನು ಮಾಡಿದ್ದೀಯಾ?” ಎಂದು ಕೇಳಿದನು. 36 ಯೇಸು, “ನನ್ನ ರಾಜ್ಯವು ಈ ಲೋಕದ್ದಲ್ಲ, ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನನ್ನನ್ನು ಯೆಹೂದ್ಯರಿಗೆ ಒಪ್ಪಿಸದಂತೆ ನನ್ನ ಸೇವಕರು ಹೋರಾಡುತ್ತಿದ್ದರು; ಆದರೆ ಈಗ ನನ್ನ ರಾಜ್ಯವು ಇಲ್ಲಿಯದಲ್ಲ,” ಎಂದು ಉತ್ತರಕೊಟ್ಟರು. 37 ಪಿಲಾತನು ಯೇಸುವಿಗೆ, “ನೀನು ಅರಸನೋ?” ಎಂದು ಕೇಳಲು,ಯೇಸು, “ನಾನು ಅರಸನೆಂದು ನೀನೇ ಹೇಳುತ್ತೀ. ನಾನು ಸತ್ಯಕ್ಕೆ ಸಾಕ್ಷಿ ಕೊಡುವುದಕ್ಕಾಗಿ ಹುಟ್ಟಿ, ಇದಕ್ಕಾಗಿಯೇ ಲೋಕಕ್ಕೆ ಬಂದೆನು; ಸತ್ಯಕ್ಕೆ ಸೇರಿದ ಎಲ್ಲರೂ ನನ್ನ ಸ್ವರವನ್ನು ಕೇಳುತ್ತಾರೆ,” ಎಂದರು. 38 ಪಿಲಾತನು ಯೇಸುವಿಗೆ, “ಸತ್ಯ ಎಂದರೇನು?” ಎಂದನು. ಅವನು ಇದನ್ನು ಕೇಳಿದ ಮೇಲೆ ತಿರುಗಿ ಯೆಹೂದ್ಯರ ಬಳಿಗೆ ಹೋಗಿ ಅವರಿಗೆ, “ನಾನು ಈತನಲ್ಲಿ ಯಾವ ಅಪರಾಧವನ್ನೂ ಕಾಣಲಿಲ್ಲ. 39 ಆದರೆ ಪಸ್ಕಹಬ್ಬದಲ್ಲಿ ನಾನು ನಿಮಗೆ ಒಬ್ಬನನ್ನು ಬಿಟ್ಟುಕೊಡುವ ಪದ್ಧತಿಯಿದೆಯಷ್ಟೆ; ಆದಕಾರಣ ನಾನು ಯೆಹೂದ್ಯರ ಅರಸನನ್ನು ಬಿಟ್ಟುಕೊಡುವುದು ನಿಮಗೆ ಇಷ್ಟವೋ?” ಎಂದು ಕೇಳಿದನು. 40 ಅದಕ್ಕೆ ಅವರೆಲ್ಲರೂ ತಿರುಗಿ, “ಇವನು ಬೇಡ, ನಮಗೆ ಬರಬ್ಬನನ್ನು ಬಿಟ್ಟುಕೊಡು,” ಎಂದು ಕೂಗಿಕೊಂಡರು. ಆ ಬರಬ್ಬನು ದರೋಡೆಕೋರನಾಗಿದ್ದನು.