Luke 24 (BOKCV2)
1 ವಾರದ ಮೊದಲನೆಯ ದಿನದ, ಬೆಳಗಿನ ಜಾವದಲ್ಲಿ, ಆ ಸ್ತ್ರೀಯರು ಸಿದ್ಧಪಡಿಸಿದ್ದ ಪರಿಮಳ ದ್ರವ್ಯಗಳನ್ನು ತೆಗೆದುಕೊಂಡು ಸಮಾಧಿಗೆ ಹೋದರು. 2 ಆಗ ಸಮಾಧಿಯಿಂದ ಬಂಡೆ ಉರುಳಿಸಲಾಗಿದ್ದನ್ನು ಅವರು ಕಂಡರು, 3 ಅವರು ಅದರ ಒಳಗೆ ಪ್ರವೇಶಿಸಿದಾಗ, ಅಲ್ಲಿ ಕರ್ತದೇವರು ಯೇಸುವಿನ ದೇಹವನ್ನು ಕಾಣಲಿಲ್ಲ. 4 ಅವರು ಬಹಳವಾಗಿ ಗಲಿಬಿಲಿಗೊಂಡರು. ಆಗ ಮಿಂಚಿನಂತೆ ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಫಕ್ಕನೆ ಅವರ ಬಳಿ ನಿಂತಿದ್ದರು. 5 ಆ ಸ್ತ್ರೀಯರು ಭಯಪಟ್ಟು ತಮ್ಮ ದೃಷ್ಟಿಯನ್ನು ನೆಲದ ಕಡೆಗೆ ನಾಟಿರಲು, ಆ ಪುರುಷರು ಅವರಿಗೆ, “ಜೀವಿಸುವವರನ್ನು ಸತ್ತವರೊಳಗೆ ನೀವು ಏಕೆ ಹುಡುಕುತ್ತೀರಿ? 6 ಅವರು ಇಲ್ಲಿಲ್ಲ; ಜೀವಂತರಾಗಿ ಎದ್ದಿದ್ದಾರೆ! ಅವರು ಇನ್ನೂ ಗಲಿಲಾಯದಲ್ಲಿದ್ದಾಗಲೇ: 7 ‘ಮನುಷ್ಯಪುತ್ರನಾದ ನಾನು ಪಾಪಿಷ್ಠರ ಕೈಗೆ ಒಪ್ಪಿಸಿದವನಾಗಿ, ಶಿಲುಬೆಗೆ ಹಾಕಲಾಗಿ ಮೂರನೆಯ ದಿನದಲ್ಲಿ ತಿರುಗಿ ಜೀವಂತನಾಗಿ ಏಳುವೆನು,’ ಎಂದು ನಿಮಗೆ ಹೇಳಿದ್ದನ್ನು ನೀವು ನೆನಪುಮಾಡಿಕೊಳ್ಳಿರಿ,” ಎಂದರು. 8 ಆಗ ಆ ಸ್ತ್ರೀಯರು ಯೇಸುವಿನ ಮಾತುಗಳನ್ನು ನೆನಪು ಮಾಡಿಕೊಂಡರು. 9 ಸಮಾಧಿಯಿಂದ ಆ ಸ್ತ್ರೀಯರು ಹಿಂತಿರುಗಿ ಹೋಗಿ, ಆ ಹನ್ನೊಂದು ಮಂದಿಗೂ ಉಳಿದವರೆಲ್ಲರಿಗೂ ಈ ಎಲ್ಲಾ ವಿಷಯಗಳನ್ನು ತಿಳಿಸಿದರು. 10 ಮಗ್ದಲದ ಮರಿಯಳು, ಯೋಹಾನಳು, ಯಾಕೋಬನ ತಾಯಿ ಮರಿಯಳು ಮತ್ತು ಅವರೊಂದಿಗಿದ್ದ ಬೇರೆ ಸ್ತ್ರೀಯರು ಅಪೊಸ್ತಲರಿಗೆ ಈ ವಿಷಯಗಳನ್ನು ಹೇಳಿದರು. 