Matthew 9 (BOKCV2)
1 ಯೇಸು ದೋಣಿ ಹತ್ತಿ, ಸರೋವರವನ್ನು ದಾಟಿ ತಮ್ಮ ಸ್ವಂತ ಪಟ್ಟಣಕ್ಕೆ ಬಂದರು. 2 ಆಗ ಹಾಸಿಗೆಯ ಮೇಲೆ ಮಲಗಿದ್ದ, ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಯೇಸುವಿನ ಬಳಿಗೆ ತಂದರು. ಯೇಸು ಅವರ ನಂಬಿಕೆಯನ್ನು ಕಂಡು, ಆ ಪಾರ್ಶ್ವವಾಯು ರೋಗಿಗೆ, “ಮಗನೇ, ಧೈರ್ಯವಾಗಿರು. ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು. 3 ಆಗ ನಿಯಮ ಬೋಧಕರಲ್ಲಿ ಕೆಲವರು, “ಈತನು ದೇವದೂಷಣೆ ಮಾಡುತ್ತಿದ್ದಾನೆ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 4 ಯೇಸು ಅವರ ಆಲೋಚನೆಗಳನ್ನು ತಿಳಿದುಕೊಂಡು, “ನೀವು ನಿಮ್ಮ ಮನಸ್ಸಿನಲ್ಲಿ ಕೆಟ್ಟದ್ದನ್ನು ಯೋಚಿಸುವುದೇಕೆ? 5 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ ‘ಎದ್ದು ನಡೆ,’ ಎನ್ನುವುದೋ? 6 ಆದರೆ ಮನುಷ್ಯಪುತ್ರನಾದ ನನಗೆ ಈ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು. 7 ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು. 8 ಜನರ ಗುಂಪು ಇದನ್ನು ಕಂಡು ಬೆರಗಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು. 9 ಯೇಸು ಅಲ್ಲಿಂದ ಹಾದುಹೋಗುತ್ತಿದ್ದಾಗ, ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕೂತಿರುವುದನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದರು. ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು. 10 ಇದಾದ ಮೇಲೆ ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಬಹುಮಂದಿ ಸುಂಕದವರೂ ಅಪಖ್ಯಾತಿಯ ಪಾಪಿಗಳೂ ಬಂದು ಯೇಸುವಿನೊಂದಿಗೂ ಅವರ ಶಿಷ್ಯರೊಂದಿಗೂ ಕುಳಿತುಕೊಂಡರು. 11 ಫರಿಸಾಯರು ಇದನ್ನು ಕಂಡು, “ನಿಮ್ಮ ಬೋಧಕನು ಸುಂಕದವರ ಮತ್ತು ಅಪಖ್ಯಾತಿಯ ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಯೇಸುವಿನ ಶಿಷ್ಯರನ್ನು ಕೇಳಿದರು. 12 ಆದರೆ ಯೇಸು ಇದನ್ನು ಕೇಳಿ ಅವರಿಗೆ, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ. 13 ಆದರೆ ನೀವು ಹೋಗಿ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ,’ ಎಂಬುದರ ಅರ್ಥವನ್ನು ಕಲಿತುಕೊಳ್ಳಿರಿ. ಏಕೆಂದರೆ ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲು ಬಂದಿದ್ದೇನೆ,” ಎಂದು ಹೇಳಿದರು. 