11 ಅವರಿಗಾದರೋ ಈ ಸ್ತ್ರೀಯರು ಹೇಳಿದ್ದು ಕಟ್ಟು ಕಥೆಗಳಂತೆ ಕಂಡವು, ಅವರು ಅವುಗಳನ್ನು ನಂಬಲಿಲ್ಲ. 12 ಆಗ ಪೇತ್ರನು ಎದ್ದು, ಸಮಾಧಿ ಬಳಿಗೆ ಓಡಿಹೋಗಿ, ಅದರೊಳಗೆ ಬಗ್ಗಿ ನೋಡಿದಾಗ, ಅಲ್ಲಿ ನಾರುಬಟ್ಟೆಗಳು ಮಾತ್ರ ಬಿದ್ದಿರುವುದನ್ನು ಕಂಡು ನಡೆದ ಸಂಭವಕ್ಕಾಗಿ ತನ್ನೊಳಗೆ ಆಶ್ಚರ್ಯಪಡುತ್ತಾ ಹೊರಟುಹೋದನು. 13 ಅದೇ ದಿನ ಶಿಷ್ಯರಲ್ಲಿ ಇಬ್ಬರು ಯೆರೂಸಲೇಮಿನಿಂದ ಸುಮಾರು ಹನ್ನೊಂದು ಕಿಲೋಮೀಟರು ದೂರದಲ್ಲಿದ್ದ ಎಮ್ಮಾಹು ಎಂಬ ಹಳ್ಳಿಗೆ ಹೋಗುತ್ತಿದ್ದರು. 14 ಅವರು ನಡೆದ ಈ ಎಲ್ಲಾ ಸಂಭವಗಳ ಕುರಿತಾಗಿ ಒಬ್ಬರಿಗೊಬ್ಬರು ಮಾತನಾಡಿಕೊಳ್ಳುತ್ತಿದ್ದರು. 15 ಅವರು ಮಾತನಾಡಿಕೊಂಡು ಚರ್ಚಿಸುತ್ತಾ ಹೋಗಲು, ಯೇಸು ತಾವೇ ಅವರನ್ನು ಸಮೀಪಿಸಿ ಅವರ ಜೊತೆಯಲ್ಲಿ ಹೋದರು; 16 ಆದರೆ ಅವರಿಗೆ ತಿಳಿಯದ ಹಾಗೆ ಕಣ್ಣಿಗೆ ಮರೆಯಾಗಿದ್ದರಿಂದ ಅವರು ಯೇಸುವಿನ ಗುರುತು ಹಿಡಿಯಲಿಲ್ಲ. 17 ಆಗ ಯೇಸು ಅವರಿಗೆ, “ನೀವು ದಾರಿಯಲ್ಲಿ ಒಬ್ಬರಿಗೊಬ್ಬರು ಚರ್ಚೆಮಾಡಿಕೊಂಡು ಹೋಗುತ್ತಿದ್ದೀರಲ್ಲಾ ಏನು ವಿಷಯ?” ಎಂದು ಕೇಳಿದರು.ಅವರು ತಕ್ಷಣವೇ ನಿಂತರು, ಅವರ ಮುಖ ದುಖಃಭರಿತವಾಗಿತ್ತು. 18 ಆಗ ಅವರಲ್ಲಿ ಒಬ್ಬನಾದ, ಕ್ಲೆಯೊಫ ಎಂಬುವನು ಯೇಸುವಿಗೆ, “ಇತ್ತೀಚೆಗೆ ಯೆರೂಸಲೇಮಿನೊಳಗೆ ನಡೆದಿರುವ ಘಟನೆಗಳನ್ನು ತಿಳಿಯದ ಪರಸ್ಥಳದವನು ನೀನೊಬ್ಬನೇ ಆಗಿದ್ದೀಯಾ?” ಎಂದು ಕೇಳಿದನು. 19 ಅದಕ್ಕೆ ಯೇಸು ಅವರಿಗೆ, “ಯಾವ ಘಟನೆ?” ಎಂದು ಕೇಳಲು,ಅವರು ಯೇಸುವಿಗೆ, “ನಜರೇತಿನ ಯೇಸುವಿನ ವಿಷಯಗಳೇ, ಅವರು ಕೃತ್ಯಗಳಲ್ಲಿಯೂ ಮಾತುಗಳಲ್ಲಿಯೂ ದೇವರ ದೃಷ್ಟಿಯಲ್ಲಿಯೂ ಜನರೆಲ್ಲರ ದೃಷ್ಟಿಯಲ್ಲಿಯೂ ಬಹುಶಕ್ತಿವಂತರಾಗಿದ್ದ ಪ್ರವಾದಿಯಾಗಿದ್ದರು. 20 ಮುಖ್ಯಯಾಜಕರೂ ನಮ್ಮ ಅಧಿಕಾರಿಗಳೂ ಯೇಸುವನ್ನು ಮರಣದಂಡನೆಗೆ ಒಪ್ಪಿಸಿಕೊಟ್ಟು, ಅವರನ್ನು ಶಿಲುಬೆಗೆ ಹಾಕಿದರು. 21 ಆದರೆ ಇಸ್ರಾಯೇಲರನ್ನು ವಿಮೋಚಿಸುವವರು ಆ ಯೇಸುವೇ ಎಂದು ನಾವು ನಂಬಿಕೊಂಡಿದ್ದೆವು. ಇದಲ್ಲದೆ ಈ ಘಟನೆಗಳು ನಡೆದು ಇದು ಮೂರನೆಯ ದಿನವಾಗಿದೆ. 22 ನಮ್ಮವರಲ್ಲಿ, ಕೆಲವು ಸ್ತ್ರೀಯರು ಇಂದು ಬೆಳಗಿನ ಜಾವದಲ್ಲಿ ಸಮಾಧಿಗೆ ಹೋಗಿದ್ದರು. 23 ಅಲ್ಲಿ ಅವರು ಯೇಸುವಿನ ದೇಹವನ್ನು ಕಾಣದೆ ಬಂದು, ಯೇಸು ಜೀವದಿಂದ ಎದ್ದಿದ್ದಾರೆ, ಎಂದು ಹೇಳಿದ ದೇವದೂತರನ್ನೂ ಕಂಡಿದ್ದ ದೃಶ್ಯವನ್ನೂ ನಮಗೆ ಹೇಳಿದರು. 24 ಇದಲ್ಲದೆ ನಮ್ಮೊಂದಿಗಿದ್ದ ಕೆಲವರು ಸಮಾಧಿಗೆ ಹೋಗಿ, ಆ ಸ್ತ್ರೀಯರು ಹೇಳಿದ್ದನ್ನೇ ಕಂಡರು. ಆದರೆ ಅವರು ಯೇಸುವನ್ನು ಮಾತ್ರ ಕಾಣಲಿಲ್ಲ,” ಎಂದರು. 25 ಆಗ ಯೇಸು ಅವರಿಗೆ, “ಎಂಥ ಬುದ್ಧಿಹೀನರು ನೀವು, ಪ್ರವಾದಿಗಳು ಹೇಳಿದ್ದೆಲ್ಲವನ್ನು ನಂಬುವುದರಲ್ಲಿ ಮಂದ ಹೃದಯದವರೇ! 26 ಶ್ರಮೆಗಳನ್ನು ಅನುಭವಿಸಿದ ಮೇಲೆ ಕ್ರಿಸ್ತನು ಮಹಿಮೆಯಲ್ಲಿ ಪ್ರವೇಶಿಸುವುದು ಅಗತ್ಯವಾಗಿತ್ತಲ್ಲವೇ?” ಎಂದು ಹೇಳಿ, 27 ಮೋಶೆಯ ಮತ್ತು ಎಲ್ಲಾ ಪ್ರವಾದಿಗಳಿಂದ ಆರಂಭಿಸಿ, ಪವಿತ್ರ ವೇದಗಳಲ್ಲಿ ತನ್ನ ವಿಷಯವಾಗಿ ಬರೆದವುಗಳನ್ನು ಯೇಸು ಅವರಿಗೆ ವಿವರಿಸಿದರು. 28 ಅವರು ಹೋಗಬೇಕಾಗಿದ್ದ ಹಳ್ಳಿಯನ್ನು ಸಮೀಪಿಸುತ್ತಿದ್ದಾಗ, ಯೇಸು ಮುಂದೆ ಹೋಗುವವರಂತೆ ವರ್ತಿಸಿದರು. 29 ಆದರೆ ಅವರು ಯೇಸುವಿಗೆ, “ನಮ್ಮೊಂದಿಗೆ ಇರು, ಈಗ ಸಂಜೆಯಾಯಿತು. ಕತ್ತಲಾಯಿತು,” ಎಂದು ಹೇಳಿ, ಆತನನ್ನು ಬಲವಂತ ಮಾಡಿದರು. ಆಗ ಯೇಸು ಅವರೊಂದಿಗೆ ಇರುವುದಕ್ಕಾಗಿ ಹೋದರು. 30 ಯೇಸು ಆ ಇಬ್ಬರು ಶಿಷ್ಯರೊಂದಿಗೆ ಊಟಕ್ಕೆ ಕುಳಿತುಕೊಂಡಿರಲು ರೊಟ್ಟಿಯನ್ನು ತೆಗೆದುಕೊಂಡು ಆಶೀರ್ವದಿಸಿ, ಮುರಿದು ಅವರಿಗೆ ಕೊಟ್ಟರು. 31 ಆಗ ಅವರ ಕಣ್ಣುಗಳು ತೆರೆದವು. ಅವರು ಯೇಸುವಿನ ಗುರುತು ಹಿಡಿದರು ಮತ್ತು ಯೇಸು ಅವರ ದೃಷ್ಟಿಗೆ ಅದೃಶ್ಯರಾದರು. 