14 ಬಳಿಕ ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವೂ, ಫರಿಸಾಯರೂ ಉಪವಾಸ ಮಾಡುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು. 15 ಅದಕ್ಕೆ ಯೇಸು ಅವರಿಗೆ, “ಮದುಮಗನು ತಮ್ಮ ಜೊತೆಯಲ್ಲಿ ಇರುವ ತನಕ ಮದುಮಗನ ಆಪ್ತರು ದುಃಖಪಡುವುದುಂಟೇ? ಆದರೆ ಮದುಮಗನು ಅಗಲಬೇಕಾಗುವ ದಿವಸಗಳು ಬರುತ್ತವೆ; ಆಗ ಅವರು ಉಪವಾಸ ಮಾಡುವರು. 16 “ಯಾರೂ ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತೇಪೆಯನ್ನು ಹಾಕುವುದಿಲ್ಲ. ಏಕೆಂದರೆ ಅದು ಆ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುವುದು. 17 ಅಂತೆಯೇ ಜನರು ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ಅವರು ಹಾಗೇನಾದರೂ ಮಾಡಿದರೆ ಚರ್ಮದ ಚೀಲಗಳು ಹರಿದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ. ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ತುಂಬಿಡುತ್ತಾರೆ. ಆಗ ಅವೆರಡೂ ಉಳಿಯುತ್ತವೆ,” ಎಂದರು. 18 ಯೇಸು ಇದೆಲ್ಲವನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ, ಸಭಾಮಂದಿರದ ಒಬ್ಬ ಅಧಿಕಾರಿಯು ಬಂದು ಯೇಸುವಿನ ಮುಂದೆ ಮೊಣಕಾಲೂರಿ, “ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ನೀವು ಬಂದು ಆಕೆಯ ಮೇಲೆ ನಿಮ್ಮ ಕೈಯನ್ನಿಡಿರಿ; ಆಗ ಅವಳು ಬದುಕುವಳು,” ಎಂದು ಹೇಳಿದನು. 19 ಯೇಸು ಎದ್ದು ತಮ್ಮ ಶಿಷ್ಯರೊಂದಿಗೆ ಆ ಅಧಿಕಾರಿಯ ಹಿಂದೆ ಹೋದರು. 20 ಆಗ ಅಲ್ಲಿ ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀಯು ಹಿಂಬದಿಯಿಂದ ಬಂದು, ಯೇಸುವಿನ ನಿಲುವಂಗಿಯ ಅಂಚನ್ನು ಮುಟ್ಟಿ, 21 “ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ಸಾಕು, ನನಗೆ ಗುಣವಾಗುವುದು,” ಎಂದು ಆಕೆಯು ತನ್ನೊಳಗೆ ಹೇಳಿಕೊಂಡಳು. 22 ಯೇಸು ಹಿಂತಿರುಗಿ ಆಕೆಯನ್ನು ನೋಡಿ, “ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ,” ಎಂದರು. ಆ ಗಳಿಗೆಯಲ್ಲೇ ಆ ಸ್ತ್ರೀಯು ಸ್ವಸ್ಥಳಾದಳು. 23 ತರುವಾಯ ಯೇಸು ಆ ಅಧಿಕಾರಿಯ ಮನೆಯೊಳಗೆ ಬಂದು ಕೊಳಲೂದುವವರನ್ನೂ ಜನರ ಗೊಂದಲವನ್ನೂ ಕಂಡು, 24 ಅವರಿಗೆ, “ಹೊರಗೆ ಹೋಗಿರಿ, ಬಾಲಕಿಯು ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಅದಕ್ಕವರು ನಕ್ಕು ಯೇಸುವನ್ನು ಹಾಸ್ಯಮಾಡಿದರು. 