32 ಅವರು ಒಬ್ಬರಿಗೊಬ್ಬರು, “ಅವರು ದಾರಿಯಲ್ಲಿ ನಮ್ಮ ಕೂಡ ಮಾತನಾಡುತ್ತಾ, ಪವಿತ್ರ ವೇದವನ್ನು ನಮಗೆ ವಿವರಿಸಿದಾಗ ನಮ್ಮ ಹೃದಯವು ಬೆಂಕಿಯಂತೆ ದಹಿಸಿತಲ್ಲವೇ?” ಎಂದುಕೊಂಡರು. 33 ಆ ಇಬ್ಬರು ಶಿಷ್ಯರು ಅದೇ ಗಳಿಗೆಯಲ್ಲಿ ಎದ್ದು ಯೆರೂಸಲೇಮಿಗೆ ಹಿಂದಿರುಗಿ ಹೋದರು. ಅಲ್ಲಿ ಹನ್ನೊಂದು ಮಂದಿ ಶಿಷ್ಯರೂ ಅವರೊಂದಿಗಿದ್ದವರೂ ಒಟ್ಟಾಗಿ ಕೂಡಿಕೊಂಡಿರುವುದನ್ನು ಕಂಡರು. 34 ಅಲ್ಲಿದ್ದವರು, “ಇದು ನಿಜವೇ! ಕರ್ತದೇವರು ಜೀವಂತರಾಗಿ ಎದ್ದಿದ್ದಾರೆ ಮತ್ತು ಸೀಮೋನನಿಗೆ ಕಾಣಿಸಿಕೊಂಡಿದ್ದಾರೆ,” ಎಂದು ಹೇಳಿದರು. 35 ಆಗ ಆ ಇಬ್ಬರು ಶಿಷ್ಯರು ದಾರಿಯಲ್ಲಿ ನಡೆದವುಗಳನ್ನೂ ರೊಟ್ಟಿ ಮುರಿಯುವುದರಲ್ಲಿ ಅವರು ಹೇಗೆ ಯೇಸುವಿನ ಗುರುತು ಹಿಡಿದರೆಂದೂ ವಿವರಿಸಿದರು. 36 ಅವರೆಲ್ಲರೂ ಹೀಗೆ ಮಾತನಾಡುತ್ತಿರುವಾಗ, ಯೇಸು ತಾವೇ ಅವರ ನಡುವೆ ನಿಂತು ಅವರಿಗೆ, “ನಿಮಗೆ ಸಮಾಧಾನವಾಗಲಿ,” ಎಂದರು. 37 ಅವರು ತಾವು ಕಾಣುತ್ತಿರುವುದು ಭೂತವೆಂದು ಭಾವಿಸಿ, ದಿಗಿಲುಬಿದ್ದು ಭಯಹಿಡಿದವರಾದರು. 38 ಆದರೆ ಯೇಸು ಅವರಿಗೆ, “ಏಕೆ ನೀವು ಕಳವಳಗೊಳ್ಳುತ್ತೀರಿ? ನಿಮ್ಮ ಹೃದಯಗಳಲ್ಲಿ ಸಂಶಯಗಳು ಹುಟ್ಟುವುದು ಏಕೆ? 39 ನನ್ನ ಕೈಗಳನ್ನು ಮತ್ತು ನನ್ನ ಕಾಲುಗಳನ್ನು ನೋಡಿರಿ. ನಾನೇ ಆತನು! ನನ್ನನ್ನು ಮುಟ್ಟಿ ನೋಡಿರಿ; ನೀವು ಕಾಣುವಂತೆ ನನಗಿರುವ ಮಾಂಸ ಮತ್ತು ಎಲುಬುಗಳು ಭೂತಕ್ಕೆ ಇಲ್ಲ,” ಎಂದರು. 40 ಹೀಗೆ ಯೇಸು ಮಾತನಾಡಿದ ಮೇಲೆ, ತನ್ನ ಕೈಗಳನ್ನು ತನ್ನ ಕಾಲುಗಳನ್ನು ಅವರಿಗೆ ತೋರಿಸಿದರು. 41 ಆದರೆ ಅವರು ಸಂತೋಷದ ನಿಮಿತ್ತವಾಗಿ ಇನ್ನೂ ನಂಬದೆ ಆಶ್ಚರ್ಯಪಡುತ್ತಿರುವಾಗ ಯೇಸು ಅವರಿಗೆ, “ನಿಮ್ಮಲ್ಲಿ ಆಹಾರವೇನಾದರೂ ಇದೆಯೋ?” ಎಂದು ಕೇಳಿದರು. 42 ಅವರು ಯೇಸುವಿಗೆ ಒಂದು ತುಂಡು ಸುಟ್ಟ ಮೀನನ್ನು ಕೊಟ್ಟರು. 43 ಯೇಸು ತೆಗೆದುಕೊಂಡು ಅವರ ಮುಂದೆ ತಿಂದರು. 44 ಯೇಸು ಶಿಷ್ಯರಿಗೆ, “ಮೋಶೆಯ ನಿಯಮದಲ್ಲಿಯೂ ಪ್ರವಾದನೆಗಳಲ್ಲಿಯೂ ಕೀರ್ತನೆಗಳಲ್ಲಿಯೂ ನನ್ನನ್ನು ಕುರಿತಾಗಿ ಬರೆದಿರುವುದೆಲ್ಲವೂ ನೆರವೇರುವುದು ಅಗತ್ಯವಾಗಿದೆ ಎಂಬ ಈ ಮಾತುಗಳನ್ನು ನಾನು ನಿಮ್ಮೊಂದಿಗೆ ಇದ್ದಾಗಲೇ ನಿಮಗೆ ಹೇಳಿದ್ದೇನೆ,” ಎಂದರು. 45 ತರುವಾಯ ಅವರು ಪವಿತ್ರ ವೇದಗಳನ್ನು ಅರ್ಥಮಾಡಿಕೊಳ್ಳುವಂತೆ ಯೇಸು ಅವರ ಬುದ್ಧಿಯನ್ನು ತೆರೆದರು. 46 ಯೇಸು ಅವರಿಗೆ, “ಕ್ರಿಸ್ತನು ಹೀಗೆ ಬಾಧೆಪಟ್ಟು ಸತ್ತವರೊಳಗಿಂದ ಮೂರನೆಯ ದಿನದಲ್ಲಿ ಎದ್ದು ಬರುವುದು ಅಗತ್ಯವಾಗಿತ್ತೆಂತಲೂ 47 ಯೆರೂಸಲೇಮು ಮೊದಲುಗೊಂಡು ಎಲ್ಲಾ ಜನಾಂಗದವರೊಳಗೆ ಆತನ ಹೆಸರಿನಲ್ಲಿ ಪಶ್ಚಾತ್ತಾಪಪಟ್ಟು ಮತ್ತು ಪಾಪಗಳ ಕ್ಷಮಾಪಣೆ ಸಾರಬೇಕೆಂತಲೂ ಬರೆಯಲಾಗಿದೆ. 48 ಇವುಗಳ ವಿಷಯವಾಗಿ ನೀವು ಸಾಕ್ಷಿಗಳಾಗಿದ್ದೀರಿ. 49 ಇಗೋ, ನನ್ನ ತಂದೆಯು ವಾಗ್ದಾನ ಮಾಡಿದ್ದನ್ನು ನಿಮಗೆ ಕಳುಹಿಸುವೆನು; ಆದರೆ ನೀವು ಪರಲೋಕದ ಶಕ್ತಿಯನ್ನು ಹೊದಿಸುವ ತನಕ, ಈ ಪಟ್ಟಣದಲ್ಲಿಯೇ ಕಾದುಕೊಂಡಿರಿ,” ಎಂದರು. 50 ಯೇಸು ಶಿಷ್ಯರನ್ನು ಬೇಥಾನ್ಯದವರೆಗೆ ಕರೆದುಕೊಂಡು ಹೋಗಿ, ತಮ್ಮ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿದರು. 51 ಯೇಸು ಅವರನ್ನು ಆಶೀರ್ವದಿಸುತ್ತಿರುವಾಗಲೇ ಅವರನ್ನು ಬಿಟ್ಟು ಮೇಲೆ ಪರಲೋಕಕ್ಕೆ ಏರಿದರು. 52 ಆಗ ಶಿಷ್ಯರು ಯೇಸುವನ್ನು ಆರಾಧಿಸಿ, ಬಹು ಸಂತೋಷದಿಂದ ಯೆರೂಸಲೇಮಿಗೆ ಹಿಂದಿರುಗಿದರು. 53 ಅವರು ಯಾವಾಗಲೂ ದೇವಾಲಯದಲ್ಲಿ, ದೇವರನ್ನು ಸ್ತುತಿಸುತ್ತಾ ಇದ್ದರು.