25 ಆದರೆ ಜನರನ್ನು ಹೊರಗೆ ಕಳುಹಿಸಿದ ಮೇಲೆ ಯೇಸು ಒಳಗೆ ಹೋಗಿ, ಬಾಲಕಿಯ ಕೈಯನ್ನು ಹಿಡಿದು ಎಬ್ಬಿಸಿದಾಗ ಬಾಲಕಿಯು ಎದ್ದಳು. 26 ಈ ಸಮಾಚಾರವು ನಾಡಿನಲ್ಲೆಲ್ಲಾ ಹರಡಿತು. 27 ಯೇಸು ಅಲ್ಲಿಂದ ಹೋಗುತ್ತಿರುವಾಗ ಇಬ್ಬರು ಕುರುಡರು, “ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು,” ಎಂದು ಮೊರೆಯಿಡುತ್ತಾ ಯೇಸುವಿನ ಹಿಂದೆ ಹೋದರು. 28 ಯೇಸು ಮನೆಗೆ ಬಂದಾಗ, ಆ ಕುರುಡರು ಅವರ ಬಳಿಗೆ ಬಂದರು. ಆಗ ಯೇಸು ಅವರಿಗೆ, “ನಾನು ಇದನ್ನು ಮಾಡಲು ಶಕ್ತನೆಂದು ನೀವು ನಂಬುತ್ತೀರೋ?” ಎಂದು ಕೇಳಿದರು.ಅದಕ್ಕವರು ಯೇಸುವಿಗೆ, “ಹೌದು ಕರ್ತನೆ,” ಎಂದರು. 29 ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗಾಗಲಿ,” ಎಂದು ಹೇಳಿದರು. 30 ಆಗ ಅವರಿಗೆ ದೃಷ್ಟಿ ಬಂದಿತು. ಯೇಸು ಅವರಿಗೆ, “ಇದು ಯಾರಿಗೂ ತಿಳಿಯಬಾರದು,” ಎಂದು ಅವರಿಗೆ ಖಂಡಿತವಾಗಿ ಎಚ್ಚರಿಸಿದರು. 31 ಆದರೆ ಸ್ವಸ್ಥರಾದವರು ಹೊರಟುಹೋಗಿ, ಆ ನಾಡಿನಲ್ಲೆಲ್ಲಾ ಯೇಸುವಿನ ಕೀರ್ತಿಯನ್ನು ಹರಡಿದರು. 32 ಯೇಸು ಮತ್ತು ಶಿಷ್ಯರು ಹೊರಟು ಹೋಗುತ್ತಿದ್ದಾಗ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುವಿನ ಬಳಿಗೆ ತಂದರು. 33 ದೆವ್ವ ಬಿಡಿಸಿದ ಮೇಲೆ, ಆ ಮೂಕನು ಮಾತನಾಡಿದನು. ಜನರು ಆಶ್ಚರ್ಯಪಟ್ಟು, “ಇಂಥದ್ದನ್ನು ಎಂದೂ ಇಸ್ರಾಯೇಲಿನಲ್ಲಿ ಕಂಡಿಲ್ಲ,” ಎಂದು ಹೇಳಿದರು. 34 ಆದರೆ ಫರಿಸಾಯರು, “ದೆವ್ವಗಳ ಅಧಿಪತಿಯಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು. 35 ಯೇಸು ಎಲ್ಲಾ ಹಳ್ಳಿಗಳಲ್ಲಿಯೂ ಪಟ್ಟಣಗಳಲ್ಲಿಯೂ ಇದ್ದ ಸಭಾಮಂದಿರಗಳಲ್ಲಿ ಬೋಧಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಜನರ ಪ್ರತಿಯೊಂದು ವ್ಯಾಧಿಯನ್ನೂ ರೋಗವನ್ನೂ ಗುಣಪಡಿಸುತ್ತಾ ಸಂಚರಿಸಿದರು. 36 ಜನಸಮೂಹವೂ ಕುರುಬನಿಲ್ಲದ ಕುರಿಗಳಂತೆ ಅಲೆಯುವವರಾಗಿಯೂ ನಿಸ್ಸಹಾಯಕರಾಗಿಯೂ ಇರುವುದನ್ನು ಕಂಡು ಯೇಸು ಅವರ ಮೇಲೆ ಕನಿಕರಪಟ್ಟರು. 37 ಆಗ ಯೇಸು ತಮ್ಮ ಶಿಷ್ಯರಿಗೆ, “ಬೆಳೆಯೇನೋ ಬಹಳವಾಗಿದೆ, ಕೆಲಸದವರೋ ಕೆಲವರು. 38 ಆದ್ದರಿಂದ, ಬೆಳೆಯ ಯಜಮಾನನನ್ನು ತನ್ನ ಬೆಳೆಗೆ ತಕ್ಕಷ್ಟು ಕೆಲಸದವರನ್ನು ಕಳುಹಿಸುವಂತೆ, ನೀವು ಬೇಡಿಕೊಳ್ಳಿರಿ,” ಎಂದರು.